ಮುಖ್ಯ ಸುದ್ದಿ
ಜನವರಿ 23ಕ್ಕೆ ಚಿತ್ರದುರ್ಗ ಬಂದ್ | ಭದ್ರಾ ಮೇಲ್ದಂಡೆ ತ್ವರಿತ ಅನುಷ್ಠಾನಕ್ಕೆ ಆಗ್ರಹ | 20ಕ್ಕೂ ಹೆಚ್ಚು ಸಂಘಟನೆಗಳಿಂದ ಬೆಂಬಲ | ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಕರೆ
CHITRADURGA NEWS | 18 JANURARY 2024
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯನ್ನು ತ್ವರಿತಗತಿಯಲ್ಲಿ ಮುಗಿಸಲು ಒತ್ತಾಯಿಸಿ ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿಯಿಂದ ಜನವರಿ 23 ಮಂಗಳವಾರ ಚಿತ್ರದುರ್ಗ ಬಂದ್ ಕರೆ ಕೊಟ್ಟಿದೆ.
ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಅಧ್ಯಕ್ಷತೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಈ ಸಭೆಯಲ್ಲಿ 20 ಕ್ಕೂ ಹೆಚ್ಚು ಸಂಘಟನೆಗಳ ಮುಖ್ಯಸ್ಥರು ಭಾಗವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ಬಿ.ಎ.ಲಿಂಗಾರೆಡ್ಡಿ, ಭದ್ರಾ ಮೇಲ್ದಂಡೆಯ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಿ 5300 ಕೋಟಿ ರೂ. ನೆರವು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಚಿತ್ರದುರ್ಗಕ್ಕೆ ಬಂದಿದ್ದಾಗ ಹೇಳಿದ್ದರು. ಈ ಹೇಳಿಕೆ ನೀಡಿ ವರ್ಷ ಕಳೆಯುತ್ತಾ ಬಂದರೂ ಕೇಂದ್ರದಿಂದ ಅನುದಾನ ಬಿಡುಗಡೆ ಆಗಿಲ್ಲ. ಈಗ ಕೇಂದ್ರ ಸರ್ಕಾರ ಮತ್ತೊಂದು ಬಜೆಟ್ ಮಂಡಿಸಲು ಮುಂದಾಗಿದ್ದು ಕಳೆದ ಬಜೆಟ್ ಘೋಷಣೆ ಜಾರಿಯಾಗಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಮೊದಲು ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ಬಿಡುಗಡೆಗೊಳಿಸಿ
ಭದ್ರಾ ಮೇಲ್ದಂಡೆ ಯೋಜನೆ ವಿಚಾರಲ್ಲಿ ರಾಜ್ಯ ಸರ್ಕಾರ ಕೂಡಾ ಉದಾಸೀನ ತೋರಿದೆ. ಕೇಂದ್ರದ ಅನುದಾನ ನಿರೀಕ್ಷೆಯಲ್ಲಿ ತನ್ನ ಜವಾಬ್ದಾರಿ ಮರೆತಿದೆ. ಕಳೆದ ಒಂದು ವರ್ಷದಿಂದ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಭೂ ಸ್ವಾಧೀನದ ಸಮಸ್ಯೆ ಬಗೆ ಹರಿಸಿಲ್ಲ. ಬರೀ ಸುಳ್ಳುಗಳ ಹೇಳಿಕೊಂಡು ಕಾಲ ಹರಣ ಮಾಡುತ್ತಿದೆ ಎಂದು ದೂರಿದರು.
ಎಲ್ಲ ಅಭಿಪ್ರಾಯಗಳನ್ನು ಆಲಿಸಿದ ನಂತರ ಜನವರಿ 23 ಮಂಗಳವಾರ ಚಿತ್ರದುರ್ಗ ಬಂದ್ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ಸ್ವಯಂ ಪ್ರೇರಿತ ಬಂದ್ ಇದಾಗಿದ್ದು ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸೋಣ. ಎಲ್ಲ ಸಂಘಸಂಸ್ಥೆಗಳು, ಹೋಟೆಲ್ ಮಾಲೀಕರು, ಖಾಸಗಿ ಬಸ್ ಮಾಲೀಕರು, ವರ್ತಕರು ಸ್ವಯಂ ಪ್ರೇರಿತ ಬಂದ್ ನಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಳ್ಳಲು ಸಭೆ ತೀರ್ಮಾನಿಸಿತು.
ಇದನ್ನೂ ಓದಿ: ಡಿಕೆಶಿ ಅಧ್ಯಕ್ಷತೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಸಮನ್ವಯ ಸಮಿತಿ ಸಭೆ
ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ.ಸಿ.ಹೊರಕೇರಪ್ಪ, ತಾಲೂಕು ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಕಟ್ಟಡ ಕಾರ್ಮಿಕರ ಸಂಘದ ವೈ.ಕುಮಾರ್, ಹಮಾಲರ ಸಂಘದ ಅಧ್ಯಕ್ಷ ಬಿ.ಬಸವರಾಜಪ್ಪ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಸುರೇಶ್ ಬಾಬು, ಎಐಟಿಯುಸಿ ರಾಜಪ್ಪ, ಸತ್ಯಕೀರ್ತಿ, ಜನಶಕ್ತಿ ಸಂಘಟನೆಯ ಷಫಿವುಲ್ಲಾ, ಪುರೋμÉೂೀತ್ತಮ, ಕರವೇ ಸಂಘಟನೆಯ ಜಿಲ್ಲಾಧ್ಯಕ್ಷರುಗಳಾದ ರಮೇಶ್, ಎಸ್.ಕೆ.ಮಹಂತೇಶ್,ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಶಿವಕುಮಾರ್, ಲಕ್ಷ್ಮಿಕಾಂತ, ಲಿಂಗಾವರಟ್ಟಿ ಇ.ಎನ್.ಲಕ್ಷ್ಮೀಕಾಂತ್, ಹಿರಿಯ ಸಂಗೀತ ಕಲಾವಿದ ಎಸ್.ವಿ.ಗುರುಮೂರ್ತಿ, ಕೋನಸಾಗರ ಮಂಜುನಾಥ್, ರೈತ ಸಂಘದ ಉಪಾಧ್ಯಕ್ಷ ಮಲ್ಲಾಪುರ ತಿಪ್ಪೇಸ್ವಾಮಿ, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಮಲ್ಲಿಕಾರ್ಜುನ, ಲಕ್ಷ್ಮಿಸಾಗರ ಚೌಡಪ್ಪ,ಅನಂತರಾಜ್, ಮಹೇಂದ್ರಕುಮಾರ್, ಸುಧಿ ಡಿ.ಎಸ್ ಹಳ್ಳಿ, ಸಮೀವುಲ್ಲ, ಎಸ್.ಕೆ.ಕುಮಾರಸ್ವಾಮಿ, ಬ್ಯಾಡರಹಳ್ಳಿ ನಿತ್ಯಶ್ರೀ, ಕಾಂಗ್ರೆಸ್ ಮುಖಂಡರಾದ ಸೈಯದ್ ಖುದ್ದೂಸ್, ಪ್ರಕಾಶ್ ರಾಮನಾಯ್ಕ, ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಸಮೀವುಲ್ಲಾ ಷರೀಫ್, ಜಿ.ಆರ್.ಪಾಪಯ್ಯ, ಬ್ಲಾಕ್ ಕಾಂಗ್ರೆಸ್ ನ ಡಾ.ರಹಮತುಲ್ಲಾ, ಜಿಪಂ ಮಾಜಿ ಅಧ್ಯಕ್ಷ ರವಿಕುಮಾರ್, ಕೋಗುಂಡೆ ರವಿಕುಮಾರ್, ಹಂಪಯ್ಯನಮಾಳಿಗೆ ರೇವಣ್ಣ, ಕೃಷ್ಣಪ್ಪ ಸಭೆಯಲ್ಲಿದ್ದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಕೊಟ್ಟು ಸಾಕಾಗಿದೆ. ಪ್ರತಿಭಟನೆ ಮೂಲಕ ಎರಡೂ ಸರ್ಕಾರಗಳಿಗೆ ಎಚ್ಚರಿಕೆ ಸಂದೇಶ ರವಾನೆ ಮಾಡಬೇಕಿದೆ. ಚಿತ್ರದುರ್ಗ ಬಂದ್ ಇದಕ್ಕೂ ಸೂಕ್ತ ಪ್ರತಿಕ್ರಿಯೆಯಾಗಿದೆ. ಈ ನಿಟ್ಟಿನಲ್ಲಿ ನಿರ್ಣಯ ಕೈಗೊಳ್ಳೋಣ ಎಂದರು.
| ಬೇಡರೆಡ್ಡಿಹಳ್ಳಿ ಬಸವರೆಡ್ಡಿ,ರೈತ ಸಂಘದ ರಾಜ್ಯ
***
ಪ್ರತಿಭಟನೆ ನಡೆಸಿ ಭಾಷಣ ಮಾಡುವುದರಿಂದ ಉಪಯೋಗವಾಗುವುದಿಲ್ಲ. ಮೊದಲು ಚಿತ್ರದುರ್ಗ ಬಂದ್ ಮಾಡುವ. ನಂತರ ಎಲ್ಲ ತಾಲೂಕುಗಳಿಗೆ ವಿಸ್ತರಣೆ ಮಾಡೋಣ.
|ಬಿ.ಕಾಂತರಾಜ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ
***
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಚಿತ್ರದುರ್ಗ ಜಿಲ್ಲೆಯ ಜನರಿಗೆ ದ್ರೋಹವೆಸಗಿವೆ. ರಾಷ್ಟ್ರೀಯ ಯೋಜನೆ ಮಾಡುವುದಾಗಿ ಹೇಳಿ ಕೇಂದ್ರ ಸರ್ಕಾರ ಮಂಕುಬೂದಿ ಎರಚಿವೆ. ಎತ್ತಿನ ಹೊಳೆ ಯೋಜನೆ ಗಂಭೀರವಾಗಿ ತೆಗೆದುಕೊಂಡು ಕಾಮಗಾರಿ ಚುರುಕುಗೊಳಿಸಿರುವ ರಾಜ್ಯಸರ್ಕಾರ ಭದ್ರಾ ಮೇಲ್ದಂಡೆ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ.
|ಜೆ.ಯಾದವರೆಡ್ಡಿ, ಸ್ವರಾಜ್ ಇಂಡಿಯಾದ ಮುಖ್ಯಸ್ಥ
***
ಚಿತ್ರದುರ್ಗ ಜಿಲ್ಲೆಯ ರೈತಾಪಿ ಜನರ ಅಳಿವು ಉಳಿವಿನ ಪ್ರಶ್ನೆ ಇದಾಗಿದ್ದು ಸರ್ಕಾರಗಳ ಎಚ್ಚರಿಸಲೇ ಬೇಕಾಗಿದೆ.
|ವೈ.ತಿಪ್ಪೇಸ್ವಾಮಿ, ವಕೀಲರ ಸಂಘದ ಅಧ್ಯಕ್ಷ
***
ಜನವರಿ 28 ರಂದು ಸಿಎಂ ಚಿತ್ರದುರ್ಗಕ್ಕೆ ಬರಲಿದ್ದು ಮೊದಲ ಹಂತದಲ್ಲಿ ಅವರಿಗೆ ಮನವಿ ಮಾಡಿಕೊಳ್ಳೋಣ. ನಂತರದಲ್ಲಿ ಹೋರಾಟದ ರೂಪುರೇಷೆ ಸಿದ್ಧಪಡಿಸೋಣ.
| ಎಂ.ಕೆ.ತಾಜ್‍ಪೀರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ