ಮುಖ್ಯ ಸುದ್ದಿ
2024ಕ್ಕೆ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಯಾಕೆ ? | ಆಟೋ ಪ್ರಚಾರಕ್ಕೆ ಚಾಲನೆ
CHITRADURGA NEWS | 10 FEBRUARY 2024
ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಒಂದು ಸಾವಿರ ಆಟೋಗಳ ಮೂಲಕ ಕೇಂದ್ರ ಸರ್ಕಾರ ಯೋಜನೆಗಳನ್ನು ಜನರಿಗೆ ಮನಮುಟ್ಟುವಂತೆ ತಿಳಿಸುವ ಕೆಲಸ ಮಾಡಲಾಗುತ್ತದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂ.ಸಿ.ರಘುಚಂದನ್ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ‘ಯಾಕೆ ಪ್ರಧಾನಿ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ತಿಳಿಸುವ ಬ್ಯಾನರ್ ಪ್ರಿಂಟ್ ಮಾಡಿಸಿ ಆಟೋಗಳಿಗೆ ಅಂಟಿಸಿ ಪ್ರಚಾರ ಮಾಡಲಾಗುತ್ತಿದೆ. ಇದು ಇಡೀ ಭಾರತದಲ್ಲಿ ಮೊಟ್ಟ ಮೊದಲ ಕಾರ್ಯಕ್ರಮವಾಗಿದೆ. ಚಿತ್ರದುರ್ಗದಲ್ಲಿ ಪ್ರಾಯೋಗಿಕವಾಗಿ 150 ಆಟೋಗಳಿಗೆ ಚಾಲನೆ ನೀಡಲಾಗುತ್ತಿದ್ದು, ಲೋಕಸಭಾ ವ್ಯಾಪ್ತಿಯಲ್ಲಿ ಆಯಾ ತಾಲೂಕಿನಲ್ಲಿ ಆಟೋಗಳ ಸಂಖ್ಯೆ ಆಧಾರಿಸಿ ಆಟೋಗಳಿಗೆ ಅಂಟಿಸಿ ಪ್ರಚಾರ ಮಾಡಲಾಗುತ್ತದೆ. ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕು ಎಂಬ ನಿಟ್ಟಿನಲ್ಲಿ ಈ ಕೆಲಸ ಮಾಡಲಾಗುತ್ತಿದೆ’ ಎಂದರು
ಇದನ್ನೂ ಓದಿ: ಅವೈಜ್ಞಾನಿಕ ರಸ್ತೆ ವಿಭಜಕ ತೆರವಿಗೆ ಚಾಲನೆ | ಜೆಸಿಬಿ, ಹಿಟಾಚಿ ಜತೆ ಪಟಾಕಿ ಸದ್ದು
‘ಬ್ಯಾನರ್ ಹಾಕಿಸುವಲ್ಲಿ ಯಾರಿಗೂ ಒತ್ತಡವಿಲ್ಲ. ಸ್ವಯಂ ಪ್ರೇರಿತರಾಗಿ ಈ ಕೆಲಸಕ್ಕೆ ಒಪ್ಪಿದ್ದಾರೆ. ವಾಜಪೇಯಿ ಅವರು ಮಾಡಿದ ಕೆಲಸ ಪ್ರಚಾರ ಪಡೆಯದೆ ಸೋಲು ಅನುಭವಿಸುವಂತಾಯಿತು. ಆದರೆ ಈ ಬಾರಿ ಮೋದಿಯವರ ಕೆಲಸಗಳ ಬಗ್ಗೆ ಮನೆ ಮನೆ ಬಾಗಿಲಿಗೆ ಪ್ರಚಾರ ಮಾಡುವ ಮೂಲಕ ಮೋದಿ ಯೋಜನೆಗಳನ್ನು ತಿಳಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಸಮಾಜಕ್ಕೆ ಬಿಜೆಪಿ ಕೊಡುಗೆ ಏನು ಎಂದು ಈ ಮೂಲಕ ತಿಳಿಸುತ್ತೇವೆ’ ಎಂದು ತಿಳಿಸಿದರು.
ಇದನ್ನೂ ಓದಿ: ‘ಭದ್ರೆ’ ಗೆ ಸ್ತಬ್ಧವಾಯ್ತು ಚಳ್ಳಕೆರೆ | ಮುಂಜಾನೆಯಿಂದಲೇ ಸಂಪೂರ್ಣ ಬಂದ್ | ಜನರ ಸ್ವಯಂಪ್ರೇರಿತ ಬೆಂಬಲ
‘ನಾನು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಇಚ್ಛೆ ಹೊಂದಿದ್ದೇನೆ. ಆದರೆ ಪಕ್ಷ ಯಾರಿಗೆ ಟಿಕೆಟ್ ನೀಡಿದರು ಸಹ ಎಲ್ಲರೂ ಒಂದಾಗಿ ಕೆಲಸ ಮಾಡುತ್ತೇವೆ. ಏನೇ ಭಿನ್ನಮತವಿದ್ದರೂ ಕೂಡ ಅದನ್ನು ಬಗೆಹರಿಸಿಕೊಂಡು ಮುಂಬರುವ ಲೋಕಸಾಭ ಚುನಾವಣೆಯಲ್ಲಿ ಒಂದು ಲಕ್ಷ ಮತಗಳ ಅಂತರದಿಂದ ಪಕ್ಷದ ಅಭ್ಯರ್ಥಿಯ ಗೆಲುವು ಖಚಿತ’ ಎಂದರು.
ಬಿಜೆಪಿ ಮುಖಂಡರಾದ ಅನಿತ್ ಕುಮಾರ್, ರತ್ನಮ್ಮ ಲೋಕನಾಥ್, ಮಲ್ಲಿಕಾರ್ಜುನ್, ವಕ್ತಾರ ನಾಗರಾಜ್ ಬೇದ್ರೆ, ತಿಪ್ಪೇಸ್ವಾಮಿ, ಚಂದ್ರಕಲಾ, ವೆಂಕಟೇಶ್ ಯಾದವ್, ನಗರಸಭಾ ಸದಸ್ಯ ದೀಪು ಉಪಸ್ಥಿತರಿದ್ದರು.