ಲೋಕಸಮರ 2024
ಚಿತ್ರದುರ್ಗ ಟಿಕೇಟ್ ಸಸ್ಪೆನ್ಸ್ | ಅಚ್ಚರಿಯ ಅಭ್ಯರ್ಥಿ ಬರ್ತಾರಾ | ಏನಿದು ಬಿಜೆಪಿ ಟಿಕೇಟ್ ಮರ್ಮ
CHITRADURGA NEWS | 25 MARCH 2024
ಚಿತ್ರದುರ್ಗ: ಲೋಕಸಭಾ ಚುನಾವಣೆಗೆ ಸರಿಯಾಗಿ ಇನ್ನೊಂದು ತಿಂಗಳು ಸಿಗಬಹುದಷ್ಟೇ. ಕಾರ್ಯಕರ್ತರು, ಮುಖಂಡರು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಬಿಜೆಪಿ ವರಿಷ್ಠರು ಅಭ್ಯರ್ಥಿಯನ್ನೇ ಆಯ್ಕೆ ಮಾಡದೇ ತಡ ಮಾಡುತ್ತಿದ್ದಾರೆ.
ಹಾಲಿ ಸಂಸದರು, ಕೇಂದ್ರ ಸಚಿವರೇ ಇರುವ ಚಿತ್ರದುರ್ಗ ಕ್ಷೇತ್ರಕ್ಕೆ ಮೊದಲ ಸುತ್ತಿನಲ್ಲೇ ಅಭ್ಯರ್ಥಿ ಆಯ್ಕೆ ಆಗಬೇಕಾಗಿತ್ತು. ಆದರೆ, 5ನೇ ಪಟ್ಟಿಯಲ್ಲೂ ಹೆಸರು ಘೋಷಣೆ ಆಗದಿರುವುದು ಸೋಜಿಗವಾಗಿದೆ.
ಕರ್ನಾಟಕದ 28 ಲೋಕಸಭಾ ಕ್ಷೇತ್ರಗಳ ಪೈಕಿ 27 ಕ್ಷೇತ್ರಗಳಿಗೆ ಅಭ್ಯರ್ಥಿ ಫೈನಲ್ ಆಗಿ, ಚುನಾವಣಾ ಅಖಾಡಕ್ಕೆ ಧುಮುಕಿದ್ದಾರೆ. ಆದರೆ, ಚಿತ್ರದುರ್ಗಕ್ಕೆ ಮಾತ್ರ ಬಿಜೆಪಿ ಅಭ್ಯರ್ಥಿಯೇ ಇಲ್ಲವಾಗಿದ್ದಾರೆ.
ಹಾಲಿ ಸಂಸದ ಎ.ನಾರಾಯಣಸ್ವಾಮಿ ಸ್ಪರ್ಧೆಗೆ ನಿರಾಸಕ್ತಿ ತೋರಿಸಿದ್ದರಿಂದ ಮತ್ತು ದಲಿತ ಎಡಗೈ ಸಮುದಾಯಕ್ಕೆ ಟಿಕೇಟ್ ನೀಡಬೇಕು ಎನ್ನುವ ಪ್ರಬಲ ವಾದ ಕೇಳಿಬಂದಿದ್ದರಿಂದ ಮಾಜಿ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಟಿಕೇಟ್ ಫೈನಲ್ ಆಗಿದೆ. ಘೋಷಣೆ ಮಾತ್ರ ಬಾಕಿ ಎನ್ನಲಾಗುತ್ತಿತ್ತು.
ಇದನ್ನೂ ಓದಿ: ರೈತರ ಗಮನಕ್ಕೆ…ಬೋರ್‌ವೆಲ್ ಪ್ರತಿ ಅಡಿಗೆ ರೂ.105ಫಿಕ್ಸ್ | ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಮಂಜುನಾಥ್
ಆದರೆ, ಭಾನುವಾರ ಸಂಜೆ ಬಿಜೆಪಿ ಬಿಡುಗಡೆ ಮಾಡಿದ 5ನೇ ಪಟ್ಟಿಯಲ್ಲಿ, ಕರ್ನಾಟಕದ ಪಾಲಿನ ಮೂರನೇ ಪಟ್ಟಿಯಲ್ಲೂ ಚಿತ್ರದುರ್ಗ ಕ್ಷೇತ್ರದ ಹೆಸರು ಬಾರದಿರುವುದು ಅಚ್ಚರಿಗೆ ಕಾರಣವಾಗಿದೆ.
ಹಾಗಾದರೆ, ಬಿಜೆಪಿ ವರಿಷ್ಠರು ಗೋವಿಂದ ಕಾರಜೋಳ ಹೆಸರು ಅಂತಿಮವಾಗಿದೆ ಎನ್ನುವ ಸುದ್ದಿ ಸುಳ್ಳಾ ಎನ್ನುವ ಅನುಮಾನ ಕಾಡುತ್ತಿದೆ. ಬಿಜೆಪಿಯ ಈ ನಡೆಯಿಂದ ಉಳಿದ ಆಕಾಂಕ್ಷಿಗಳಲ್ಲಿ ಮತ್ತೆ ಆಸೆ ಚಿಗುರೊಡೆದಿದೆ.
ಇದನ್ನೂ ಓದಿ: ಮತದಾರರ ಪಟ್ಟಿಗೆ ಹೆಸರು ಸೇರಿಸಲು ಲಾಸ್ಟ್ ಚಾನ್ಸ್ | ಇಂದೇ ಕಡೆಯ ದಿನ
ಮಾರ್ಚ್ 28 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿ ಏಪ್ರಿಲ್ 4ಕ್ಕೆ ಮುಕ್ತಾಯವಾಗಲಿದೆ. ಅಂದರೆ ಇನ್ನೂ ಮೂರು ದಿನಗಳಲ್ಲಿ ನಾಮಪತ್ರ ಸಲ್ಲಿಕೆ ಆರಂಭವಾಗುವುದರಿಂದ ಮುಂದೆ ಚುನಾವಣೆಗೆ ಹೆಚ್ಚು ದಿನ ಸಿಗಲಾರದು. 8 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಬೇಕು. ಪ್ರತಿ ಹೋಬಳಿಗೆ ಹೋಗಬೇಕು ಅಂದುಕೊಂಡರೂ ಒಂದು ತಿಂಗಳು ಅನಾಯಸವಾಗಿ ಕಳೆದು ಹೋಗುತ್ತದೆ.
ಬಿಜೆಪಿ ಅಭ್ಯರ್ಥಿ ಆಯ್ಕೆಗೆ ಇಷ್ಟೊಂದು ಅಳೆದು ತೂಗಿ ಲೆಕ್ಕಾಚಾರ ಮಾಡುವುದರ ಹಿಂದಿರುವ ಲೆಕ್ಕಾಚಾರವಾದರೂ ಏನು ಎನ್ನುವ ಪ್ರಶ್ನೆ ಸ್ವತಃ ಬಿಜೆಪಿ ನಾಯಕರು, ಕಾರ್ಯಕರ್ತರಲ್ಲೂ ಕಾಡುತ್ತಿದೆ.
ಇದನ್ನೂ ಓದಿ: ಮುತ್ತುಗದ ಮರ ಮೈ ತುಂಬಾ ಹೂ ಬಿಟ್ಟರೆ ಏನರ್ಥ ಗೊತ್ತಾ..!
ಹಾಗಾದರೆ ಚಿತ್ರದುರ್ಗಕ್ಕೆ ಅಚ್ಚರಿಯ ಅಭ್ಯರ್ಥಿಯ ಆಯ್ಕೆ ನಡೆಯುತ್ತಾ, ಇರುವ ಅಲ್ಪಸ್ವಲ್ಪ ಸಮಯದಲ್ಲೇ ಕ್ಷೇತ್ರ ಸುತ್ತುವುದು, ಕಾರ್ಯಕರ್ತರನ್ನು ಮಾತನಾಡಿಸುವುದು ಮಾಡಲು ಹಾಲಿ ಸಂಸದರೇ ಆಗಿರುವ ನಾರಾಯಣಸ್ವಾಮಿಗೆ ಮತ್ತೆ ಅವಕಾಶ ಸಿಗುತ್ತಾ ಎನ್ನುವ ಲೆಕ್ಕಾಚಾರವೂ ನಡೆಯುತ್ತಿದೆ.
ಈ ನಡುವೆ ಸ್ಥಳೀಯರಿಗೆ ಟಿಕೇಟ್‍ಗೆ ಆಗ್ರಹಿಸಿ ಮುಖಂಡ ಎಂ.ಸಿ.ರಘುಚಂದನ್ ಬೆಂಬಲಿಗರು ತೀವ್ರ ಒತ್ತಡ ಹಾಕಿದ್ದಾರೆ. ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ. ಬಿಜೆಪಿ ಕಚೇರಿಯ ಕಿಟಿಕಿ ಗಾಜು ಪುಡಿಯಾಗಿದೆ. ಇದರಿಂದ ಹೈಕಮಾಂಡ್ ಮುಂದಿಟ್ಟ ಹೆಜ್ಜೆ ಹಿಂದೆ ಇಟ್ಟಿತಾ ಎನ್ನುವ ಅನುಮಾನವೂ ವ್ಯಕ್ತವಾಗಿದೆ.
ಇದನ್ನೂ ಓದಿ: ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಆಶೀರ್ವಾದ ಪಡೆದ ಶಾಮನೂರು ಶಿವಶಂಕರಪ್ಪ | ಒಳಮಠ, ಹೊರಮಠದಲ್ಲಿ ವಿಶೇಷ ಪೂಜೆ
ಇನ್ನೂ ಚಿತ್ರದುರ್ಗ ಕ್ಷೇತ್ರದ ಟಿಕೇಟ್ ಆಕಾಂಕ್ಷಿಯಾಗಿರುವ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ಅವರು ಎರಡು ದಿನಗಳ ಹಿಂದೆ ಚಿತ್ರದುರ್ಗದಲ್ಲಿ ವಿವಿಧ ಮಠಾಧೀಶರನ್ನು ಭೇಟಿಯಾಗಿ ಹೋಗಿರುವುದರಿಂದ ಮತ್ತಷ್ಟು ಕುತೂಹಲ ಹೆಚ್ಚಾಗಿದೆ.
ಮಾಜಿ ಸಂಸದ ಜನಾರ್ಧನಸ್ವಾಮಿ ಕೂಡಾ ಟಿಕೇಟ್ ಸಿಗುವ ವಿಶ್ವಾಸದಲ್ಲಿ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ, ಚಳ್ಳಕೆರೆಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ.
ಇದನ್ನೂ ಓದಿ: ಹೊಸದುರ್ಗ, ಹೊಳಲ್ಕೆರೆಯಲ್ಲೂ ಬೋರ್‌ವೆಲ್ ಕೊರೆಯಲು ದರ ನಿಗದಿ | ಜಿಎಸ್‌ಟಿ ಬಿಲ್ ಕೊಡಲು ತಾಕೀತು
ನಿವೃತ್ತ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಬಿಜೆಪಿ ಮುಖಂಡ ಸೂರನಹಳ್ಳಿ ವಿಜಯಣ್ಣ, ಹರಪನಹಳ್ಳಿಯ ವೈದ್ಯ ಡಾ.ರಮೇಶ್, ಭಾರ್ಗವಿ ದ್ರಾವಿಡ್ ಬಿಜೆಪಿ ವರಿಷ್ಠರನ್ನು ಭೇಟಿ ಮಾಡಿ ಒತ್ತಡ ಹೇರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಟಿಕೇಟ್ ಯಾರಿಗೆ ಎನ್ನುವ ಕೌತುಕ ಮನೆ ಮಾಡಿದೆ.
ಇಂದು ಮಧ್ಯಾಹ್ನ ಘೋಷಣೆ:
ಚುನಾವಣೆಗೆ ದಿನಾಂಕ ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ವರಿಷ್ಠರು ಯಾರನ್ನೇ ಅಭ್ಯರ್ಥಿಯಾಗಿ ಘೋಷಣೆ ಮಾಡಿದರೂ, ಇಂದು ಅಂದರೆ ಮಾರ್ಚ್ 25 ಮಧ್ಯಾಹ್ನದ ಹೊತ್ತಿಗೆ ಘೋಷಣೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಯಾರು ದುರ್ಗದ ಬಿಜೆಪಿ ಟಿಕೇಟ್ ಅಧಿಪತಿಯಾಗಲಿದ್ದಾರೆ ಎನ್ನುವ ನಿರೀಕ್ಷೆ ಬೆಟ್ಟದಷ್ಟಾಗಿದೆ.
ಇದನ್ನೂ ಓದಿ: ಹಟ್ಟಿ ತಿಪ್ಪೇಶನ ದರ್ಶನಕ್ಕೆ ವರುಣ ದೇವ | ಆರ್ಭಟಿಸುತ್ತಾ ಆಗಮಿಸುವ ನಿರೀಕ್ಷೆ