ಕ್ರೈಂ ಸುದ್ದಿ
GOLD COIN; ಬನ್ನಿ..ಚಿನ್ನ ಕೊಡ್ತಿವಿ..ಆದ್ರೆ ಯಾರಿಗೂ ಹೇಳಬೇಡಿ | ಬಯಲಾಯ್ತು ವಂಚನೆ ಕೇಸ್
CHITRADURGA NEWS | 07 JULY 2024
ಚಿತ್ರದುರ್ಗ: ನೋಡಿ ಮೊದಲೇ ಹೇಳ್ತಿವಿ..ನಾವು ನಿಮಗೆ ಚಿನ್ನ ಕೊಡ್ತಿವಿ..ಆದರೆ ಯಾರಿಗೂ ಹೇಳಬಾರದು. ನಾವು ಹೇಳಿದ ಜಾಗಕ್ಕೆ ಬನ್ನಿ..ಹೀಗೆ ಹೇಳಿ ವಂಚನೆ ಮಾಡುವ ಜಾಲ ಚಿತ್ರದುರ್ಗದಲ್ಲಿ ಪುನಃ ಫುಲ್ ಆಕ್ಟಿವ್ ಆಗಿದೆ. ವಂಚನೆ ಪ್ರಕರಣಗಳು ಅನೇಕ ಬಾರಿ ಬಯಲಾದರು ಸಹ ಜನರು ಮಾತ್ರ ಈ ಜಾಲಕ್ಕೆ ಸಿಲುಕುವುದು ತಪ್ಪಿಲ್ಲ. 2.2 ಕೆ.ಜಿ ಚಿನ್ನದ ನಾಣ್ಯ (GOLD COIN) ಕೊಡುವುದಾಗಿ ನಂಬಿಸಿ ₹ 54 ಲಕ್ಷ ವಂಚನೆ ಮಾಡಿರುವ ಪ್ರಕರಣ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
2.2 ಕೆ.ಜಿ ಚಿನ್ನದ ನಾಣ್ಯಗಳು ಸಿಕ್ಕಿದ್ದು, ಅವುಗಳನ್ನು ಕಡಿಮೆ ಬೆಲೆಗೆ ಕೊಡುವುದಾಗಿ ನಂಬಿಸಿದ ಇಬ್ಬರು ವ್ಯಕ್ತಿಗಳು, ಹೈದರಾಬಾದ್ ಮೂಲದ ಮೂವರಿಂದ ₹ 54 ಲಕ್ಷ ಪಡೆದು ವಂಚಿಸಿದ್ದಾರೆ. ದುರ್ಗಾಪ್ರಸಾದ್ ಎಂಬುವರು ₹ 24 ಲಕ್ಷ, ಅವರ ಅಳಿಯ ಸಂದೀಪ್ ₹ 20 ಲಕ್ಷ ಹಾಗೂ ನವೀನ್ ₹ 10 ಲಕ್ಷ ಮೊತ್ತ ಕಳೆದುಕೊಂಡಿದ್ದಾರೆ. ಚಿಕ್ಕಜಾಜೂರು ಸಮೀಪದ ಸಾಸಲುಹಳ್ಳ ಗ್ರಾಮದ ಬಳಿ ನಡೆದಿರುವ ಈ ಘಟನೆ ತಡವಾಗಿ ವರದಿಯಾಗಿದೆ.
ಕ್ಲಿಕ್ ಮಾಡಿ ಓದಿ: ಒಂದೆರಡು ಗಂಟೆಯಲ್ಲಿ ವಿದ್ಯುತ್ ಸ್ಥಗಿತ | ದಿನ ಪೂರ್ತಿ ಸಮಸ್ಯೆ
ಹೈದರಾಬಾದ್‌ನ ತಿರುಮಲಗಿರಿಯಲ್ಲಿ ಕ್ಯಾಂಟೀನ್ ನಡೆಸುವ ದುರ್ಗಾಪ್ರಸಾದ್ ಅವರಿಗೆ ಚಿತ್ರದುರ್ಗ ಸಮೀಪದ ಸಿದ್ದಾಪುರದ ರಮೇಶ ಎಂಬಾತ ಮೇ 10ರಂದು ಕರೆ ಮಾಡಿ ಚಿನ್ನದ ನಾಣ್ಯ ಸಿಕ್ಕಿರುವುದಾಗಿ ತಿಳಿಸಿದ್ದಾನೆ. ಕನ್ನಡ ಬಾರದ ದುರ್ಗಾಪ್ರಸಾದ್, ಕ್ಯಾಂಟೀನ್‌ನಲ್ಲಿ ಕೆಲಸಕ್ಕಿದ್ದ ಕರ್ನಾಟಕದ ಜಗದೀಶ್ ಕೈಗೆ ಮೊಬೈಲ್ ಕೊಟ್ಟು ರಮೇಶ ಏನು ಹೇಳುತ್ತಿದ್ದಾನೆ ಎಂಬುದನ್ನು ತಿಳಿದುಕೊಳ್ಳುವಂತೆ ತಿಳಿಸಿದ್ದಾರೆ.
ತನ್ನ ತಾತನ ಹಳೆಯ ಮನೆಯ ಗೋಡೆ ಕೆಡವಿದಾಗ 2.2 ಕೆ.ಜಿ ಚಿನ್ನದ ನಾಣ್ಯಗಳು ಸಿಕ್ಕಿವೆ. ಅವುಗಳನ್ನು ಕರ್ನಾಟಕದಿಂದ ಹೊರಗೆ ಕಡಿಮೆ ಬೆಲೆಗೆ ಮಾರುತ್ತೇನೆ ಎಂದು ರಮೇಶ್ ತಿಳಿಸಿದ್ದಾನೆ. ಆತನ ಮಾತು ನಂಬಿದ ದುರ್ಗಾಪ್ರಸಾದ್ ಚಿತ್ರದುರ್ಗಕ್ಕೆ ಬಂದಿದ್ದಾರೆ. ಅಲ್ಲಿಂದ ರಮೇಶ್ ಹೇಳಿದಂತೆ ಚಿಕ್ಕಜಾಜೂರು ಸಮೀಪದ ಸಾಸಲುಹಳ್ಳಕ್ಕೆ ಹೋಗಿದ್ದಾರೆ. ದುರ್ಗಾಪ್ರಸಾದ್, ನವೀನ, ಸಂದೀಪ್, ಜಗದೀಶ ಮೂವರೂ ಹಣವನ್ನು ತೆಗೆದುಕೊಂಡು ಬಂದಿದ್ದಾರೆ. ಹಣ ತೋರಿಸಿ ಚಿನ್ನ ಕೊಡಿ ಎಂದು ಕೇಳಿದ್ದಾರೆ.
ಕ್ಲಿಕ್ ಮಾಡಿ ಓದಿ: ಭ್ರೂಣಲಿಂಗ ಪತ್ತೆ ಮಾಹಿತಿದಾರರಿಗೆ ₹ 1 ಲಕ್ಷ ಬಹುಮಾನ | ಡಿಎಚ್‌ಒ ಡಾ.ಜಿ.ಪಿ.ರೇಣುಪ್ರಸಾದ್
ಈ ಜಾಗದಲ್ಲಿ ಪೊಲೀಸರು ಓಡಾಡುತ್ತಿರುತ್ತಾರೆ. ಇಲ್ಲೇ ಹತ್ತಿರದಲ್ಲಿ ಚಿನ್ನವನ್ನು ಬಚ್ಚಿಟ್ಟಿದ್ದೇವೆ. ಹಣವನ್ನು ಕೊಡಿ, ಅಲ್ಲಿ ಹಣ ಇಟ್ಟು ಚಿನ್ನ ತಂದು ಕೊಡುತ್ತೇವೆ ಎಂದು ನಂಬಿಸಿ ₹ 54 ನಗದು ಪಡೆದು ಪರಾರಿಯಾಗಿದ್ದಾರೆ. ಕೆಲ ಸಮಯವಾದರು ರಮೇಶ್ ಬಾರದ ಕಾರಣ ಸಂಶಯಗೊಂಡ ದುರ್ಗಾಪ್ರಸಾದ್ ಹಾಗೂ ಜಗದೀಶ ಚಿಕ್ಕಜಾಜೂರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.