ಲೋಕಸಮರ 2024
ಸಿದ್ದರಾಮಯ್ಯ ಒಮ್ಮೆ ‘ಬಾದಾಮಿ’ ನೆನಪಿಸಿಕೊಳ್ಳಲಿ | ಗೋ ಬ್ಯಾಕ್ ಹೇಳಿಕೆಗೆ ತಿರುಗೇಟು ನೀಡಿದ ಕೆ.ಎಸ್.ನವೀನ್
CHITRADURGA NEWS | 6 APRIL 2024
ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪರ ಚುನಾವಣಾ ಪ್ರಚಾರಕ್ಕೆ ನಗರಕ್ಕೆ ಆಗಮಿಸಿದ್ದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳರವರನ್ನು ಗೋಬ್ಯಾಕ್ ಎಂದು ಹೇಳಿ ಜನರನ್ನು ಪ್ರಚೋದಿಸುತ್ತಿದ್ದಾರೆ. ಇವರು ಒಮ್ಮೆ ‘ಬಾದಾಮಿ’ ಕ್ಷೇತ್ರ ನೆನಪಿಸಿಕೊಳ್ಳಲಿ ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ತಿರುಗೇಟು ನೀಡಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರ ಮಾತು ಮುಖ್ಯಮಂತ್ರಿ ಸ್ಥಾನಕ್ಕೆ ಶೋಭೆಯಲ್ಲ. ಪ್ರಜಾಪ್ರಭುತ್ವದಲ್ಲಿ ಯಾರು ಎಲ್ಲಿ ಬೇಕಾದರೂ ಚುನಾವಣೆಯಲ್ಲಿ ಸ್ಪರ್ಧಿಸಬಹುದು. ಇದೇ ಸಿದ್ದರಾಮಯ್ಯ ತಮ್ಮ ಸ್ವಂತ ಕ್ಷೇತ್ರ ಬಿಟ್ಟು ಬಾದಾಮಿಯಲ್ಲಿ ಸ್ಪರ್ಧಿಸಿದ್ದನ್ನು ಮರೆತು ಬಿಟ್ಟಿದ್ದಾರೆ’ ಎಂದು ಕುಟುಕಿದರು.
‘ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಅವರು ಪರಿಶಿಷ್ಟ ಜಾತಿಯವರೆಂದು ಕೀಳಾಗಿ ಕಾಣಬಾರದು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮತದಾರರೆ ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.
‘ಸಿದ್ದರಾಮಯ್ಯನವರು ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾಗ ಅಲ್ಲಿನ ಮತದಾರರು ಗೋಬ್ಯಾಕ್ ಸಿದ್ದರಾಮಯ್ಯ ಎಂದು ಹೇಳಿದ್ದರೆ ಅವರ ಪರಿಸ್ಥಿತಿ ಏನಾಗಿರುತ್ತಿತ್ತು. ಮತ್ತೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವ ಬದಲು ಒಮ್ಮೆ ಯೋಚಿಸಿದರೆ ಒಳ್ಳೆಯದು’ ಎಂದು ಎಚ್ಚರಿಸಿದರು.
ಕ್ಲಿಕ್ ಮಾಡಿ ಓದಿ: ಬತ್ತಿ ಹೋಗಿದ್ದ ಸೂಳೆಕೆರೆಗೆ ಭದ್ರಾ ನೀರು | ಕುಡಿಯುವ ನೀರಿಗೆ ತಪ್ಪಲಿದೆ ತೊಂದರೆ
‘ದೇಶದ ಪ್ರಧಾನಿ ನರೇಂದ್ರಮೋದಿ ಕಳೆದ ಹತ್ತು ವರ್ಷಗಳಲ್ಲಿ ನೂರಾರು ಯೋಜನೆಗಳನ್ನು ಜನತೆಗೆ ನೀಡಿರುವುದನ್ನು ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆಯಲ್ಲಿ ಮತದಾರರ ಬಳಿ ಹೋಗುತ್ತೇವೆ. ಯಾರು ಹಸಿವಿನಿಂದ ನರಳಬಾರದೆಂದು ಜಿಲ್ಲೆಯಲ್ಲಿ ಹದಿನಾರು ಲಕ್ಷದ 37685 ಜನರಿಗೆ ಪಡಿತರ ಧಾನ್ಯ ನೀಡಿದ್ದಾರೆ. ಆರು ಲಕ್ಷದ ಐವತ್ತು ಸಾವಿರದ 257 ಜನರಿಗೆ ಐದು ಲಕ್ಷದವರೆಗೆ ಅತಿ ದೊಡ್ಡ ವಿಮೆ ಯೋಜನೆ ಸಿಕ್ಕಿದೆ’ ಎಂದರು.
‘ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ ಒಂದು ಲಕ್ಷ ತೊಂಬತ್ತು ಸಾವಿರ ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 9 ಸಾವಿರದ 908 ನೂತನ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಮೂರು ಲಕ್ಷದ 24 ಸಾವಿರದ ಐದು ನೂರು ಜನರು ಈ ಶ್ರಮ್ ಕಾರ್ಡ್ ಪಡೆದುಕೊಂಡಿದ್ದಾರೆ. ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ 27 ಲಕ್ಷದ ಐದು ಸಾವಿರದ 945 ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.
‘ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರದಿಂದ ಆರು ಸಾವಿರ ರೂ. ಹಾಗೂ ರಾಜ್ಯದಿಂದ ನಾಲ್ಕು ಸಾವಿರ ರೂ. 3 ಲಕ್ಷ 37 ಸಾವಿರದ 527 ರೈತರ ಖಾತೆಗಳಿಗೆ ಹಣ ಜಮಾ ಆಗುತ್ತಿದೆ. ಹದಿನೆಂಟು ಸಾವಿರದ 120 ರೈತರ ಹೊಲಗಳಿಗೆ ಸಾಯಿ ಹೆಲ್ತ್ ಕಾರ್ಡ್ ಸಿಕ್ಕಿದೆ. ಜನ್‍ಧನ್ ಯೋಜನೆ ಶೇ. ನೂರರಷ್ಟು ಅನುಷ್ಠಾನಗೊಂಡಿದೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ 2014 ರಿಂದ ಇಲ್ಲಿಯವರೆಗೆ ಒಂದು ಸಾವಿರದ 81 ಕಿ.ಮಿ. ರಸ್ತೆಯಾಗಿದೆ’ ಎಂದು ತಿಳಿಸಿದರು.
‘ವೃದ್ಧಾಪ್ಯ ವೇತನ ಯೋಜನೆಯಡಿ ಮೂರು ಲಕ್ಷ ಎಂಟು ಸಾವಿರದ 338 ಜನರಿಗೆ ಪಿಂಚಣಿ ಸಿಕ್ಕಿದೆ. ಕೌಶಲ್ಯಾಭಿವೃದ್ದಿ ಯೋಜನೆಯಡಿ 31477 ಯುವಕರಿಗೆ ವಿದ್ಯಾರ್ಥಿ ವೇತನ ನೀಡಲಾಗಿದೆ. ಜಿಲ್ಲೆಯಲ್ಲಿ 20 ಜನೌಷಧಿ ಕೇಂದ್ರಗಳು ಆರಂಭಗೊಂಡಿವೆ. 16722 ಮಹಿಳೆಯರಿಗೆ ವಿಶೇಷ ತರಬೇತಿ ನೀಡಲಾಗಿದೆ. ಸ್ವನಿಧಿ ಯೋಜನೆಯಡಿ 6777 ಬೀದಿ ಬದಿ ವ್ಯಾಪಾರಿಗಳಿಗೆ ತಲಾ ಹತ್ತು ಸಾವಿರ ರೂ.ಗಳನ್ನು ನೀಡಲಾಗಿದೆ’ ಎಂದರು.
‘ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆಯಡಿ 4 ಲಕ್ಷ 36 ಸಾವಿರದ 949 ಫಲಾನುಭವಿಗಳಿಗೆ ಎಲ್.ಇ.ಡಿ. ಬಲ್ಬ್‍ಗಳನ್ನು ವಿತರಿಸಲಾಗಿದೆ. ಉಜ್ವಲ ಯೋಜನೆಯಡಿ 2 ಲಕ್ಷ ಐದು ಸಾವಿರದ 331 ಮನೆಗಳಿಗೆ ಅಡುಗೆ ಅನಿಲ ಸಂಪರ್ಕ ಕಲ್ಪಿಸಲಾಗಿದೆ. ಶ್ರಮಯೋಗಿ ಮಾನಧನ್ ಅಡಿ 7238 ಕಾರ್ಮಿಕರು ಸೌಲಭ್ಯ ಪಡೆದುಕೊಂಡಿದ್ದಾರೆ’ ಎಂದು ತಿಳಿಸಿದರು.
‘ಮುದ್ರಾಂಕ ಯೋಜನೆಯಡಿ ಎರಡು ಲಕ್ಷಕ್ಕೂ ಹೆಚ್ಚು ಮಂದಿಗೆ ಸಾಲ ಸೌಲಭ್ಯಗಳನ್ನು ನೀಡಲಾಗಿದೆ. ಲಕ್ಷಾಂತರ ರೈತರ ಖಾತೆಗಳಿಗೆ ಪ್ರಧಾನ ಮಂತ್ರಿ ಫಸಲ್ ಭೀಮ ಯೋಜನೆಯಡಿ ಹಣ ವರ್ಗಾವಣೆಯಾಗಿದೆ. ಹೈವೆ ನಿರ್ಮಾಣಕ್ಕೆ ಆರು ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಕೇಂದ್ರ ಸರ್ಕಾರದ ಇಷ್ಟೆಲ್ಲಾ ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಿಳಿಸಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದಿಂದ ಸ್ಪರ್ಧಿಸಿರುವ ಗೋವಿಂದ ಕಾರಂಜೋಳರನ್ನು ಗೆಲ್ಲಿಸಿಕೊಳ್ಳುವುದಾಗಿ’ ಹೇಳಿದರು.
ಕ್ಲಿಕ್ ಮಾಡಿ ಓದಿ: ಬಾಡೂಟ ಸೇವನೆ | 50ಕ್ಕೂ ಹೆಚ್ಚು ಜನ ಅಸ್ವಸ್ಥ
‘ಕೇಂದ್ರ ಸರ್ಕಾರ ದೇಶದ ಜನರ ಹಿತಕಾಯುವ ಕೆಲಸ ಮಾಡುತ್ತಿದ್ದು, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿನಃ ಕಾರಣ ಕೇಂದ್ರ ಮೇಲೆ ತಪ್ಪು ಹೊರಿಸುವ ಕೆಲಸ ಮಾಡುತ್ತಿರುವುದು ಸರಿಯಲ್ಲ. ರಾಜ್ಯದ ಜನರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡಬಾರದು’ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಿ.ಟಿ.ಸುರೇಶ್ ಸಿದ್ದಾಪುರ, ಸಂಪತ್, ನಗರಾಧ್ಯಕ್ಷ ನವೀನ್ ಚಾಲುಕ್ಯ, ವಕ್ತಾರ ನಾಗರಾಜ್ ಬೇದ್ರೆ, ಮಾಧ್ಯಮ ವಕ್ತಾರ ದಗ್ಗೆ ಶಿವಪ್ರಕಾಶ್, ತಿಪ್ಪೇಸ್ವಾಮಿ ಛಲವಾದಿ ಇದ್ದರು.