CHITRADURGA NEWS | 28 JANUARY 2026
ಚಿತ್ರದುರ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ 2025-26ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆಗಳು ಇದೇ ಜ.29 ಮತ್ತು 30ರಂದು ಎರಡು ದಿನ ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ ತಿಳಿಸಿದರು.
ಇದನ್ನೂ ಓದಿ: ದಾವಣಗೆರೆ ವಿವಿಯಿಂದ ರಂಗನಾಥ್ ಗೆ Phd
ನಗರದ ಪತ್ರಿಕಾಭವನದಲ್ಲಿ ಮಂಗಳವಾರ ಜಿಲ್ಲಾಮಟ್ಟದ ವಾರ್ಷಿಕ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳು ಆಯೋಜಿಸಿರುವ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜಿಲ್ಲೆಯ ಸರ್ಕಾರಿ ನೌಕರರು ಜಿಲ್ಲಾಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಈ ಬಾರಿ ಸಂಪೂರ್ಣವಾಗಿ ಆನ್ಲೈನ್ ಮೂಲಕವೇ ನೋಂದಣಿಗೆ ಅವಕಾಶ ನೀಡಲಾಗಿದ್ದು, ಕಡ್ಡಾಯವಾಗಿ ಆನ್ಲೈನ್ ನೋಂದಣಿ ಮಾತ್ರ ಪರಿಗಣಿಸಲಾಗಿದೆ.
ಈಗಾಗಲೇ ಸುಮಾರು 2045 ಸರ್ಕಾರಿ ನೌಕರರು ಆನ್ಲೈನ್ ಮೂಲಕ ವಿವಿಧ ಕ್ರೀಡೆಗಳಲ್ಲಿ ಹಾಗೂ ಸಾಂಸ್ಕøತಿಕ ಸ್ಪರ್ಧೆಗಳಲ್ಲಿ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿರುತ್ತಾರೆ ಎಂದು ತಿಳಿಸಿದ ಅವರು, ಕ್ರೀಡಾಕೂಟದ ದಿನದಂದು ಬರುವಂತಹ ಯಾವುದೇ ಸರ್ಕಾರಿ ನೌಕರರಿಗೆ ನೇರ ನೋಂದಣಿಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಅಪಘಾತ ರಹಿತ ಸೇವೆ | KSRTC ಚಾಲಕ ಮನೋಹರ್ ಗೆ ಅವಾರ್ಡ್
ಕ್ರೀಡಾಕೂಟದಲ್ಲಿ ಈಗಾಗಲೇ ಆನ್ಲೈನ್ ಮೂಲಕ ನೋಂದಣಿ ಮಾಡಿಕೊಂಡಿರುವ ಸರ್ಕಾರಿ ನೌಕರರಿಗೆ ವಿಶೇಷ ಟೀ ಶರ್ಟ್ ಮತ್ತು ಕ್ಯಾಪ್ ವಿತರಿಸಲಾಗುವುದು. ನೋಂದಣಿ ಮಾಡಿಕೊಂಡಿರುವ ಸರ್ಕಾರಿ ನೌಕರರು ಕಡ್ಡಾಯವಾಗಿ ತಮ್ಮ ಇಲಾಖೆಯ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ತರಬೇಕು. ಜಿಲ್ಲಾಮಟ್ಟದ ಕ್ರೀಡಾಕೂಟಕ್ಕೆ ಆನ್ಲೈನ್ ನೋಂದಣಿ ಮಾಡಿಕೊಂಡು ಕ್ರೀಡಾಕೂಟದಲ್ಲಿ ಭಾಗವಹಿಸುವ ಸರ್ಕಾರಿ ನೌಕರರಿಗೆ ಮಾತ್ರ ಎರಡು ದಿನಗಳ ವಿಶೇಷ ರಜೆ ಸೌಲಭ್ಯ ನೀಡಲಾಗುವುದು ಎಂದು ತಿಳಿಸಿದರು.
ಸಂಕ್ರಾಂತಿ ಸಂಭ್ರಮ-ಸುಗ್ಗಿಯ ಸಿರಿ: ಜಿಲ್ಲೆಯಲ್ಲಿ ಸರ್ಕಾರಿ ನೌಕರರ ಸಂಘದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಜ.29ರಂದು ಸಂಜೆ 6ಕ್ಕೆ “ಸಂಕ್ರಾಂತಿ ಸಂಭ್ರಮ-ಸುಗ್ಗಿಯ ಸಿರಿ” ಎನ್ನುವ ವಿನೂತನ ಮನೋರಂಜನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಮಾಲತೇಶ್ ಮುದ್ದಜ್ಜಿ ತಿಳಿಸಿದರು.
ಜೀ-ಕನ್ನಡ ವಾಹಿನಿಯ ಸರಿಗಮಪ ಖ್ಯಾತಿಯ ಗಾಯನ ಕಲಾವಿದ ಕಂಬದ ರಂಗಯ್ಯ ಹಾಗೂ ಸಂಗಡಿಗರಿಂದ ಸಂಗೀತ ರಸಮಂಜರಿ ಹಾಗೂ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿದೆ. ಖ್ಯಾತ ಚಿತ್ರನಟ “ನೆನಪಿರಲಿ” ಚಿತ್ರದ ನಾಯಕ “ಲವ್ಲಿಸ್ಟಾರ್ ಪ್ರೇಮ್” ಅವರು ವಿಶೇಷ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಗ್ರಾಮೀಣ ಶೈಲಿಯ ಸಂಕ್ರಾಂತಿ ಊಟ:
ಹೆಚ್ಚಿನ ನೌಕರರು ರೈತಾಪಿ ಕುಟುಂಬದಿಂದ ಬಂದವರಾದ್ದರಿಂದ ಅವರಿಗೆ ಹಳೆಯ ನೆನಪುಗಳ ಮರುಕಳಿಸಲು ಕಾರ್ಯಕ್ರಮಕ್ಕೆ ಆಗಮಿಸುವ ಸುಮಾರು 5 ಸಾವಿರ ಜನ ಸರ್ಕಾರಿ ನೌಕರರು ಹಾಗೂ ಅವರ ಕುಟುಂಬದ ಸದಸ್ಯರಿಗೆ ವಿಶೇಷ ಭೋಜನ ವ್ಯವಸ್ಥೆ ಮಾಡಲಾಗಿದೆ. ಜೋಳದ ರೊಟ್ಟಿ, ಸಜ್ಜೆ ರೊಟ್ಟಿ ಮತ್ತು ಎಣ್ಣೆಗಾಯಿ ಪಲ್ಯದಂತಹ ಗ್ರಾಮೀಣ ಶೈಲಿಯ ಊಟವನ್ನು ಎಲ್ಲರಿಗೂ ಉಚಿತವಾಗಿ ನೀಡಲಾಗುವುದು ಎಂದರು.
ಇದನ್ನೂ ಓದಿ: ಅಡಿಕೆ ಧಾರಣೆ | 27 ಜನವರಿ | ಯಾವ ಅಡಿಕೆಗೆ ಎಷ್ಟು ರೇಟ್ ?
ಜಿಲ್ಲಾಮಟ್ಟದ ಕ್ರೀಡಾಕೂಟ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ನಿಗಮಮಂಡಳಿ ಅಧ್ಯಕ್ಷರು, ಜಿಲ್ಲಾಮಟ್ಟದ ಅಧಿಕಾರಿಗಳಾದ ಜಿಲ್ಲಾಧಿಕಾರಿಗಳು, ಜಿ.ಪಂ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳು ಹಾಗೂ ಎಲ್ಲಾ ವರ್ಗದ ನೌಕರರು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಎ.ಮಲ್ಲಿಕಾರ್ಜುನ, ಜಿಲ್ಲಾ ಉಪಾಧ್ಯಕ್ಷ ಹೆಚ್.ಬಿ.ಪೂಜಾರ್, ಹಿರಿಯೂರು ತಾಲ್ಲೂಕು ಅಧ್ಯಕ್ಷ ಆರ್.ರಮೇಶ್, ರಾಜ್ಯ ಪರಿಷತ್ ಸದಸ್ಯೆ ಡಾ.ಬಿ.ಟಿ.ಲೋಲಾಕ್ಷಮ್ಮ ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
