ಕ್ರೈಂ ಸುದ್ದಿ
ಸೇನೆ, ರೈಲ್ವೇಯಲ್ಲಿ ಕೆಲಸ ಕೊಡಿಸುವದಾಗಿ ವಂಚಿಸಿದ್ದ ಮಾಜಿ ಸೈನಿಕನ ಬಂಧನ
ಚಿತ್ರದುರ್ಗ ನ್ಯೂಸ್.ಕಾಂ: ಭಾರತೀಯ ಸೇನೆ ಹಾಗೂ ರೈಲ್ವೇಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸುಮಾರು 16 ಲಕ್ಷ ರೂ. ವಂಚಿಸಿದ್ದ ಆರೋಪಿಯನ್ನು ಹೊಸದುರ್ಗ ತಾಲೂಕಿನ ಶ್ರೀರಾಂಪುರ ಪೊಲೀಸರು ಬಂಧಿಸಿದ್ದಾರೆ.
ಕ್ರೀಡಾ ಕೋಟಾದಡಿ ಕೆಲಸ ಕೊಡಿಸುವುದಾಗಿ ಹುಬ್ಬಳ್ಳಿ ಮೂಲದ ಶಿವರಾಜ್(45) 10 ಸಾವಿರದಿಂದ 2 ಲಕ್ಷದವರೆಗೆ ಹಣ ಪಡೆದು ಸುಮಾರು 16 ಲಕ್ಷ ರೂ. ವಂಚನೆ ಮಾಡಿರುವ ಬಗ್ಗೆ ದೂರು ದಾಖಲಾಗಿತ್ತು.
ಒಂದಷ್ಟು ದಿನ ಸೇನೆಯಲ್ಲಿ ಕೆಲಸ ಮಾಡಿ, ಪ್ರಕರಣವೊಂದರಲ್ಲಿ ವಜಾಗೊಂಡಿದ್ದ ವ್ಯಕ್ತಿ ಶಿವರಾಜ್, ಶ್ರೀರಾಂಪುರ ಸಮೀಪದ ಗವಿರಂಗಾಪುರದ ಬಳಿ ಸ್ಥಗಿತಗೊಂಡಿದ್ದ ಶಾಲಾ ಕಟ್ಟಡವನ್ನು ಬಾಡಿಗೆ ಪಡೆದು ಅಲ್ಲಿ ಶಿವಾಜಿ ರಾಜ್ ಕ್ರೀಡೆ ಮತ್ತು ಸ್ಪರ್ಧಾತ್ಮಕ ಅಕಾಡೆಮಿ ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದ.
ಈ ಅಕಾಡೆಮಿಯಲ್ಲಿ ತರಬೇತಿ ಪಡೆದವರಿಗೆ ಕ್ರೀಡಾ ಕೋಟಾದಡಿ ಸೇನೆ ಹಾಗೂ ರೈಲ್ವೇಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆಯುತ್ತಿದ್ದ.
ಈತನ ನಡವಳಿಕೆಯಿಂದ ಅನುಮಾನಗೊಂಡ ಒಂದಷ್ಟು ಯುವಕರು, ಮೊದಲು ಕೆಲಸ ಖಚಿತಪಡಿಸಿ ನಂತರ ಹಣ ಕೊಡುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ಮುರುಘಾ ಮಠದ ಪ್ರಕರಣ | ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಾಜಿ ಸಚಿವ ಎಚ್.ಏಕಾಂತಯ್ಯ
ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಆರೋಪಿ ಶಿವರಾಜ್ ಯುವಕರನ್ನು ಬೆಂಗಳೂರಿನ ಸೇನಾ ಕಚೇರಿಗೆ ಕರೆದೊಯ್ದು, ಹೊರಗೆ ನಿಲ್ಲಿಸಿ ನಾನು ಒಳಗೆ ಹೋಗಿ ಮಾತನಾಡಿಕೊಂಡು ಬರುತ್ತೇನೆ ಎಂದು ಹೋಗಿದ್ದಾನೆ.
ಈ ವೇಳೆಗೆ ಅಲ್ಲಿಗೆ ಬಂದ ಸೇನಾಧಿಕಾರಿಯೊಬ್ಬರು ಯುವಕರು ಬಂದಿರುವುದನ್ನು ವಿಚಾರಿಸಿದಾಗ ಸದರಿ ವಿಚಾರ ತಿಳಿಸಿದ್ದಾರೆ. ತಕ್ಷಣ ಆತನ ಪೂರ್ವಾಪರ ವಿಚಾರಿಸಿ, ವಂಚನೆ ಮಾಡುತ್ತಿರುವ ವಿಷಯ ಗಮನಕ್ಕೆ ತಂದು ದೂರು ದಾಖಲಿಸಲು ಸೂಚಿಸಿದ್ದಾರೆ.
ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕದಣ ದಾಖಲಾದ ನಂತರ ಇಲ್ಲಿನ ಪೊಲೀಸ್ ಇನ್ಸ್‍ಪೆಕ್ಟರ್ ಮಧು ನೇತೃತ್ವದ ತಂಡ ಶಿವರಾಜ್‍ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದೆ.