ಮುಖ್ಯ ಸುದ್ದಿ
Ettinhola Project: ವಾಣಿವಿಲಾಸ ಜಲಾಶಯದತ್ತ ಎತ್ತಿನಹೊಳೆ | ಇದು ಡಿಕೆಶಿ ಬದ್ದತೆ ಇಚ್ಛಾಶಕ್ತಿಯ ಪ್ರತಿರೂಪ | ಇಲ್ಲಿದೆ ನೋಡಿ ಯೋಜನೆಯ ಕಂಪ್ಲೀಟ್ ಡಿಟೇಲ್ಸ್
CHITRADURGA NEWS |06 SEPTEMBER 2024
ಚಿತ್ರದುರ್ಗ: ಬಯಲುಸೀಮೆ ಜನರ ದಶಕದ ಕನಸು ‘ಗೌರಿಹಬ್ಬ’ದಂದು ನನಸಾಗುತ್ತಿದೆ. ಇದು ಡಿಕೆಶಿ ಬದ್ದತೆ ಇಚ್ಛಾಶಕ್ತಿಯ ಪ್ರತಿರೂಪ. ಏಳು ಜಿಲ್ಲೆಗಳ 29 ತಾಲ್ಲೂಕಿನ 38 ಪಟ್ಟಣ ಪ್ರದೇಶ ಹಾಗೂ 6,657 ಗ್ರಾಮಗಳ 75.59 ಲಕ್ಷ ಜನರಿಗೆ ಮತ್ತು ಜಾನುವಾರುಗಳಿಗೆ ನೀರುಣಿಸುವ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ಇದಾಗಿದೆ. ಮೊದಲ ಹಂತದಲ್ಲಿ ಚಿತ್ರದುರ್ಗದ ಹಿರಿಯೂರಿನ ವಾಣಿವಿಲಾಸ ಜಲಾಶಯಕ್ಕೆ ಹರಿಯಲಿದೆ.
ಪಶ್ಚಿಮ ಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಹೊಂಗಡಹಳ್ಳ, ಕೇರಿಹೊಳೆ ಹಳ್ಳಗಳಿಗೆ ಅಡ್ಡಲಾಗಿ ಎಂಟು ವಿಯರ್‌ಗಳನ್ನು (ತಡೆ) ಕಟ್ಟಿ ಮಳೆಗಾಲದಲ್ಲಿ ಪ್ರವಾಹದಿಂದ ಸಿಗುವ ನೀರಿನಲ್ಲಿ 24.11 ಟಿಎಂಸಿ ಅಡಿಯನ್ನು ಬರಪೀಡಿತ ಏಳು ಜಿಲ್ಲೆಗಳಿಗೆ ಹರಿಸುವ ಯೋಜನೆ ಇದಾಗಿದೆ.
ಪ್ರತಿ ವರ್ಷ ಜೂನ್ 15ರಿಂದ ಅಕ್ಟೋಬರ್ 15ರವರೆಗೆ (ಮಳೆಗಾಲದ ವ್ಯತ್ಯಾಸಕ್ಕೆ ಅನುಗುಣವಾಗಿ ವ್ಯತ್ಯಾಸವಾಗಲಿದೆ) ನಾಲ್ಕು ತಿಂಗಳು ಪೂರ್ವಾಭಿಮುಖ ವಾಗಿ ನೀರು ಹರಿಸಿ ಏಳು ಜಿಲ್ಲೆಗಳ 29 ತಾಲ್ಲೂಕಿನ 38 ಪಟ್ಟಣ ಪ್ರದೇಶ ಹಾಗೂ 6,657 ಗ್ರಾಮಗಳ 75.59 ಲಕ್ಷ ಜನರಿಗೆ ಮತ್ತು ಜಾನುವಾರುಗಳಿಗೆ ನೀರು ಒದಗಿಸುವುದು ಯೋಜನೆಯ ಉದ್ದೇಶವಾಗಿದೆ.
ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | ಸೆಪ್ಟೆಂಬರ್ 06 | ವ್ಯಾಪಾರ– ವ್ಯವಹಾರ ಸುಗಮ, ದೀರ್ಘಕಾಲದ ಸಮಸ್ಯೆಗಳಿಂದ ಮುಕ್ತಿ
ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವರಾಗಿ ಅಧಿಕಾರ ವಹಿಸಿಕೊಂಡ ಡಿ.ಕೆ. ಶಿವಕುಮಾರ್ ಅವರು ಮೊದಲ ದಿನದಿಂದಲೇ ಎತ್ತಿನ ಹೊಳೆ ಯೋಜನೆಯನ್ನು ಸವಾಲಾಗಿ ಸ್ವೀಕರಿಸಿದ್ದರು. 2019 ರಲ್ಲಿ ಮತ್ತು ವರ್ಷದ ಹಿಂದೆ (23, ಆಗಸ್ಟ್ 2023) ಎತ್ತಿನಹೊಳೆ ಕಾಮಗಾರಿ ನಡೆಯುತ್ತಿದ್ದ ಸ್ಥಳಗಳಿಗೆ ಭೇಟಿ ನೀಡಿ, ಅಧ್ಯಯನ ನಡೆಸಿದ್ದ ಅವರು ಅಲ್ಲಿದ್ದ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಸಂಗ್ರಹಿಸಿ, ಕಾಮಗಾರಿ ಪರಿಶೀಲಿಸುತ್ತಲೇ ಅವರು ನಿವಾರಣೆಗೂ ತಮ್ಮಲೇ ಕ್ರಿಯಾಯೋಜನೆಯನ್ನು ರೂಪಿಸಿಕೊಂಡಿದ್ದರು.
2014 ರಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಎತ್ತಿನ ಹೊಳೆ ಯೋಜನೆಗೆ ಚಾಲನೆ ನೀಡಿದ್ದರು. 2018– 19ರ ಸಮ್ಮಿಶ್ರ ಸರ್ಕಾರದ ವೇಳೆ ಜಲಸಂಪನ್ಮೂಲ ಸಚಿವರಾಗಿದ್ದ ಡಿ.ಕೆ. ಶಿವಕುಮಾರ್ ಅವರು ಎತ್ತಿನಹೊಳೆ ಯೋಜನೆಗೆ ಸಂಬಂಧಿಸಿದಂತೆ ಹಲವಾರು ಸಭೆಗಳನ್ನು ನಡೆಸಿ, ಸ್ಥಳ ಭೇಟಿ ಕೈಗೊಂಡು ಯೋಜನೆಗೆ ವೇಗ ನೀಡುವ ಪ್ರಯತ್ನ ನಡೆಸಿದ್ದರು. ಬದಲಾದ ಕಾಲದಲ್ಲಿ ಯೋಜನೆಯ ತನ್ನ ವೇಗವನ್ನು ಕಳೆದುಕೊಂಡು 2021 ರ ಹೊತ್ತಿಗೆ ಏದುಸಿರು ಬಿಡುತ್ತಿತ್ತು. ಕುಂಟುತ್ತಾ ಸಾಗಿದ್ದ ಈ ಯೋಜನೆಗೆ ಮತ್ತೊಮ್ಮೆ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರುಗಳು ಇನ್ನಿಲ್ಲದ ವೇಗ ನೀಡಿದ್ದರು.
ಅದರಲ್ಲೂ ಎದುರಾದ ಸಮಸ್ಯೆಗಳಿಗೆ ಡಿ.ಕೆ. ಶಿವಕುಮಾರ್ ಅವರು ಖುದ್ದಾಗಿ ಆಯಾ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಅನುಮತಿ ಪಡೆದುಕೊಳ್ಳುವಲ್ಲಿಯೂ ಯಶಸ್ವಿಯಾಗಿದ್ದರು. ಇವುಗಳಿಗೆ ಕೆಲವೊಂದು ನಿರ್ದಶನಗಳು ಇಲ್ಲಿವೆ. 2021ರಲ್ಲಿ ಹೆಬ್ಬನಹಳ್ಳಿ ಸಬ್ ಸ್ಟೇಷನ್ ಪೂರ್ಣಗೊಂಡರೂ ಚಾರ್ಜಿಂಗ್ ಮಾಡಲು ಕೆಪಿಟಿಸಿಲ್ ನಿಂದ ನಿರಪೇಕ್ಷಣಾ ಪತ್ರ ಪಡೆಯಲು 3 ವರ್ಷಗಳಷ್ಟು ಕಾಲ ವಿಳಂಬವಾಗಿತ್ತು. ಇಂಧನ ಇಲಾಖೆ ಅಧಿಕಾರಿಗಳ ಜತೆ ಮಾತನಾಡಿ ಈ ಯೋಜನೆಗೆ ಅಗತ್ಯ ಸಹಕಾರ ಪಡೆಯಲು ಯಶಸ್ವಿಯಾಗಿದ್ದರು. ಅದೇ ರೀತಿ, ಯೋಜನೆ ಮಾರ್ಗದಲ್ಲಿ ಬರುವ ಅರಣ್ಯ ಪ್ರದೇಶದ ಭೂಸ್ವಾಧೀನ ವಿಚಾರದಲ್ಲಿ ಉಂಟಾದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅರಣ್ಯ ಇಲಾಖೆ ಜತೆ ಸಮನ್ವಯತೆ ಸಾಧಿಸಿಸುವಲ್ಲಿ ಶಿವಕುಮಾರ್ ಅವರ ಪಾತ್ರ ಪ್ರಮುಖವಾಗಿದೆ.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಮೊದಲ ಹಂತದ ಏತ ಕಾಮಗಾರಿ ಪ್ಯಾಕೇಜ್-4ರ ಕಾಮಗಾರಿ ಕೆಲಸಕ್ಕೆ ಮೈಸೂರು ಮರ್ಕೆಂಟೈಲ್ ಕಂಪನಿ ಕಳೆದ ಐದು ವರ್ಷಗಳಿಂದಲೂ ಅಡ್ಡಿ ಪಡಿಸುತ್ತಿತ್ತು. ಜಲಸಂಪನ್ಮೂಲ ಸಚಿವರ ಸಂಧಾನದ ಮಾತುಕತೆ ಹಾಗೂ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಹಕಾರದೊಂದಿಗೆ ಮೈಸೂರು ಮರ್ಕೆಂಟೈಲ್ ಕಂಪನಿಯ ಜಮೀನಿನಲ್ಲಿ ಪೈಪ್ ಅಳವಡಿಕೆ ಪೂರ್ಣಗೊಳಿಸಲಾಯಿತು.
ಅದೇ ರೀತಿ, ಮೊದಲ ಹಂತದ ಏತ ಕಾಮಗಾರಿಯ ಪ್ಯಾಕೇಜ್ 5ರ ಕೆಲಸಗಳಿಗೆ ಮೂರು ವರ್ಷಗಳಿಂದ ಅಡ್ಡಿಪಡಿಸುತ್ತಿದ್ದ ಕಾಡುಮನೆ ಎಸ್ಟೇಟ್ ಅವರ ಮನವೊಲಿಸಿ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಇದ್ದ ಸಮಸ್ಯೆಗಳನ್ನು ಬಗೆಹರಿಸಿ ಕಾಮಗಾರಿ ಮುಂದುವರಿಯಲು ಪ್ರಮುಖ ಪಾತ್ರ ವಹಿಸಿದ್ದರು.
ಕ್ಲಿಕ್ ಮಾಡಿ ಓದಿ: ಸಿರಿಧಾನ್ಯ ‘ಸಾವೆ’ಗೆ ದರ ನಿಗದಿಗೊಳಿಸಿ | ಜಿಲ್ಲಾಡಳಿತಕ್ಕೆ ಅನ್ನದಾತರ ಡೆಡ್ ಲೈನ್
ಯೋಜನೆ ಹಂತ-2ರ ಗುರುತ್ವ ಕಾಲುವೆ ಕಾಮಗಾರಿಗೆ ಸಕಲೇಶಪುರ ತಾಲೂಕಿನ, ಬೆಳಗೂಡು ಹೋಬಳಿ ಮೂಗಲಿ ಗ್ರಾಮದ ಎಂ.ಪಿ. ಧೀರಜ್ ಬಿನ್ ಎಂ.ಪಿ ಪಾಲಾಕ್ಷರವರು ಅಡ್ಡಿಪಡಿಸಿದ್ದರು. ಇದರಿಂದ ಈ ಕಾಮಗಾರಿ 5 ವರ್ಷ ವಿಳಂಬವಾಗಿತ್ತು. ಈ ಸಮಸ್ಯೆಯನ್ನು ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಬಗೆಹರಿಸಿ ಕಾಮಗಾರಿಗೆ ವೇಗ ನೀಡಲಾಯಿತು. ಆಲೂರು ತಾಲ್ಲೂಕು, ಪಾಳ್ಯ ಗ್ರಾಮದ ಜನರು ಕಾಮಗಾರಿಗೆ ಅಡ್ಡಿಪಡಿಸಿದಾಗಲೂ ಶಿವಕುಮಾರ್ ಅವರ ಸಲಹೆ ಸೂಚನೆ ಮೇರೆಗೆ ಗ್ರಾಮಸ್ಥರ ಸಮಸ್ಯೆಗಳನ್ನು ಪರಿಹರಿಸಿ ಕಾಮಗಾರಿ ಪೂರ್ಣಗೊಳಿಸಿದ್ದರು.
ಇಂತಹ ಪ್ರಗತಿಯ ಪಥವನ್ನು ಕ್ರಮಿಸುವಲ್ಲಿ ಸರ್ಕಾರಕ್ಕೆ ಇರುವ ಬದ್ದತೆ ಮತ್ತು ಇಚ್ಛಾಶಕ್ತಿ ಇತರ ರಾಜ್ಯಗಳಿಗೂ ಪ್ರೇರಣೆಯಾಗಿದೆ. ಸರ್ಕಾರದ ನಿರಂತರ ಶ್ರಮದ ಪ್ರತಿಫಲವೇ ಎತ್ತಿನ ಹೊಳೆ ಯೋಜನೆ. ಅತ್ಯಂತ ಮಹತ್ವಾಕಾಂಕ್ಷೆಯ ಈ ಎತ್ತಿನಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡು ನಾಡಿಗೆ ಸಮರ್ಪಿಸುವ ಮೂಲಕ ಜನ – ಜಾನುವಾರುಗಳಿಗೆ ಕುಡಿಯುವ ನೀರಿನ ತಾತ್ವಾರವನ್ನು ಶಾಶ್ವತವಾಗಿ ನೀಗಿಸುವಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳ ಬದ್ದತೆಗೆ ಸಾಕ್ಷಿಯಾಗಿದೆ.
ಎತ್ತಿನ ಹೊಳೆ ಯೋಜನೆ: ರಾಜ್ಯದಲ್ಲಿ ಯಥೇಚ್ಛವಾಗಿರುವ ಜಲಸಂಪನ್ಮೂಲವನ್ನು ಜನರ ಕಲ್ಯಾಣ ಮತ್ತು ಅಭಿವೃದ್ಧಿಗೆ ಬಳಸಿಕೊಳ್ಳುವ ದೃಷ್ಟಿಯಿಂದ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಪಶ್ಚಿಮಘಟ್ಟದ ಮೇಲ್ಭಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಹೊಂಗದಹಳ್ಳ ಹಾಗೂ ಕೇರಿಹೊಳೆ ಹಳ್ಳಗಳ ಮುಂಗಾರು ಮಳೆ ಅವಧಿಯಲ್ಲಿ ದೊರೆಯಬಹುದಾದ ನೀರನ್ನು ಬಳಸಿಕೊಳ್ಳುವಲ್ಲಿ ಎತ್ತಿನ ಹೊಳೆ ಕುಡಿಯುವ ನೀರಿನ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ.
ಯೋಜನೆಯ ಮೊದಲನೇ ಹಂತದ ಏತ (ಲಿಫ್ಟ್) ಮತ್ತು ವಿದ್ಯುತ್ ಪೂರೈಕೆಯ ಕಾಮಗಾರಿಗಳ ಅನುಷ್ಠಾನಕ್ಕೆ ಬಹುದಿನಗಳಿಂದ ಉದ್ಭವಿಸಿದ್ದ ಎಲ್ಲಾ ಅಡೆತಡೆಗಳನ್ನು ಈ ಸರ್ಕಾರವು ಕಳೆದ 18 ತಿಂಗಳಲ್ಲಿ ನಿವಾರಿಸಿಕೊಂಡು ಕಾಮಗಾರಿ ಪೂರ್ಣಗೊಳಿಸುವ ಮೂಲಕ ತನ್ನ ಇಚ್ಛಾಶಕ್ತಿಯನ್ನು ಪ್ರದರ್ಶಿಸಿದೆ.
ಎತ್ತಿನಹೊಳೆ, ಕಾಡುಮನೆಹೊಳೆ, ಹೊಂಗದಹಳ್ಳ ಹಾಗೂ ಕೇರಿಹೊಳೆ ಹಳ್ಳಗಳ ಪ್ರವಾಹದಿಂದ ಮುಂಗಾರಿನ ಅವಧಿಯಲ್ಲಿ ಪೂರ್ವಾಭಿಮುಖವಾಗಿ ತಿರುಗಿಸಿ, ದೊರೆಯಬಹುದಾದ ನೀರಿನ ಪೈಕಿ 24.01 ಟಿ.ಎಂ.ಸಿ ನೀರನ್ನು ಇವುಗಳಿಗೆ ಅಡ್ಡಲಾಗಿ 8 ವಿಯರ್‌ಗಳನ್ನು ನಿರ್ಮಿಸಿ ರಾಜ್ಯದ ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 29 ತಾಲ್ಲೂಕಿನ 38 ಪಟ್ಟಣ ಪ್ರದೇಶದ ಹಾಗೂ 6657 ಗ್ರಾಮಗಳ ಸುಮಾರು 75.59 ಲಕ್ಷ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸುವ ಮಹಾಸಂಕಲ್ಪವೊಂದು ಈ ಯೋಜನೆಯ ಮೂಲಕ ಈಡೇರುತ್ತಿರುವುದು ಈ ಜಿಲ್ಲೆಗಳ ಜನರ ಕುಡಿವ ನೀರಿನ ಸಮಸ್ಯೆಯನ್ನು ಇಂಗಿಸಿದೆ.
ಒಟ್ಟಾರೆ 24.01 ಟಿ.ಎಂ.ಸಿ ನೀರಿನಲ್ಲಿ ಕುಡಿಯುವ ನೀರಿಗಾಗಿ 14.056 ಟಿ.ಎಂ.ಸಿ, 527 ಕೆರೆ ತುಂಬಿಸಲು 9.953 ಟಿ.ಎಂ.ಸಿ ಬಳಸಿಕೊಳ್ಳುವ ಯೋಜನೆ ರೂಪಿಸಲಾಗಿದ್ದು, ರೂ. 23,251.66 ಕೋಟಿಗಳ ಅಂದಾಜು ಮೊತ್ತದ ಮೊದಲ ಹಂತದ ಕಾಮಗಾರಿಯನ್ನು ಜನರಿಗೆ ಸಮರ್ಪಿಸಲಾಗುತ್ತಿದೆ.
ಮೊದಲನೇ ಹಂತದ ಏತ (ಲಿಫ್ಟ್) ಮತ್ತು ವಿದ್ಯುತ್ ಪೂರೈಕೆಯ ಕಾಮಗಾರಿಗಳ ಅನುಷ್ಠಾನದಲ್ಲಿ ಬಹುದಿನಗಳಿಂದ ಉದ್ಭವಿಸಿದ್ದ ಅಡಚಣೆಗಳನ್ನು ನಿವಾರಿಸಿಕೊಂಡು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, ಪ್ರಸ್ತುತ 1 ರಿಂದ 8 ವಿಯರ್ ಗಳಿಂದ ಒಟ್ಟಾರೆ 79.50 ಕ್ಯುಮೆಕ್ಸ್ (2800.00 ಕ್ಯೂಸೆಕ್ಸ್) ನೀರನ್ನೆತ್ತಿ ವಿತರಣಾ ತೊಟ್ಟಿ – 3ರ ವರೆಗೆ ಪೂರೈಸಿ ತದನಂತರ ವಿತರಣಾ ತೊಟ್ಟಿ-3 ರಿಂದ ನೀರನ್ನೆತ್ತಿ ವಿತರಣಾ ತೊಟ್ಟಿ -4 ರ ಮುಖಾಂತರ ಗುರುತ್ವ ಕಾಲುವೆಗೆ 79.50 ಕ್ಯುಮೆಕ್ಸ್ (2800.00 ಕ್ಯೂಸೆಕ್ಸ್) ನೀರನ್ನು ಹರಿಸಲು ಯೋಜಿಸಲಾಗಿದೆ.
ಗುರುತ್ವಕಾಲುವೆಯು ಒಟ್ಟು 252.61 ಕಿ.ಮೀ ಉದ್ದವಿದ್ದು, ಈ ಪೈಕಿ 164.47 ಕಿ.ಮೀ ಪೂರ್ಣಗೊಂಡಿದ್ದು, 25.87 ಕಿ.ಮೀ ಪ್ರಗತಿಯಲ್ಲಿರುತ್ತದೆ. ಗುರುತ್ವಕಾಲುವೆಯ ಒಟ್ಟು 42 ಕಿ.ಮೀ ವರಗಿನ ಕಾಮಗಾರಿಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಂಡಿದೆ. ನಂತರದ ಕಾಮಗಾರಿಗಳು ಅರಣ್ಯ ಮತ್ತು ಭೂಸ್ವಾಧೀನ ಸಮಸ್ಯೆಯಿಂದಾಗಿ ಪೂರ್ಣಗೊಂಡಿರದ ಕಾರಣ, ಗುರುತ್ವಕಾಲುವೆಯ 32.50 ಕಿ.ಮೀ ನಲ್ಲಿರುವ ನಾಲಾ ಎಸ್ಕೇಪ್ ಮೂಲಕ ಸುಮಾರು 132.50 ಕಿ.ಮೀ ದೂರದಲ್ಲಿರುವ ವಾಣಿ ವಿಲಾಸ ಸಾಗರಕ್ಕೆ ವೇದಾ ವ್ಯಾಲಿಯ ಮುಖಾಂತರ ತಾತ್ಕಾಲಿಕವಾಗಿ 1500 ಕ್ಯೂಸೆಕ್ಸ್ ನೀರನ್ನು ಹರಿಸಲು ಕಾರ್ಯಕ್ರಮ ರೂಪಿಸಲಾಗಿದೆ.
ಕಳೆದ ವರ್ಷದ ನವೆಂಬರ್ ನಿಂದಲೇ ಪೂರ್ವ ಪರಿಕ್ಷಾರ್ಥ ಚಾಲನಾ ಚಟುವಟಿಕೆಗಳನ್ನು ಕೈಗೊಳ್ಳಲಾಗಿದ್ದು, ವಿಯರ್- 4 ಮತ್ತು 5 ರಿಂದ ನೀರನ್ನೆತ್ತಿ ವಿತರಣಾ ತೊಟ್ಟಿ – 3 ರವರೆಗೆ ನೀರನ್ನು ಪೂರೈಸಲಾಗಿದೆ. ಪ್ರಸ್ತುತ ಇವುಗಳ ಜೊತೆ ವಿಯರ್ 1, 2 ಮತ್ತು 8ರಿಂದಲೂ ಸಹ ನೀರನ್ನೆತ್ತಿ ವಿತರಣಾ ತೊಟ್ಟಿ -4ರ ವರೆಗೆ ಪೂರೈಸಿ, ಅಲ್ಲಿಂದ ಗುರುತ್ವ ಕಾಲುವೆಗೆ ಕಳೆದ ಆ. 26 ರಂದು ಯಶಸ್ವಿಯಾಗಿ ನೀರು ಹರಿಸಲಾಗಿದ್ದು, ಗುರುತ್ವಕಾಲುವೆಯಲ್ಲಿನ ನೀರು 32.50 ಕಿ.ಮೀ ನಲ್ಲಿರುವ ನಾಲಾ ಎಸ್ಕೇಪ್ ಮೂಲಕ ವೇದಾ ವ್ಯಾಲಿಯನ್ನು ಪ್ರವೇಶಿಸಿ ಈಗಾಗಲೇ ಹಳೇಬೀಡು ಕೆರೆಯು ತುಂಬಿ ಕೋಡಿ ಬಿದ್ದು ತದನಂತರ ಬೆಳವಾಡಿ ಕೆರೆಯನ್ನುಪ್ರವೇಶಿಸಿದ್ದು ಇಲ್ಲಿಂದ ವಾಣಿ ವಿಲಾಸ ಸಾಗರದತ್ತ ನೀರು ಹರಿಯುತ್ತಿದೆ. ವಿಯರ್-3 ಅನ್ನು ಹೊರತುಪಡಿಸಿ, ಉಳಿದ ಎಲ್ಲಾ ವಿಯರ್‌ಗಳಿಂದ ಸೆಪ್ಟೆಂಬರ್ 6 ರಿಂದ ನೀರನ್ನೆತ್ತಿ ಗುರುತ್ವ ಕಾಲುವೆಗೆ ಪೂರೈಸಲಾಗುತ್ತಿದೆ.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನಯೋಜನೆಗಾಗಿ 2024ರ ಜುಲೈ ಅಂತ್ಯಕ್ಕೆ ರೂ.16,152.05 ಕೋಟಿಗಳ ಆರ್ಥಿಕ ಪ್ರಗತಿ ಸಾಧಿಸಲಾಗಿದೆ. ಯೋಜನೆ ಜಾರಿ ಬಗ್ಗೆ ಅನೇಕ ಟೀಕೆ, ಅನುಮಾನಗಳು ವ್ಯಕ್ತವಾದರೂ ಈ ಯೋಜನೆಯನ್ನು 2026-27ನೇ ಸಾಲಿನ ಮಾರ್ಚ್ ಅಂತ್ಯಕ್ಕೆ ಆದ್ಯತೆ ಮೇರೆಗೆ ಪೂರ್ಣಗೊಳಿಸಲು ಸರ್ಕಾರ ಕಾರ್ಯೋನ್ಮುಖವಾಗಿದೆ.
ಕ್ಲಿಕ್ ಮಾಡಿ ಓದಿ: ಭದ್ರಾ ಮೇಲ್ದಂಡೆ ಯೋಜನೆಗೆ ಪುನಃ ವಿಘ್ನ | ಕಾಲುವೆ ನಿರ್ಮಾಣಕ್ಕೆ ಎದುರಾಯಿತು ತೊಡಕು
ಪ್ರಸ್ತುತ ಸಮಗ್ರ ಕುಡಿಯುವ ನೀರಿನ ಯೋಜನೆಯ ಹಂತ-1 ರ ಕಾಮಗಾರಿಗಳ ಉದ್ಘಾಟನಾ ಸಮಾರಂಭವನ್ನು ಗೌರಿ ಹಬ್ಬದಂದು (ಸೆ. 6) ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರುಗಳು ನೇರವೇರಿಸಲಿದ್ದಾರೆ. ಈ ಮೂಲಕ ರಾಜ್ಯದ ಬರಪೀಡಿತ ಜಿಲ್ಲೆಗಳಾದ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಜನ – ಜಾನುವಾರುಗಳಿಗೆ ಗೌರಿ-ಗಣೇಶ ಹಬ್ಬದ ಸಂಭ್ರಮಕ್ಕೆ ಗಂಗಮ್ಮನೂ ಸೇರಿ ಕುಡಿವ ನೀರಿನ ಸುಧೆಯನ್ನು ಹರಿಸಲಿದ್ದಾಳೆ.