CHITRADURGA NEWS | 07 OCTOBER 2026
ಚಿತ್ರದುರ್ಗ: ಆಸಿಡ್ ದಾಳಿಯಂತಹ ಅಮಾನುಷ ಕೃತ್ಯಗಳಿಂದ ನೊಂದ ಸಂತ್ರಸ್ತರಿಗೆ ಕೇವಲ ಕಾನೂನು ನೆರವು ಮಾತ್ರವಲ್ಲದೆ, ಮಾನಸಿಕ ಧೈರ್ಯ, ಶೈಕ್ಷಣಿಕ ಪ್ರೋತ್ಸಾಹ ಹಾಗೂ ಬದುಕಿಗೆ ಅಗತ್ಯವಾದ ಪುನರ್ವಸತಿ ಕಲ್ಪಿಸುವುದು ಇಡೀ ಸಮಾಜ ಮತ್ತು ವಿವಿಧ ಇಲಾಖೆಗಳ ಕರ್ತವ್ಯವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಜಿ.ಡಿ.ಮಹಾವರ್ಕರ್ ಹೇಳಿದರು.
ಇದನ್ನೂ ಓದಿ: ಐಟಿಐ ವಿದ್ಯಾರ್ಥಿಗಳಿಗೆ ಸ್ಥಳೀಯವಾಗಿಯೇ ಅಪ್ರೆಂಟಿಸ್ಶಿಪ್, ಉದ್ಯೋಗಾವಕಾಶ | ಡಿಸಿ ಎಸ್.ರಮ್ಯ
ಇಲ್ಲಿನ ಕುವೆಂಪು ನಗರದ ಚಿತ್ರ ಡಾನ್ಬಾಸ್ಕೋ ಪದವಿ ಕಾಲೇಜಿನಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಕೀಲರ ಸಂಘ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ, ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ಬಿಯಾಂಡ್ ದಿ ಸ್ಕಾರ್-ಆಸಿಡ್ ದಾಳಿ’ ಒಂದು ದಿನದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಅಪರಾಧಗಳನ್ನು ತಡೆಯಲು ಕಠಿಣ ಕಾನೂನುಗಳು ರಚನೆಯಾಗಿ ಅನುಷ್ಠಾನಗೊಂಡಿದ್ದರೂ ಕೃತ್ಯಗಳು ನಡೆಯುತ್ತಲೇ ಇವೆ. ಮುಖ್ಯವಾಗಿ ಹೆಣ್ಣು ಮಕ್ಕಳ ಮೇಲೆ ಆಸಿಡ್ ಎರಚಿ ವಿಕೃತಿ ಮೆರೆಯುವ ಘಟನೆಗಳನ್ನು ಕಾನೂನು ಅತ್ಯಂತ ಗಂಭೀರವಾಗಿ ಪರಿಗಣಿಸಿದೆ. ಆಸಿಡ್ ದಾಳಿಗೆ ಒಳಗಾದವರು ದೈಹಿಕವಾಗಿ ವಿರೂಪಗೊಳ್ಳುವುದಷ್ಟೇ ಅಲ್ಲ, ಜೀವಮಾನವಿಡೀ ಮಾನಸಿಕ ನರಕಯಾತನೆ ಅನುಭವಿಸುತ್ತಾರೆ. ಅಂತಹ ನೊಂದ ಜೀವಗಳ ಜಾಗದಲ್ಲಿ ನಿಂತು ಯೋಚಿಸಿದಾಗ ಮಾತ್ರ ಅವರ ಕಷ್ಟ-ನಷ್ಟ ಮತ್ತು ಕಣ್ಣೀರಿನ ಬೆಲೆ ಅರ್ಥವಾಗುತ್ತದೆ ಎಂದು ನ್ಯಾಯಾಧೀಶರು ಕಳವಳ ವ್ಯಕ್ತಪಡಿಸಿದರು.
ಯಾವುದೇ ದುರಂತ ನಡೆದಾಗ ಕೆಲ ದಿನಗಳ ಕಾಲ ಚರ್ಚಿಸಿ ನಂತರ ಮರೆತು ಬಿಡುವುದು ಮಾನವ ಸಹಜ ಗುಣ. ಆದರೆ, ಆಸಿಡ್ ದಾಳಿಯ ಗಾಯದ ಗುರುತಿನ ಹಿಂದೆ ಇರುವ ಸಂತ್ರಸ್ತರ ಬದುಕಿನ ಹೋರಾಟ, ಮಾನಸಿಕ ಸ್ಥಿತಿಯನ್ನು ಸರಿದೂಗಿಸುವ ನಿಟ್ಟಿನಲ್ಲಿ ‘ಬಿಯಾಂಡ್ ದಿ ಸ್ಕಾರ್’ ಎಂಬ ಶೀರ್ಷಿಕೆಯಡಿ ಈ ಚಿಂತನ-ಮಂಥನ ಕಾರ್ಯಾಗಾರ ಆಯೋಜಿಸಲಾಗಿದೆ. ಸಂತ್ರಸ್ತರಿಗೆ ಸರ್ಕಾರ ಮತ್ತು ಕಾನೂನು ಸೇವೆಗಳ ಪ್ರಾಧಿಕಾರ ವಿವಿಧ ಯೋಜನೆಗಳ ಮೂಲಕ ಸೂಕ್ತ ಪರಿಹಾರ, ಶಿಕ್ಷಣ ಹಾಗೂ ಸ್ವಾವಲಂಬಿ ಜೀವನೋಪಾಯ ಮಾರ್ಗಗಳನ್ನು ಒದಗಿಸಲು ಎಲ್ಲಾ ಇಲಾಖೆಗಳು ಸಮನ್ವಯತೆಯಿಂದ ಕೆಲಸ ಮಾಡಬೇಕಿದೆ ಎಂದರು.
ಇದನ್ನೂ ಓದಿ: ಮಗಳ ಮೇಲೆ ಅತ್ಯಾಚಾರವೆಸಗಿದ ತಂದೆಗೆ 20 ವರ್ಷ ಜೈಲು ಶಿಕ್ಷೆ
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಈ ಕಾರ್ಯಾಗಾರ ನಡೆಯುತ್ತಿದ್ದು, ಇದು ಕೇವಲ ಭಾಷಣಗಳಿಗೆ ಸೀಮಿತವಾಗಬಾರದು. ಕಾರ್ಯಾಗಾರದಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ಪರಸ್ಪರ ಅರ್ಥಪೂರ್ಣ ಸಂವಾದ ನಡೆಸಬೇಕು. ಇಲ್ಲಿ ಪಡೆದ ಜಾಗೃತಿಯನ್ನು ತಮ್ಮ ನೆರೆಹೊರೆಯ ಹಾಗೂ ಪರಿಚಿತ ಕನಿಷ್ಠ ನಾಲ್ಕೈದು ಜನರಿಗೆ ತಲುಪಿಸಿದರೆ ಈ ಕಾರ್ಯಾಗಾರದ ಉದ್ದೇಶ ಸಫಲವಾಗುತ್ತದೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಎಸ್.ರಮ್ಯಾ ಮಾತನಾಡಿ, ಇಂದಿನ ಕಾಲಘಟ್ಟದಲ್ಲಿ ಮನುಷ್ಯರಾಗಿ, ಸಮಾಧಾನದಿಂದ ಜೀವನ ನಡೆಸುವುದೇ ದೊಡ್ಡ ಸವಾಲಾಗಿದೆ. ಯಾವುದೇ ಘಟನೆಗೆ ಅತಿಯಾದ ಅಸಹನೆ, ಕೋಪ ಮತ್ತು ಕ್ರೌರ್ಯ ವ್ಯಕ್ತಪಡಿಸುವ ಬದಲು, ಮನಸ್ಸನ್ನು ತಿಳಿಯಾಗಿಟ್ಟುಕೊಂಡು ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಿಕೊಳ್ಳುವ ನಿಲುವು ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದರು.
ಮಹಿಳೆಯರ ಮೇಲಿನ ಆಸಿಡ್ ದಾಳಿಯಂತಹ ಕೃತ್ಯಗಳು ಅತಿಯಾದ ಅಸಹನೆ, ಸಿಟ್ಟು ಹಾಗೂ ದ್ವೇಷದ ಕ್ರೂರ ಪ್ರತಿಫಲವಾಗಿವೆ. ಎದುರಿಗಿರುವ ವ್ಯಕ್ತಿಯೂ ನಮ್ಮಂತೆಯೇ ಮನುಷ್ಯ ಎಂಬುದನ್ನು ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: ಕಳಪೆ ಹಂಪ್ಸ್ ತೆರವುಗೊಳಿಸಿ ಗುಣಮಟ್ಟದ ಹಂಪ್ಸ್ ಅಳವಡಿಸಿ
ಆಶಾ ಕಾರ್ಯಕರ್ತೆಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಗ್ರಾಮೀಣ ಮಟ್ಟದಲ್ಲಿ ಪ್ರತಿಯೊಬ್ಬ ಮಹಿಳೆ ಮತ್ತು ಮಗುವಿನೊಂದಿಗೆ ನೇರ ಸಂಪರ್ಕದಲ್ಲಿರುತ್ತಾರೆ. ಪ್ರತಿಯೊಬ್ಬರಿಗೂ ಒಟ್ಟಾರೆಯಾಗಿ ತರಬೇತಿ ನೀಡುವುದಕ್ಕಿಂತ, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ ಹಾಗೂ ಕಾನೂನು ವಿದ್ಯಾರ್ಥಿಗಳಂತಹ ನಿರ್ದಿಷ್ಟ ಗುಂಪುಗಳನ್ನು ಸಂವೇದನಾಶೀಲರನ್ನಾಗಿ ಮಾಡಿದರೆ, ಸಮಾಜಕ್ಕೆ ದೊಡ್ಡ ಮಟ್ಟದ ಸಂದೇಶ ತಲುಪಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಮೀರ್ ಪಿ ನಂದ್ಯಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಡಾ.ಕೆ.ಜೆ.ಕಾಂತರಾಜ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ಸುನೀಲ್ ಕುಮಾರ್, ವಕೀಲರ ಸಂಘದ ಅಧ್ಯಕ್ಷ ಹೆಚ್.ಎಸ್.ಮಹೇಶ್ವರಪ್ಪ, ಪ್ರಧಾನ ಕಾರ್ಯದರ್ಶಿ ಜಗದೀಶ್ ಗುಂಡೇರಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಕೆ.ಹೆಚ್.ವಿಜಯಕುಮಾರ್, ಚಿತ್ರದುರ್ಗ ಸಿಡಿಪಿಒ ಎ.ಎಂ.ವೀಣಾ ಸೇರಿದಂತೆ ಮತ್ತಿತರರು ಇದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

