ಲೋಕಸಮರ 2024
ಪಕ್ಷೇತರ ಸ್ಪರ್ಧೆಗೆ ಗೂಳಿಹಟ್ಟಿ ಡಿ.ಶೇಖರ್ ಸಿದ್ಧತೆ | ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಚಿವ ಘೋಷಣೆ
CHITRADURGA NEWS | 4 APRIL 2024
ಚಿತ್ರದುರ್ಗ: ನಾನು ಸದಾ ನಿಮ್ಮ ನಡುವೆ ಇರುತ್ತೇನೆ. ಪಕ್ಷೇತರನಾಗಿ ಚುನಾವಣೆಗೆ ಸ್ಪರ್ಧಿಸಿದಾಗ ಚುನಾಯಿಸಿ ಮೊದಲ ಬಾರಿಗೆ ಸಚಿವ ಸ್ಥಾನ ದೊರೆಯಲು ನೀವು ಕಾರಣ. ಆದ್ದರಿಂದ ಪುನಃ ಪಕ್ಷೇತರನಾಗಿ ಸ್ಪರ್ಧೆ ಮಾಡಿ ನಿಮ್ಮ ಸೇವೆ ಮಾಡುತ್ತೇನೆ ಎಂದು ಮಾಜಿ ಸಚಿವ ಗೂಳಿಹಟ್ಟಿ ಡಿ. ಶೇಖರ್ ಕಾರ್ಯಕರ್ತರಿಗೆ ಮಾತು ನೀಡಿದರು.
ಹೊಸದುರ್ಗ ಪಟ್ಟಣದಲ್ಲಿ ಬುಧವಾರ ಆಯೋಜಿಸಿದ್ದ ‘ಗೂಳಿಹಟ್ಟಿ ಡಿ. ಶೇಖರ್ ಅವರಿಗೆ 2008ರಿಂದಲೂ ಬೆಂಬಲಕ್ಕೆ ನಿಂತು ಶ್ರಮಿಸಿದ ಹಿರಿಯ ಮುಖಂಡರು ಹಾಗೂ ಕಾರ್ಯಕರ್ತರ ಪುನರ್ ಸಮ್ಮಿಲನ ಸಭೆ’ಯ ನೇತೃತ್ವ ವಹಿಸಿ ಅವರು ಮಾತನಾಡಿದರು.
2008ರ ವಿಧಾನಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸುವಲ್ಲಿ ತಾಲ್ಲೂಕಿನ ಜನತೆಯ ಸಹಕಾರ ಬಹಳಷ್ಟಿತ್ತು. ಪುನಃ ಸಂಘಟನೆ ಬಲಗೊಳಿಸಿ, ಅಂದಿನ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡುವೆ. 2028ರ ವಿಧಾನಸಭೆ ಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವೆ’ ಎಂದು ಹೇಳಿದರು.
ಕ್ಲಿಕ್ ಮಾಡಿ ಓದಿ: ಮಳೆಯ ಆಗಮನಕ್ಕೆ ವಾತಾವರಣ ಸಜ್ಜು | ಕೊನೆಗೂ ಮುನಿಸು ತೊರೆದ ಮಳೆರಾಯ
ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ ನಂತರ ಬಿಜೆಪಿಗೆ ಸೇರ್ಪಡೆಯಾದೆ. ಅಂದು ನನ್ನಿಂದಾಗಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರು. ನಾನು ಸಚಿವನಾಗಿದ್ದಾಗ ನನ್ನಿಂದ ಒಬ್ಬ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ವರ್ಗಾವಣೆಯನ್ನೂ ಮಾಡಿಸಲಾಗಲಿಲ್ಲ. ‘ಆಪರೇಷನ್ ಕಮಲ’ದಲ್ಲಿ ಸ್ವಜಾತಿಯವರು ರಾಜೀನಾಮೆ ನೀಡಿ, ಬಿಜೆಪಿ ಸೇರಿದರು. ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಲು ಹಿಂದುಳಿದ ವರ್ಗದವರು ಬೇಕು’ ಎಂದು ವ್ಯಂಗ್ಯವಾಡಿದರು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಎರಡು ಪಕ್ಷದ ಅಭ್ಯರ್ಥಿಗಳಿದ್ದಾರೆ. ಕಾರ್ಯಕರ್ತರು ಸೂಚಿಸಿದ ವ್ಯಕ್ತಿಗೆ ಅಥವಾ ತಾವು ಸೂಚಿಸಿದ ವ್ಯಕ್ತಿಗೆ ಎಲ್ಲರೂ ಸಹಕಾರ ನೀಡೋಣ. ಮತ್ತೊಮ್ಮೆ ಸಭೆ ಕರೆದು, ನಮ್ಮ ಬೆಂಬಲ ಯಾರಿಗೆ ಎಂಬುದನ್ನು ನಿರ್ಧರಿಸೋಣ ಎಂದರು.
ಇನ್ನು ಮುಂದೆ ಹೊಸದುರ್ಗದಲ್ಲೇ ಇರುತ್ತೇನೆ. ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಪಕ್ಷೇತರವಾಗಿ ಸ್ಪರ್ಧಿಸಿ ಎದುರಿಸೋಣ. ಎಲ್ಲ ಕ್ಷೇತ್ರಗಳಲ್ಲೂ ಗೆಲುವು ನಿಶ್ಚಿತ. ಕಾರ್ಯಕರ್ತರಿಗೆ ಯಾವುದೇ ದೌರ್ಜನ್ಯವಾದರೂ ಸದಾ ನಿಮ್ಮ ಪರವಾಗಿರುತ್ತೇನೆ. ಈ ಬಗ್ಗೆ ಗೊಂದಲ ಬೇಡ ಎಂದು ಸ್ಪಷ್ಟನೆ ನೀಡಿದರು.
ಕ್ಲಿಕ್ ಮಾಡಿ ಓದಿ: ಎಚ್ಚರ…ಮನೆಯಿಂದ ಹೊರ ಬರಬೇಡಿ | ಹೆಚ್ಚಿದೆ ಸೂರ್ಯನ ಆರ್ಭಟ
ತಾಲ್ಲೂಕಿಗೆ ಆಗೊಮ್ಮೆ ಈಗೊಮ್ಮೆ ಬಂದು ಹೋಗುತ್ತೀರಾ. ನಮ್ಮ ಕಷ್ಟಗಳಿಗೆ ಸ್ಪಂದಿಸುವವರಿಲ್ಲ. ನೀವು ಇಲ್ಲೇ ಇದ್ದು ನಿರ್ಧಾರಗಳಿಗೆ ಬದ್ಧರಾದರೆ, ನಾವು ಬೆಂಬಲ ಸೂಚಿಸುತ್ತೇವೆ ಎಂದು ಕಾರ್ಯಕರ್ತರು ತಿಳಿಸಿದರು.
ಪುರಸಭೆ ಸದಸ್ಯರಾದ ಕೆ.ಎಲ್.ನಾಗರಾಜ್, ಎಂ.ಶ್ರೀನಿವಾಸ, ಮುಖಂಡರಾದ ಶ್ರೀಧರ್ ಭಟ್, ಹೇರೂರು ಮಂಜುನಾಥ್ ಸೇರಿದಂತೆ ಗೂಳಿಹಟ್ಟಿ ಅಭಿಮಾನಿಗಳಿದ್ದರು.