ಮುಖ್ಯ ಸುದ್ದಿ
ಸಚಿವ ನಾಗೇಂದ್ರ ವಿರುದ್ಧ ಬಿಜೆಪಿ ಪ್ರತಿಭಟನೆಗೆ ಖಂಡನೆ | ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಅಧ್ಯಕ್ಷ ಡಾ.ಬಿ.ಯೋಗೀಶ್ ಬಾಬು ಅಸಮಾಧಾನ
CHITRADURGA NEWS | 30 MAY 2024
ಚಿತ್ರದುರ್ಗ: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ ಪ್ರಕರಣವನ್ನು ಬಿಜೆಪಿ ನಾಯಕರು ರಾಜಕೀಯವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದೀಗ ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಪಟ್ಟು ಹಿಡಿದಿರುವುದು ಖಂಡನೀಯ ಎಂದು ಕರ್ನಾಟಕ ದ್ರಾಕ್ಷಿ ಮತ್ತು ವೈನ್ ಬೋರ್ಡ್ ಅಧ್ಯಕ್ಷ ಡಾ.ಬಿ.ಯೋಗೀಶ್ ಬಾಬು ತಿಳಿಸಿದ್ದಾರೆ.
‘ಆತ್ಮಹತ್ಯೆ ಮಾಡಿಕೊಂಡ ಕುಟುಂಬದ ಜತೆ ಕಾಂಗ್ರೆಸ್ ಪಕ್ಷದ ನಾಯಕರು ನಿಂತಿದ್ದಾರೆ. ಆತ್ಮಹತ್ಯೆ ಸ್ಥಳದಲ್ಲಿ ದೊರೆತಿರುವ ಡೆತ್ ನೋಟ್‌ನಲ್ಲಿ ಸಚಿವರ ಮೌಖಿಕ ಆದೇಶ ಇದೆ ಎಂದು ಮೇಲಾಧಿಕಾರಿಗಳು ತಿಳಿಸಿದ್ದಾರೆ ಎಂದು ಬರೆದಿದ್ದಾರೆ. ಇದು ಎಷ್ಟು ಸರಿ ಎನ್ನುವುದನ್ನು ಪರಿಶೀಲಿಸಬೇಕು’ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಕ್ಲಿಕ್ ಮಾಡಿ ಓದಿ: ಪತ್ರಿಕೆ ವಿತರಕರ ನಡಿಗೆ ಕೋಟೆ ನಗರಿ ಕಡೆಗೆ | ಸೆಪ್ಟೆಂಬರ್ 8 ರಂದು ರಾಜ್ಯ ಸಮ್ಮೇಳನ
‘ಸಚಿವ ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆ ಮಾಡುತ್ತಿರುವುದನ್ನು ಖಂಡಿಸುತ್ತೇವೆ. ಆರೋಪ ಕೇಳಿ ಬಂದ ತಕ್ಷಣ ಸಚಿವ ನಾಗೇಂದ್ರ ಅವರು ಕುಟುಂಬಕ್ಕೆ ಸಾಂತ್ವಾನ ಹೇಳಿದ್ದಾರೆ. ಘಟನೆಗೆ ಕಾರಣರಾದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ಬೇರೆಯವರನ್ನು ನೇಮಕ ಮಾಡಿದ್ದಾರೆ’ ಎಂದು ತಿಳಿಸಿದರು.
‘ಮಾಜಿ ಸಚಿವ ಈಶ್ವರಪ್ಪ ಅವರ ಮೇಲೆ ಗುತ್ತಿಗೆದಾರ ಸಂತೋಷ್ ನೇರ ಆರೋಪ ಮಾಡಿದ್ದರು. ಅವರ ಕುಟುಂಬದವರು ಕೂಡಾ ಆರೋಪ ಮಾಡಿದ್ದರು. ಆದರೆ ಈ ಪ್ರಕರಣದಲ್ಲಿ ನಾಗೇಂದ್ರ ಅವರ ಪಾತ್ರ ಇಲ್ಲ. ಬಿಜೆಪಿ ನಾಯಕರು ಎಸ್ಸಿ, ಎಸ್ಟಿ ಹಿಂದುಳಿದ ವರ್ಗಗಳ ವಿರೋಧಿಗಳಾಗಿ ವರ್ತನೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ 50 ಲಕ್ಷ ಜನಸಂಖ್ಯೆ ಇರುವ ಪರಿಶಿಷ್ಟ ಜಾತಿಯ ನಾಯಕ ಸಮಾಜವನ್ನು ಗುರಿಯಾಗಿಸಿಕೊಂಡಿದ್ದಾರೆ. ಸಚಿವರ ವಿರುದ್ಧ ಹೀಗೆ ಆರೋಪ ಮಾಡುತ್ತಿರುವುದನ್ನು ಸಹಿಸುವುದಿಲ್ಲ’ ಎಂದು ಎಚ್ಚರಿಸಿದ್ದಾರೆ.
ಮುಖಂಡರಾದ ಬಾಲಕೃಷ್ಣ, ಜಯ್ಯಣ್ಣ. ಮಧುಗೌಡ, ಪ್ರಶಾಂತ್, ಸುನೀಲ್, ಮಂಜುನಾಥ್ ,ಸಂದೀಪ್ ಇದ್ದರು.