Connect with us

ಇನ್ನು ಮುಂದೆ ಚಿತ್ರದುರ್ಗ ನನ್ನ ತವರು ಮನೆ | ದುರ್ಗದ ಜನರ ಪ್ರೀತಿಗೆ ಭಾವುಕರಾದ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ.

ಮುಖ್ಯ ಸುದ್ದಿ

ಇನ್ನು ಮುಂದೆ ಚಿತ್ರದುರ್ಗ ನನ್ನ ತವರು ಮನೆ | ದುರ್ಗದ ಜನರ ಪ್ರೀತಿಗೆ ಭಾವುಕರಾದ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ.

CHITRADURGA NEWS | 10 FEBRUARY 2024
ಚಿತ್ರದುರ್ಗ: ಕಳೆದ 12 ವರ್ಷಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಆದರೆ ಚಿತ್ರದುರ್ಗದ ಜಿಲ್ಲಾಧಿಕಾರಿಯಾಗಿ ಮಾಡಿದ ಕಾರ್ಯ ಆತ್ಮ ತೃಪ್ತಿ ತಂದಿದೆ. ಇಷ್ಟು ದಿನ ನನ್ನ ತವರು ಮನೆ ತಮಿಳುನಾಡು ಎಂದು ಹೇಳುತ್ತಿದ್ದೆ. ಇನ್ನು ಮುಂದೆ ಚಿತ್ರದುರ್ಗ ನನ್ನ ತವರು ಮನೆ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎನ್ನುತ್ತಾ ಭಾವುಕರಾದರು ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್‌.ಜೆ.

ನಗರದ ತರಾಸು ರಂಗಮಂದಿರದಲ್ಲಿ ಶುಕ್ರವಾರ ಸಂಜೆ ಚಿತ್ರದುರ್ಗ ನಾಗರೀಕ ವೇದಿಕೆಯಿಂದ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಚಿತ್ರದುರ್ಗದ ಜನ ನೀಡಿದಂತ ಬೀಳ್ಕೊಡುಗೆ ನನ್ನ ಜೀವನದಲ್ಲಿ ಮರೆಯಲಾಗದಂತ ಮಧುರ ಕ್ಷಣ. ಇಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಧಾರವಾಡಕ್ಕೆ ವರ್ಗಾವಣೆಗೊಂಡರು ಆತ್ಮೀಯವಾಗಿ ಆಹ್ವಾನಿಸಿ ಸನ್ಮಾನಿಸಿದ್ದು ಸಂತಸ ತಂದಿದೆ’ ಎಂದರು.

ಇದನ್ನೂ ಓದಿ: 2024ಕ್ಕೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಯಾಕೆ ? | ಆಟೋ ಪ್ರಚಾರಕ್ಕೆ ಚಾಲನೆ

‘ವರ್ಗಾವಣೆಯಾಗುವುದು ಸಹಜ. ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ವರ್ಗಾವಣೆಯಾದಾಗ ಅಧಿಕಾರಿಗಳು, ಸಿಬ್ಬಂದಿಗಳು ಸೇರಿ ಬೀಳ್ಕೊಡುಗೆ ನೀಡುವುದನ್ನು ನೋಡಿದ್ದೇನೆ. ಆದರೆ ಜಿಲ್ಲೆಯ ಜನ ಒಂದಾಗಿ ನನಗೆ ಇಂತಹ ಅಭೂತಪೂರ್ವವಾದ ಬೀಳ್ಕೊಡುಗೆ ನೀಡಿರುವುದನ್ನು ಎಂದಿಗೂ ಮರೆಯುವುದಿಲ್ಲ. ಮಗಳು ಮನೆಗೆ ಬಂದಾಗ ನೀಡುವುದಕ್ಕಿಂತ ಹೆಚ್ಚಿನ ಆತಿಥ್ಯ, ಪ್ರೀತಿ ಈ ಊರಿನಲ್ಲಿ ಸಿಕ್ಕಿದೆ. ಇನ್ನೂ ಮುಂದೆ ಚಿತ್ರದುರ್ಗ ನನ್ನ ತವರೂರು’ ಎಂದರು.

ಇದನ್ನೂ ಓದಿ: ಅವೈಜ್ಞಾನಿಕ ರಸ್ತೆ ವಿಭಜಕ ತೆರವಿಗೆ ಚಾಲನೆ | ಜೆಸಿಬಿ, ಹಿಟಾಚಿ ಜತೆ ಪಟಾಕಿ ಸದ್ದು

‘ಅಧಿಕಾರವಿದ್ದಾಗ ನಿಷ್ಠೆ ಮತ್ತು ಕಾಳಜಿಯಿಂದ ಜನ ಸೇವೆ ಮಾಡಿದಾಗ ಎಲ್ಲರ ಮನದಲ್ಲಿ ಶಾಶ್ವತವಾಗಿ ಉಳಿಯಬಹುದು. ಹುಟ್ಟು-ಸಾವಿನ ನಡುವೆ ಸಾರ್ವಜನಿಕವಾಗಿ ಏನು ಮಾಡಿದ್ದೇವೆ ಎನ್ನುವುದು ಮುಖ್ಯ. ಹಿಂದುಳಿದ ಜಿಲ್ಲೆ ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ ತೃಪ್ತಿ ನನಗಿದೆ. ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ಆರು ಮಂದಿ ಮೃತಪಟ್ಟು ಇನ್ನೂರಕ್ಕೂ ಹೆಚ್ಚು ಜನ ಅಸ್ಪಸ್ಥರಾದಾಗ ಹಗಲು-ರಾತ್ರಿ ಎನ್ನದೆ ಕೆಲಸ ಮಾಡಿದ್ದೇನೆ. ಅದಕ್ಕೆ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರು ಸಹಕರಿಸಿದರು. ಒಳ್ಳೆ ಕೆಲಸ ಮಾಡಿದಾಗ ಭಗವಂತ ಯಾವುದೋ ಒಂದು ರೂಪದಲ್ಲಿ ಫಲ ಕೊಡುತ್ತಾನೆ. ಅಧಿಕಾರಿಗಳಾದವರಿಗೆ ಜನಸೇವೆ ಮಾಡುವ ಗುಣವಿರಬೇಕು’ ಎಂದು ತಿಳಿಸಿದರು.

‘ಒಂದು ಜಿಲ್ಲೆಯ ಜಿಲ್ಲಾಧಿಕಾರಿಯಾದಾಗ ಬಡವರ, ಜನ ಸಾಮಾನ್ಯರ ಸಮಸ್ಯೆಗಳಿಗೆ ಹತ್ತಿರವಿದ್ದು, ಕೈಲಾದಷ್ಟು ಒಳ್ಳೆಯದು ಮಾಡಬಹುದು. ಹಾಗಾಗಿ ರಾಜ್ಯದಲ್ಲಿ ನಾನು ಎಲ್ಲಿಯೇ ಅಧಿಕಾರದಲ್ಲಿರಲಿ ಚಿತ್ರದುರ್ಗಕ್ಕೆ ನನ್ನಿಂದ ಏನಾದರೂ ಒಳ್ಳೇದು ಮಾಡುವ ಸಂದರ್ಭ ಸಿಕ್ಕಾಗ ಖಂಡಿತ ಮಾಡುತ್ತೇನೆ’ ಎಂದರು.

ಕನ್ನಡ ವಿಜಯ ಸೇನೆಯಿಂದ ಮಲ್ಲಿಗೆ ಹೂ, ಅರಿಶಿಣ, ಕುಂಕುಮ, ಹಸಿರು ಬಳೆ, ಸೀರೆ ನೀಡಿ ಊಡಿ ತುಂಬಿದರು. ತಾಳಿಕಟ್ಟೆ ಗ್ರಾಮಸ್ಥರು ಕುರಿಮರಿ ನೀಡಿದರು. ಐವತ್ತು ಹೆಚ್ಚು ಸಂಘಟನೆಗಳು ಹೂವಿನಹಾರ, ನೆನಪಿನ ಕಾಣಿಕೆ, ಶಾಲು ಹೊದಿಸಿ ಸನ್ಮಾನಿಸಿ ಭಾವುಕರಾದರು. ನೀವು ಮತ್ತೊಮ್ಮೆ ಜಿಲ್ಲಾಧಿಕಾರಿಯಾಗಿ ನಮ್ಮೂರಿಗೆ ಬನ್ನಿ ತಾಯಿ ಎಂದು ಮನವಿ ಮಾಡಿದರು.

ಮಾಜಿ ಸಚಿವ ಹೆಚ್.ಆಂಜನೇಯ, ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಆಯುಕ್ತೆ ವಿಜಯಜೋತ್ನ್ಸಾ, ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ, ಜಿಲ್ಲಾಧಿಕಾರಿ ಟಿ.ವೆಂಕಟೇಶ್‌, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಕಾರ್ತಿಕ್, ತಹಶೀಲ್ದಾರ್ ನಾಗವೇಣಿ, ನಗರಸಭೆ ಪೌರಾಯುಕ್ತೆ ರೇಣುಕಾ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ ರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್‌, ಮರ್ಚೆಂಟ್ಸ್ ಸೌಹಾರ್ದ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್‌.ಆರ್.ಲಕ್ಷ್ಮಿಕಾಂತರೆಡ್ಡಿ, ಎಸ್‌ಆರ್‌ಎಸ್‌ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಇದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version