ಮುಖ್ಯ ಸುದ್ದಿ
ರಾಗಿ ಖರೀದಿ ನೋಂದಾಣಿ ಪ್ರಾರಂಭ | ಅವಧಿ ವಿಸ್ತರಣೆಗೆ ಆಗ್ರಹ
CHITRADURGA NEWS | 11 FEBRUARY 2024
ಚಿತ್ರದುರ್ಗ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬೆಂಬಲ ಬೆಲೆ ಅಡಿ ರಾಗಿ ಖರೀದಿ ಪ್ರಕ್ರಿಯೆ ಆರಂಭವಾಗಿದೆ. ಚಿಕ್ಕಜಾಜೂರು ಕೃಷಿ ಉಪ ಮಾರುಕಟ್ಟೆ ರಾಗಿ ಖರೀದಿ ಕೇಂದ್ರದಲ್ಲಿ ರೈತರ ನೋಂದಣಿಗೆ ಚಾಲನೆ ನೀಡಲಾಗಿದೆ.
ಇದನ್ನೂ ಓದಿ: 280 ಮೀಟರ್ ಡಿವೈಡರ್ ತೆರವು | ಮುನ್ನೆಲೆಗೆ ಬಂದ ರಸ್ತೆ ವಿಸ್ತರಣೆ ಚರ್ಚೆ
ಫೆ. 28ರವರೆಗೆ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಮಾರ್ಚ್ 1 ರಿಂದ ರಾಗಿ ಖರೀದಿ ಆರಂಭವಾಗಲಿದೆ/ ರೈತರು ನಿಗದಿಪಡಿಸಿದ ದಾಖಲೆಗಳೊಂದಿಗೆ (ಆಧಾರ್ ಕಾರ್ಡ್ ಹಾಗೂ ಕೃಷಿ ಇಲಾಖೆಯಿಂದ ನೀಡಲಾದ ಎಫ್‌ಐಡಿ) ಬಂದು ಬಯೋಮೆಟ್ರಿಕ್ ನೀಡಿ ನೋಂದಣಿ ಮಾಡಿಸಬಹುದಾಗಿದೆ.
ಕೇಂದ್ರ ಸರ್ಕಾರ ಕ್ವಿಂಟಲ್‌ಗೆ ₹ 3,846 ಬೆಂಬಲ ಬೆಲೆ ನಿಗದಿಪಡಿಸಿದೆ. ಕಳೆದ ವರ್ಷ ಕ್ವಿಂಟಲ್‌ಗೆ ₹ 3,578 ನಿಗದಿಪಡಿಸಿತ್ತು. ಈ ಬಾರಿ ಕ್ವಿಂಟಲ್‌ಗೆ ₹ 202 ಹೆಚ್ಚಳ ಮಾಡಿದೆ. ಸಣ್ಣ ಹಾಗೂ ಅತಿ ಸಣ್ಣ ರೈತರ ಜತೆ ದೊಡ್ಡ ರೈತರು ಸಹ ರಾಗಿಯನ್ನು ಮಾರಾಟ ಮಾಡಲು ಅವಕಾಶ ನೀಡಲಾಗಿದೆ ಎನ್ನುತ್ತಾರೆ ಕೇಂದ್ರದ ಅಧಿಕಾರಿ ಎ.ಮಾರುತಿ.
ಕಳೆದ ವರ್ಷ ಡಿ.15ರಿಂದ ನೋಂದಣಿ ಆರಂಭವಾಗಿತ್ತು. ಆದರೆ, ಈ ಬಾರಿ ಫೆ. 9ರಿಂದ ಆರಂಭಿಸಲಾಗಿದೆ. ಫೆ. 28ರವರೆಗೆ ಮಾತ್ರ ನೋಂದಣಿಗೆ ಅವಕಾಶ ನೀಡಿರುವುದು ಸರಿಯಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಅವರು ರೈತರ ಸಮಸ್ಯೆಗೆ ಸ್ಪಂದಿಸಿ, ನೋಂದಣಿ ದಿನಾಂಕವನ್ನು ವಿಸ್ತರಿಸಬೇಕು ಎಂಬುದು ರೈತರ ಆಗ್ರಹ.