ಚಳ್ಳಕೆರೆ
ದುರ್ಗದ ಭೂಗರ್ಭದಲ್ಲಿ ಬಹು ಬೇಡಿಕೆಯ ನಿಕ್ಷೇಪ ಪತ್ತೆ; ಪುರ್ಲಹಳ್ಳಿಯಲ್ಲಿ ಅಕ್ರಮ ಗಣಿಗಾರಿಕೆ; ಅಧಿಕಾರಿಗಳ ದಾಳಿ
ಚಿತ್ರದುರ್ಗನ್ಯೂಸ್.ಕಾಂ
ಏಳು ಸುತ್ತಿನ ಕೋಟೆ ನಾಡು ಚಿತ್ರದುರ್ಗದ ಭೂಗರ್ಭ ಚಿನ್ನ, ಬೆಳ್ಳಿ ಮತ್ತು ತಾಮ್ರದ ನಿಕ್ಷೇಪದ ಒಡಲಾಗಿದೆ. ಇಂಗಳದಾಳ್‌ನ ಚಿನ್ನದ ಗಣಿ ಇದೀಗ ಇತಿಹಾಸದ ಮಡಿಲು ಸೇರಿದೆ. ಆದರೆ ಈ ನೆಲ ಬಹು ಬೇಡಿಕೆಯ ಖನಿಜದ ತೊಟ್ಟಿಲಾಗಿದೆ ಎಂಬುದು ಪದೇ ಪದೇ ಸಾಬೀತಾಗುತ್ತಿದೆ.
ಇದನ್ನೂ ಓದಿ: ಚಿತ್ರದುರ್ಗ– ತುಮಕೂರು ನಡುವೆ ಏರ್‌ಪೋರ್ಟ್; ಬೆಂಗಳೂರು ಸಮೀಪ ಎರಡನೇ ವಿಮಾನ ನಿಲ್ದಾಣಕ್ಕೆ ಸರ್ಕಾರದ ಚಿಂತನೆ
ಚಳ್ಳಕೆರೆ ತಾಲ್ಲೂಕು ಪರಶುರಾಂಪುರ ಹೋಬಳಿ ಸಮೀಪದ ಪುರ್ಲಹಳ್ಳಿ ಗ್ರಾಮದ ಬಳಿ ಅತೀ ವಿರಳಾತಿ ವಿರಳವಾದ ಬಹು ಬೇಡಿಕೆಯ ಕ್ವಾರೆಂಡಮ್ ಬ್ಲೂ ಸಫರಿನ್ (ಕ್ವಾರೆಂಡಮ್ ಖನಿಜ) ಪತ್ತೆಯಾಗಿದೆ. ಈ ಖನಿಜ ಕರ್ನಾಟಕದಲ್ಲಿ ಸಿಗುವುದು ತುಂಬಾ ವಿರಳ ಎನ್ನುತ್ತಾರೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು.
ಬಂಗಾರ ಹಾಗೂ ಅಲಂಕಾರಿಕ ವಸ್ತುಗಳಿಗೆ ಬಳಸುವ ಕೊರಾಡಂ ಖನಿಜವನ್ನು ಪಾಲಿಶ್ ಮಾಡಿ ಬಳಸಲಾಗುತ್ತದೆ. ಇದರ ಬೆಲೆ ಒಂದು ಕೆಜಿಗೆ ₹ 6,000 ದಿಂದ 9,000 ತನಕ ಇದೆ. ಆದರೆ ಈ ಖನಿಜವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಗಮನಕ್ಕೆ ತಾರದೆ ಅಕ್ರಮವಾಗಿ ಗಣಿಗಾರಿಕೆ ನಡೆಸಲಾಗುತ್ತಿತ್ತು. ಅಕ್ರಮ ಗಣಿಗಾರಿಕೆ ಮಾಹಿತಿ ಮೇರೆಗೆ ಗಣಿ ಮತ್ತು ಭೂವಿಜ್ಞಾನಿ ಅಧಿಕಾರಿಗಳ ತಂಡ ಪುರ್ಲಹಳ್ಳಿ ಗ್ರಾಮದ ಹೊರವಲಯದ ಜಮೀನಿನ ಮೇಲೆ ದಾಳಿ ನಡೆಸಿದೆ.
ಇದನ್ನೂ ಓದಿ: ಈ ಸುದ್ದಿ ಓದಿ ನೀವೇಬೆಚ್ಚಿ ಬೀಳ್ತಿರಿ.. ಕೋಟೆನಾಡಲ್ಲಿ ಏರುತ್ತಿದೆ ನಾಯಿ ಕಡಿತದ ಗ್ರಾಫ್
ಪರಶುರಾಂಪುರ ಪೋಲೀಸರು ಭಾನುವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿನೆ ನಡೆಸಿದಾಗ ಜಮೀನು ಮಾಲೀಕರಾದ ರಾಘವೇಂದ್ರ, ರಾಜೇಶ ಸೇರಿ ಐದು ಜನರ ಹೆಸರಿಗೆ ಜಂಟಿ ಇರುವ ಪಟ್ಟಾ ಜಮೀನಿನಲ್ಲಿ ಎರಡ್ಮೂರು ವಾರಗಳಿಂದ ಅಕ್ರಮ ಗಣಿಗಾರಿಕೆ ನಡೆಸುತ್ತಿರುವುದು ಖಚಿತವಾಗಿದೆ. ಇಟಾಚಿ ಬಳಸಿ ಕೆಲಸ ಮಾಡುತ್ತಿರುವುದು ಇದೇ ವೇಳೆ ಬೆಳಕಿಗೆ ಬಂದಿದೆ.
ಪೊಲೀಸರು ತಕ್ಷಣ ಕೆಲಸವನ್ನು ಸ್ಥಗಿತಗೊಳಿಸುವಂತೆ ಜಮೀನು ಮಾಲೀಕರಿಗೆ ತಿಳಿಸಿ ಗಣಿ ಮತ್ತು ಭೂವಿಜ್ಞಾನಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸೋಮವಾರ ಬೆಳಿಗ್ಗೆ ಗಣಿ ಮತ್ತು ಭೂವಿಜ್ಞಾನಿ ಅಧಿಕಾರಿಗಳಾದ ರೂಪಾ ಹಾಗೂ ಏಂಜಿನಿಯರ್ ಮುರುಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ: ಛೇ…ಮೂಕ ಪ್ರಾಣಿಗಳ ಮೇಲೆ ಇದೆಂಥಾ ದ್ವೇಷ..
ಪರಿಶೀಲನೆ ವೇಳೆ ಜಮೀನು ಮಾಲೀಕರಾದ ರಾಘವೇಂದ್ರ ಇತರರು ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೇ ಅಕ್ರಮ ಗಣಿಗಾರಿಕೆ ನಡೆಸಲು ಮಡಿಕೇರಿ ಮೂಲದ ರಾಶಿಕ್ ಬಾಷಾ ಮತ್ತಿತರಿಗೆ ಕುಮ್ಮಕ್ಕು ನೀಡಿರುವುದು ಬೆಳಕಿಗೆ ಬಂದಿದೆ. ಪರಿಶೀಲನೆ ವೇಳೆ ಸುಮಾರು 10 ರಿಂದ 15 ಕೆಜಿಯಷ್ಟು ಕ್ವಾರೆಂಡಮ್ ನಿಕ್ಷೇಪ, ಒಂದು ಇಟಾಚಿ, ಒಂದು ಓಮಿನಿ ವ್ಯಾನ್ ವಶಕ್ಕೆ ಪಡೆದಿದ್ದಾರೆ.
ಪರಶುರಾಂಪುರ ಪೊಲೀಸ್ ಠಾಣೆ ಪಿಎಸ್‌ಐ ಎಂ.ಕೆ.ಬಸವರಾಜ, ಕಂದಾಯ ನಿರೀಕ್ಷಕ ರಾಜೇಶ್, ಗ್ರಾಮಲೆಕ್ಕಾಧಿಕಾರಿ ಸರಸ್ವತಿ ಮೂಗಣ್ಣನವರ್ ಹಾಗೂ ಗ್ರಾಮದ ಕೆಲವರು ಹಾಜರಿದ್ದರು.
ಹತ್ತು ವರ್ಷದ ಹಿಂದೆ ಚಿತ್ರದುರ್ಗ ತಾಲ್ಲೂಕು ಗುಡ್ಡದ ರಂಗವ್ವನ ಹಳ್ಳಿಯಲ್ಲಿ ಅಗಾಧವಾದ ಚಿನ್ನ, ಬೆಳ್ಳಿ ಮತ್ತು ತಾಮ್ರದ ನಿಕ್ಷೇಪ ಪತ್ತೆಯಾಗಿದ್ದನ್ನು ಅಂದಿನ ಗಣಿ ಮತ್ತು ಭೂವಿಜ್ಞಾನ ಖಾತೆ ಕೇಂದ್ರ ಸಚಿವರಾಗಿದ್ದ ವಿ.ಮುನಿಯಪ್ಪ ಬಹಿರಂಗಗೊಳಿಸಿದ್ದರು. ರಾಜ್ಯದ ಇತರೆಡೆಗಳಿಗೆ ಹೋಲಿಸಿದಲ್ಲಿ ಇಲ್ಲಿನ ಚಿನ್ನದ ಅದಿರಿನಲ್ಲಿ ತಲಾ 1 ಮೆಟ್ರಿಕ್ ಟನ್‌ಗೆ 3ರಿಂದ 4 ಗ್ರಾಂ ಚಿನ್ನ ದೊರೆಯುವುದೆಂದು ತಜ್ಞರು ಲೆಕ್ಕ ಹಾಕಿದ್ದರು. ಆದರೆ, ಈ ನಿಕ್ಷೇಪದಿಂದ ಕೇವಲ ಚಿನ್ನ ಒಂದನ್ನೇ ತೆಗೆದರೆ, ಅದು ಲಾಭದಾಯಕವಲ್ಲ. ಬದಲಾಗಿ ಮೂರೂ ಲೋಹಗಳನ್ನು ಬೇರ್ಪಡಿಸಿ ಹೊರ ತೆಗೆಯಬೇಕು. ಇದಕ್ಕಾಗಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾಗಳಿಂದ ತಂತ್ರಜ್ಞಾನವನ್ನು ಆಮದು ಮಾಡಿಕೊಳ್ಳಬೇಕು. ಇದಕ್ಕೆ ಭಾರಿ ಬಂಡವಾಳ ಬೇಕು ಎಂದು ಸಚಿವರು ಆ ವೇಳೆ ತಿಳಿಸಿದ್ದರು.