ಚಿತ್ರದುರ್ಗ: ಮಳೆಯಾಶ್ರಿತ ಪ್ರದೇಶದಲ್ಲಿ ಆದಾಯೋತ್ಪನ್ನ ಮಾರ್ಗಗಳ ಮೂಲಕ ಕೃಷಿ ಮತ್ತು ಕೃಷಿ ಸಂಬಂಧಿತ ವಲಯಗಳ ಅಭಿವೃದ್ಧಿ ಮತ್ತು ಪುನಶ್ಚೇತನಗೊಳಿಸುವ ಯೋಜನೆಯಡಿ ಚಿತ್ರದುರ್ಗ ಜಿಲ್ಲೆಯಾದ್ಯಂತ ಸುಮಾರು 2,000 ಹಸುಗಳನ್ನು ರೂ.4.18 ಕೋಟಿಗೂ ಅಧಿಕ ವೆಚ್ಚದಲ್ಲಿ ನೀಡಲಾಗಿದ್ದು, ಜಿಲ್ಲೆಯ 60 ಗ್ರಾಮಗಳಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಚಳ್ಳಕೆರೆ ತಾಲ್ಲೂಕಿನ ರೇಣುಕಾಪುರ ಗ್ರಾಮದಲ್ಲಿ ಮಂಗಳವಾರ ಜಲಾನಯನ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಮಳೆಯಾಶ್ರಿತ ಪ್ರದೇಶದಲ್ಲಿ ಆದಾಯೋತ್ಪನ್ನ ಮಾರ್ಗಗಳ ಮೂಲಕ ಕೃಷಿ ಮತ್ತು ಕೃಷಿ ಸಂಬಂಧಿತ ವಲಯಗಳ ಅಭಿವೃದ್ಧಿ ಮತ್ತು ಪುನಶ್ಚೇತನಗೊಳಿಸುವ ಯೋಜನೆಯಡಿ ರೈತ ಫಲಾನುಭವಿಗಳೊಂದಿಗೆ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸರ್ಕಾರವು ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಹಾಲು ಉತ್ಪಾದಕರಿಗೆ ರೂ.5 ಸಹಾಯಧನ, ಹಸು ಖರೀದಿಗೆ ರೂ.20 ಸಾವಿರ ಸಹಾಯಧನ, ಮೇವು ಕಟಾವು ಯಂತ್ರ, ಗೊಬ್ಬರ, ಬಿತ್ತನೆ ಬೀಜ ಸಬ್ಸಿಡಿ ಸೇರಿದಂತೆ ಹಲವಾರು ಸೌಲಭ್ಯಗಳನ್ನು ರೈತರಿಗೆ ನೀಡಲಾಗುತ್ತಿದೆ ಎಂದು ಹೇಳಿದರು.
ಪ್ರತಿ ಮನೆಗೂ ಗ್ಯಾರಂಟಿ ಯೋಜನೆ ತಲುಪಿದೆ:
ಗ್ಯಾರಂಟಿ ಯೋಜನೆಗಳಿಂದ ಪ್ರತಿ ಒಂದು ತಾಲ್ಲೂಕಿಗೆ ಸುಮಾರು 200 ರಿಂದ 230 ಕೋಟಿಗೂ ಅಧಿಕ ಹಣ ಯೋಜನೆಗಳ ಫಲಾನುಭವಿಗಳಿಗೆ ನೇರವಾಗಿ ಪಾವತಿಯಾಗಿದೆ. ಗ್ರಾಮೀಣ ಭಾಗದ ಪ್ರತಿ ಮನೆ ಮನೆಯಲ್ಲಿಯೂ ಸಹ ಶೇ.100ರಷ್ಟು ಗ್ಯಾರಂಟಿ ಯೋಜನೆಗಳಿಂದ ಅನುಕೂಲ ಪಡೆದಿದ್ದಾರೆ ಎಂದು ಕೃಷಿ ಸಚಿವರು ತಿಳಿಸಿದರು.
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಮಂಜುನಾಥ್ ಮಾತನಾಡಿ, ಕಳೆದ ವರ್ಷ ಪರಶುರಾಂಪುರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕೃಷಿ ಸಚಿವರು ಚಿತ್ರದುರ್ಗ ಜಿಲ್ಲೆಗೆ ಜಲಾನಯನ ಕಾರ್ಯಕ್ರಮಕ್ಕೆ ಹೆಚ್ಚಿನ ಅನುದಾನ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರ ಫಲವಾಗಿ ಕಳೆದ ವರ್ಷ 2023-24ನೇ ಸಾಲಿನಲ್ಲಿ ರೂ.84 ಲಕ್ಷ ಹಾಗೂ 2024-25ನೇ ಸಾಲಿನಲ್ಲಿ ಇದುವರೆಗೂ ರೂ.4.18 ಕೋಟಿ ಅನುದಾನವನ್ನು ಸಚಿವರು ಜಿಲ್ಲೆಗೆ ನೀಡಿದ್ದಾರೆ.
ಮಳೆಯಾಶ್ರಿತ ಪ್ರದೇಶದಲ್ಲಿ ಆದಾಯೋತ್ಪನ್ನ ಮಾರ್ಗಗಳ ಮೂಲಕ ಕೃಷಿ ಮತ್ತು ಕೃಷಿ ಸಂಬಂಧಿತ ವಲಯಗಳ ಅಭಿವೃದ್ಧಿ ಮತ್ತು ಪುನಶ್ಚೇತನಗೊಳಿಸುವ ಯೋಜನೆಯಡಿ ಸುಮಾರು 2,000 ಹಸುಗಳನ್ನು ನೀಡುವ ಮೂಲಕ ಜಿಲ್ಲೆಯ 60 ಗ್ರಾಮಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ರೇಣುಕಾಪುರ ಗ್ರಾಮದಲ್ಲಿಯೇ 200 ಹಸು ಹಾಗೂ ಎಮ್ಮೆಗಳನ್ನು ನೀಡಲಾಗಿದೆ. ಇದರಿಂದ ಸುಮಾರು 839 ಕುಟುಂಬಗಳು ಹೈನುಗಾರಿಕೆಯನ್ನು ಕೈಗೊಂಡಿದ್ದು, ಆರ್ಥಿಕ ಸಬಲತೆ ಕಂಡುಕೊಂಡಿದ್ದಾರೆ ಎಂದರು.
ಈ ಯೋಜನೆ ಅನುಷ್ಠಾನವಾದ ನಂತರದಲ್ಲಿ ರೇಣುಕಾಪುರ ಹಾಲು ಉತ್ಪಾದಕರ ಸಂಘಕ್ಕೆ ಪ್ರತಿ ದಿನವೂ ಸುಮಾರು 1,200 ಲೀಟರ್ ನಿಂದ 1300 ಲೀಟರ್ ಹಾಲು ದೊರೆಯುತ್ತಿದೆ. ಹೈನುಗಾರಿಕೆ ಮೂಲಕ ಈ ಗ್ರಾಮಕ್ಕೆ ಶಕ್ತಿ ತುಂಬಿದವರು ಕೃಷಿ ಸಚಿವರು. ರೇಣುಕಾಪುರ ಗ್ರಾಮದ ರೈತರು ವಾರ್ಷಿಕವಾಗಿ ಸುಮಾರು ರೂ.2 ಕೋಟಿ ರೂಪಾಯಿಗೂ ಹೆಚ್ಚಿನ ಆರ್ಥಿಕಾಭಿವೃದ್ಧಿ ಚಟುವಟಿಕೆ ಕೈಗೊಂಡಿದ್ದಾರೆ.
ಯೋಜನೆ ಅನುಷ್ಠಾನಗೊಂಡ ಜಿಲ್ಲೆಯ 60 ಗ್ರಾಮಗಳಲ್ಲಿ ಸುಮಾರು ರೂ.24 ಕೋಟಿ ವರೆಗೂ ಆದಾಯ ಉತ್ಪನ್ನವಾಗುವ ಕೆಲಸ ಆಗಿದೆ. ಹೈನುಗಾರಿಕೆ ಅಭಿವೃದ್ಧಿಯಿಂದಾಗಿ ಹೊಲ, ತೋಟಗಳಿಗೆ ಗೊಬ್ಬರ ಹಾಕುವುದರಿಂದ ಮಣ್ಣಿನ ಉತ್ಪಾದನಾ ಶಕ್ತಿಯು ಈ ಕಾರ್ಯಕ್ರಮದ ಮೂಲಕ ಆಗಿದೆ. ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಕೆಲಸಗಳು ಸುಸ್ಥಿರವಾಗಿ ನಡೆಯಲು ಕಾರಣ ಆಗಿದೆ ಎಂದರು.
ಇದೇ ಸಂದರ್ಭದಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿ ಆದಾಯೋತ್ಪನ್ನ ಮಾರ್ಗಗಳ ಮೂಲಕ ಕೃಷಿ ಮತ್ತು ಕೃಷಿ ಸಂಬಂಧಿತ ವಲಯಗಳ ಅಭಿವೃದ್ಧಿ ಮತ್ತು ಪುನಶ್ಚೇತನಗೊಳಿಸುವ ಯೋಜನೆಯಡಿ ಫಲಾನುಭವಿಗಳಿಗೆ ರೂ.20 ಸಾವಿರ ಗಳ ಸಹಾಯಧನದ ಚೆಕ್ ಅನ್ನು ಕೃಷಿ ಸಚಿವರು ಸಾಂಕೇತಿಕವಾಗಿ ವಿತರಿಸಿದರು.
ರೈತರಿಗೆ ಪೂರಕ ಹೈನುಗಾರಿಕೆ:
ರೈತರಿಗೆ ಹೈನುಗಾರಿಕೆ ಪೂರಕವಾಗಿದ್ದು, ಕುಟುಂಬದ ಖರ್ಚು ನಿರ್ವಹಣೆ, ಆರ್ಥಿಕವಾಗಿ ಸದೃಢವಾಗಲು ಜಲಾನಯನ ಇಲಾಖೆಯ ಮಳೆ ಆಶ್ರಿತ ಪ್ರದೇಶದಲ್ಲಿ ಆದಾಯೋತ್ಪನ್ನ ಮಾರ್ಗಗಳ ಮೂಲಕ ಕೃಷಿ ಸಂಬಂಧಿತ ವಲಯಗಳ ಅಭಿವೃದ್ಧಿ ಮತ್ತು ಪುನಶ್ಚೇತನಗೊಳಿಸುವ ಯೋಜನೆ ಸಹಾಯಕವಾಗಿದ್ದು, ಈ ಯೋಜನೆಯಿಂದ ರೇಣುಕಾಪುರದ ಗ್ರಾಮದ ಚಿತ್ರಣ ಬದಲಾಗಿದೆ.
ಈ ಯೋಜನೆ ಮೂಲಕ ಜಲಾನಯನ ಇಲಾಖೆ ವತಿಯಿಂದ ರೇಣುಕಾಪುರ ಗ್ರಾಮದಲ್ಲಿ ಈಗ ಹೈನುಗಾರಿಕೆ ಪ್ರಮುಖ ಆದಾಯ ಮೂಲವಾಗಿದೆ. ಹಾಲು, ಗೊಬ್ಬರಗಳ ಮಾರಾಟದಿಂದ ಗ್ರಾಮಸ್ಥರ ಆರ್ಥಿಕತೆ ವೃದ್ಧಿಸಿದೆ. ರೈತರ ಆತ್ಮ ವಿಶ್ವಾಸ ಹೆಚ್ಚಿಸಿದೆ. ಭೂಮಿಯ ಫಲವತ್ತತೆ ಕೂಡ ಹೆಚ್ಚಿದೆ. ರೇಣುಕಾಪುರಕ್ಕೆ ಯೋಜನೆ ಮೂಲಕ ವರ ತಂದ ಕೃಷಿ ಸಚಿವರು ಎಂದು ಗ್ರಾಮದ ಫಲಾನುಭವಿಗಳಾದ ಅಂಬರೀಶ್ ಹಾಗೂ ನರಸಿಂಹಮೂರ್ತಿ ಅಭಿಮಾನದಿಂದ ನುಡಿದರು.
ಈ ಯೋಜನೆಗೆ ಮುನ್ನ ರೇಣುಕಾಪುರ ಗ್ರಾಮ ಕೇವಲ ಬರಡು ನೆಲವಾಗಿತ್ತು. ಆದರೆ ಜಲಾನಯನ ಇಲಾಖೆ ಪಶು ಸಂಗೋಪನೆಗೆ ಪ್ರೋತ್ಸಾಹ ದೊರೆತ ನಂತರ ರೈತರ ಮನೆಯ ಪರಿಸರ, ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಬದಲಾಗಿದೆ. ಮಕ್ಕಳ ಶಿಕ್ಷಣ ಹಾಗೂ ಆಸ್ಪತ್ರೆ ಚಿಕಿತ್ಸೆಗೆ ಯಾರ ಮುಂದೆಯೂ ಕೈ ಚಾಚುವಂತಿಲ್ಲ. ನೆಮ್ಮದಿ ಹೆಚ್ಚಿದೆ ಎಂದು ರೇಣುಕಾಪುರ ಗ್ರಾಮದ ಬಸವರಾಜ್ ಹೇಳಿದರು.
ಕಾರ್ಯಕ್ರಮದಲ್ಲಿ ಸಾವಯವ ಮಿಷನ್ ಮಾಜಿ ಅಧ್ಯಕ್ಷ ಸೋಮಶೇಖರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಉಪಾಧ್ಯಕ್ಷ ನಾಗೇಶ್ ರೆಡ್ಡಿ, ಕೆಡಿಪಿ ಸದಸ್ಯರಾದ ಪಾಲಯ್ಯ, ವಿಶ್ವನಾಥರೆಡ್ಡಿ, ಜಲಾನಯನ ಇಲಾಖೆ ಆಯುಕ್ತ ಮಹೇಶ್ ಬಿ.ಶಿರೂರ, ನಿರ್ದೇಶಕ ಮೊಹಮ್ಮದ ಫರ್ವೇಜ್ ಬಂಥನಾಳ, ಪಶು ಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ.ಕುಮಾರ್, ಸಹಾಯಕ ನಿರ್ದೇಶಕ ರೇವಣ್ಣ, ಉಪಕೃಷಿ ನಿರ್ದೇಶಕ ಪ್ರಭಾಕರ್, ರೈತ ಮುಖಂಡರಾದ ರೆಡ್ಡಿಹಳ್ಳಿ ವೀರಣ್ಣ ಸೇರಿದಂತೆ ರೇಣುಕಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ರೈತರು ಇದ್ದರು.