ಮುಖ್ಯ ಸುದ್ದಿ
ಅವಿಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾದ ಚಿತ್ರದುರ್ಗ | ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅವರಿಗೆ ಹೃದಯ ಸ್ಪರ್ಶಿ ಬೀಳ್ಕೋಡುಗೆ
CHITRADURGA NEWS | 10 FEBRUARY 2024
ಚಿತ್ರದುರ್ಗ: ಕೋಟೆನಾಡಿನ ಶುಕ್ರವಾರದ ರಾತ್ರಿ 7.30 ರ ಸಮಯ ಎಂದಿನಂತೆ ಇರಲಿಲ್ಲ. ಭಾವುಕತೆ, ಸಂಭ್ರಮ, ಸಂಭ್ರಮದ ನೋವಿನಲ್ಲಿ ಭಾರವಾದ ಮನಸ್ಸುಗಳು, ಜಯ ಘೋಷ, ಶಿಳ್ಳೆ, ಚಪ್ಪಾಳೆ, ಆನಂದ ಭಾಷ್ಪ..ಹೀಗೆ ಎಲ್ಲದರ ಸಮ್ಮಿಶ್ರಣದ ವಾತಾವರಣಕ್ಕೆ ತರಾಸು ರಂಗಮಂದಿರ ಸಾಕ್ಷಿಯಾಯಿತು.
2022 ಅಕ್ಟೋಬರ್‌ನಲ್ಲಿ ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ಆಗಮಿಸಿದ್ದ ಇವರು 2024 ರ ಜನವರಿ 23 ರವರೆಗೆ ಕರ್ತವ್ಯ ನಿರ್ವಹಿಸಿದ್ದ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಅವರು ಮಾಡಿದ ಜನಪರ ಕಾರ್ಯ ಅವಿಸ್ಮರಣೀಯ. ಅತ್ಯಂತ ಕಡಿಮೆ ಅವಧಿಯಲ್ಲಿ ಕೋಟೆನಾಡಿನ ಜನರ ಹೃದಯ ಸಿಂಹಾಸನ ಅಲಂಕರಿಸಿದ್ದಾರೆ ಎಂಬುದನ್ನು ತರಾಸು ರಂಗಮಂದಿರಕ್ಕೆ ಆಗಮಿಸಿದ್ದ ಜನಸ್ತೋಮ ಸಾಕ್ಷೀಕರಿಸಿತು.
ಇದನ್ನೂ ಓದಿ: ಇನ್ನು ಮುಂದೆ ಚಿತ್ರದುರ್ಗ ನನ್ನ ತವರು ಮನೆ | ದುರ್ಗದ ಜನರ ಪ್ರೀತಿಗೆ ಭಾವುಕರಾದ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ.
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಆಯುಕ್ತೆ ವಿ.ವಿ.ಜೋತ್ಸ್ನಾ ಮಾತನಾಡಿ, ಐದು ವರ್ಷಗಳ ಹಿಂದೆ ನಾನು ಕೂಡ ಚಿತ್ರದುರ್ಗದಲ್ಲಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಈಗಲೂ ಜಿಲ್ಲೆಯ ಜನ ನನ್ನ ಮೇಲಿಟ್ಟಿರುವ ಅಭಿಮಾನ ಪ್ರೀತಿ ಮರೆಯುವುದಿಲ್ಲ. ಇಲ್ಲಿ ಕೆಲಸ ಮಾಡುವಾಗ ಎಲ್ಲರ ಸಹಕಾರ ಸಿಕ್ಕಿದೆ ಎಂದು ತಿಳಿಸಿದ ಅವರು, ದಿವ್ಯಪ್ರಭು ಜಿ.ಆರ್.ಜೆ ಅವರು ನೋಡಲು ಮೃದುವಾಗಿರಬಹುದು. ಆದರೆ ಅವರು ಕೆಲವೊಮ್ಮೆ ತೆಗೆದುಕೊಳ್ಳುವ ನಿರ್ಧಾರಗಳು ಕಠಿಣ ದಿಟ್ಟವಾಗಿರುತ್ತಿದ್ದವು ಎಂದು ತಿಳಿಸಿದರು.
ಇದನ್ನೂ ಓದಿ: 2024ಕ್ಕೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಯಾಕೆ ? | ಆಟೋ ಪ್ರಚಾರಕ್ಕೆ ಚಾಲನೆ
ನೂತನ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸನ್ಮಾನ ಸ್ವೀಕರಿಸಿ ಮಾತನಾಡಿ, 15 ವರ್ಷಗಳ ಹಿಂದೆ ಚಿತ್ರದುರ್ಗದಲ್ಲಿ ಉಪವಿಭಾಗಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಇದೀಗ ಜಿಲ್ಲಾಧಿಕಾರಿಯಾಗಿ ಚಿತ್ರದುರ್ಗಕ್ಕೆ ಸರ್ಕಾರ ವರ್ಗಾಯಿಸಿ ಎರಡನೇ ಬಾರಿಗೆ ಇಲ್ಲಿ ಸೇವೆ ಸಲ್ಲಿಸುವ ಅವಕಾಶ ಮಾಡಿಕೊಟ್ಟಿದೆ ಎಂದು ತಿಳಿಸಿದ ಅವರು, ದಿವ್ಯಪ್ರಭು ಜಿ.ಆರ್.ಜೆ ಅವರು ಚಿತ್ರದುರ್ಗ ಜಿಲ್ಲಾಧಿಕಾರಿಯಾಗಿ ಉತ್ತಮ ಸೇವೆ ಸಲ್ಲಿಸುವ ಮೂಲಕ ಎಲ್ಲರ ಅಭಿಮಾನ, ಮೆಚ್ಚುಗೆ ಗಳಿಸಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅವೈಜ್ಞಾನಿಕ ರಸ್ತೆ ವಿಭಜಕ ತೆರವಿಗೆ ಚಾಲನೆ | ಜೆಸಿಬಿ, ಹಿಟಾಚಿ ಜತೆ ಪಟಾಕಿ ಸದ್ದು
ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಅಧಿಕಾರಿಗಳಾದ ಮೇಲೆ ಸರ್ಕಾರ ಹೇಳಿದ ಜಾಗಕ್ಕೆ ಹೋಗಿ ಕೆಲಸ ಮಾಡುವುದು ಅನಿವಾರ್ಯ. ದಿವ್ಯಪ್ರಭು ಜಿಲ್ಲಾಧಿಕಾರಿಯಾಗಿ ಚಿತ್ರದುರ್ಗದಲ್ಲಿ ಸೇವೆ ಸಲ್ಲಿಸಿ ಧಾರವಾಡಕ್ಕೆ ವರ್ಗಾವಣೆಯಾಗಿದ್ದರೂ ಚಿತ್ರದುರ್ಗ ನಾಗರೀಕ ವೇದಿಕೆಯಿಂದ ಇಷ್ಟೊಂದು ಅದ್ದೂರಿಯಾಗಿ ಬೀಳ್ಕೊಡುಗೆ ನೀಡಿರುವುದು ಹೃದಯಸ್ಪರ್ಶಿಯಾಗಿದೆ. ನೂತನ ಜಿಲ್ಲಾಧಿಕಾರಿ ಟಿ.ವೆಂಕಟೇಶ್ರವರಿಂದ ಸಾಕಷ್ಟು ನಿರೀಕ್ಷೆಯಿಟ್ಟುಕೊಂಡಿದ್ದೇವೆ. ಹಿಂದುಳಿದ ಬರಪೀಡಿತ ಬಡ ಜಿಲ್ಲೆಯ ಅಭಿವೃದ್ಧಿ ಕಡೆ ಗಮನ ಕೊಟ್ಟು ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಉಪವಿಭಾಗಾಧಿಕಾರಿ ಎಂ.ಕಾರ್ತಿಕ್, ತಹಶೀಲ್ದಾರ್ ಡಾ.ನಾಗವೇಣಿ, ನಗರಸಭೆ ಪೌರಾಯುಕ್ತೆ ಎಂ.ರೇಣುಕಾ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ರವಿಶಂಕರ ರೆಡ್ಡಿ, ಮರ್ಚೆಂಟ್ಸ್ ಸೌಹಾರ್ಧ ಸಹಕಾರ ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಲಕ್ಷ್ಮಿಕಾಂತರೆಡ್ಡಿ, ಮುಖಂಡರಾದ ಬಿ.ಎ.ಲಿಂಗಾರೆಡ್ಡಿ, ಎಂ.ಕೆ.ತಾಜ್‍ಪೀರ್ ಸೇರಿದಂತೆ ಇತರರು ಇದ್ದರು.