ಮುಖ್ಯ ಸುದ್ದಿ
ಜಿಲ್ಲಾ ಮಟ್ಟದ ಸರಸ್ ಮೇಳ | ಉತ್ಪನ್ನಗಳ ಬ್ರ್ಯಾಂಡಿಂಗ್, ಹಣಕಾಸು, ಮಾರುಕಟ್ಟೆ ನಿರ್ವಹಣೆಗೆ ಆದ್ಯತೆ ನೀಡಿ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ
CHITRADURGA NEWS | 02 MARCH 2024
ಚಿತ್ರದುರ್ಗ: ಮಹಿಳಾ ಸ್ವ-ಸಹಾಯ ಗುಂಪುಗಳು ದೊಡ್ಡ ಉದ್ದಿಮೆಗಳಾಗುವ ನಿಟ್ಟಿನಲ್ಲಿ ತಮ್ಮ ಉತ್ಪನ್ನಗಳ ಬ್ರ್ಯಾಂಡಿಂಗ್, ಹಣಕಾಸು, ಮಾರುಕಟ್ಟೆ ನಿರ್ವಹಣೆ ಹೆಚ್ಚಿನ ಒತ್ತು ನೀಡಬೇಕು ಎಂದು ಶಾಸಕ ವೀರೇಂದ್ರ ಪಪ್ಪಿ ಹೇಳಿದರು.
ಕೌಶಲ್ಯಾಭಿವೃದ್ಧಿ ಉದ್ಯಮಶೀಲತಾ ಮತ್ತು ಜೀವನೋಪಾಯ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ (ಎನ್.ಆರ್.ಎಲ್.ಎಂ)-ಸಂಜೀವಿನಿ, ಜಿಲ್ಲಾ ಪಂಚಾಯತ್ ವತಿಯಿಂದ ಶುಕ್ರವಾರ ನಗರದ ವಾಸವಿ ಮಹಲ್ ನಲ್ಲಿ ಆಯೋಜಿಸಲಾದ ಎರಡು ದಿನಗಳ ಜಿಲ್ಲಾ ಮಟ್ಟದ ಸರಸ್ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ: ಪ್ರತ್ಯೇಕ ಚುನಾವಣೆ ಕಚೇರಿ ತೆರೆದರೆ ನಿರಾಸೆ ಕಟ್ಟಿಟ್ಟ ಬುತ್ತಿ | ಬಿಜೆಪಿ ನಾಯಕ ಪ್ರೀತಂ ಗೌಡ ಎಚ್ಚರಿಕೆ
ಮಹಿಳಾ ಸ್ವ-ಸಹಾಯ ಗುಂಪುಗಳು ತಮ್ಮ ಉತ್ಪನ್ನಗಳನ್ನು ಸುಂದರ ಆಕರ್ಷಕ ಪ್ಯಾಕಿಂಗ್‍ಗಳಲ್ಲಿ ಮಾರಾಟ ನಡೆಸುವುದರೊದೊಂದಿಗೆ ಸ್ಥಳೀಯವಾಗಿ ಪ್ರಚಾರ, ಜಾಹೀರಾತು ಕಾರ್ಯ ಮಾಡಿಕೊಳ್ಳಬೇಕು. ಎಲ್ಲಾ ಅಂತರಾಷ್ಟ್ರೀಯ ಉತ್ಪನ್ನಗಳು ಆರಂಭದಲ್ಲಿ ಸ್ಥಳೀಯ ಮಟ್ಟದಲ್ಲಿ ಉಗಮವಾಗಿ, ಬೃಹದಾಕಾರವಾಗಿ ಬೆಳದಿವೆ.
ಉತ್ಪಾದನೆಗಳ ಮಾರಾಟದಿಂದ ಬರುವ ಲಾಭವನ್ನು ಸಂಪೂರ್ಣವಾಗಿ ಬೇರೆಯದಕ್ಕೆ ಖರ್ಚು ಮಾಡದೆ, ಉದ್ದಿಮೆಯನ್ನು ಮತ್ತಷ್ಟು ಬಲಪಡಿಸಲು ಬಂಡವಾಳವಾಗಿ ಉಪಯೋಗಿಸಿಕೊಳ್ಳಬೇಕು. ಉತ್ಪನ್ನಗಳನ್ನು ಅನಾಮಧೇಯ ಹೆಸರಿನಿಂದ ಮಾರಾಟ ಮಾಡುವ ಬದಲು, ಅದಕ್ಕೊಂದು ಒಳ್ಳೆಯ ಹೆಸರು ನೀಡಿ ಬ್ರ್ಯಾಂಡ್ ಆಗಿ ಪರಿವರ್ತಿಸಬೇಕು.
ಇದನ್ನೂ ಓದಿ: ಆಸ್ಪತ್ರೆಯಲ್ಲಿ ಬಿಜೆಪಿ ನಾಯಕಿ ಭಾರ್ಗವಿ ದ್ರಾವಿಡ್ ಆರೋಗ್ಯ ವಿಚಾರಿಸಿದ | ಜಿ.ಹೆಚ್.ತಿಪ್ಪಾರೆಡ್ಡಿ
ತಮ್ಮದೆ ಆದ ಚಿಹ್ನೆ ಅಡಿ ಉತ್ಪನ್ನಗಳನ್ನು ಮಾರಾಟ ಮಾಡಿದರೆ, ಬೇರೆಯವರು ಅದನ್ನು ಅನುಕರಿಸಿ ನಕಲು ಉತ್ಪನ್ನಗಳನ್ನು ಮಾರಾಟ ಮಾಡುವುದು ತಪ್ಪುತ್ತದೆ. ಮಾರುಕಟ್ಟೆಯ ಸ್ಪರ್ಧಾತ್ಮಕತೆಯಲ್ಲಿ ಉಳಿಯಬೇಕಾದರೆ ಸ್ವ ಸಹಾಯ ಗುಂಪುಗಳು ತಮ್ಮ ಮಾರುಕಟ್ಟೆ ನೀತಿಯನ್ನು ಬದಲಿಸಿಕೊಳ್ಳಬೇಕು. ಇದರಿಂದ ನಿಮ್ಮ ಉತ್ಪನ್ನಗಳು ಯಶಸ್ವಿಯಾಗಿ ಮಾರುಕಟ್ಟೆಯಲ್ಲಿ ಉಳಿಯುತ್ತವೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಸಲಹೆ ನೀಡಿದರು.
ಆನ್‍ಲೈನ್ ಮಾರುಕಟ್ಟೆ ವೆಚ್ಚದಾಯಕವಲ್ಲ. ಪ್ರತಿಯೊಬ್ಬರು ಮುಕ್ತವಾಗಿ ತಮ್ಮ ಉತ್ಪನ್ನಗಳನ್ನು ಆನ್‍ಲೈನ್ ಮೂಲಕ ಮಾರಾಟ ಮಾಡಬಹುದು. ಮಹಿಳಾ ಸ್ವ ಸಹಾಯ ಗುಂಪುಗಳು ಸಹ ಇ-ಮಾರುಕಟ್ಟೆಗೆ ಲಗ್ಗೆ ಇಟ್ಟು, ಪ್ರಗತಿಯತ್ತ ದಾಪುಗಾಲು ಹಾಕಬೇಕು ಎಂದರು.
ಇದನ್ನೂ ಓದಿ: ಜಲಕ್ಷಾಮದ ಸುಳಿಗೆ ಸಿಲುಕಲಿದೆ ಚಿತ್ರದುರ್ಗ | ಕುಸಿಯುತ್ತಿದೆ ಶಾಂತಿಸಾಗರದ ನೀರಿನ ಮಟ್ಟ
ಸರಸ್ ಮೇಳದ ಬಗ್ಗೆ ಆಟೋಗಳಲ್ಲಿ ಧ್ವನಿವರ್ಧಕದ ಮೂಲಕ ಹಾಗೂ ಭಿತ್ತಿ ಪತ್ರಗಳನ್ನು ಹಂಚುವ ಮೂಲಕ ಪ್ರಚಾರ ನೀಡಬೇಕು. ಐತಿಹಾಸಿಕ ಕೋಟೆ ಹಾಗೂ ಜನಸಂದಣಿ ಹೆಚ್ಚಿರುವ ಕಡೆ ಮೇಳವನ್ನು ಆಯೋಜಿಸಿದರೆ ಮಹಿಳಾ ಸ್ವ-ಸಹಾಯ ಸಂಘಗಳಿಗೆ ಹೆಚ್ಚಿನ ಪ್ರಯೋಜನವಾಗುವುದು. ಅಧಿಕಾರಿಗಳು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ರಾಜ್ಯ ಸರ್ಕಾರ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಅಕ್ಕಾ ಕೆಫೆ ಹಾಗೂ ಸಂಜೀವಿನಿ ಸೂಪರ್ ಮಾರುಕಟ್ಟೆಗಳನ್ನು ತೆರೆಯಲಿದೆ. ಈ ಕುರಿತು ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಘೋಷಣೆ ಮಾಡಿದ್ದಾರೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ತಿಳಿಸಿದರು.
ಇದನ್ನೂ ಓದಿ: ಪಿಡಿಓ ವಿರುದ್ಧ ಅಸಮಾಧಾನ | ಸಾಮೂಹಿಕ ರಾಜೀನಾಮೆಗೆ ಮುಂದಾದ ಗ್ರಾಮ ಪಂಚಾಯಿತಿ ಸದಸ್ಯರು
ಜಿ.ಪಂ. ಸಿಇಓ ಎಸ್.ಜೆ. ಸೋಮಶೇಖರ್ ಅವರು ಮಾತನಾಡಿ, ಮಹಿಳಾ ಸ್ವ ಸಹಾಯ ಉತ್ಪಾದಕ ಸಂಘಗಳು ತಮ್ಮ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಹಾಗೂ ಬೇಡಿಕೆ ಪಡೆಯುವಂತಾಗಲು ಶಾಸಕರು ನೀಡಿರುವ ಸಲಹೆಗಳನ್ನು ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಇದಕ್ಕೆ ಜಿಲ್ಲಾ ಪಂಚಾಯತ್ ನಿಂದ ಅಗತ್ಯ ನೆರವು ಒದಗಿಸಲಾಗುವುದು ಎಂದರು.
ಇದನ್ನೂ ಓದಿ: ಬಾಲನಟರ ಪಾತ್ರಕ್ಕಾಗಿ ಮಕ್ಕಳ ಬಳಕೆ | ಜಿಲ್ಲಾಧಿಕಾರಿ ಅನುಮತಿ ಕಡ್ಡಾಯ
ಯೋಜನಾ ನಿರ್ದೇಶಕಿ ನಂದಿನಿ.ಆರ್.ಬಿ. ಇದ್ದರು. ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಸುಮಾರು 30 ಕ್ಕೂ ಹೆಚ್ಚು ಮಹಿಳಾ ಸ್ವ ಸಹಾಯ ಉತ್ಪಾದಕ ಸಂಘಗಳು ಸರಸ್ ಮೇಳದಲ್ಲಿ ಪಾಲ್ಗೊಂಡಿವೆ. ಎರಡು ದಿನಗಳ ಕಾಲ ಗಾಣದಿಂದ ತಯಾರಿಸಿದ ಶುದ್ಧ ನೈಸರ್ಗಿಕ ಎಣ್ಣೆ, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ರೊಟ್ಟಿ, ಆಕರ್ಷಕ ಕಸೂತಿ ಹೊಂದಿರುವ ಸಾಂಪ್ರಾದಾಯಿಕ ಉಡುಪುಗಳು, ಕರಕುಶಲ ವಸ್ತುಗಳು ಸೇರಿದಂತೆ ನಾನಾ ವಸ್ತುಗಳ ಮಾರಾಟ ನಡೆಯಲಿದೆ.