ಮುಖ್ಯ ಸುದ್ದಿ
ನಾಯಕನಹಟ್ಟಿ ಜಾತ್ರೆಗೆ ಏನೆಲ್ಲಾ ವ್ಯವಸ್ಥೆ ಆಗಿದೆ ನೋಡಿ..
CHITRADURGA NEWS | 14 MARCH 2025
ಚಿತ್ರದುರ್ಗ: ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಅಗತ್ಯ ಮೂಲಭೂತ ಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ, ಆರೋಗ್ಯ ಇಲಾಖೆ, ಪಟ್ಟಣ ಪಂಚಾಯಿತಿ, ಲೋಕೋಪಯೋಗಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಂದ ಅಗತ್ಯ ಸಿದ್ಧತೆ ಕಾರ್ಯ ಕೈಗೊಳ್ಳಲಾಗಿದೆ.
Also Read: ಭಕ್ತ ಸಾಗರದ ನಡುವೆ ಸಾಗಿದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮ ರಥೋತ್ಸವ | ಆಗಸದಲ್ಲಿ ಗರುಢ ಪ್ರದಕ್ಷಿಣೆ
ನಾಯಕನಹಟ್ಟಿ ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆ ಡಾಂಬರೀಕಣ, ಪಾದಗಟ್ಟೆ ರಸ್ತೆ ಅಗಲೀಕರಣ, ಚರಂಡಿ ಸ್ವಚ್ಛಗೊಳಿಸಲಾಗಿದೆ. ಅನಾವಶ್ಯಕ ಮುಳ್ಳುಗಳ ಗಿಡ ತೆರವುಗೊಳಿಸಲಾಗಿದೆ. ಪಟ್ಟಣದ ಎಲ್ಲ ವಾರ್ಡ್‍ಗಳಿಗೆ ನಿರಂತರವಾಗಿ ನೀರು ಸರಬರಾಜು, ಬೆಸ್ಕಾಂ ವತಿಯಿಂದ ನಿರಂತರ ವಿದ್ಯುತ್ ಪೂರೈಕೆ ಮಾಡುವ ಮೂಲಕ ಬೀದಿದೀಪ, ಹೈಮಾಸ್ಟ್ ದೀಪಗಳ ವ್ಯವಸ್ಥೆ ಮಾಡಲಾಗಿದೆ.
ತೇರುಬೀದಿ ಹಾಗೂ ಪಾದಗಟ್ಟೆ ರಸ್ತೆಯ ಶಿಥಿಲ ವಿದ್ಯುತ್ ಕಂಬಗಳನ್ನು ತೆರವು ಗೊಳಿಸಿ, ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸಲಾಗಿದೆ.
ಜಾತ್ರೆಗೆ ಬರುವ ಭಕ್ತರಿಗೆ ಪಟ್ಟಣದ ಹಲವು ಕಡೆಗಳಲ್ಲಿ ಶೌಚಾಲಯ ವ್ಯವಸ್ಥೆ, ಬಳಸಲು ನೀರಿನ ತೊಟ್ಟಿಗಳು, ಕೊಳವೆ ಬಾವಿಗಳಿಂದ ನಿರಂತರವಾಗಿ ಟ್ಯಾಂಕರ್‍ಗಳ ಮೂಲಕ ನೀರು ಸರಬರಾಜು ವ್ಯವಸ್ಥೆ, ಚರಂಡಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಫಿನಾಯಿಲ್, ಸೊಳ್ಳೆಗಳ ನಿಯಂತ್ರಣಕ್ಕೆ ಧೂಮೀಕರಣ ವ್ಯವಸ್ಥೆ ಹಮ್ಮಿಕೊಳ್ಳಲಾಗಿದೆ. ಜಾತ್ರೆಗೆ ಬರುವ ಭಕ್ತರಿಗೆ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಬ್ಯಾನರ್‍ಗಳ ಅಳವಡಿಕೆ ಸೇರಿದಂತೆ ಅಗತ್ಯ ಸಿದ್ಧತೆಗಳನ್ನು ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯಿಂದ ಕೈಗೊಳ್ಳಲಾಗಿದೆ.
Also Read: ನಾಯಕನಹಟ್ಟಿ ಜಾತ್ರೆಗೆ ಕ್ಷಣಗಣನೆ | ಮಾ.16 ರಂದು ದೊಡ್ಡ ರಥೋತ್ಸವ
ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಅನುಕೂಲವಾಗುವಂತೆ 4 ಕಡೆ ತಾತ್ಕಾಲಿಕ ಕ್ಲಿನಿಕ್, 4 ಮೊಬೈಲ್ ಆಂಬುಲೆನ್ಸ್, ನೀರಿನ ಶುದ್ಧತೆ ಹಾಗೂ ಆಹಾರ ತಪಾಸಣೆ ಬಗ್ಗೆ ಪರೀಕ್ಷೆ ಇತರೆ ಕೆಲಸ ಕಾರ್ಯಗಳಿಗೆ ಒಟ್ಟು 150 ಜನ ಅಧಿಕಾರಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಜಾತ್ರೆ ಸಮಯದಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯ ಕಾಪಾಡುವ ಸಲುವಾಗಿ ಚಳ್ಳಕೆರೆ ನಗರಸಭೆ ಮತ್ತು ಮೊಳಕಾಲ್ಮುರು ಪಟ್ಟಣ ಪಂಚಾಯಿತಿಯಿಂದ ಪೌರಕಾರ್ಮಿಕರನ್ನು ನಿಯೋಜಿಸಲಾಗಿದ್ದು, ಸ್ವಚ್ಚತಾ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಲು ಕ್ರಮ ವಹಿಸಲಾಗಿದೆ.
ಸುಗಮ ಸಂಚಾರಕ್ಕೆ ವ್ಯವಸ್ಥೆ:
ಜಾತ್ರೆಯಲ್ಲಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಪಟ್ಟಣದ ಹಲವು ಕಡೆಗಳಲ್ಲಿ ಬಸ್‍ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ. ದಾವಣಗೆರೆ-ಜಗಳೂರು- ಹೊಸಪೇಟೆ ಕಡೆಯಿಂದ ಬರುವ ವಾಹನಗಳಿಗೆ ಪಟ್ಟಣದ ಗಂಗಯ್ಯನಹಟ್ಟಿ ಬಳಿ.
Also Read: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
ಬಳ್ಳಾರಿ-ಅನಂತಪುರ- ರಾಯದುರ್ಗ- ಕಲ್ಯಾಣದುರ್ಗ ಕಡೆಯಿಂದ ಬರುವ ವಾಹನಗಳಿಗೆ ತಳಕು ರಸ್ತೆಯ ಮದರಸಾದ ಬಳಿ. ಬೆಂಗಳೂರು- ತುಮಕೂರು- ಚಳ್ಳಕೆರೆ- ಚಿತ್ರದುರ್ಗ ಮಾರ್ಗದಿಂದ ಬರುವವರಿಗೆ ಮನಮೈನಹಟ್ಟಿ ಏಕಾಂತೇಶ್ವರ ದೇವಾಲಯದ ಬಳಿ ಬಸ್‍ನಿಲ್ದಾಣಗಳನ್ನು ತೆರೆಯಲಾಗಿದೆ.
200 ಜಾತ್ರಾ ವಿಶೇಷ ವಾಹನಗಳ ಕಾರ್ಯಾಚರಣೆ :
ಶ್ರೀ ಕ್ಷೇತ್ರ ನಾಯಕನಹಟ್ಟಿಯಲ್ಲಿ ಮಾರ್ಚ್ 15 ರಿಂದ 17 ರವರೆಗೆ ಜರುಗಲಿರುವ ಶ್ರೀಗುರುತಿಪ್ಪೇರುದ್ರಸ್ವಾಮಿ ರಥೋತ್ಸವ ಅಂಗವಾಗಿ ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗದ ವತಿಯಿಂದ ಚಿತ್ರದುರ್ಗ, ಚಳ್ಳಕೆರೆ, ಹೊಸದುರ್ಗ, ಪಾವಗಡ ಘಟಕಗಳಿಂದ ಒಟ್ಟು 200 ಜಾತ್ರಾ ವಿಶೇಷ ವಾಹನಗಳ ಕಾರ್ಯಾಚರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ವಿಶೇಷ ವಾಹನಗಳ ಕಾರ್ಯಾಚರಣೆ ಮಾರ್ಗ ಇಂತಿದೆ. ಚಿತ್ರದುರ್ಗ-ನಾಯಕನಟ್ಟಿ ವಯಾ ಬೆಳಗಟ್ಟ, ಹಾಯ್ಕಲ್, ಚಳ್ಳಕೆರೆ. ಚಳ್ಳಕೆರೆ-ನಾಯಕನಹಟ್ಟಿ ವಯಾ ನೇರ್ಲಗುಂಟೆ. ಹಿರಿಯೂರು-ನಾಯಕನಹಟ್ಟಿ ವಯಾ ಸಾಣಿಕೆರೆ-ಚಳ್ಳಕೆರೆ-ನೇರ್ಲಗುಂಟೆ. ನಾಯಕನಹಟ್ಟಿ-ಪರಶುರಾಂಪು ವಯಾ ಚಳ್ಳಕೆರೆ ಮಾರ್ಗದಲ್ಲಿ ಸಂಚರಿಸಲಿವೆ.
Also Read: 3ನೇ ತರಗತಿ ಬಾಲಕಿ ಮೇಲೆ 56 ವರ್ಷದ ವ್ಯಕ್ತಿಯಿಂದ ಅತ್ಯಾಚಾರ
ಪ್ರಯಾಣಿಕರ ಜನದಟ್ಟಣೆಗನುಗುಣವಾಗಿ ಹೆಚ್ಚುವರಿ ವಾಹನ ಕಾರ್ಯಾಚರಣೆ ಮಾಡಲಾಗುವುದು. ಭಕ್ತಾಧಿಗಳು ವಿಶೇಷ ವಾಹನಗಳ ಸದುಪಯೋಗವನ್ನು ಉತ್ತಮ ರೀತಿಯಿಂದ ಪಡೆದುಕೊಳ್ಳಬೇಕು ಎಂದು ರಾಜ್ಯ ರಸ್ತೆ ಸಾರಿಗೆ ನಿಗಮ ಚಿತ್ರದುರ್ಗ ವಿಭಾಗ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಪ್ರಾಣಿ ಬಲಿ ನಿಷೇಧ:
ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ ಅನ್ವಯ ದೇವಸ್ಥಾನ ಹಾಗೂ ದೇವಸ್ಥಾನದ ಅವರಣದಲ್ಲಿ ದೇವರ ಹೆಸರಿನಲ್ಲಿ ಪ್ರಾಣಿ ಬಲಿ ನೀಡುವುದು ಕಾನೂನಿಗೆ ವಿರುದ್ದವಾಗಿರುತ್ತದೆ.
ಮಾರ್ಚ್ 16 ರಂದು ನಾಯಕನಹಟ್ಟಿಯ ಶ್ರೀಗುರು ತಿಪ್ಪೆರುದ್ರಸ್ವಾಮಿ ದೊಡ್ಡ ರಥೋತ್ಸವ ಜರುಗಲಿದ್ದು, ಇದಕ್ಕೆ ಪೂರಕವಾಗಿ ಮಾರ್ಚ್ 09 ರಿಂದ 17 ರವರೆಗೆ ಜಾತ್ರ ನಡೆಯಲಿದೆ.
Also Read: ಭೀಕರ ಅಪಘಾತ | ಹಿರಿಯೂರಿನ ಸಿದ್ಧರಾಜು ಮೃತ
ಈ ಜಾತ್ರೆಯ ಸಂದರ್ಭದಲ್ಲಿ ದೇವಸ್ಥಾನದ ಅವರಣ ಹಾಗೂ ಸುತ್ತಮುತ್ತಲಿನ ಪ್ರದೇಶದೊಳಗೆ ಭಕ್ತಾಧಿಗಳು, ಸಾರ್ವಜನಿಕರು ದೇವರ ಹೆಸರಿನಲ್ಲಿ ಯಾವುದೇ ರೀತಿಯ ಪ್ರಾಣಿ ಬಲಿ ನೀಡುವುದನ್ನು ಮತ್ತು ಇತರೆ ಪ್ರಾಣಿಗಳನ್ನು ತೆಗೆದುಕೊಂಡು ಬರುವುದು ಹಾಗೂ ಮಾರಕಾಸ್ತ್ರಗಳನ್ನು ತರುವುದು, ಇತರೆ ಅನಾಗರೀಕ ಪದ್ಧತಿಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿ ಟಿ. ವೆಂಕಟೇಶ ಆದೇಶ ಹೊರಡಿಸಿದ್ದಾರೆ.
ಈ ಸಂಬಂಧವಾಗಿ ಪ್ರಾಣಿ ಬಲಿ ನಿಷೇಧ ಪ್ರಚಾರಕ್ಕಾಗಿ ಅಗತ್ಯವಾಗಿ ಬೇಕಾದ ಕರಪತ್ರ, ಬ್ಯಾನರ್‍ಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಈಗಾಗಲೇ ಅಗತ್ಯವಿರುವ 8 ಕಡೆ ಚೆಕ್‍ಪೋಸ್ಟ್‍ಗಳನ್ನು ನಿರ್ಮಿಸಲಾಗಿದೆ.
ಮದ್ಯಪಾನ ನಿಷೇಧ:
ಜಾತ್ರೆಯ ಆವರಣದಿಂದ ಮೂರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾರ್ಚ್ 16 ರಿಂದ 17 ರವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ನಿಷೇಧದ ಪೂರ್ವದಲ್ಲಿ ಗ್ರಾಮದೊಳಗೆ ಮದ್ಯ ತರದಂತೆ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಅಬಕಾರಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ರಥಕ್ಕೆ ರೂ.2.50 ಕೋಟಿ ವಿಮೆ:
ನಾಯಕನಹಟ್ಟಿ ಜಾತ್ರೆಯ ಕೇಂದ್ರ ಬಿಂದು ದೊಡ್ಡ ರಥವಾಗಿದ್ದು, ಪ್ರತಿ ವರ್ಷದಂತೆ ರಥ ಮತ್ತು ಬಾಬುದಾರರು ಹಾಗೂ ಭಕ್ತಾಧಿಗಳಿಗೆ ಅನುಕೂಲವಾಗುವಂತೆ ಅಪಘಾತ ವಿಮೆಯನ್ನು ಮಾಡಿಸಲಾಗಿದ್ದು, ಗುರು ತಿಪ್ಪೇರುದ್ರಸ್ವಾಮಿ ರಥಕ್ಕೆ ರೂ.2.50 ಕೋಟಿ ಮೊತ್ತದ ವಿಮಾ ಸೌಲಭ್ಯಗಳನ್ನು ಒದಗಿಸಲಾಗಿದೆ.
Also Read: ಜಿಲ್ಲೆಯ ಜನರಿಗೆ ಎಚ್ಚರಿಕೆ | ಮಿತಿಮೀರಿದ ತಾಪಮಾನ | ಈ ಸಲಹೆ ಪಾಲಿಸಿ..
ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮಾರ್ಗದರ್ಶನ ಪಡೆದು ದೊಡ್ಡರಥಕ್ಕೆ ಮತ್ತು ಚಿಕ್ಕರಥಕ್ಕೆ ದುರಸ್ಥಿ ಮಾಡಿಸಿ, ಸರ್ವೀಸಿಂಗ್ ಮಾಡಿ, ರಥೋತ್ಸವಕ್ಕೆ ಸಿದ್ಧಪಡಿಸಲಾಗಿದೆ. ಮಧ್ಯ ಕರ್ನಾಟಕದ ಭಾಗದ ಅತೀ ಎತ್ತರದ ಸುಮಾರು 200 ಟನ್ ತೂಕವಿರುವ ಈ ರಥವು 5 ಚಕ್ರಗಳನ್ನು ಹೊಂದಿದೆ. ರಥಕ್ಕೆ ಕಳೆದ ಎರಡು ದಿನಗಳಿಂದ ಬಣ್ಣಬಣ್ಣದ ಬಾವುಟಗಳನ್ನು ಅಳವಡಿಸುವ ಕಾರ್ಯ ಕೈಗೊಳ್ಳಲಾಗಿದ್ದು, ರಥವನ್ನು ಎಳೆಯುವ 2 ಅಡಿ ಸುತ್ತಳತೆ ಇರುವ ನೂತನ ಮಿಣಿ (ಹಗ್ಗ)ಯನ್ನು ಪರೀಕ್ಷಿಸಲಾಗಿದೆ. ಆ ಮೂಲಕ ಜಾತ್ರೆಗೆ ರಥವನ್ನು ಎಲ್ಲಾ ಹಂತದಲ್ಲೂ ಸಿದ್ಧಗೊಳಿಸಲಾಗಿದೆ.
ನಾಯಕನಹಟ್ಟಿ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಯಾವುದೇ ತರಹದ ಕುಂದುಕೊರತೆ ಉಂಟಾಗದಂತೆ ಅಗತ್ಯವಾದ ಎಲ್ಲಾ ಸಿದ್ಧತೆಯನ್ನು ಜಿಲ್ಲಾಡಳಿತ ಕೈಗೊಂಡಿದೆ.