ಲೋಕಸಮರ 2024
ಲೋಕಸಭೆ ಚುನಾವಣೆ | ಚಿತ್ರದುರ್ಗಕ್ಕೆ ಗೋವಿಂದ ಕಾರಜೋಳ ಬರ್ತಾರಾ ?
CHITRADURGA NEWS | 14 MARCH 2024
ಚಿತ್ರದುರ್ಗ: ಚಿತ್ರದುರ್ಗ ಲೋಕಸಭೆ ಅಭ್ಯರ್ಥಿ ಆಯ್ಕೆ ವಿಚಾರ ಬಿಜೆಪಿ ಪಾಳೆಯದಲ್ಲಿ ಬಿಡಿಸಲಾರದ ಬ್ರಹ್ಮಗಂಟಾಗಿದೆ. ಗುರುವಾರ ಇಡೀ ದಿನ ಚಿತ್ರದುರ್ಗ ಕ್ಷೇತ್ರದ ವಿಚಾರವಾಗಿ ಬೆಂಗಳೂರಿನಲ್ಲಿ ಹಲವು ಪ್ರಮುಖರು ಗಂಭೀರವಾಗಿ ಚರ್ಚಿಸಿದ್ದಾರೆ.
ಎರಡನೇ ಪಟ್ಟಿಯಲ್ಲಿ ಚಿತ್ರದುರ್ಗದ ಹೆಸರು ಪ್ರಕಟವಾಗದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಮಾಜಿ ಸಚಿವ ಗೋವಿಂದ ಕಾರಜೋಳ ಅವರ ಮನೆಯಲ್ಲಿ ಮಾದಿಗ ಸಮುದಾಯದ ಮುಖಂಡರು ಸಭೆ ನಡೆಸಿ ಚರ್ಚೆ ನಡೆಸಿದ್ದಾರೆ ಎನ್ನುವ ಮಾಹಿತಿ ಹರಿದಾಡಿದೆ.
ಇದನ್ನೂ ಓದಿ: ದುರ್ಗದ ಸೊಸೆ ದಾವಣಗೆರೆ ಬಿಜೆಪಿ ಅಭ್ಯರ್ಥಿ
ಈ ಸಭೆಯಲ್ಲಿ ಮಾಜಿ ಸಚಿವ ಗೋವಿಂದ ಕಾರಜೋಳ, ಚಿತ್ರದುರ್ಗ ಸಂಸದ, ಸಚಿವ ಎ.ನಾರಾಯಣಸ್ವಾಮಿಯೂ ಭಾಗಿಯಾಗಿದ್ದರು ಎಂದು ಮೂಲಗಳು ತಿಳಿಸಿವೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರವನ್ನು ಮಾದಿಗ ಸಮುದಾಯಕ್ಕೆ ಕೊಡಬೇಕು. ಯಾವ ಕಾರಣಕ್ಕೂ ಕ್ಷೇತ್ರ ಕೈ ತಪ್ಪಬಾರದು ಎಂದು ಹಲವು ಮುಖಂಡರು ಪಟ್ಟು ಹಿಡಿದಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಎಂಪಿ ಟಿಕೇಟ್ ಸಸ್ಪೆನ್ಸ್
ಸಚಿವ ಎ.ನಾರಾಯಣಸ್ವಾಮಿ ಸ್ಪರ್ಧೆ ಬಗ್ಗೆ ನಿರಾಸಕ್ತಿ ಮಾತುಗಳನ್ನು ಆಡಿರುವುದರಿಂದ ಕೊನೆಗೆ ಅದೇ ಸಮುದಾಯದ ಗೋವಿಂದ ಕಾರಜೋಳ ಅವರನ್ನು ಕಣಕ್ಕಿಳಿಸಬೇಕು ಎಂದು ಚರ್ಚಿಸಲಾಗಿದೆ.
ಮತ್ತೊಂದೆಡೆ ಗುರುವಾರ ದೆಹಲಿ ಮಟ್ಟದಲ್ಲಿ ನಿವೃತ್ತ ಐಎಎಸ್ ಅಧಿಕಾರಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತಿ ವಲಯದಲ್ಲಿರುವ ಲಕ್ಷ್ಮೀನಾರಾಯಣ ಅವರ ಹೆಸರು ಚಾಲ್ತಿಯಲ್ಲಿತ್ತು ಎನ್ನಲಾಗುತ್ತಿದೆ.
ಇದನ್ನೂ ಓದಿ: ಕಾಂಗ್ರೆಸ್ ಸೇರ್ತಿರಾ ಅಂದಾಕ್ಷಣ ಕೆಂಡಾಮಂಡಲರಾದ ಎ.ನಾರಾಯಣಸ್ವಾಮಿ
ಗುರುವಾರ ರಾತ್ರಿವರೆಗೆ ಚಿತ್ರದುರ್ಗಕ್ಕೆ ಯಾರು ಅಭ್ಯರ್ಥಿ ಎನ್ನುವುದು ಸ್ಪಷ್ಟವಾಗಿಲ್ಲ. ನಾರಾಯಣಸ್ವಾಮಿಯೇ ಬರ್ತಾರಾ, ಗೋವಿಂದ ಕಾರಜೋಳ ಸ್ಪರ್ಧೆ ಮಾಡುತ್ತಾರಾ ಅಥವಾ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ಅವರಿಗೆ ಟಿಕೇಟ್ ಸಿಗುತ್ತಾ ಎನ್ನುವ ಚರ್ಚೆಗಳು ಚಾಲ್ತಿಯಲ್ಲಿವೆ.
ಭೋವಿ ಸಮುದಾಯದಿಂದಲೂ ಟಿಕೇಟ್‍ಗೆ ಪಟ್ಟು:
ಇದಿಷ್ಟೂ ಒಂದು ಕಡೆಯಾದರೆ, ಭೋವಿ ಸಮುದಾಯಕ್ಕೆ ಸೇರಿ ಮಾಜಿ ಸಂಸದ ಜನಾರ್ಧನಸ್ವಾಮಿ ಹಾಗೂ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ಎಂ.ಸಿ.ರಘುಚಂದನ್ ಹೆಸರುಗಳು ಕೂಡಾ ಪ್ರಮುಖವಾಗಿ ಪ್ರಸ್ತಾಪವಾಗುತ್ತಿವೆ.
ಇದನ್ನೂ ಓದಿ: ಫೇಕ್ ಗಿರಾಕಿಗಳಿಗೆ ದೇವರು ಒಳ್ಳೆಯದು ಮಾಡಲಿ
ರಾಜ್ಯದಲ್ಲಿ ಒಂದು ಕಡೆಯಾದರೂ ಭೋವಿ ಸಮುದಾಯಕ್ಕೆ ಟಿಕೇಟ್ ನೀಡಬೇಕು ಎನ್ನುವ ವಾದ ಮುಂದಿಟ್ಟಿದ್ದು, ಜನಾರ್ಧನಸ್ವಾಮಿ ಅಥವಾ ರಘು ಚಂದನ್ ಅವರಿಗೆ ಟಿಕೇಟ್ ನೀಡಬೇಕು ಎಂದು ಬಿಜೆಪಿ ವರಿಷ್ಟರ ಬಳಿ ಒತ್ತಾಯ ಮಾಡಲಾಗಿದೆ ಎನ್ನುವ ಮಾಹಿತಿ ಇದೆ.
ಎಂ.ಸಿ.ರಘುಚಂದನ್ ಅವರ ಹೆಸರು ಗುರುವಾರ ಪ್ರಮುಖವಾಗಿ ಕೇಳಿ ಬಂದಿದ್ದು, ಬಿಜೆಪಿ ವರಿಷ್ಟರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದು ಸ್ಪಷ್ಟವಾಗಲು ಒಂದೆರಡು ದಿನ ಕಾದು ನೋಡಬೇಕಿದೆ.