Connect with us

ಹೊಸ ವರ್ಷದಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆ | ಸಚಿವ ಮಧು ಬಂಗಾರಪ್ಪ ಭರವಸೆ

ಶಿಕ್ಷಣ ಸಚಿವ ಮಧು ಬಂಗಾರಪ್ಪ

ಮುಖ್ಯ ಸುದ್ದಿ

ಹೊಸ ವರ್ಷದಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆ | ಸಚಿವ ಮಧು ಬಂಗಾರಪ್ಪ ಭರವಸೆ

ಚಿತ್ರದುರ್ಗ ನ್ಯೂಸ್.ಕಾಂ: ಹೊಸ ವರ್ಷ 2024ರಲ್ಲಿ ರಾಜ್ಯದಲ್ಲಿ 500 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ತೆರೆಯುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ಚಿತ್ರದುರ್ಗ ತಾಲೂಕು ಸೀಬಾರದ ವಿಶ್ವ ಮಾನವ ವಸತಿ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದರು.

ಈ ವೇಳೆ ಮುಂದಿನ ಮೂರು ವರ್ಷದಲ್ಲಿ 3 ಸಾವಿರ ಕರ್ನಾಟಕ ಪಬ್ಲಿಕ್ ಶಾಲೆ ತೆರೆಯಲು ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ ಸುಮಾರು 6 ಸಾವಿರ ಗ್ರಾಮ ಪಂಚಾಯಿತಿಗಳಿದ್ದು, 2 ಗ್ರಾಮ ಪಂಚಾಯಿತಿಗಳಿಗೆ ಒಂದರಂತೆ ಒಟ್ಟು 3 ಸಾವಿರ ಕೆಪಿಎಸ್ ಶಾಲೆಗಳನ್ನು ತೆರೆಯುವ ಗುರಿ ಹಾಕಿಕೊಂಡಿದ್ದೇವೆ ಎಂದರು.

ಕನ್ನಡ ಮಾಧ್ಯಮ ಕಡ್ಡಾಯ, ಇದರ ಜತೆಯಲ್ಲಿ ಆಂಗ್ಲ ಮಾಧ್ಯಮ, ಸಂಗೀತ, ಚಿತ್ರಕಲೆ, ದೈಹಿಕ ಶಿಕ್ಷಣ ಸೇರಿದಂತೆ ಮತ್ತಿತರ ಅಗತ್ಯ ಮೂಲ ಸೌಲಭ್ಯ ಒದಗಿಸಿ ಒಂದೇ ಆವರಣದಲ್ಲಿ ಎಲ್‍ಕೆಜಿ, ಯುಕೆಜಿ ಯಿಂದ ಹಿಡಿದು 12ನೇ ತರಗತಿವರೆಗೆ ಉತ್ತಮ ಶಿಕ್ಷಣ ಒದಗಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ: ರಾಯಲ್ ಎನ್ ಫೀಲ್ಡ್-ಆಟೋ ನಡುವೆ ಅಪಘಾತ | ಸ್ಥಳದಲ್ಲೇ ಇಬ್ಬರ ದುರ್ಮರಣ

ಶಾಲೆಗಳಲ್ಲಿ ಶೌಚಾಲಯ ಸ್ವಚ್ಚತೆಯ ನಿರ್ವಹಣೆ ಕುರಿತಂತೆ ಈಗಾಗಲೇ ಒಂದು ಯೋಜನೆ, ವಿಧಾನ ರೂಪಿಸಿ ಆದೇಶ ಹೊರಡಿಸಲಾಗಿದೆ. ಸ್ವಚ್ಛತೆ ನಿರ್ವಹಣೆಗೆ ಶಾಲೆಗಳಿಗೆ ಸಿಬ್ಬಂಧಿ ನೀಡಲು ಸಾಧ್ಯವಾಗದಿದ್ದರೆ ಈಗ ಮೀಸಲಿರುವ ಅನುದಾನವನ್ನು ದ್ವಿಗುಣಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗಾಗಲೇ ಆದೇಶಿಸಿದ್ದಾರೆ.

ಮಕ್ಕಳಿಂದ ಶೌಚಾಲಯ ಸ್ವಚ್ಚತೆ ಮಾಡಿಸುವುದು ತಪ್ಪು, ಪೆನ್ನು ಹಿಡಿಯುವ ಮಕ್ಕಳ ಕೈಗೆ ಕಸಪೊರಕೆ ಕೊಡುವುದು ಸರಿಯಲ್ಲ, ಇದು ಅಪರಾಧ ಆಗುತ್ತದೆ. ಸವಲತ್ತುಗಳನ್ನು ಕೊಡುವಲ್ಲಿ ನಾವು ಕೂಡ ಹಿಂದೆ ಇದ್ದೇವೆ. ಮಕ್ಕಳ ಸಂಖ್ಯೆ ಹಾಗೂ ಶೌಚಾಲಯಗಳ ಸಂಖ್ಯೆಗೆ ಅನುಗುಣವಾಗಿ ಅನುದಾನ ಮೀಸಲಿಡಲು ವ್ಯವಸ್ಥಿತ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version