Connect with us

    ನಾನು ನಂಬಿದವರೇ ನನ್ನ ಕತ್ತು ಕೊಯ್ದರು | ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ವಿರುದ್ಧ ಶಾಸಕ ಚಂದ್ರಪ್ಪ ವಾಗ್ದಾಳಿ

    ಮುಖ್ಯ ಸುದ್ದಿ

    ನಾನು ನಂಬಿದವರೇ ನನ್ನ ಕತ್ತು ಕೊಯ್ದರು | ಬಿ.ಎಸ್.ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ವಿರುದ್ಧ ಶಾಸಕ ಚಂದ್ರಪ್ಪ ವಾಗ್ದಾಳಿ

    CHITRADURGA NEWS | 29 MARCH 2024
    ಚಿತ್ರದುರ್ಗ: ಈ ಬಾರಿಯ ಚುನಾವಣೆಯಲ್ಲಿ ನನ್ನ ಮಗನಿಗೆ ನೂರಕ್ಕೆ ನೂರಷ್ಟು ಟಿಕೆಟ್ ಸಿಗುತ್ತದೆ ಎಂದು ನಂಬಿದ್ದೆ. ಆದರೆ ನಾನು ಯಾರನ್ನು ನಂಬಿದ್ದೆನೋ ಅವರೆ ನನ್ನ ಕತ್ತು ಕೊಯ್ದರು. ಹಾಗಾಗಿ ಸ್ವಾಭಿಮಾನಿ ಕಾರ್ಯಕರ್ತರ ಸಭೆ ಕರೆಯುವಂತ ಅನಿವಾರ್ಯ ಪರಿಸ್ಥಿತಿ ಒದಗಿ ಬಂದಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ತಿಳಿಸಿದರು.

    ನಗರದ ಎ.ಜೆ.ಕನ್ವೆಂಷನ್‌ ಹಾಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ವಾಭಿಮಾನಿ ಬಿಜೆಪಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು. ನನ್ನ ಮಗ ಏನು ತಪ್ಪು ಮಾಡಿದ್ದಾ ಅಂತ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಿ ಇಂತಹ ಮೋಸ ಮಾಡಿದಿರಿ. ನನ್ನ ರಾಜಕೀಯ ಶಕ್ತಿ ಏನು ಎನ್ನುವುದನ್ನು ಮುಂದಿನ ದಿನಗಳಲ್ಲಿ ತೋರಿಸುತ್ತೇನೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸವಾಲ್‌ ಹಾಕಿದರು.

    ಕ್ಲಿಕ್ ಮಾಡಿ ಓದಿ: ನಿವೇಶನ ಹಂಚಿಕೆಗೆ ಆಗ್ರಹಿಸಿ ರಸ್ತೆ ಬಂದ್‌ | ಸರ್ಕಾರದ ವಿರುದ್ಧ ಆಕ್ರೋಶ

    2019 ರ ಲೋಕಸಭಾ ಚುನಾವಣೆಯಲ್ಲಿಯೇ ನನ್ನ ಮಗ ಎಂ.ಸಿ.ರಘುಚಂದನ್‌ಗೆ ಚಿತ್ರದುರ್ಗ ಕ್ಷೇತ್ರದಿಂದ ಟಿಕೆಟ್ ಕೇಳಿದ್ದೆ. ಆಗ ನನ್ನ ಮನೆಗೆ ಬಂದು ಬಿ.ಎಸ್.ಯಡಿಯೂರಪ್ಪನವರು ಮುಂದಿನ ಸಾರಿ ಅವಕಾಶ ಕೊಡುವುದಾಗಿ ಭರವಸೆ ನೀಡಿದ್ದರಿಂದ ಸುಮ್ಮನಾದೆವು. ಈ ಬಾರಿ ಕೊನೆ ಹಂತದವರೆಗೂ ನನ್ನ ಮಗನ ಹೆಸರಿತ್ತು. ಅಂತಿಮ ಗಳಿಗೆಯಲ್ಲಿ ಗೋವಿಂದ ಕಾರಜೋಳರನ್ನು ಅಭ್ಯರ್ಥಿಯನ್ನಾಗಿ ವರಿಷ್ಠರು ಘೋಷಿಸಿದ್ದಾರೆ. ನಮ್ಮ ಕುಟುಂಬ ರಾಜಕೀಯ ವಿರೋಧಿಗಳಿಗೂ ದ್ರೋಹ ಮಾಡಿಲ್ಲ. ನನ್ನ ಮಗ ಏನು ವಿಷ ಹಾಕಿದ್ದ ಎಂದು ಇಂತಹ ನಂಬಿಕೆ ದ್ರೋಹದ ಕೆಲಸ ಮಾಡಿದ್ದೀರ ಎಂದು ಪ್ರಶ್ನಿಸಿದರು.

    ವಿಧಾನಸಭೆಯಲ್ಲಿ ಸೋತವರೊಬ್ಬರು ಎಂಎಲ್ಸಿ ಆಗಲು ನನ್ನ ಬೆಂಬಲ ಬೇಕಿತ್ತು. ಆದರೆ ಈಗ ಪಕ್ಷದ ನಾಯಕರುಗಳಿಗೆ ಚಾಡಿ ಹೇಳಿ ನನ್ನ ಮಗನಿಗೆ ಟಿಕೆಟ್ ತಪ್ಪಿಸಿದರು. ಮುಂದೆ ಅವರಿಗೂ ಕಾದಿದೆ ಎಂದು ಹೆಸರು ಹೇಳಲಿಚ್ಚಿಸದೆ ವಾಗ್ದಾಳಿ ನಡೆಸಿದರು.

    ಮೂವತ್ತು ವರ್ಷಗಳಿಂದಲೂ ರಾಜಕೀಯ ಮಾಡಿಕೊಂಡು ಬರುತ್ತಿದ್ದೇನೆ. 2008 ರಿಂದ ಬಿಜೆಪಿಯಲ್ಲಿ ಮೂರು ಬಾರಿ ಶಾಸಕನಾಗಿ ಸಾರ್ವಜನಿಕರ ನಡುವೆ ಕೆಲಸ ಮಾಡುತ್ತಿದ್ದೇನೆ. ಬಾಣದ ಗುರುತಿಗೆ ಐದು ಜಿಲ್ಲೆಯಿಂದ ನಾನೊಬ್ಬನೆ ಶಾಸಕನಾಗಿದ್ದು, ಬಿ.ಎಸ್.ಯಡಿಯೂರಪ್ಪನವರು ಬಿಜೆಪಿ ಯಿಂದ ಹೊರ ಬಂದು ಕೆ.ಜೆ.ಪಿ. ಪಕ್ಷ ಕಟ್ಟಿದಾಗ ಇನ್ನು ಏಳು ತಿಂಗಳು ಅವಧಿಯಿದ್ದಾಗಲೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಅವರ ಬೆನ್ನಿಗೆ ನಿಂತಿದ್ದೆ. ಆ ಕೃತಜ್ಞತೆಯೂ ಅವರಿಗಿಲ್ಲದಂತಾಯಿತು ಎಂದು ವಾಗ್ದಾಳಿ ನಡೆಸಿದರು.

    ಕ್ಲಿಕ್ ಮಾಡಿ ಓದಿ: ಯಡಿಯೂರಪ್ಪ ವಿರುದ್ಧ ಗುಡುಗಿದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ‌

    ರಾಜ್ಯದ ಮುಖ್ಯಮಂತ್ರಿಯಾಗಬೇಕಾದರೆ ಭೋವಿ ಸಮಾಜದ ಗೂಳಿಹಟ್ಟಿ ಡಿ.ಶೇಖರ್, ಶಿವರಾಜ್ ತಂಗಡಗಿ, ವೆಂಕಟರಮಣಪ್ಪ ಇವರುಗಳು ನನ್ನ ಮಾತಿಗೆ ಬೆಲೆ ಕೊಟ್ಟು ಬೆಂಬಲಿಸಿದರು. ಭೋವಿ ಸಮಾಜ ಕೊಟ್ಟ ಮಾತಿಗೆ ತಪ್ಪುವವರಲ್ಲ. ಯಡಿಯೂರಪ್ಪ ಅವರಿಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟೆ. ಅಷ್ಟೆ ಅಲ್ಲ. ಅವರಿಗಾಗಿ ಪ್ರಾಣ ಕೊಡಲು ಸಿದ್ಧ. ಗೋವಿಂದ ಕಾರಜೋಳ ನಿನಗೆ ನಾಚಿಕೆ ಆಗುತ್ತಿಲ್ವಾ…ಇಲ್ಲಿಗೆ ಬಂದು ಸ್ಪರ್ಧಿಸುತ್ತಿದ್ದೀಯ ಎಂದು ಕಿಡಿ ಕಾರಿದರು.

    ಯುವ ಮುಖಂಡ ಎಂ.ಸಿ.ರಘುಚಂದನ್ ಮಾತನಾಡಿ, ನಮ್ಮ ಜಿಲ್ಲೆಯಲ್ಲಿನ ಕೆಲವು ಕಳ್ಳಿನರಸಪ್ಪನಂತಹವರು ನನಗೆ ಟಿಕೆಟ್ ತಪ್ಪಿಸಿದ್ದಾರೆ. ಚುನಾವಣೆ ಬರುತ್ತೆ ಹೋಗುತ್ತೆ. ಕಾರ್ಯಕರ್ತರ ವಿಶ್ವಾಸಕ್ಕೆ ಯಾವುದೇ ಧಕ್ಕೆಯಾಗಬಾರದು. ನನಗೆ ವಂಚನೆ ಮಾಡಿರಬಹುದು. ಮುಂದೊಂದು ದಿನ ಅವರ ಮಕ್ಕಳಿಗೂ ಇದೆ ಪರಿಸ್ಥಿತಿ ಬರಬಹುದು. ಯಾರಿಗೂ ಮುಜುಗರವಾಗದಂತೆ ನಡೆದುಕೊಂಡು ನನ್ನ ತಂದೆಯವರು ಹಾಗೂ ಕಾರ್ಯಕರ್ತರು ತೆಗೆದುಕೊಳ್ಳುವ ತೀರ್ಮಾನಕ್ಕೆ ತಲೆಬಾಗುವೆ ಎಂದು ನುಡಿದರು.

    ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯದರ್ಶಿ ಮಲ್ಲಿಕಾರ್ಜುನ್‌, ಹೊಳಲ್ಕೆರೆ ನಗರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್‌, ಭರಮಸಾಗರದ ತೀರ್ಥಪ್ಪ, ದೇವರಾಜ್‌ ಚಿತ್ರಹಳ್ಳಿ, ಹೊಳಲ್ಕೆರೆ ಮಂಡಲ ಅಧ್ಯಕ್ಷ ಸಿದ್ದೇಶ್‌, ಭರಮಸಾಗರ ಮಂಡಲ ಅಧ್ಯಕ್ಷ ಶೈಲೇಶ್‌, ಭೋವಿ ಸಮಾಜದ ಜಿಲ್ಲಾಧ್ಯಕ್ಷ ತಿಪ್ಪೇಸ್ವಾಮಿ, ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಯಾದವ್‌, ಡಿ.ಸಿ.ಮೋಹನ್, ದೊರೆಸ್ವಾಮಿ, ನುಲೇನೂರು ಈಶಣ್ಣ, ರುದ್ರಪ್ಪ, ಕೋಗುಂಡೆ ಮಂಜಣ್ಣ, ಚಂದ್ರಶೇಖರ್, ತಿಮ್ಮಣ್ಣ, ರತ್ನಮ್ಮ, ನಂದೀಶ್, ನಗರಸಭೆ ಸದಸ್ಯ ಶಶಿಧರ್, ಮಾಜಿ ಸದಸ್ಯರುಗಳಾದ ಈ.ಮಂಜುನಾಥ್, ರವಿಶಂಕರ್ಬಾಬು, ವೆಂಕಟಪ್ಪ, ರಾಮಗಿರಿ ಕುಮಾರಣ್ಣ, ಅಶೋಕ, ಅಂಕಳಪ್ಪ, ಪ್ರಕಾಶ್, ಬಿ.ಎಂ.ಶ್ರೀನಿವಾಸ್, ಮುರುಗೇಶ್ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top