ಕ್ರೈಂ ಸುದ್ದಿ
ಮೊಬೈಲ್ ಒಟಿಪಿ ಕೇಳಿ 1.61 ಲಕ್ಷ ರೂ. ಎಗರಿಸಿದ ಸೈಬರ್ ಖದೀಮ
CHITRADURGA NEWS | 16 FEBRUARY 2024
ಚಿತ್ರದುರ್ಗ: ಅಪರಿಚಿತ ಕರೆಗಳಿಗೆ ನಿಮ್ಮ ವೈಯಕ್ತಿಕ ವಿವರ ಕೊಡಬೇಕು. ಯಾವುದೇ ಬ್ಯಾಂಕಿನಿಂದಲೂ ಕರೆ ಮಾಡಿ ನಿಮ್ಮ ಮೊಬೈಲ್‍ಗೆ ಬರುವ ಒಟಿಪಿ ಸಂಖ್ಯೆ ಕೇಳುವುದಿಲ್ಲ ಎಂದು ಎಷ್ಟೇ ಪ್ರಚಾರ ಮಾಡಿದ್ದರೂ, ಜನ ವಂಚನೆಗೆ ಒಳಗಾಗುವುದು ಮಾತ್ರ ನಿಂತಿಲ್ಲ.
ದುಡಿದು ತಿನ್ನಲಾರದ ಖದೀಮರು ವಂಚನೆಗೆ ಬೇರೆ ಬೇರೆ ದಾರಿಗಳನ್ನು ಹುಡುಕುತ್ತಿರುತ್ತಾರೆ. ಅದಕ್ಕೆ ಸಾಕಷ್ಟು ಜನ ಅಮಾಯಕರು ಬೆವರು ಸುರಿಸಿ ದುಡಿದ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: ಹಿರಿಯೂರು ಜನತೆಗೆ ಗುಡ್‍ನ್ಯೂಸ್
ಇಂಥದ್ದೊಂದು ಪ್ರಕರಣ ಗುರುವಾರ ಚಿತ್ರದುರ್ಗ ನಗರದ ಸೈಬರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಚಿತ್ರದುರ್ಗ ತಾಲೂಕು ಸಿದ್ದರಾಪುರ ಗ್ರಾಮದ ಪ್ರಕಾಶ್ ಎಂಬುವವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಪೋನ್ ಮಾಡಿ, ಕೆನರಾ ಬ್ಯಾಂಕಿನಿಂದ ಮ್ಯಾನೇಜರ್ ಮಾತನಾಡುತ್ತಿದ್ದೇನೆ, ನಿಮ್ಮ ಬ್ಯಾಂಕ್ ಖಾತೆ ಬ್ಲಾಕ್ ಆಗುತ್ತಿದೆ. ಕೆವೈಸಿ ಅಪ್ಡೇಟ್ ಮಾಡಬೇಕು ಎಂದು ಹೇಳಿದ್ದಾನೆ.
ಇದನ್ನು ನಂಬಿದ ಪ್ರಕಾಶ್ ಆತ ಕೇಳಿದ ಮಾಹಿತಿಯನ್ನು ಪೋನಿನಲ್ಲಿ ಕೊಟ್ಟಿದ್ದಾರೆ. ಆನಂತರ ನಿಮ್ಮ ಮೊಬೈಲಿಗೆ ಒಂದು ಒಟಿಪಿ ಬಂದಿದೆ ಅದನ್ನು ಹೇಳಿ ಎಂದು ಕೇಳಿದ್ದಾರೆ.
ಒಟಿಪಿ ಸಂಖ್ಯೆ ಹೇಳಿದ ಮರು ಕ್ಷಣದಲ್ಲಿ ಪ್ರಕಾಶ್ ಅವರ ಬ್ಯಾಂಕ್ ಖಾತೆಯಿಂದ 1.61 ಲಕ್ಷ ರೂ.ಗಳನ್ನು ಎಗರಿಸಿದ್ದಾನೆ.
ಇದನ್ನೂ ಓದಿ: ರೈತರ ಜೊತೆ ಕುಳಿತು ಕಷ್ಟ ಸುಖ ಆಲಿಸಿದ ಎಸ್ಪಿ
ಆನ್‍ಲೈನ್ ವಂಚನೆಗೆ ಒಳಗಾದ ಪ್ರಕಾಶ್ ಚಿತ್ರುದುರ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಯಾವುದೇ ಬ್ಯಾಂಕ್ ಅಧಿಕಾರಿ ಅಥವಾ ಎಂಥದ್ದೇ ಸಂದರ್ಭವಿದ್ದರೂ ಮೊಬೈಲಿಗೆ ಬರುವ ಒಟಿಪಿ ಅಥವಾ ನಿಮ್ಮ ವೈಯಕ್ತಿಕ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಹಂಚಿಕೊಂಡರೆ ಈ ರೀತಿಯ ವಂಚನೆಗಳಾಗುತ್ತವೆ ಎಂದು ಬ್ಯಾಂಕುಗಳು ಪ್ರಚಾರ ಮಾಡಿದರೂ ಜನ ಅದನ್ನು ಗಮನಿಸದ ಕಾರಣ ಮೋಸ ಹೋಗುವ ಸಾಧ್ಯತೆಗಳು ಹೆಚ್ಚಾಗುತ್ತಿವೆ.