ಲೋಕಸಮರ 2024
ನೀತಿ ಸಂಹಿತೆ ಉಲ್ಲಂಘಿಸಿದರೆ ಕಠಿಣ ಕ್ರಮ
CHITRADURGA NEWS | 22 APRIL 2024
ಚಿತ್ರದುರ್ಗ: ಏಪ್ರಿಲ್ 26ರಂದು ನಡೆಯಲಿರುವ ಚಿತ್ರದುರ್ಗ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿದ್ದು, ಈ ಚುನಾವಣಾ ಕರ್ತವ್ಯಕ್ಕೆ ನಿಯೋಜಿತ ಅಧಿಕಾರಿ-ಸಿಬ್ಬಂಧಿಗಳು ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡು ಮೊಕದ್ದಮೆಗಳನ್ನು ದಾಖಲಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ಅವರು ಹೇಳಿದರು.
ಇದನ್ನೂ ಓದಿ: ಹೊಸದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ರೋಡ್ ಶೋ
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಚುನಾವಣಾ ಸಂಬಂಧಿ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈವರೆಗೆ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳನ್ನು ಗುರುತಿಸಿ, ಮೊಕದ್ದಮೆಗಳನ್ನು ದಾಖಲಿಸಲಾಗಿದೆ. ಇನ್ನು ಮುಂದಿನ ಕೆಲವು ದಿನಗಳಲ್ಲಿ ಸಂಭಾವ್ಯ ನೀತಿ ಸಂಹಿತೆ ಉಲ್ಲಂಘನೆಯ ಪ್ರಕರಣಗಳನ್ನು ಗುರುತಿಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ರಾಜಕೀಯ ಪಕ್ಷಗಳ ನೇತಾರರು, ಉಮೇದುವಾರರು ತಮ್ಮ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತಯಾಚಿಸಲು ಭಾರಿ ಬಹಿರಂಗ ಪ್ರಚಾರ ಸಭೆಗಳು, ಕಾರ್ಯಕ್ರಮಗಳು ನಡೆಯುತ್ತಿದ್ದಲ್ಲಿ ಈ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಬಳಸುವ ವಾಹನಗಳು, ಅದಕ್ಕೆ ಹಣ ಪಾವತಿಸುವ ಪಕ್ಷ ಅಥವಾ ಪ್ರತಿನಿಧಿಗಳನ್ನು ಗುರುತಿಸಿ, ಅನುಮತಿ ಪಡೆದಿರುವುದನ್ನು ಖಚಿತಪಡಿಸಿಕೊಂಡು, ತಪ್ಪಿದಲ್ಲಿ ಕಾನೂನು ಕ್ರಮಕ್ಕೆ ಶಿಫಾರಸ್ಸು ಮಾಡುವಂತೆ ಅವರು ಸೂಚಿಸಿದ ಅವರು ಇಂತಹ ವಿಷಯಗಳಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಹಕರಿಸುವವರ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದರು.
ಇದನ್ನೂ ಓದಿ: ಮೋದಿ ಮತ್ತೆ ಪ್ರಧಾನಿಯಾಗೋದು ಸೂರ್ಯ, ಚಂದ್ರರಷ್ಟೇ ಸತ್ಯ | ಬಿ.ಎಸ್.ಯಡಿಯೂರಪ್ಪ
ಏಪ್ರಿಲ್ 25ರಂದು ಉಮೇದುವಾರರು ಮನೆಮನೆಗೆ ತೆರಳಿ ಮತ ಯಾಚಿಸಲು ತೆರಳಲಿದ್ದಾರೆ. ಈ ಅವಧಿಯಲ್ಲಿ 10ಕ್ಕಿಂತ ಹೆಚ್ಚು ಜನರಿರದಂತೆ ನೋಡಿಕೊಳ್ಳಬೇಕು. ಜನಸಂಖ್ಯೆ ಹೆಚ್ಚಿದ್ದಲ್ಲಿ ಕ್ರಮಕ್ಕೆ ಶಿಪಾರಸ್ಸು ಮಾಡಬೇಕು. ಅಲ್ಲದೇ ಈ ಅವಧಿಯಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶವಿಲ್ಲದಂತೆ ಹಾಗೂ ಶಾಂತಿಸುವ್ಯವಸ್ಥೆ ಕಾಪಾಡುವಲ್ಲಿ ವಿಶೇಷ ಗಮನಹರಿಸುವಂತೆ ಅವರು ಸೂಚಿಸಿದರು.
ಈ ಸಂಕೀರ್ಣ ಅವಧಿಯಲ್ಲಿ ಅಬಕಾರಿ, ಆದಾಯ ತೆರಿಗೆ ಮತ್ತು ವಾಣಿಜ್ಯ ತೆರಿಗೆ ಇಲಾಖಾಧಿಕಾರಿಗಳು ತಮ್ಮ ದೈನಂದಿನ ಕಾರ್ಯಕ್ರಮಗಳೊಂದಿಗೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಪಟ್ಟ ವಿಷಯಗಳ ಕಡೆಗೂ ಗಮನಹರಿಸಬೇಕು. ಅಗತ್ಯವಿದ್ದಲ್ಲಿ ನೆರೆಯ ಜಿಲ್ಲೆಗಳ ಅಧಿಕಾರಿ-ಸಿಬ್ಬಂಧಿಗಳ ಸೇವೆಯನ್ನು ಬಳಸಿಕೊಳ್ಳಲು ಸೂಚಿಸಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆ | ಮತ ಚಲಾಯಿಸಿದ ಡಿಸಿ, ಜಿಪಂ ಸಿಇಓ
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೇರಿದಂತೆ ವಿವಿಧ ಸಮಿತಿಗಳ ನೋಡಲ್ ಅಧಿಕಾರಿಗಳು ಉಪಸ್ಥಿತರಿದ್ದರು.