ಮುಖ್ಯ ಸುದ್ದಿ
ಜಲಕ್ಷಾಮದ ಸುಳಿಗೆ ಸಿಲುಕಲಿದೆ ಚಿತ್ರದುರ್ಗ | ಕುಸಿಯುತ್ತಿದೆ ಶಾಂತಿಸಾಗರದ ನೀರಿನ ಮಟ್ಟ
CHITRADURGA NEWS | 01 MARCH 2024
ಚಿತ್ರದುರ್ಗ: ಬೇಸಿಗೆಯ ಆರಂಭದ ದಿನಗಳಲ್ಲೇ ಜಿಲ್ಲೆ ಜಲಕ್ಷಾಮ ಸುಳಿಗೆ ಸಿಲುಕುವ ಲಕ್ಷಣಗಳು ಸ್ಪಷ್ಟವಾಗುತ್ತವೆ. ದಿನದಿಂದ ದಿನಕ್ಕೆ ನೀರಿನ ಸಮಸ್ಯೆಯ ಹಳ್ಳಿಗಳ ಸಂಖ್ಯೆ ಹೆಚ್ಚಾಗುತ್ತಿದೆ.
ಈಗಾಗಲೇ 367 ಗ್ರಾಮಗಳಲ್ಲಿ ನೀರಿನ ಸಮಸ್ಯೆ ದಟ್ಟವಾಗಿದ್ದು, ಈ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಇಂತಹ ಗಂಭೀರ ಸ್ಥಿತಿಯಲ್ಲಿ ಶಾಂತಿಸಾಗರದ ನೀರು ಇನ್ನೂ 17 ದಿನಕ್ಕೆ ಮಾತ್ರ ಬಳಕೆಗೆ ಲಭ್ಯವಿದೆ ಎಂಬುದು ಆತಂಕ ಸೃಷ್ಟಿಸಿದೆ. ಚಿತ್ರದುರ್ಗ ನಗರದ ಒಟ್ಟು 35 ವಾರ್ಡ್‌ಗಳಲ್ಲಿ 6 ವಾರ್ಡ್‌ಗಳಿಗೆ ವಾಣಿವಿಲಾಸ ಸಾಗರದಿಂದ ನೀರು ಸರಬರಾಜುಗೊಂಡರೆ ಉಳಿದ 29 ವಾರ್ಡ್‌ಗಳು ಶಾಂತಿಸಾಗರದ ನೀರಿನ ಮೇಲೆ ಅವಲಂಬಿತವಾಗಿವೆ. 17 ದಿನಗಳ ಬಳಿಕ ಚಿತ್ರದುರ್ಗದ ನಗರ ಜಲಕ್ಷಾಮದ ಸುಳಿಗೆ ಸಿಲುಕುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.
ಶಾಂತಿಸಾಗರದ ನೀರು ಚನ್ನಗಿರಿ, ಚಿತ್ರದುರ್ಗ, ಹೊಳಲ್ಕೆರೆ, ಜಗಳೂರು ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿಗೆ ಬಳಕೆಯಾಗುತ್ತಿದೆ. ಮುಂದಿನ 17 ದಿನಗಳಿಗೆ ಮಾತ್ರ ನೀರಿನ ಸಂಗ್ರಹವಿದ್ದು ಬೇಸಿಗೆಯಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆಗಾಗಿ ಅನಧಿಕೃತವಾಗಿ ಅಳವಡಿಸಿರುವ ಪಂಪ್‍ಸೆಟ್‍ಗಳನ್ನು ತೆರವು ಮಾಡಲು ದಾವಣಗೆರೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಕ್ಲಿಕ್ ಮಾಡಿ ಓದಿ: https://chitradurganews.com/use-of-children-for-child-actors-collectors-permission-is-mandatory/
ಅನಧಿಕೃತವಾಗಿ ಅಳವಡಿಸಿರುವ ವಿದ್ಯುತ್ ಪರಿವರ್ತಕಗಳನ್ನು ತೆರವು ಮಾಡಲು ಮತ್ತು ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲು ಬೆಸ್ಕಾಂ ಇಂಜಿನಿಯರ್‌ಗಳಿಗೆ ಸೂಚಿಸಲಾಗಿದೆ. ಶಾಂತಿಸಾಗರದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿರುವುದರಿಂದ ಕಾಲುವೆ ಮೂಲಕ ನೀರು ಶೇಖರಣೆಗೆ ಕ್ರಮವಹಿಸಲಾಗುತ್ತಿದೆ.
ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಆಸರೆಯಾಗಿರುವ ಕೊಳವೆಬಾವಿಗಳಲ್ಲಿ ಅಂರ್ತಜಲ ಪಾತಾಳ ತಲುಪಿದೆ. ಒಂದು ಬಿಂದಿಗೆ ನೀರಿಗೆ ದಿನಪೂರ್ತಿ ಕಾಯುವ ಸ್ಥಿತಿ ಎದುರಾಗಿದೆ. ಮೊಳಕಾಲ್ಮುರು, ಚಳ್ಳಕೆರೆ, ಹಿರಿಯೂರು, ಚಿತ್ರದುರ್ಗ, ಹೊಸದುರ್ಗ, ಹೊಳಲ್ಕೆರೆ ವ್ಯಾಪ್ತಿಯಲ್ಲಿ 170 ಖಾಸಗಿ ಕೊಳವೆ ಬಾವಿ ಮಾಲೀಕರ ಜತೆ ನೀರಿನ ಒಪ್ಪಂದ ಜಿಲ್ಲಾಡಳಿತ ಮಾಡಿಕೊಂಡಿದೆ. ಆದರೆ ಆ ಕೊಳವೆ ಬಾವಿಗಳಲ್ಲೂ ನೀರು ಬತ್ತುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕುಮ್ಮಿನಘಟ್ಟೆ ಗ್ರಾಮದ ಎರಡು ಕೊಳವೆ ಬಾವಿಗಳಲ್ಲಿ ಅಂತರ್ಜಲ ಕುಸಿದಿದೆ. ಒಂದು ಮನೆಗೆ ದಿನಕ್ಕೆ 4 ಬಿಂದಿಗೆ ನೀರು ನೀಡಲಾಗುತ್ತಿದೆ. ಗ್ರಾಮದಲ್ಲಿ ಒಂದು ಸಾವಿರ ಜನಸಂಖ್ಯೆ ಇದ್ದು, 500 ಕ್ಕೂ ಹೆಚ್ಚು ಜಾನುವಾರುಗಳು ಹಾಗೂ 3,000 ಕ್ಕೂ ಹೆಚ್ಚು ಕುರಿ ಹಾಗೂ ಆಡುಗಳಿವೆ. ನೀರಿಲ್ಲದೆ ಜೀವಂತ ಉಳಿಸಿಕೊಳ್ಳುವುದೇ ದುಸ್ತರವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.