ಮುಖ್ಯ ಸುದ್ದಿ
ಜನರ ಜೊತೆ ಚಹಾ ಕುಡಿದು, ಹರಟೆ ಹೊಡೆದ ಗೋವಿಂದ ಕಾರಜೋಳ
CHITRADURGA NEWS | 27 APRIL 2024
ಚಿತ್ರದುರ್ಗ: ಚಿಂತೆಯಾಕೆ ಮಾಡುತಿಯಾ ಚಿನ್ಮಯನಿದ್ದಾನೆ. ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಮಾಧ್ಯಮದವರಿಗೆ ಹೇಳಿದ ಮಾತಿದು.
ಚುನಾವಣೆ ಮುಗಿದ ಮರುದಿನವೇ ನಗರದ ಹೃದಯಭಾಗ ಒನಕೆ ಓಬವ್ವ ವೃತ್ತದಲ್ಲಿರುವ ಚಾಲುಕ್ಯ ಹೋಟೆಲಿಗೆ ಆಗಮಿಸಿ, ಪತ್ರಕರ್ತರ ಜೊತೆ ಚಹಾ ಕುಡಿಯುತ್ತಾ ಹರಟೆ ಹೊಡೆದರು.
ಈ ವೇಳೆ ಸುದ್ದಿಗಾರರು, ಚುನಾವಣೆ ಮುಗಿಯಿತು ರಿಕ್ಯಾಕ್ಸ್ ಮೂಡ್ ಅಲ್ವಾ ಸರ್, ಎಂದಾಗ ನಾನು ಯಾವಾಗಲೂ ರಿಲ್ಯಾಕ್ಸ್, ಚಿಂತೆ ಮಾಡುವುದಿಲ್ಲ. ಚಿಂತೆ ಯಾಕೆ ಚಿನ್ಮಯನಿದ್ದಾನೆ. ಅಂದರೆ, ಚಿಂತೆ ಮಾಡಬೇಡ ದೇವರಿದ್ದಾನೆ ಎಂದರ್ಥ ಎಂದು ವಿವರಿಸಿದರು.
ಬಾಗಲಕೋಟೆ ಲೋಕಸಭಾ ಕ್ಷೇತ್ರ 40 ಕಿ.ಮೀ ವ್ಯಾಪ್ತಿ ಹೊಂದಿದೆ. ಆದರೆ, ಚಿತ್ರದುರ್ಗ ಒಂದು ತುದಿಯಿಂದ ಮತ್ತೊಂದು ತುದಿಗೆ 263 ಕಿಲೋ ಮೀಟರ್ ಇದೆ. ಇಷ್ಟು ದೊಡ್ಡ ಕ್ಷೇತ್ರದಲ್ಲಿ ಎಲ್ಲರನ್ನೂ ತಲುಪಲು ಆಗಿಲ್ಲ. ಸುಮಾರು 50 ರಿಂದ 60 ಸಭೆಗಳನ್ನು ಮಾಡಿದ್ದೇವೆ. ರೋಡ್ ಶೋ ನಡೆಸಿದ್ದೇವೆ ಎಂದು ವಿವರಿಸಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಎಲ್ಲ ಕಾರ್ಯಕರ್ತರು, ಮತದಾರರು, ನನಗಾಗಿ ಶ್ರಮಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.
ಬಸವನಾಡಿನಿಂದ ಬಂದವನು ಎನ್ನುವ ಗೌರವ, ಪ್ರೀತಿಯಿಂದ ಸ್ವೀಕರಿಸಿದ್ದಾರೆ. ಎಂಟು ತಾಸು ಬಿಸಿಲಿನಲ್ಲಿ ಬೆವರು ಸುರಿಸಿ ಕೆಲಸ ಮಾಡಿದ್ದಾರೆ. ಅವರ ಬೆವರಿಗೆ ಬೆಲೆ ಕಟ್ಟಲಾಗದು.
ಸಾರ್ವಜನಿಕ, ಅಬಿವೃದ್ಧಿ ಕೆಲಸಗಳಿಗೆ ನಾನು 19 ಲಕ್ಷ ಜನರ ಪ್ರತಿನಿಧಿ. ದಿನನಿತ್ಯ ನಾನು ರಾಜಕಾರಣ ಬೆರೆಸುವುದಿಲ್ಲ. ರಾಜಕೀಯ ಕೆಲಸದಲ್ಲೂ ನಾನು ರಾಜಿ ಆಗದೆ ಕೆಲಸ ಮಾಡುತ್ತೇನೆ.
ದೇಶ ಮುಖ್ಯ, ದೇಶದ ಹಿತಕ್ಕೆ ಯಾರಿರಬೇಕು ಎನ್ನುವುದನ್ನು ಜನ ನಿನ್ನೆಯ ಚುನಾವಣೆಯಲ್ಲಿ ಜನ ಆಲೋಚನೆ ಮಾಡಿದ್ದಾರೆ.
ನಾಳೆಯಿಂದ ಉತ್ತರ ಕರ್ನಾಟಕ ಭಾಗದ 14 ಲೋಕಸಭಾ ಕ್ಷೇತ್ರಗಳ ಚುನಾವಣೆಗೆ ಓಡಾಡುತ್ತೇನೆ. ಇಂದು ದಾವಣಗೆರೆಗೆ ತೆರಳುತ್ತಿದ್ದೇನೆ. ಆನಂತರ ನರೇಂದ್ರ ಮೋದಿ ಅವರ ಕಾರ್ಯಕ್ರಮಗಳಲ್ಲಿ ಜೊತೆಯಲ್ಲಿರುತ್ತೇನೆ. ಮೇ 7 ರಂದು ಮುಧೋಳಕ್ಕೆ ತೆರಳಿ ಮತದಾನ ಮಾಡಲಿದ್ದೇನೆ ಎಂದು ತಿಳಿಸಿದರು.