ಮುಖ್ಯ ಸುದ್ದಿ
ಕನ್ನಡಿಗರಾಗಿ ನಿಮಗೆಲ್ಲಾ ಕೋಪ ಬರುವುದಿಲ್ಲವೇ | ಪತ್ರಕರ್ತರನ್ನು ಪ್ರಶ್ನಿಸಿದ ಸಿದ್ದರಾಮಯ್ಯ
CHITRADURGA NEWS | 9 FEBRUARY 2024
ಚಿತ್ರದುರ್ಗ: ಕರ್ನಾಟಕವನ್ನು ಪ್ರತಿನಿಧಿಸಿರುವ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‍ನಲ್ಲಿ 5300 ಕೋಟಿ ಘೋಷಣೆ ಮಾಡಿ ಒಂದೂ ರೂಪಾಯಿಯನ್ನೂ ಕೊಟ್ಟಿಲ್ಲ. ಕನ್ನಡಿಗರಾಗಿ ನಿಮಗೆಲ್ಲಾ ಕೋಪ ಬರುವುದಿಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರನ್ನು ಪ್ರಶ್ನಿಸಿದರು.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕು ಭಗೀರಥ ಮಠಕ್ಕೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕರ್ನಾಟಕದಿಂದ ರಾಜ್ಯಸಭೆಗೆ ಹೋಗಿ, ರಾಜ್ಯದ ಯೋಜನೆಗೆ ಅನುದಾನ ಘೊಷಣೆ ಮಾಡಿ ಹಣ ಬಿಡುಗಡೆ ಮಾಡದಿದ್ದರೆ ಹೇಗೆ, ಇದೇನಾ ರಾಜ್ಯಕ್ಕೆ ಅವರ ಕೊಡುಗೆ. ಈ ಸತ್ಯವನ್ನು ನೀವು ಬರೆಯಬೇಕು ಎಂದರು.
ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗಾಗಿ ಚಿತ್ರದುರ್ಗ ಬಂದ್
ಭದ್ರಾ ಮೇಲ್ದಂಡೆ ಯೋಜನೆಗೆ 2022-23ನೇ ಸಾಲಿನ ಕೇಂದ್ರದ ಬಜೆಟ್‍ನಲ್ಲಿ 5300 ಕೋಟಿ ರೂ. ಘೋಷಣೆ ಮಾಡಿದ್ದಾರೆ. ಇದು ಹೇಳಿಕೆಯಲ್ಲ. ಬಜೆಟ್ ನಲ್ಲಿ ಹಣ ಮೀಸಲಿಟ್ಟಿರುವುದು ಎಂದು ಹೇಳಿದರು.
ಜಲಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್, ಕೇಂದ್ರ ಹಣಕಾಸು ಸಚಿವರನ್ನು ಭೇಟಿ ಮಾಡಿ 5300 ಕೋಟಿ ರೂ. ಬಿಡಗಡೆಗೆ ಒತ್ತಾಯ ಮಾಡಿದ್ದಾರೆ. ಆದರೂ, ಕೊಟ್ಟಿಲ್ಲ. ಕರ್ನಾಟಕವನ್ನು ಪ್ರತಿನಿಧಿಸಿ ರಾಜ್ಯಸಭೆಗೆ ಹೋದವರಿಗೆ ಇಷ್ಟೂ ಜವಾಬ್ದಾರಿ ಬೇಡವೇ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ದಕ್ಷಿಣ ಕಾಶಿ ತೇರುಮಲ್ಲೇಶ್ವರಸ್ವಾಮಿ ಜಾತ್ರೆ
ಬಸವರಾಜ ಬೊಮ್ಮಾಯಿ ಮಂಡಿಸಿದ್ದ ಕೊನೆಯ ಬಜೆಟ್‍ನಲ್ಲಿ ಕೂಡಾ ನಿರ್ಮಲಾ ಸೀತಾಮನ್ ಹೇಳಿದ್ದನ್ನು ಉಲ್ಲೇಖಿಸಿದ್ದಾರೆ. ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಣೆ ಮಾಡುತ್ತೇವೆ ಎಂದು ಹೇಳಿದ್ದಾರೆ ಎಂದು ಪ್ರಸ್ತಾಪಿಸಿದರು.