Connect with us

    ಕೈ ತಪ್ಪಿದ ಬಿಜೆಪಿ ಟಿಕೆಟ್ | ಪ್ರಬಲ ಆಕಾಂಕ್ಷಿ ರಘುಚಂದನ್‌ ಅಸಮಾಧಾನ | ನಾಳೆ ಬೆಂಬಲಿಗರ ಸಭೆ

    ಮುಖ್ಯ ಸುದ್ದಿ

    ಕೈ ತಪ್ಪಿದ ಬಿಜೆಪಿ ಟಿಕೆಟ್ | ಪ್ರಬಲ ಆಕಾಂಕ್ಷಿ ರಘುಚಂದನ್‌ ಅಸಮಾಧಾನ | ನಾಳೆ ಬೆಂಬಲಿಗರ ಸಭೆ

    CHITRADURGA NEWS | 28 MARCH 2024
    ಚಿತ್ರದುರ್ಗ: ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಕೈ ತಪ್ಪಿದ್ದ ಬೆನ್ನಲ್ಲೇ ಪ್ರಬಲ ಆಕಾಂಕ್ಷಿ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ಎಂ.ಸಿ.ರಘುಚಂದನ್‌ ಅಸಮಾಧಾನ ಹೊರ ಹಾಕಿದ್ದಾರೆ.

    ‘ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ಅವರನ್ನು ಚಿತ್ರದುರ್ಗ ಕ್ಷೇತ್ರದಿಂದ ಕಣಕ್ಕಿಳಿಸುವ ಮೂಲಕ ಚಿತ್ರದುರ್ಗದ ಸ್ವಾಭಿಮಾನವನ್ನು ಪಕ್ಷ ಕೆಣಕಿದೆ. ಮಾರ್ಚ್‌ 29 ರಂದು ಬೆಂಬಲಿಗರ ಸಭೆ ನಡೆಸಿ ತೀರ್ಮಾನ ಪ್ರಕಟಿಸುತ್ತೇನೆ’ ಎಂದು ತಿಳಿಸಿದರು.

    ‘500 ಕಿ.ಮೀ ದೂರದ ಮುಧೋಳದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಸೋತ ವ್ಯಕ್ತಿಯನ್ನು ಪಕ್ಷ ಕರೆತಂದಿದೆ. ಟಿಕೆಟ್‌ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ನಾನು ಬಹಳ ನಂಬಿದ್ದೆ. ಆದರೆ ಕೊನೆಗಳಿಗೆಯಲ್ಲಿ ನನಗೆ ಟಿಕೆಟ್ ಕೊಡಿಸುವಲ್ಲಿ ಅನ್ಯಾಯ ಮಾಡಿದ್ದಾರೆ’ ಎಂದು ಆಕ್ರೋಶ ಹೊರಹಾಕಿದರು.

    ಕ್ಲಿಕ್ ಮಾಡಿ ಓದಿ: ಎರಡು ದಿನ ನಿದ್ರಿಸದ ನಾಯಕನಹಟ್ಟಿ | ತಿಪ್ಪೇರುದ್ರಸ್ವಾಮಿ ಮಡಿಲಲ್ಲಿ ಭಜನೆ ವೈಭವ | ಬೆಳದಿಂಗಳ ಹುಣ್ಣಿಮೆ ಸಾಥ್‌

    ‘ಟಿಕೆಟ್‌ ವಿಚಾರದಲ್ಲಿ ಜಿಲ್ಲೆಯ ಸ್ಥಳೀಯ ನಾಯಕರುಗಳೇ ಕಳ್ಳಿನರಸಪ್ಪನ ಆಟವಾಡಿದ್ದಾರೆ. ‌ಕಾರಜೋಳ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದು, ಖಂಡನೀಯ. ಪಕ್ಷದ ಕಾರ್ಯಕರ್ತರು ಮತ ಹಾಕಿಸಲು ಮಾತ್ರವೇ ಬೇಕೆ, ಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಅರ್ಹತೆ ಇಲ್ಲವೆ’ ? ಎಂದು ಪ್ರಶ್ನಿಸಿದರು.

    ‘ಕಳೆದ ಬಾರಿ ಅನೇಕಲ್ ಅಭ್ಯರ್ಥಿ ಕರೆ ತಂದು ಹಾಕಿದ್ದರು. ಈ ಬಾರಿ ಮುಧೋಳ ಅಭ್ಯರ್ಥಿಯನ್ನು ಕರೆ ತಂದಿದ್ದಾರೆ. ಇದು ಚಿತ್ರದುರ್ಗದ ದುರಂತ’ ಎಂದು ಆಕ್ರೋಶ ಹೊರ ಹಾಕಿದ್ದಾರೆ.

    ‘ಮದಕರಿನಾಯಕನ ಕಾಲದಿಂದಲೂ ಸ್ಥಳೀಯರಿಗೆ ಅನ್ಯಾಯವಾಗುತ್ತಿದೆ. ಮುಂದಿನ ದಿನಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷ ಅಥವಾ ಮೋದಿ ವಿರುದ್ಧವಾಗಲಿ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತೇನೆ’ ಎಂದರು.

    ‘ಈ ಬಾರಿ ಟಿಕೆಟ್ ನನ್ನ ವಯಸ್ಸು ಮತ್ತು ಅನುಭವದ ಮೇಲೆ ತಪ್ಪಿಸಲಾಗಿದೆ. ನನಗಲ್ಲದಿದ್ದರೂ ಜನಾರ್ಧನ ಸ್ವಾಮಿ ಅವರಿಗೆ ನೀಡಬಹುದಾಗಿತ್ತು. ಆದು ಬಿಟ್ಟು ಎಲ್ಲೋ ಇರುವ ವ್ಯಕ್ತಿಯನ್ನು ಕರೆ ತಂದು ಚುನಾವಣೆಯಲ್ಲಿ ನಿಲ್ಲಿಸುವ ಅವಶ್ಯಕತೆ ಏನಿತ್ತು’ ಎಂದು ಪಕ್ಷದ ನಾಯಕರನ್ನು ಪ್ರಶ್ನಿಸಿದರು.

    ಕ್ಲಿಕ್ ಮಾಡಿ ಓದಿ: ಕುಡಿಯುವ ನೀರು ಪ್ರಕರಣ| ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಮಾನತು

    ‘ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಏನಾದರೂ ಅನ್ಯಾಯವಾದರೆ ಐದುನೂರು ಕಿ.ಮೀ ನಿಂದ ಯಾರೂ ಬರುವುದಿಲ್ಲ. ಸ್ಥಳಿಯರಾದ ನಾವುಗಳೇ ಕಾರ್ಯಕರ್ತರ ನೆರವಿಗೆ ಹೋಗಬೇಕಿದೆ. ಇದು ಪಕ್ಷದ ಅರಿವಿಗೆ ಬಂದಿಲ್ಲ’ ಎಂದು ನೊಂದು ಹೇಳಿದರು.

    ‘ಲೋಕಸಭೆ ಚುನಾವಣೆಯಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಹೊರಗಿನವರಿಗೆ ಮಣೆ ಹಾಕುತ್ತಿವೆ. ಇದು ಚಿತ್ರದುರ್ಗದ ದುರಂತ. ಇಲ್ಲಿನ ಕಾರ್ಯಕರ್ತರನ್ನು ಪಕ್ಷದ ಮುಖಂಡರು ನಂಬುವುದೇ ಇಲ್ಲ. ಇಂದಿನ ಚುನಾವಣೆ ಹಿಂದಿನಂತೆ ಇಲ್ಲ. ಎರಡು ಪಕ್ಷದಲ್ಲಿಯೂ ಸಹಾ ಪಕ್ಷದ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ, ನಮ್ಮ ನಾಯಕರಿಗೆ ಟಿಕೆಟ್ ಸಿಗದಿದ್ದಕ್ಕೆ ಪಕ್ಷದ ಮುಖಂಡರ ವಿರುದ್ಧ ಕೋಪಗೊಂಡಿದ್ದಾರೆ. ಇದರ ಪರಿಣಾಮ ಚುನಾವಣೆ ಫಲಿತಾಂಶದಲ್ಲಿ ಹೊರಬೀಳಲಿದೆ’ ಎಂದು ಎಚ್ಚರಿಸಿದರು.

    ಮುಖಂಡರಾದ ತಿಪ್ಪೇಸ್ವಾಮಿ, ರತ್ನಮ್ಮ,ಸಿದ್ದೇಶ, ಶಿವನಕೆರೆ ರಾಜಣ್ಣ, ತಿಪ್ಪೇಸ್ವಾಮಿ, ನಾಗೇಂದ್ರ ಇದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top