ಮುಖ್ಯ ಸುದ್ದಿ
ಮುರುಘಾಮಠದಲ್ಲಿ ಫ.ಗು.ಹಳಕಟ್ಟಿಯವರ 144ನೇ ಜಯಂತಿ ಆಚರಣೆ
CHITRADURGA NEWS | 03 JULY 2024
ಚಿತ್ರದುರ್ಗ: ನಗರದ ಮುರುಘಾ ಮಠದಲ್ಲಿ ಫ.ಗು.ಹಳಕಟ್ಟಿಯವರ 144ನೇ ಜಯಂತಿ ಅಂಗವಾಗಿ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆ ಆಚರಿಸಲಾಯಿತು.
ಇದನ್ನೂ ಓದಿ: ಗಂಗಾ ಕಲ್ಯಾಣ ಯೋಜನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿ | ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ
ಮುರುಘಾ ಮಠ ಹಾಗೂ ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಅವರು, ಫ.ಗು.ಹಳಕಟ್ಟಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ,
ವ್ಯಕ್ತಿಯ ಕ್ರಿಯಾಶೀಲತೆಗೆ ಮೌಲ್ಯವನ್ನು ತಂದುಕೊಟ್ಟ ಫ.ಗು.ಹಳಕಟ್ಟಿಯವರು ವಚನ ಪರಂಪರೆಯ ಉಳುವಿಗಾಗಿ ಬದುಕನ್ನೇ ಸವೆಸಿದರು.
ಹಳಕಟ್ಟಿಯವರು ಶತಮಾನಗಳಿಂದ ಮುಚ್ಚಿಹೋಗಿದ್ದ ವಚನ ತಾಳೆಗರಿಗಳನ್ನು ಸಂಗ್ರಹಿಸಿ ವಚನ ಶಾಸ್ತ್ರ ಭಾಗ-1, ವಚನ ಶಾಸ್ತ್ರ ಸಾರ ಭಾಗ-2 ಪುಸ್ತಕಗಳನ್ನು ಮುದ್ರಣ ಮಾಡಿಸಿದರು. ಇಂದು ನಾಡಿನ ಹಲವು ಮಠಗಳಿಗೆ ಸಾಂಸ್ಕೃತಿಕವಾಗಿ ಧರ್ಮಗುರುಗಳಿಗೆ ತತ್ವಪ್ರಸಾರದ ಕಾಯಕ ಕೊಟ್ಟವರು ಫ.ಗು.ಹಳಕಟ್ಟಿಯವರು.
ಇದನ್ನೂ ಓದಿ: ವಿದ್ಯಾರ್ಥಿ ನಿಲಯ ಪ್ರವೇಶಾತಿ ವಿಳಂಬ | ಎಬಿವಿಪಿ ಜಿಲ್ಲಾ ಘಟಕ ಪ್ರತಿಭಟನೆ
ವಚನಗಳ ಪರಿಭಾಷೆಯನ್ನು ಅರ್ಥೈಸಲು ವಚನಗಳ ಪಾರಿಭಾಷಿಕ ಶಬ್ಧಕೋಶವನ್ನು ರಚಿಸಿದರು. ನಮ್ಮ ಅನುಕೂಲಕ್ಕೆ ತಕ್ಕಂತೆ ವಚನಗಳನ್ನು ಬಳಕೆ ಮಾಡುತ್ತೇವೆ. ಆಚರಣೆಗೆ ಬಾರದ ಆದರ್ಶಗಳನ್ನು ಬೌದ್ಧಿಕ ಮಟ್ಟದಲ್ಲಿ ಉಪದೇಶ ಮಾಡುವುದು ವ್ಯರ್ಥ ಶ್ರಮವೆನಿಸಲಿದೆ ಎಂದರು.
ಹಳಕಟ್ಟಿಯವರ ವಚನ ಕೃಷಿ ಅಸಮಾನ್ಯವಾದುದು. ಅವರದು ನಾಡಿನಲ್ಲಿ ಬಲು ಅಪರೂಪದ ವ್ಯಕ್ತಿತ್ವ. ತ್ಯಾಗ, ಪರಿಶ್ರಮ, ನಿರಂತರ ಅಧ್ಯಯನ, ವಚನಗಳ ರಕ್ಷಣೆ, ಅವುಗಳ ಮುದ್ರಣ, ಸಂಪನ್ಮೂಲಗಳ ಕ್ರೂಢೀಕರಣಕ್ಕೆ ಅವರು ಪಟ್ಟ ಶ್ರಮಕ್ಕೆ ನಾವು ತಲೆಬಾಗಲೇಬೇಕು ಎಂದು ಹೇಳಿದರು.
ಶ್ರೀ ಬಸವಮಹಾಂತ ಸ್ವಾಮಿಗಳು ಮಾತನಾಡಿ, ಫ.ಗು. ಹಳಕಟ್ಟಿಯವರು ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಕೋಟಿ ಕೋಟಿ ಹಣ ಸಂಪಾದಿಸಬಹುದಿತ್ತು. ಆದರೆ ಹಾಗೆ ಮಾಡದೆ ಕೋಟಿ ಕೋಟಿ ವಚನಗಳನ್ನು ಸಂಪಾದಿಸಿದರು. ನಮ್ಮ ಸ್ವಂತ ಮನೆಯನ್ನು ಮಾರಿ ವಚನಗಳನ್ನು ಮುದ್ರಿಸಿದವರು ಎಂದರು.
ಇದನ್ನೂ ಓದಿ: ಅಗತ್ಯ ವಸ್ತುಗಳ ಬೆಲೆ ಏರಿಕೆ | ಬಿಜೆಪಿ ರೈತ ಮೋರ್ಚಾದಿಂದ ಎತ್ತಿನ ಬಂಡಿ ಏರಿ ಪ್ರತಿಭಟನೆ
ಶ್ರೀ ತಿಪ್ಪೇರುದ್ರಸ್ವಾಮಿಗಳು ಮಾತನಾಡಿ, ವಚನಗಳು ಸಿಗದೇ ಹೋಗಿದ್ದರೆ ಕನ್ನಡ ಸಾಹಿತ್ಯ ಬರಡಾಗುತ್ತಿತ್ತು. ವಿಶ್ವ ಸಾಹಿತ್ಯಕ್ಕೆ ಮುಕುಟ ಅಂದರೆ ವಚನ ಸಾಹಿತ್ಯ. ಅನೇಕ ದಾರ್ಶನಿಕರು ಧರ್ಮಗುರುಗಳು ಉತ್ತಮ ಸಂದೇಶಗಳನ್ನು ಕೊಟ್ಟಿದ್ದಾರೆ. ಇವೆಲ್ಲದರ ಸತ್ವದ ಹಿನ್ನೆಲೆ ಅಂದರೆ ವಚನಸಾಹಿತ್ಯ. ಶ್ರೀಮಠವೂ ಸಹ ವಚನ ಸಾಹಿತ್ಯದ ಬೆಳವಣಿಗೆಗೆ ಸಾಕಷ್ಟು ಶ್ರಮಿಸುತ್ತಿದೆ ಎಂದರು.
ಈ ವೇಳೆ ಶ್ರೀ ಬಸವಲಿಂಗ ಸ್ವಾಮಿಗಳು, ಶ್ರೀ ಶಿವಾನಂದ ಸ್ವಾಮಿಗಳು ಮಾತನಾಡಿದರು.