ಮುಖ್ಯ ಸುದ್ದಿ
BREAKING NEWS ಮತ್ತೆ ಮುರುಘಾ ಶರಣರ ಬಂಧನ | ದಾವಣಗೆರೆಯ ವಿರಕ್ತ ಮಠದಲ್ಲಿ ಬಂಧಿಸಿದ ಚಿತ್ರದುರ್ಗ ಪೊಲೀಸರು
ಚಿತ್ರದುರ್ಗ ನ್ಯೂಸ್.ಕಾಂ: ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಚಿತ್ರದುರ್ಗ ಮುರುಘಾ ಮಠದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರು ನಾಲ್ಕೇ ದಿನಗಳ ಅಂತರದಲ್ಲಿ ಮತ್ತೆ ಬಂಧನಕ್ಕೊಳಗಾಗಿದ್ದಾರೆ.
ಮೊದಲ ಪೋಕ್ಸೋ ಪ್ರಕರಣದಲ್ಲಿ ಹೈಕೋರ್ಟ್‍ನಲ್ಲಿ ಜಾಮೀನು ಪಡೆದು ಜಿಲ್ಲಾ ಕಾರಾಗೃಹದಿಂದ ನ.16 ಗುರುವಾರ ಮಧ್ಯಾಹ್ನ ಶ್ರೀಗಳು ಬಿಡಗಡೆಯಾಗಿದ್ದರು.
ಇಂದು ಚಿತ್ರದುರ್ಗ ಜಿಲ್ಲಾ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 2ನೇ ಪೋಕ್ಸೋ ಪ್ರಕರಣದಲ್ಲಿ ಶ್ರೀಗಳನ್ನು ಬಂಧಿಸಿ ಕರೆತರಲು ಆದೇಶಿಸಿತ್ತು.
ಈ ಹಿನ್ನೆಲೆಯಲ್ಲಿ ಡಿವೈಎಸ್‍ಪಿ ಅನೀಲ್‍ಕುಮಾರ್, ಗ್ರಾಮಾಂತರ ಠಾಣೆ ಸಿಪಿಐ ಹಾಗೂ ಸಿಬ್ಬಂದಿಗಳ ತಂಡ ದಾವಣಗೆರೆಯ ವಿರಕ್ತ ಮಠದಲ್ಲಿ ತಂಗಿದ್ದ ಮುರುಘಾ ಶರಣರನ್ನು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಮುರುಘಾ ಶ್ರೀಗಳಿಗೆ ಮತ್ತೆ ಸಂಕಷ್ಟ | ಜಾಮೀನು ರಹಿತ ಬಂದನಕ್ಕೆ ಆದೇಶ
ಇಂದು ಬೆಳಗ್ಗೆ ನಡೆದ ನ್ಯಾಯಾಲಯದ ಕಲಾಪದಲ್ಲಿ ಮುರುಘಾ ಮಠದ ಡಾ.ಶ್ರೀ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ದಾಖಲಾಗಿದ್ದ ಎರಡನೇ ಪೋಕ್ಸೋ ಪ್ರಕರಣದಲ್ಲಿ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಲಾಗಿತ್ತು.
ಎರಡನೇ ಪೋಕ್ಸೋ ಪ್ರಕರಣಕ್ಕಿದ್ದ ಬಾಡಿ ವಾರೆಂಟ್ ಅನ್ನು ನ್ಯಾಯಾಂಗ ಬಂಧನವಾಗಿ ಪರಿವರ್ತಿಸಲು ಕೋರಿ ಪ್ರಾಸಿಕ್ಯೂಷನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಬಂಧನಕ್ಕೆ ಆದೇಶ ಹೊರಡಿಸಿತ್ತು.
ಶಿವಮೂರ್ತಿ ಮುರುಘಾ ಶರಣರನ್ನು ನಾಳೆಯೊಳಗೆ (ನ.21 ಮಂಗಳವಾರ) ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಲು ಕಾಲಾವಕಾಶ ನೀಡಿ ನ.20 ಸೋಮವಾರ ನ್ಯಾಯಾಧೀಶರಾದ ಬಿ.ಕೆ.ಕೋಮಲಾ ಆದೇಶ ಪ್ರಕಟಿಸಿದ್ದರು. ಅದರಂತೆ ಪೊಲೀಸರು ಇಂದೇ ವಶಕ್ಕೆ ಪಡೆದಿದ್ದಾರೆ.
ಮುರುಘಾ ಶರಣರ ವಿರುದ್ಧ ದಾಖಲಾಗಿದ್ದ ಮೊದಲ ಪೋಕ್ಸೋ ಪ್ರಕರಣದಲ್ಲಿ ಈಗಾಗಲೇ ಹೈಕೋರ್ಟ್ ಜಾಮೀನು ನೀಡಿದ್ದು, ಶ್ರೀಗಳು ನ.16 ಗುರುವಾರ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾಗಿ ದಾವಣಗೆರೆ ವಿರಕ್ತ ಮಠದಲ್ಲಿ ನೆಲೆಸಿದ್ದರು.
ಆದರೆ, ಎರಡನೇ ಪೋಕ್ಸೋ ಪ್ರಕರಣದ ವಿಚಾರಣೆಗೆ ಬಾಡಿ ವಾರೆಂಟ್ ಮೂಲಕ ಮಾತ್ರ ತೆಗೆದುಕೊಳ್ಳಲಾಗಿತ್ತು. ಸದರಿ ಪ್ರಕರಣದಲ್ಲಿ ನ್ಯಾಯಾಲಯದ ವಿಚಾರಣೆಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲು ಅನುಮತಿ ನೀಡುವಂತೆ ಶರಣರ ಪರ ವಕೀಲರು ನ.18 ರಂದು ಜಿಲ್ಲಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಸರ್ಕಾರಿ ವಕೀಲರು, ಹೈಕೋರ್ಟ್ ಆದೇಶದಲ್ಲಿ ಮೊದಲ ಪ್ರಕರಣದಲ್ಲಿ ಮಾತ್ರ ವೀಡಿಯೋ ಕಾನ್ಫರನ್ಸ್ ಮೂಲಕ ಹಾಜರಾಗಲು ತಿಳಿಸಿದೆ. ಆದರೆ, ಎರಡನೇ ಪ್ರಕರಣದಲ್ಲಿ ವಿಸಿ ಮೂಲಕ ಹಾಜರಾಗಲು ಎಲ್ಲಿಯೂ ಸೂಚಿಸಿಲ್ಲ. ಹಾಗಾಗಿ ನೇರವಾಗಿ ಹಾಜರಾಗಬೇಕು ಎಂದು ವಾದ ಮಂಡನೆ ಮಾಡಿದ್ದರು.
ಜೊತೆಗೆ ಮುರುಘಾ ಶರಣರ ಮೇಲೆ ಎರಡನೇ ಪ್ರಕರಣದಲ್ಲಿ ಇರುವ ಬಾಡಿ ವಾರೆಂಟ್ ಅನ್ನು ನ್ಯಾಯಾಂಗ ಬಂಧನವಾಗಿ ಪರಿವರ್ತಿಸಬೇಕು ಎಂದು ಸರ್ಕಾರಿ ವಕೀಲ ಎಚ್.ಆರ್.ಜಗದೀಶ್ ನ.15 ರಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ಪುರಸ್ಕರಿಸಿದ ನ್ಯಾಯಾಧೀಶರು, ಜಾಮೀನು ರಹಿತ ಬಂಧನ ವಾರೆಂಟ್ ಜಾರಿ ಮಾಡಿದ್ದರು.