ಮುಖ್ಯ ಸುದ್ದಿ
ಬೆಳೆ ಕಟಾವು ನಿರ್ಲಕ್ಷ್ಯ ತೋರಿದರೆ ಕ್ರಮ | ಅಧಿಕಾರಿಗಳಿಗೆ ಎಡಿಸಿ ಬಿ.ಟಿ.ಕುಮಾರಸ್ವಾಮಿ ಎಚ್ಚರಿಕೆ
CHITRADURGA NEWS | 15 JUNE 2024
ಚಿತ್ರದುರ್ಗ: ಬೆಳೆ ಕಟಾವು ಪ್ರಯೋಗ ಆಧರಿಸಿ, ಬೆಳೆ ವಿಮೆ ಕಂಪನಿಗಳು ವಿಮೆ ಮೊತ್ತ ನಿರ್ಧರಿಸುತ್ತವೆ. ಸರಿಯಾದ ಸಮಯಕ್ಕೆ ಕಟಾವು ಪ್ರಯೋಗ ಮಾಡದೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದರ ಪರಿಣಾಮ ಜಿಲ್ಲೆಯ ರೈತರು ಸಮಸ್ಯೆ ಅನುಭವಿಸುವಂತಾಗಿದೆ. ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ನಿರ್ದಾಕ್ಷಿಣ್ಯ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜರುಗಿದ ಜಿಲ್ಲಾ ಮಟ್ಟದ 11ನೇ ಕೃಷಿ ಗಣತಿ ಹಾಗೂ 2024-25ನೇ ಸಾಲಿನ ಜಿಲ್ಲಾ ಮಟ್ಟದ ಕೃಷಿ ಅಂಕಿ-ಅಂಶಗಳ ಮೊದಲನೇ ತ್ರೈಮಾಸಿಕ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಂದಾಯ, ಗ್ರಾಮೀಣಾಭಿವೃದ್ಧಿ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳಕಟಾವು ಯೋಜನೆ ಪಟ್ಟಿ ಬಿಡುಗಡೆಗೊಂಡ ಕೂಡಲೇ ನಮೂನೆ-1 ನ್ನು ಕೈಗೊಳ್ಳಲು ಇಲಾಖಾ ಮುಖ್ಯಸ್ಥರು ಅನುವು ಮಾಡಿಕೊಡಬೇಕು. ಕಟಾವು ಪ್ರಯೋಗದ ಸಿಸಿಇ ಮೊಬೈಲ್ ಅಪ್ಲಿಕೇಷನ್ ಡೌನ್‌ಲೋಡ್ ಮಾಡಿಕೊಂಡು ನಮೂನೆ-1 ಕೈಗೊಳ್ಳಲು ಸೂಕ್ತ ಕ್ರಮ ವಹಿಸಬೇಕು ಎಂದರು.
ಕ್ಲಿಕ್ ಮಾಡಿ ಓದಿ: ರೇಣುಕಾಸ್ವಾಮಿ ಕುಟುಂಬದ ಜತೆ ನಾವಿದ್ದೇವೆ | ಚಲನಚಿತ್ರ ವಾಣಿಜ್ಯ ಮಂಡಳಿ
ಬೆಳೆ ಕಟಾವು ಪ್ರಯೋಗದಲ್ಲಿ ಯಾವುದೇ ರೀತಿಯ ತಪ್ಪು ಉಂಟಾಗಬಾರದು. ಮೊಬೈಲ್ ತಂತ್ರಾಂಶದಲ್ಲಿ ಅಂಕಿ ಅಂಶಗಳು ತಪ್ಪಾಗದಂತೆ ಪ್ರಯೋಗದ ವಿವರಗಳನ್ನು ತುಂಬಬೇಕು. ಬೆಳೆ ಕಟಾವು ಪ್ರಯೋಗ ಮಾಡಲು ನಿಯೋಜಿಸಿದ ಅಧಿಕಾರಿ ಹಾಗೂ ನೌಕರರೇ ಖುದ್ದಾಗಿ ರೈತರ ಜಮೀನಿಗೆ ತೆರಳಿ ಪ್ರಯೋಗ ಕೈಗೊಳ್ಳಬೇಕು ಎಂದು ಸೂಚಿಸಿದರು.
ಬೆಳೆ ಕಟಾವು ಪ್ರಯೋಗ ಮಾಡದೇ ಇದ್ದಲ್ಲಿ ಅಥವಾ ನಿರ್ಲಕ್ಷ್ಯದಿಂದ ತಪ್ಪಾಗಿ ಮಾಹಿತಿ ತುಂಬಿದರೆ ಕಟಾವು ಪ್ರಯೋಗ ಮಾಡಿದ ಅಧಿಕಾರಿಯನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಛಾಯಾಚಿತ್ರವನ್ನು ಸೆರೆ ಹಿಡಿಯುವಾಗ ತೂಕದ ಯಂತ್ರವು ಹಾಗೂ ಉತ್ಪನ್ನವು ಕಾಣುವ ರೀತಿಯಲ್ಲಿ ಇರಬೇಕು. ಇಲ್ಲವಾದರೆ ಕಟಾವು ಪ್ರಯೋಗ ಅನೂರ್ಜಿತವಾಗಲಿದೆ ಎಂದರು.
ಕ್ಲಿಕ್ ಮಾಡಿ ಓದಿ: ಗೋವಾ ಪ್ರವಾಸ ವೇಳೆ ಭೀಕರ ಅಪಘಾತ | ಮೃತರ ಗುರುತು ಪತ್ತೆ
ಛಾಯಾಚಿತ್ರವನ್ನು ಸೆರೆ ಹಿಡಿಯುವಾಗ ತೂಕದ ಯಂತ್ರವು ಹಾಗೂ ಉತ್ಪನ್ನವು ಕಾಣುವ ರೀತಿಯಲ್ಲಿ ಇರಬೇಕು. ಬಂದಿರುವಂತಹ ತೂಕವನ್ನು ಸ್ಪಷ್ಟವಾಗಿ ಗೋಚರವಾಗುವ ರೀತಿಯಲ್ಲಿ ಫೋಟೊದಲ್ಲಿ ಸೆರೆ ಹಿಡಿಯಬೇಕು. ಉತ್ಪನ್ನ ಹಾಗೂ ಉಪ ಉತ್ಪನ್ನಗಳನ್ನು ನಿರ್ದಿಷ್ಟ ಕಾಲಂಗಳಲ್ಲಿಯೇ ತುಂಬಬೇಕು. ತೂಕದ ಯಂತ್ರದಲ್ಲಿರುವ ಹೋಲ್ಡ್ ಬಟನ್ ಪ್ರೆಸ್ ಮಾಡಿ ತೂಕವು ಸ್ಥಿರವಾದ ನಂತರವೇ ಫೋಟೋ ತೆಗೆಯಬೇಕು ಎಂದು ಸೂಚಿಸಿದರು.
ಬೆಳೆ ಕಟಾವು ನಿಯಮಾನುಸಾರ ಮಾಡದೇ, ರೈತರಿಗೆ ಬೆಳೆ ವಿಮೆಯ ಮೊತ್ತ ದೊರಕದೇ ಹೋದಲ್ಲಿ ಅಥವಾ ಕಡಿಮೆ ಮೊತ್ತ ದೊರೆತರೆ, ಕಟಾವು ಪ್ರಯೋಗ ಕೈಗೊಂಡ ಅಧಿಕಾರಿ ವೇತನದಲ್ಲಿ ಮೊತ್ತ ಕಟಾವುಗೊಳಿಸಿ, ರೈತರಿಗೆ ನಷ್ಟ ಪರಿಹಾರ ತುಂಬಿಕೊಡಲಾಗುವುದು ಎಂದು ಎಚ್ಚರಿಸಿದರು.
ಕೃಷಿ, ತೋಟಗಾರಿಕೆ. ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಹಂಚಿಕೆ ಮಾಡಿದ ಬೆಳೆ ಕಟಾವುಗಳನ್ನು ಸರಿಯಾದ ಸಮಯಕ್ಕೆ ನಡೆಸಬೇಕು. ಯಾವುದೇ ಸಬೂಬು ಸಲ್ಲದು. ಬೆಳಿ ಕಟಾವು ಪ್ರಯೋಗ ಪಾರದರ್ಶಕವಾಗಿ ನಡೆಯಲು ರೈತರು, ವಿಮಾ ಕಂಪನಿಯ ಅಧಿಕಾರಿಗಳು, ಮೇಲ್ವಿಚಾರಕರಿದ್ದಲ್ಲಿ ಅವರನ್ನು ಸಹ ಬೆಳೆ ಕಟಾವು ಪ್ರಯೋಗದ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರಾಗಿರುವಂತೆ ಕ್ರಮವಹಿಸಬೇಕು ಎಂದರು.
ಕ್ಲಿಕ್ ಮಾಡಿ ಓದಿ: ರೇಣುಕಾಸ್ವಾಮಿ ಪ್ರಕರಣದಲ್ಲಿ ಯಾರನ್ನು ರಕ್ಷಿಸುವ ಮಾತಿಲ್ಲ | ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ
ಬೆಳೆ ಸಮೀಕ್ಷೆ ದತ್ತಾಂಶದ ಶೇ.1% ಪರಿಶೀಲನೆಯನ್ನು ಆಪ್ ಬಿಡುಗಡೆಯಾದ ತಕ್ಷಣವೇ ನಿಯೋಜಿಸಿದ ಅಧಿಕಾರಿಗಳು ನಿಯೋಜಿಸಿದ ಪ್ಲಾಟ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿ ಫೋಟೋ ತೆಗೆದು ಮೊಬೈಲ್ ಆಪ್ ನಲ್ಲಿ ಅಪ್ಲೋಡ್ ಮಾಡಲು ಸೂಚಿಸಿದರು. ಯಾವುದೇ ಕಾರಣಕ್ಕೂ ನಿಯೋಜಿಸಿದ ಪ್ಲಾಟ್ ಗಳನ್ನು ಪರಿಶೀಲನೆ ಕೈಗೊಳ್ಳದೇ ಬಾಕಿ ಉಳಿಸುವಂತಿಲ್ಲ ಎಂದು ತಿಳಿಸಿದರು.
ಬೆಳ ಕಟಾವಿನ ಪ್ರಯೋಗದಲ್ಲಿ ನಿರ್ಲಕ್ಷ್ಯ ತೋರಿ ಪ್ರಯೋಗಗಳ ಅನೂರ್ಜಿತಕ್ಕೆ ಕಾರಣರಾದ ಎಲ್ಲಾ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕೈಗೊಳ್ಳಾಗುವುದು. ಗಂಭೀರ ಪ್ರಕರಣಗಳಲ್ಲಿ ಅಮಾನತು ಮಾಡಲಾಗುವುದು. ಅನೂರ್ಜಿತಗೊಂಡ ಪ್ರಯೋಗಳ ಕುರಿತು ವಿವರವಾದ ವರದಿ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಜಿಲ್ಲಾ ಅಂಕೆ ಸಂಖ್ಯೆ ಸಂಗ್ರಹಣಾಧಿಕಾರಿಗೆ ನಿರ್ದೇಶನ ನೀಡಿದರು.
2023-24ನೇ ಸಾಲಿನ ನಮೂನೆ ಎರೆಡನೇ ಹಂತದಲ್ಲಿ ಮುಂಗಾರು ಹಂಗಾಮಿನ ನಮೂನೆ-2 ರ ಹಂತದಲ್ಲಿ 1 ಹಾಗೂ ಹಿಂಗಾರು ಹಂಗಾಮಿನ ನಮೂನೆ-2ರ ಹಂತದಲ್ಲಿ 3 ಹಾಗೂ ಬೇಸಿಗೆ ಹಂಗಾಮಿನ ನಮೂನೆ-2 ರ ಹಂತದಲ್ಲಿ 1 ಬೆಳೆ ಕಟಾವು ಪ್ರಯೋಗಗಳು ಅನೂರ್ಜಿತವಾಗಿವೆ ಎಂದು ಜಿಲ್ಲಾ ಅಂಕೆ ಸಂಖ್ಯೆ ಸಂಗ್ರಹಣಾಧಿಕಾರಿ ರವಿಕುಮಾರ್.ಎನ್ ಸಭೆಯಲ್ಲಿ ತಿಳಿಸಿದರು.
ಮುಂಗಾರು ಹಂಗಾಮಿನಲ್ಲಿ ಒಟ್ಟು 31 ಪ್ರಕರಣಗಳಲ್ಲಿ ಕಟಾವು ಪ್ರಯೋಗದ ಪೋಟೋಗಳು ಹೊಂದಾಣಿಕೆಯಾಗಿಲ್ಲ. ಒಟಾರೆ 3 ಹಂಗಾಮಿನ ಕಟಾವು ಪ್ರಯೋಗಳಲ್ಲಿ 89 ಪ್ರಯೋಗಳಿಗೆ ಆಕ್ಷೇಪಣೆ ಸಲ್ಲಿಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಪಷ್ಟೀಕರಣಕ್ಕೆ ನೋಟಿಸು ನೀಡಲಾಗಿದೆ ಎಂದರು.
2023-24ನೇ ಬೇಸಿಗೆ ಹಂಗಾಮಿನಿ ಕಟಾವು ಪ್ರಯೋಗ ಬಹುತೇಕ ಪೂರ್ಣವಾಗಿದೆ. ಜಿಲ್ಲೆಗೆ ಒಟ್ಟು 546 ಬೆಳೆ ಕಟಾವು ಪ್ರಯೋಗ ಕೈಗೊಳ್ಳಲು ಯೋಜಿಸಲಾಗಿತ್ತು. ಇದರಲ್ಲಿ ಕಂದಾಯ ಇಲಾಖೆಗೆ 248, ಕೃಷಿ ಇಲಾಖೆಗೆ 66, ತೋಟಗಾರಿಕೆ ಇಲಾಖೆಗೆ 62 ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗೆ 170 ಪ್ರಯೋಗಗಳನ್ನು ಹಂಚಿಕೆ ಮಾಡಲಾಗಿದೆ. ಈ ಎಲ್ಲಾ ಪ್ರಯೋಗಗಳ ಫಾರಂ-1 ಪೂರ್ಣಗೊಂಡಿವೆ. ಆದರೆ 546 ಪ್ರಯೋಗಳ ಪೈಕಿ 13 ಪ್ರಯೋಗಗಳ ಫಾರಂ-2 ಪೂರ್ಣಗೊಂಡಿಲ್ಲ ಎಂದು ರವಿಕುಮಾರ್.ಎನ್ ಮಾಹಿತಿ ನೀಡಿದರು.
ಸಭೆಯಲ್ಲಿ 2021-22ನೇ ಸಾಲಿನ 11ನೇ ಕೃಷಿ ಗಣತಿ ವರದಿ ಕುರಿತು ಚರ್ಚಿಸಲಾಯಿತು. 2015-16ನೇ ಸಾಲಿನ 10ನೇ ಕೃಷಿ ಗಣತಿ ಅನುಸಾರ ಜಿಲ್ಲೆಯಲ್ಲಿ 3,01,539 ವೈಯಕ್ತಿಕ ಹಿಡುವಳಿದಾರರು ಇದ್ದು, 5,48,344 ಹೆಕ್ಟೇರ್ ಸಾಗುವಳಿ ಭೂಮಿ ಇತ್ತು. ಸದ್ಯದ 11ನೇ ಕೃಷಿ ಗಣತಿಯಲ್ಲಿ 3,66,453 ವೈಯಕ್ತಿಕ ಹಿಡುವಳಿದಾರರು ಹಾಗೂ 5,75,498 ಹೆಕ್ಟೇರ್ ಸಾಗುವಳಿ ಭೂಮಿ ಇರುವುದಾಗಿ ತಿಳಿದು ಬಂದಿದೆ ಎಂದರು.
ಸಾಗುವಳಿ ಭೂಮಿ ಕ್ಷೇತ್ರದಲ್ಲಿ 27,154 ಹೆಕ್ಟೇರ್ ಅಂದರೆ ಸುಮಾರು 68 ಸಾವಿರ ಎಕರೆ ಸಾಗುವಳಿ ಭೂಮಿ ಹೆಚ್ಚಳವಾಗಿದೆ. ಇಷ್ಟು ಪ್ರಮಾಣದ ಸಾಗುವಳಿ ಭೂಮಿ ಹೆಚ್ಚಳವಾಗಲು ಸಾಧ್ಯವಿಲ್ಲ. ತಾಲ್ಲೂಕುವಾರು ತಹಶೀಲ್ದಾರಗಳಿಂದ ಮತ್ತೊಮ್ಮೆ ಮಾಹಿತಿ ಪಡೆದು ಕೃಷಿ ಗಣತಿ ವರದಿಯನ್ನು ಪ್ರತ್ಯೇಕವಾಗಿ ಜಿಲ್ಲಾ ಮಟ್ಟದ ಸಭೆಯಲ್ಲಿ ಮಂಡಿಸುವಂತೆ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಅಧಿಕಾರಿಗಳೊಗೆ ಸೂಚನೆ ನೀಡಿದರು.
ಇದೇ ವೇಳೆ 11 ಕೃಷಿ ಗಣತಿಯಲ್ಲಿ ಜಿಲ್ಲೆಯ ಪರಿಶಿಷ್ಟ ಜಾತಿ ಶೇ.5 ರಷ್ಟು ಹಾಗೂ ಪರಿಶಿಷ್ಟ ಪಂಗಡದ ಶೇ.6 ರಷ್ಟು ಸಾಗುವಳಿ ಭೂಮಿ ಪ್ರಮಾಣವು 2015-16ನೇ ಗಣತಿಗಿಂತಲೂ ಕಡಿಮೆಯಾಗಿದೆ. ಜಿಲ್ಲೆಯ ಮಹಿಳಾ ಸಾಗುವಳಿ ಹಿಡುವಳಿದಾರರ ಸಂಖ್ಯೆ 2015-16ನೇ ಗಣತಿಯಲ್ಲಿ 73,405 ಇದ್ದು, ಪ್ರಸ್ತುತ ಗಣತಿಯಲ್ಲಿ 1,10,687 ಕ್ಕೆ ಏರಿಕೆಯಾಗಿದೆ.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೆಶಕ ಮಂಜುನಾಥ, ಉಪನಿರ್ದೇಶಕರುಗಳಾದ ಪ್ರಭಾಕರ್, ಶಿವಕುಮಾರ್, ಸಹಾಯಕ ಅಂಕೆ ಸಂಖ್ಯೆ ಸಂಗ್ರಹಣಾಧಿಕಾರಿಗಳಾದ ಅಶ್ವತ್ಥಾಮ, ವೀಣಾ, ಚಂದ್ರಪ್ಪ, ಸಹಾಯಕ ನಿರ್ದೇಶಕರುಗಳಾದ ಶಶಿರೇಖಾ, ಯಾಸಿನ್ ಸೇರಿದಂತೆ ಇತರೆ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.