ಮುಖ್ಯ ಸುದ್ದಿ
ಎಸ್‌ಆರ್‌ಎಸ್‌ನಲ್ಲಿ ಅಯೋಧ್ಯೆ ಬಾಲಮಂದಿರ | ಶುಭ ಮುಹೂರ್ತದಲ್ಲಿ ಲೋಕಾರ್ಪಣೆ
CHITRADURGA NEWS | 22 JANUARY 2024
ಚಿತ್ರದುರ್ಗ (CHITRADURGA): ನಗರದ ಎಸ್‌ಆರ್‌ಎಸ್ ಹೆರಿಟೇಜ್ ಶಾಲೆಯಲ್ಲಿ ಶ್ರೀರಾಮ ಜನ್ಮಭೂಮಿಯ ರಾಮ ಮಂದಿರದಲ್ಲಿ ಶ್ರೀರಾಮನ ವಿಗ್ರಹ ಪುನರ್ ಪ್ರತಿಷ್ಠಾಪನೆಯ ಶುಭದಿನದ ಕ್ಷಣವನ್ನು ಅಯೋಧ್ಯೆ ಬಾಲಮಂದಿರ ಲೋಕಾರ್ಪಣೆಗೊಳಿಸುವ ಮೂಲಕ ಅವಿಸ್ಮರಣೀಯಗೊಳಿಸಲಾಯಿತು.
ಶಾಲೆಯ ಬ್ಲ್ಯೂ ಜೆಮ್ಸ್ ಮಾಂಟೆಸರಿಯ ನೂತನ ಕಟ್ಟಡಕ್ಕೆ ಅಯೋಧ್ಯೆ ಬಾಲಮಂದಿರ ಎಂದು ನಾಮಕರಣ ಮಾಡಲಾಗಿದ್ದು, ಶುಭ ಮುಹೂರ್ತದಲ್ಲಿ ಶುಭ ಸಮಾರಂಭ ಮಾಡಲಾಯಿತು.
ಇದನ್ನೂ ಓದಿ: ಯುವಕರಲ್ಲಿ ಶ್ರೀರಾಮ ಟ್ಯಾಟೂ ಟ್ರೆಂಡ್ | ಎದೆ, ಕೈ ಮೇಲೆ ಅರಳಿದ ಅಯೋಧ್ಯೆ
ಎಸ್‌ಆರ್‌ಎಸ್ ಶಿಕ್ಷಣ ಸಮೂಹ ಸಂಸ್ಥೆ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಬಾಲರಾಮ ಮೂರ್ತಿಗೆ ಪೂಜೆ ಮಾಡಿ, ‘ಕೋಟ್ಯಂತರ ಹಿಂದೂಗಳ ಬಹು ವರ್ಷದ ಕನಸು ನನಸಾಗಿದೆ. ಶ್ರೀರಾಮನನ್ನು ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಕಣ್ತುಂಬಿಕೊಳ್ಳುವ ಸೌಭಾಗ್ಯ ಲಭಿಸಿದೆ ಎಂದರು.
‘ಭವ್ಯ ಭಾರತದ ಸಮಾಜದ ಭಾವನಾತ್ಮಕ ಮತ್ತು ಸಾಂಸ್ಕೃತಿಕ ಪರಂಪರೆಗೆ ಮಹತ್ವದ ಘಟನೆಯಾಗಿದೆ. ಶ್ರೀರಾಮಚಂದ್ರ ಪ್ರಭುವಿನ ಆದರ್ಶ ಗುಣಗಳು ಮತ್ತು ಆತನ ಕರ್ತವ್ಯ ನಿಷ್ಠೆ ನಮ್ಮೆಲ್ಲರಿಗೂ ಮಾದರಿಯಾಗಬೇಕು’ ಎಂದು ತಿಳಿಸಿದರು.
‘ನೂತನ ಕಟ್ಟಡದಲ್ಲಿ 21ನೇ ಶತಮಾನದಲ್ಲಿ ಸಿಗಬೇಕಾದ ಪ್ರತಿ ಸೌಲಭ್ಯವನ್ನು ಮಕ್ಕಳಿಗೆ ಕಲ್ಪಿಸಿಕೊಡಲಾಗಿದೆ. ಬಾಲರಾಮನ ಲೀಲೆಗಳು ಮತ್ತು ರಾಮಾಯಣದ ಕೆಲವು ಮೌಲ್ಯಗಳನ್ನು ಮಕ್ಕಳಿಗೆ ಶಿಕ್ಷಕರು ಕೇಳುವುದು ಇಲ್ಲಿನ ವಿಶೇಷ’ ಎಂದರು.
ಇದನ್ನೂ ಓದಿ: ಅಯೋಧ್ಯೆ ಭವ್ಯ ಮಂದಿರದಲ್ಲಿ ಬಾಲರಾಮ ವಿರಾಜಮಾನ
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ಬಾಬುರೆಡ್ಡಿ ಮಾತನಾಡಿ, ‘ಶಿಕ್ಷಣದ ಮೊದಲ ಮೆಟ್ಟಿಲು ಈ ಮಾಂಟೆಸರಿ. ಈ ವಿಭಾಗಕ್ಕೆ ‘ಅಯೋಧ್ಯೆ’ ಎಂದು ನಾಮಕರಣ ಮಾಡಿರುವುದು ಸಂತಸದ ಸಂಗತಿ. ಈ ಶುಭ ದಿನದ ಮಹತ್ವ, ರಾಮ ಮಂದಿರದ ಇತಿಹಾಸ, ಹಿಂದೂ ಸಂಸ್ಕೃತಿಯ ಸಾಕಾರ ಪ್ರತಿಷ್ಠಾನವಾಗಿದ್ದು ಇತಿಹಾಸದ ವಿಭಾಗಕ್ಕೆ ಅನೇಕ ಅದ್ಭುತ ಘಟನೆಗಳನ್ನು ಹೊಂದಿದೆ’ ಎಂದು ತಿಳಿಸಿದರು.
ಜಾನ್ಹವಿ ನರ್ಸಿಂಗ್ ಸ್ಕೂಲ್ ಅಧ್ಯಕ್ಷ ನಾಗರಾಜು, ಮಾಜಿ ಆಯುಕ್ತ ಪಿ.ಜಿ.ರಮೇಶ್, ಸಂಸ್ಥೆ ಉಪಾಧ್ಯಕ್ಷ ಬಿ.ಎಲ್.ಅಮೋಘ, ಕಾರ್ಯದರ್ಶಿ ಸುಜಾತ ಲಿಂಗಾರೆಡ್ಡಿ, ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ ಇದ್ದರು.