ಮುಖ್ಯ ಸುದ್ದಿ
ಲೋಕಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಲು 2 ಡಜನ್ ಆಕಾಂಕ್ಷಿಗಳು | ಯಾರೆಲ್ಲಾ ಅರ್ಜಿ ಸಲ್ಲಿಸಿದ್ದಾರೆ ಗೊತ್ತಾ
ಚಿತ್ರದುರ್ಗ ನ್ಯೂಸ್.ಕಾಂ: ಲೋಕಸಭೆ ಚುನಾವಣೆಗೆ ತಯಾರಿ ಆರಂಭಿಸಿರುವ ಕಾಂಗ್ರೆಸ್ ಪಾಳೆಯದಲ್ಲಿ ರಣೋತ್ಸಾಹ ಮೂಡಿದೆ. ಅದರ ಛಾಪು ಇಂದು ನಡೆದ ಪೂರ್ವಭಾವಿ ಸಭೆಯಲ್ಲಿ ಕಾಣಿಸುತ್ತಿತ್ತು.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವೀಕ್ಷಕರಾಗಿ ನೇಮಕವಾಗಿರುವ ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಮೊದಲ ಬಾರಿಗೆ ಜಿಲ್ಲೆಗೆ ಆಗಮಿಸಿ, ಪೂರ್ವಭಾವಿ ಸಭೆ ನಡೆಸಿ, ಆಕಾಂಕ್ಷಿಗಳಿಂದ ಅರ್ಜಿ ಪಡೆದುಕೊಂಡರು.
ಇದನ್ನೂ ಓದಿ: ಒನಕೆ ಓಬವ್ವ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಜಮಾವಣೆ
ವೀಕ್ಷಕರಾಗಿರುವ ಎಚ್.ಸಿ.ಮಹಾದೇವಪ್ಪ ಅವರ ಎದುರು ಶಕ್ತಿ ಪ್ರದರ್ಶನ ಮಾಡಲು ಎಲ್ಲ ಆಕಾಂಕ್ಷಿಗಳು ನೂರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಕಚೇರಿ ಕಡೆಗೆ ಹೆಜ್ಜೆ ಹಾಕಿದ್ದರು.
- ಡಾ.ಎಚ್.ಸಿ.ಮಹಾದೇವಪ್ಪ ನೇತೃತ್ವದಲ್ಲಿ ಪೂರ್ವಭಾವಿ ಸಭೆ
- ಶಕ್ತಿ ಪ್ರದರ್ಶನ ಮಾಡಿದ ಎಂಪಿ ಟಿಕೇಟ್ ಆಕಾಂಕ್ಷಿಗಳು
- ಬರೋಬ್ಬರಿ 2 ಡಜನ್ ಮೀರಿದ ಆಕಾಂಕ್ಷಿಗಳ ಪಟ್ಟಿ
ಆರಂಭದಲ್ಲೇ ಮಾತನಾಡಿದ ಡಾ.ಎಚ್.ಸಿ.ಮಹಾದೇವಪ್ಪ, ನಮ್ಮ ಪಕ್ಷದ ಮುಂದಿರುವ ಸವಾಲು ಮುಂದಿನ ಲೋಕಸಭೆ ಚುನಾವಣೆ. ಮತ್ತೊಮ್ಮೆ ಸರ್ಕಾರ ಜನರ ಆಶೀರ್ವಾದ ಪಡೆಯಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಕರ್ತರು ಒಗ್ಗಟ್ಟಿನಿಂದ ಚುನಾವಣೆ ಎದುರಿಸಬೇಕು ಎಂದರು.
ನಾನು ವೀಕ್ಷಕನಾಗಿ ಇಲ್ಲಿಗೆ ಆಗಮಿಸಿದ್ದೇನೆ. ಎಲ್ಲ ಆಕಾಂಕ್ಷಿಗಳು, ಅವರ ಬೆಂಬಲಿಗರು, ಶಾಸಕರು, ಸಚಿವರು, ಪಕ್ಷದ ಜಿಲ್ಲೆ, ತಾಲೂಕು ಪದಾಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹಿಸಿ ಗೆಲ್ಲುವುದನ್ನು ಮಾತ್ರ ಮಾನದಂಡವನ್ನಾಗಿ ಇರಿಸಿಕೊಂಡು ವರಿಷ್ಠರಿಗೆ ವರದಿ ಸಲ್ಲಿಸುತ್ತೇನೆ ಯಾರ ಪರ ಅಥವಾ ವಿರೋಧವಾಗಿ ನಾನಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಒಂದು ಕೆಜಿ ರೈಸ್‍ನ ಎಷ್ಟು ಜನ ಊಟ ಮಾಡ್ತಾರೆ ಹೇಳಿ, ಅಧಿಕಾರಿಗೆ ಡಿಸಿ ಕ್ಲಾಸ್
ಆನಂತರ ಲೋಕಸಭೆ ಟಿಕೇಟ್ ಆಕಾಂಕ್ಷಿಗಳು ಒಬ್ಬೊಬ್ಬರಾಗಿ ಬಂದು ಹೆಸರು ಹೇಳಿ ಪರಿಚಯ ಮಾಡಿಕೊಂಡು, ಪಕ್ಷದಲ್ಲಿ ಕೆಲಸ ಮಾಡಿರುವುದನ್ನು ತಿಳಿಸಿ ಇಂಥ ಕಾರಣಕ್ಕೆ ನಾನು ಆಕಾಂಕ್ಷಿ ಎಂದು ಹೇಳುತ್ತಾ ಹೋದರು.
ಯಾರೆಲ್ಲಾ ಲೋಕಸಭೆಗೆ ಕೈ ಟಿಕೇಟ್ ಆಕಾಂಕ್ಷಿಗಳು ಗೊತ್ತಾ;
ಕಾಂಗ್ರೆಸ್‍ನಿಂದ ಲೋಕಸಭೆ ಟಿಕೇಟ್ ಬಯಸಿ ವೀಕ್ಷಕರಾದ ಡಾ.ಎಚ್.ಸಿ.ಮಹಾದೇವಪ್ಪ ಬಳಿ ಬರೋಬ್ಬರಿ 2 ಡಜನ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ.
2009 ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಜೆ.ಜೆ.ಹಟ್ಟಿ ಡಾ.ತಿಪ್ಪೇಸ್ವಾಮಿ, ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ಅಧ್ಯಕ್ಷ ಜಿ.ಎಸ್.ಮಂಜುನಾಥ್, ವಿನಯ್ ತಿಮ್ಮಾಪುರ, ಪಾವಗಡದ ಎಚ್.ಕೆ.ಕುಮಾರಸ್ವಾಮಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ರಾಮಪ್ಪ, ಸುನೀಲ್ ಕುಮಾರ್, ಪಿ.ರಘು, ಹನುಮಂತಪ್ಪ ಗೋಡೆಮನೆ, ಬಾಬಾ ಸಾಹೇಬ್, ಹಿರಿಯೂರು ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಎಂಎಸ್‍ಐಎಲ್ ಮಾಜಿ ಅಧ್ಯಕ್ಷ ಡಿ.ಬಸವರಾಜು, ಲಿಡ್ಕರ್ ಮಾಜಿ ಅಧ್ಯಕ್ಷ ಓ.ಶಂಕರ್, ಚೌಳೂರು ಲೋಕೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿ.ಎನ್.ಮೈಲಾರಪ್ಪ, ಜಯಲಕ್ಷ್ಮೀ, ಮಲ್ಲೇಶಪ್ಪ, ಎಚ್.ಸಿ.ನಿರಂಜನಮೂರ್ತಿ, ಜಿ.ಎಚ್.ಮೋಹನ್ ಸೇರಿದಂತೆ ಒಟ್ಟು 24 ಜನ ಟಿಕೇಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ.
ಜಿಲ್ಲೆ, ರಾಜ್ಯದ ಕಾಂಗ್ರೆಸ್ ವರಿಷ್ಠರು ಈ ಪಟ್ಟಿಯನ್ನು ಮತ್ತೊಮ್ಮೆ ಪರಿಶೀಲಿಸಿ ಹೈಕಮಾಂಡ್ ಅಂಗಳಕ್ಕೆ ಸಲ್ಲಿಕೆ ಮಾಡಲಿದ್ದಾರೆ.