CHITRADURGA NEWS | 22 SEPTEMBER 2026
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಡಿ ಕ್ಯಾದಿಗೆರೆ ಹಾಗೂ ಜೆ.ಎನ್.ಕೋಟೆ ಕೆರೆಗಳಿಗೆ ನೀರು ಪೂರೈಕೆ ಮಾಡಬೇಕು ಎಂದು ಆಗ್ರಹಿಸಿ ಎರಡೂ ಗ್ರಾಮಗಳ 300ಕ್ಕೂ ಹೆಚ್ಚು ರೈತರು ಮಂಗಳವಾರ ಮುಖ್ಯ ಎಂಜಿನಿಯರ್ ಕಚೇರಿಗೆ ತೆರಳಿ ಹಕ್ಕೊತ್ತಾಯ ಮಂಡಿಸಿದರು.
ಇದನ್ನೂ ಓದಿ: ಸಮಾಜ ಕಲ್ಯಾಣ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಆರ್.ಎಚ್. ಶರಣಪ್ಪ ನಿಧನ
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ. ಲಿಂಗಾರೆಡ್ಡಿ ಹಾಗೂ ಪ್ರಧಾನ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ನೇತೃತ್ವದಲ್ಲಿ ರೈತರು ಮನವಿ ಸಲ್ಲಿಸಿದರು. ಪ್ರಾಯೋಗಿಕ ಪರೀಕ್ಷಾರ್ಥವಾಗಿ ನೀರು ಹರಿಸುವ ಸಂದರ್ಭದಲ್ಲಿಯೇ ತಮ್ಮೂರಿನ ಕೆರೆಗಳಿಗೂ ನೀರು ಪೂರೈಸಲು ಸಾಧ್ಯತೆ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕ್ಯಾದಿಗೆರೆ ಗ್ರಾಮದ ಹೆದ್ದಾರಿ ಪಕ್ಕದಲ್ಲಿರುವ ಆಳವಾದ ಗುಂಡಿ ಮಳೆಗಾಲದಲ್ಲಿ ನೀರಿನಿಂದ ತುಂಬಿರುತ್ತಿತ್ತು. ಇದರಿಂದ ಸುತ್ತಮುತ್ತಲಿನ ಜಮೀನುಗಳ ಅಂತರ್ಜಲ ಮಟ್ಟ ಹೆಚ್ಚಾಗಿ ರೈತರಿಗೆ ಅನುಕೂಲವಾಗುತ್ತಿತ್ತು. ಆದರೆ ಇತ್ತೀಚೆಗೆ ಮಳೆ ಕೊರತೆಯಿಂದ ಗುಂಡಿಯಲ್ಲಿ ನೀರು ನಿಲ್ಲದೆ ಸಮಸ್ಯೆಯಾಗಿದೆ. ಸಮೀಪದಲ್ಲೇ ಭದ್ರಾ ಮೇಲ್ದಂಡೆ ಯೋಜನೆಯ ಚಿತ್ರದುರ್ಗ ಶಾಖಾ ಕಾಲುವೆ ಹಾದು ಹೋಗುತ್ತಿದ್ದು, ಅಲ್ಲಿಂದ ನೀರು ಹರಿಸಿ ಗುಂಡಿ ತುಂಬಿಸಬಹುದಾಗಿದೆ. ಇದಕ್ಕೆ ಹೆಚ್ಚಿನ ವೆಚ್ಚವೂ ತಗಲುವುದಿಲ್ಲ ಎಂದು ರೈತರು ತಿಳಿಸಿದರು.
ಜೆ.ಎನ್.ಕೋಟೆ ಕೆರೆಗೆ ಭದ್ರಾ ನೀರು ಹರಿಸುವುದಕ್ಕೆ ಲಿಂಕ್ ಇದ್ದರೂ ನೀರು ಬರುತ್ತಿಲ್ಲ. ಗ್ರಾಮಸ್ಥರೇ ಜೆಸಿಬಿ ಮೂಲಕ ಕಾಲುವೆ ನಿರ್ಮಿಸಿಕೊಂಡಿದ್ದು, ಅಧಿಕಾರಿಗಳು ಪರಿಶೀಲಿಸಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಗಂಗಾಪೂಜೆ | ಸೆ.24ರಂದು ಚಿತ್ರದುರ್ಗಕ್ಕೆ ಸಿಎಂ
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಬಿ.ಎ. ಲಿಂಗಾರೆಡ್ಡಿ ಮಾತನಾಡಿ, “30 ವರ್ಷಗಳ ಹೋರಾಟದ ಫಲವಾಗಿ ಜಿಲ್ಲೆಗೆ ಭದ್ರಾ ನೀರು ಬಂದಿದೆ. ಶಾಖಾ ಕಾಲುವೆ ಸಮೀಪದ ಗ್ರಾಮಗಳ ಕೆರೆಗಳಿಗೆ ನೀರು ಹರಿಸಿದರೆ ಅಂತರ್ಜಲ ಮಟ್ಟ ಹೆಚ್ಚಾಗಲಿದೆ. ಈ ಕುರಿತು ಅಧಿಕಾರಿಗಳು ಕಾರ್ಯಸಾಧ್ಯತೆಯನ್ನು ಗಂಭೀರವಾಗಿ ಪರಿಶೀಲಿಸಬೇಕು” ಎಂದು ಒತ್ತಾಯಿಸಿದರು.
ರೈತರ ಮನವಿ ಆಲಿಸಿದ ಮುಖ್ಯ ಎಂಜಿನಿಯರ್ ರವಿಶಂಕರ್ ಮಾತನಾಡಿ, ಸೆಪ್ಟೆಂಬರ್ 24ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಚಿತ್ರದುರ್ಗಕ್ಕೆ ಆಗಮಿಸಿ ಗೋನೂರು ಕೆರೆಗೆ ಪೂಜೆ ಸಲ್ಲಿಸಲಿದ್ದಾರೆ. ಕಾರ್ಯಕ್ರಮದ ಬಳಿಕ ಇಲಾಖೆಯ ಎಂಜಿನಿಯರ್ಗಳ ತಂಡದೊಂದಿಗೆ ತಾವೇ ಸ್ಥಳಕ್ಕೆ ಭೇಟಿ ನೀಡಿ ಜೆ.ಎನ್.ಕೋಟೆ ಹಾಗೂ ಕ್ಯಾದಿಗೆರೆಗೆ ನೀರು ಹರಿಸುವ ಸಾಧ್ಯತೆ ಕುರಿತು ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಭದ್ರಾ ಜಲಾಶಯದಿಂದ ಚಿತ್ರದುರ್ಗ ಶಾಖಾ ಕಾಲುವೆಗೆ ನೀರು ಹರಿಸಲು ಸರ್ಕಾರ ಮೂರು ಟಿಎಂಸಿ ನೀರು ಹಂಚಿಕೆ ಮಾಡಿದೆ. ಇದುವರೆಗೆ ಒಂದು ಟಿಎಂಸಿ ನೀರನ್ನು ಲಿಫ್ಟ್ ಮಾಡಿ ಕಾಲುವೆಗೆ ಹರಿಸಲಾಗಿದ್ದು, ಇನ್ನೂ ಎರಡು ಟಿಎಂಸಿ ನೀರು ಬಾಕಿ ಇದೆ. ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ರವಿಶಂಕರ್ ತಿಳಿಸಿದರು.
ಪ್ರಧಾನ ಸಂಚಾಲಕ ಚಿಕ್ಕಪ್ಪನಹಳ್ಳಿ ಷಣ್ಮುಖ ಮಾತನಾಡಿ, ಅಧಿಕಾರಿಗಳು ಹಾಗೂ ರೈತರು ಕಾಲುವೆ ಸಮೀಪ ಸ್ಥಳ ಪರಿಶೀಲನೆ ನಡೆಸಿ ನೀರು ಹರಿಸುವ ಸಾಧ್ಯತೆ ಕುರಿತು ಚರ್ಚಿಸಬೇಕು. ಗುರುತ್ವಾಕರ್ಷಣೆಯ ಮೂಲಕ ನೀರು ಹರಿಸಲು ಸಾಧ್ಯವಿದ್ದರೆ ತ್ವರಿತವಾಗಿ ತೀರ್ಮಾನ ಕೈಗೊಳ್ಳಬೇಕು. ಆದರೆ ರೈತರು ಕಾನೂನು ಮೀರಿ ನಡೆದುಕೊಳ್ಳಬಾರದು ಹಾಗೂ ಕಾಲುವೆಗೆ ಹಾನಿಯಾಗುವ ಯಾವುದೇ ಕೃತ್ಯ ಎಸಗಬಾರದು ಎಂದು ಮನವಿ ಮಾಡಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 22 | ಹತ್ತಿ ರೇಟ್ ಎಷ್ಟಿದೆ?
ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಇನ್ನೂ ಸಂಪೂರ್ಣವಾಗಿಲ್ಲ. ಜಗಳೂರು, ಮೊಳಕಾಲ್ಮೂರು ಹಾಗೂ ಚಳ್ಳಕೆರೆ ಭಾಗಗಳಿಗೂ ನೀರು ಹರಿಸುವ ಕೆಲಸ ಬಾಕಿಯಿದೆ. ಆದ್ದರಿಂದ ಸಿಹಿ ಹಂಚಿ ಸಂಭ್ರಮಿಸುವುದಕ್ಕಿಂತ ಯೋಜನೆಯ ಪೂರ್ಣ ಅನುಷ್ಠಾನಕ್ಕಾಗಿ ಮತ್ತಷ್ಟು ಹೋರಾಟ ಅಗತ್ಯವಿದೆ ಎಂದು ಅವರು ಹೇಳಿದರು.
ಕ್ಯಾದಿಗೆರೆ ಗ್ರಾಪಂ ಸದಸ್ಯ ಮಂಜುನಾಥ್, ಸತೀಶ್, ಸೀತಾರೆಡ್ಡಿ, ಹೂವಿನ ಕಲ್ಲೇಶಿ, ಮಾರ್ಕಂಡಪ್ಪ, ಬಸವರಾಜಪ್ಪ, ದೇವರಾಜು, ಹಟ್ಟಿ ತಿಪ್ಪೇಸ್ವಾಮಿ, ರಾಜಪ್ಪ, ರಾಮಣ್ಣ, ಜೆ.ಎನ್.ಕೋಟೆ ತಾಪಂ ಮಾಜಿ ಸದಸ್ಯ ಮಂಜುನಾಥ್, ಸಿದ್ದೇಶ್ ನಾಯಕ, ಪ್ರಸನ್ನ ಕುಮಾರ್, ಸಿರಿಗಿ ನಿಂಗಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

