ಕ್ರೈಂ ಸುದ್ದಿ
ಬೈಕ್‌ಗೆ ಅಡ್ಡ ಬಂದ ಹಾವು; ಕೂದಲೆಳೆಯಲ್ಲಿ ಮೂವರು ಪಾರು
ಚಿತ್ರದುರ್ಗ ನ್ಯೂಸ್.ಕಾಂ
ರಸ್ತೆಯಲ್ಲಿ ದನ, ಎತ್ತು, ಕುರಿ, ಮೇಕೆ, ಎಮ್ಮೆ, ನಾಯಿ ಇಲ್ಲವೇ ಜನರು ಅಥವಾ ವಾಹನ ಅಡ್ಡ ಬಂದು ಅಪಘಾತಗಳು ಆಗಿರುವುದನ್ನು ಕೇಳಿದ್ದೇವೆ, ನೋಡಿದ್ದೇವೆ. ಆದರೆ ಚಿತ್ರದುರ್ಗ ತಾಲ್ಲೂಕಿನ ಕೊಳಾಳ್ ಗ್ರಾಮದ ಬಳಿ ಮಾತ್ರ ಹಾವು ಅಡ್ಡ ಬಂದು ಅಪಘಾತ ಸಂಭವಿಸಿದೆ.
ಕೂಲಿ ಕೆಲಸ ಮಾಡುವ ಕೊಳಾಳ್ ಗ್ರಾಮದ ನಿವಾಸಿ ರಾಜಪ್ಪ ತನ್ನ ಬೈಕ್‌ನಲ್ಲಿ ತಾಯಿ ಪಾರ್ವತಮ್ಮ ಹಾಗೂ ಪತ್ನಿ ಪವಿತ್ರ ಅವರನ್ನು ಕೂರಿಸಿಕೊಂಡು ಬಳಕಟ್ಟೆ ತಿಮ್ಮಣ್ಣ ಹೋಟೆಲ್ ಮುಂಭಾಗದ ಸರ್ವಿಸ್ ರಸ್ತೆಯಲ್ಲಿ ಭಾನುವಾರ ಬೆಳಿಗ್ಗೆ ಭರಮಸಾಗರದತ್ತ ಪ್ರಯಾಣ ಬೆಳೆಸಿದ್ದಾನೆ. ಈ ವೇಳೆ ಬೈಕ್‌ಗೆ ಹಾವೊಂದು ಅಡ್ಡ ಬಂದಿದೆ.
ಇದನ್ನೂ ಓದಿ: ಸಾಣೇಹಳ್ಳಿಯಲ್ಲಿ ‘ವರ್ಷದ ಹರ್ಷ’; ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನೇತೃತ್ವ
ರಸ್ತೆಯಲ್ಲಿ ಹಾವನ್ನು ಕಂಡು ಗಾಬರಿಗೊಂಡು ಏಕಾಏಕಿ ಬ್ರೇಕ್ ಹಾಕಿದ ಕಾರಣ ಬೈಕ್ ನಿಯಂತ್ರಣ ಕಳೆದು ಕೊಂಡು ರಸ್ತೆಗೆ ಮುಗಿಚಿ ಬಿದ್ದಿದೆ. ಬೈಕ್ ಬಿದ್ದ ರಭಸಕ್ಕೆ ತಾಯಿ ಪಾರ್ವತಮ್ಮ ತಲೆಗೆ ಪೆಟ್ಟು ಬಿದ್ದು ಹಲ್ಲುಗಳು ಉದುರಿವೆ. ಇನ್ನೂ ಪತ್ನಿ ಪವಿತ್ರಗೆ ಸಹ ತಲೆ ತೀವ್ರ ಪೆಟ್ಟು ಬಿದ್ದಿದೆ. ಆದರೆ ರಾಜಪ್ಪ ಮಾತ್ರ ಸಣ್ಣಪುಟ್ಟ ಗಾಯಗೊಂಡಿದ್ದಾನೆ.
ಇದೇ ವೇಳೆ ರಸ್ತೆಯಲ್ಲಿ ಬರುತ್ತಿದ್ದ ಬರುತ್ತಿದ್ದ ವಾಹನದಲ್ಲಿ ಭರಮಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವೈದ್ಯರ ಸಲಹೆ ಮೇರೆಗೆ ದಾವಣಗೆರೆ ಎಸ್.ಎಸ್.ಆಸ್ಪತ್ರೆಗೆ ದಾಖಲಾಗಿದ್ದಾರೆ. ಭರಮಸಾಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಸೂಚನೆ: ಮೋಟಾರ್ ಬೈಕ್‌ನಲ್ಲಿ ಮೂವರು ಪ್ರಯಾಣಿಸುವುದು ಸಂಚಾರ ನಿಯಮದ ಉಲ್ಲಂಘನೆ. ಜತೆಗೆ ಹೆಲ್ಮೆಟ್ ಧರಿಸಿ ದ್ವಿಚಕ್ರ ವಾಹನ ಚಲಾಯಿಸಬೇಕು.)