CHITRADURGA NEWS | 26 SEPTEMBER 2026
ಚಿತ್ರದುರ್ಗ: ಜ್ಞಾನನಿಧಿ ಕೋ-ಆಪರೇಟಿವ್ ಸೊಸೈಟಿ ಕೇವಲ ಶ್ರೀಮಂತರಿಗೆ ಸೀಮಿತವಾಗದೆ, ಶ್ರಮಜೀವಿಗಳು, ರೈತರು, ಹಿಂದುಳಿದ ವರ್ಗಗಳು ಹಾಗೂ ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಂದ ವಂಚಿತರಾದ ಮಕ್ಕಳಿಗೆ ಬೆಂಬಲ ನೀಡುವ ಉದ್ದೇಶ ಹೊಂದಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಸೊಸೈಟಿ ಅಧ್ಯಕ್ಷ ಕೆ.ಎಸ್. ನವೀನ್ ತಿಳಿಸಿದರು.
ಇದನ್ನೂ ಓದಿ: ದೀರ್ಘಕಾಲೀನ ರೋಗಗಳ ಚಿಕಿತ್ಸೆಯಲ್ಲಿ ಆಯುರ್ವೇದ ಪರಿಣಾಮಕಾರಿ | ಡಾ.ಚಂದ್ರಕಾಂತ್
ನಗರದ ಚಳ್ಳಕೆರೆ ರಸ್ತೆಯ ಎಸ್ಎಸ್ಕೆಎಸ್ ಸಮುದಾಯ ಭವನದಲ್ಲಿ ಶುಕ್ರವಾರ ನಡೆದ ಜ್ಞಾನನಿಧಿ ಕೋ-ಆಪರೇಟಿವ್ ಸೊಸೈಟಿಯ ಪ್ರಥಮ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಧ್ಯಮ, ಕೆಳಮಧ್ಯಮ ಹಾಗೂ ಬಡ ಕುಟುಂಬಗಳ ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಸೂಕ್ತ ಮಾರ್ಗದರ್ಶನ ನೀಡುವ ಉದ್ದೇಶದಿಂದ ಜ್ಞಾನನಿಧಿ ಸಂಸ್ಥೆ ಆರಂಭಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಗುರಿ ತಲುಪಲು ಅಗತ್ಯವಾದ ಧೈರ್ಯ, ಮಾನಸಿಕ ಸ್ಥೈರ್ಯ ಹಾಗೂ ಶಿಕ್ಷಣದ ಶಕ್ತಿಯನ್ನು ಒದಗಿಸುವ ಕೆಲಸವನ್ನು ಸಂಸ್ಥೆ ಮಾಡಲಿದೆ ಎಂದರು.
ತಮ್ಮ ಮಕ್ಕಳನ್ನು ವಿಶ್ವದ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಓದಿಸಿ ಉನ್ನತ ಹುದ್ದೆಗಳಿಗೆ ತಲುಪಿಸಿದ ಮಾದರಿಯಲ್ಲೇ ಸಮಾಜದ ಸಾಮಾನ್ಯ ಹಾಗೂ ಬಡ ಕುಟುಂಬಗಳ ಮಕ್ಕಳಿಗೂ ಸೂಕ್ತ ಮಾರ್ಗದರ್ಶನ ನೀಡಿ ಉನ್ನತ ಸ್ಥಾನಕ್ಕೆ ಕೊಂಡೊಯ್ಯುವುದು ಸಂಸ್ಥೆಯ ಉದ್ದೇಶವಾಗಿದೆ. ಜ್ಞಾನನಿಧಿ ಯಾವುದೇ ಲಾಭದ ಉದ್ದೇಶದಿಂದ ಸ್ಥಾಪನೆಯಾಗಿಲ್ಲ. ಮಧ್ಯಮ, ಕೆಳಮಧ್ಯಮ ಹಾಗೂ ಬಡ ವರ್ಗದ ಮಕ್ಕಳ ಭವಿಷ್ಯದ ಏಳಿಗೆಗಾಗಿ ರೂಪಿಸಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: ಅದ್ದೂರಿಯಾಗಿ ನಡೆದ 69ನೇ ವರ್ಷದ ಪ್ರಸನ್ನ ಗಣಪತಿ ಮೆರವಣಿಗೆ | ಚಂದ್ರವಳ್ಳಿಯಲ್ಲಿ ಗಣಪತಿ ವಿಸರ್ಜನೆ
ಸಂಸ್ಥೆಯನ್ನು ಬೆಳೆಸಲು ಹಾಗೂ ಸಮಾಜದ ಕಟ್ಟಕಡೆಯ ಮಗುವಿಗೂ ಉನ್ನತ ಶಿಕ್ಷಣದ ಅವಕಾಶ ಕಲ್ಪಿಸಲು ಎಲ್ಲರ ಸಹಕಾರ ಅಗತ್ಯ. ಸಂಘವು ಕೇವಲ ವಾಣಿಜ್ಯ ಉದ್ದೇಶಕ್ಕೆ ಸೀಮಿತವಾಗದೆ, ಹಿಂದುಳಿದ ಹಾಗೂ ಕಾಯಕ ಸಮುದಾಯದ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ತಲುಪಿಸುವ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಲಿದೆ ಎಂದರು.
ಸಂಘದ ಸಂಸ್ಥಾಪಕ ನಿರ್ದೇಶಕರಲ್ಲಿ ಒಬ್ಬರಾದ ಕೇದಾರ್ನಾಥ್ ಅವರು ಚಿತ್ರದುರ್ಗದ ಕಾಯಕ ಸಮುದಾಯದ 40 ಶ್ರಮಜೀವಿಗಳನ್ನು ಸಂಘದ ಶೇರುದಾರರನ್ನಾಗಿ ಸೇರ್ಪಡೆಗೊಳಿಸಿರುವುದಾಗಿ ತಿಳಿಸಿದರು.
ಅಕ್ಟೋಬರ್ 31 ಅಥವಾ ನವೆಂಬರ್ 1ರಂದು ಚಿತ್ರದುರ್ಗದ ಮುರುಘಾಮಠದ ಅನುಭವ ಮಂಟಪದಲ್ಲಿ ಬೃಹತ್ ಕಾರ್ಯಕ್ರಮ ಆಯೋಜಿಸಲಾಗುವುದು. ಈ ವೇಳೆ ಸಂಘದ ಅಧಿಕೃತ ಯೋಜನೆಗಳು, ತಂತ್ರಜ್ಞಾನ ಸಂಸ್ಥೆ ಹಾಗೂ ಟ್ರಸ್ಟ್ನ ಕಾರ್ಯಚಟುವಟಿಕೆಗಳಿಗೆ ಚಾಲನೆ ನೀಡಲಾಗುವುದು. ಸದಸ್ಯರ ಮಕ್ಕಳಿಗಾಗಿ ಶೈಕ್ಷಣಿಕ ನೋಂದಣಿ ಪೋರ್ಟಲ್ ಕೂಡ ಲೋಕಾರ್ಪಣೆಗೊಳ್ಳಲಿದೆ ಎಂದರು.
ಕಾರ್ಯಕ್ರಮಕ್ಕೆ ಕೇಂದ್ರ ಶಿಕ್ಷಣ ಸಚಿವ ಪ್ರಹ್ಲಾದ್ ಜೋಶಿ, ರಾಜ್ಯ ಸಹಕಾರ ಸಚಿವ ಲಕ್ಷ್ಮಣ ಸವದಿ, ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹಾಗೂ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ. ಸಮಾರಂಭದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ನವೀನ್ ತಿಳಿಸಿದರು.
ಇದನ್ನೂ ಓದಿ: ವಿಕಲಚೇತನರ 14 ಫಲಾನುಭವಿ ಯೋಜನೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ
ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಇಲ್ಲಾಸ್ ಉಲ್ಲಾ ಷರೀಫ್ ಮಾತನಾಡಿ, ಸಹಕಾರ ಚಳವಳಿಯು ಬಡವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು, ಅಲ್ಪಸಂಖ್ಯಾತರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳ ಜನರ ಬದುಕಿಗೆ ನೆರವಾಗುವ ಸಾಮಾಜಿಕ ಹೊಣೆಗಾರಿಕೆ ಹೊಂದಿದೆ ಎಂದರು.
ಜ್ಞಾನನಿಧಿ ಸೊಸೈಟಿಯಲ್ಲಿ ಸದಸ್ಯರ ಸರ್ವಾಂಗೀಣ ಅಭಿವೃದ್ಧಿಗಾಗಿ ಸುಮಾರು 32 ಯೋಜನೆಗಳನ್ನು ರೂಪಿಸಲಾಗಿದೆ. ಚಿನ್ನಾಭರಣ ಸಾಲ, ವ್ಯಾಪಾರ ಸಾಲ, ಗೃಹ ನಿರ್ಮಾಣ ಸಾಲ, ಠೇವಣಿ ಸಂಗ್ರಹಣೆ ಹಾಗೂ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಸಾಲ ಸೌಲಭ್ಯಗಳು ಇದರಲ್ಲಿ ಸೇರಿವೆ ಎಂದು ತಿಳಿಸಿದರು.
ಸದಸ್ಯರ ಮಕ್ಕಳ ಶಿಕ್ಷಣಕ್ಕೆ ವಿಶೇಷ ಬೆಂಬಲ ನೀಡಲಾಗುತ್ತಿದ್ದು, ಗ್ರಾಮೀಣ ಭಾಗದ ಮಕ್ಕಳಿಗೆ ಉನ್ನತ ವ್ಯಾಸಂಗ, ಕೌಶಲ್ಯಾಭಿವೃದ್ಧಿ ಮತ್ತು ವೃತ್ತಿಪರ ತರಬೇತಿ ನೀಡುವ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಹೊಸ ಕೈಗಾರಿಕೆ ಹಾಗೂ ಸ್ವಂತ ಉದ್ಯಮ ಆರಂಭಿಸುವವರಿಗೆ ತಾಂತ್ರಿಕ ಸಲಹೆ ಮತ್ತು ಆರ್ಥಿಕ ನೆರವು ನೀಡುವ ಉದ್ದೇಶವಿದೆ ಎಂದರು.
ಸಂಘವು ಕೇವಲ ಹಣಕಾಸು ಸಂಸ್ಥೆಯಾಗಿ ಉಳಿಯದೆ, ಸದಸ್ಯರ ಜೀವನಮಟ್ಟವನ್ನು ಎತ್ತರಿಸುವ ಶಕ್ತಿ ಕೇಂದ್ರವಾಗಿ ಬೆಳೆಯಬೇಕು. ಆಡಳಿತ ಮಂಡಳಿ, ಪದಾಧಿಕಾರಿಗಳು ಹಾಗೂ ಸದಸ್ಯರ ಒಗ್ಗಟ್ಟಿನ ಸಹಕಾರದಿಂದ ಜ್ಞಾನನಿಧಿ ರಾಜ್ಯದ ಮಾದರಿ ಸಹಕಾರ ಸಂಸ್ಥೆಯಾಗಿ ಬೆಳೆಯಲಿ ಎಂದು ಆಶಿಸಿದರು.
ಇದನ್ನೂ ಓದಿ: ಮಹಿಳಾ ಅಭಿವೃದ್ಧಿ ನಿಗಮದ ವಿವಿಧ ಯೋಜನೆಗಳಿಗೆ ಅರ್ಜಿ ಆಹ್ವಾನ
ಕಾರ್ಯಕ್ರಮದಲ್ಲಿ ಕರ್ನಾಟಕ ಸ್ಟೇಟ್ ಕೋ-ಆಪರೇಟಿವ್ ಸೊಸೈಟಿಸ್ ಅಸೋಸಿಯೇಷನ್ ಅಧ್ಯಕ್ಷ ವೈ. ಕುಮಾರ್, ಜ್ಞಾನನಿಧಿ ಸೊಸೈಟಿ ಉಪಾಧ್ಯಕ್ಷ ಸಿ. ಶಂಕರ್ ಮೂರ್ತಿ, ನಿರ್ದೇಶಕರಾದ ಮಂಜುನಾಥ್ ಎಚ್.ಬಿ., ಕೇದಾರ್ನಾಥ್ ಎಂ.ಸಿ., ಸಂತೋಷ ಗುಡಿಮಠ್, ಜಗದೀಶ್ ಬಿ.ಎಸ್., ದಾವಣಗೆರೆ ಪ್ರದೀಪ್, ಹನುಮಂತೇಗೌಡ ಬಿ.ಸಿ., ರಾಜೇಶ್ ಆರ್., ಬಾಬು ಚರಣ್ ಎನ್.ಕೆ., ಜ್ಯೋತಿ ಎಂ.ಪಿ.ಎಂ., ಸ್ವಾತಿ ಹಾಗೂ ಪ್ರದೀಪ್ ಬಿ.ಜೆ. ಉಪಸ್ಥಿತರಿದ್ದರು. ವಿಜಯರಂಜನಿ ಪ್ರಾರ್ಥಿಸಿದರು. ವ್ಯವಸ್ಥಾಪಕ ಶ್ರೀಧರ್ ಸ್ವಾಗತಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

