Connect with us

ರೈಲ್ವೇ ಅಂಡರ್ ಪಾಸ್ ಗುಂಡಿ ಯಾವಾಗ ಮುಚ್ತಿರಾ

ನಗರದ ಮೆದೇಹಳ್ಳಿ ರಸ್ತೆಯ ರೈಲ್ವೆ ಕೆಳಸೇತುವೆ ಬಳಿ ರಸ್ತೆ ಗುಂಡಿ ಬಿದ್ದಿರುವುದು

ಮುಖ್ಯ ಸುದ್ದಿ

ರೈಲ್ವೇ ಅಂಡರ್ ಪಾಸ್ ಗುಂಡಿ ಯಾವಾಗ ಮುಚ್ತಿರಾ

CHITRADURGA NEWS | 06 JUNE 2024

ಚಿತ್ರದುರ್ಗ: ನಗರದ ಮಧ್ಯ ಹಾದುಹೋಗುವ ಮೆದೇಹಳ್ಳಿ ರಸ್ತೆಯ ರೈಲ್ವೆ ಕೆಳಸೇತುವೆ ಬಳಿ ರಸ್ತೆ ಗುಂಡಿ ಬಿದ್ದು, ನೀರಿನಿಂದ ಆವೃತ್ತವಾಗಿ, ರಸ್ತೆ ಅಪಘಾತಗಳನ್ನು ಹೆಚ್ಚಿಸಿ, ಪ್ರಾಣ ಹಾನಿ ಉಂಟು ಮಾಡಲು ಸಿದ್ದವಾಗಿ ನಿಂತಿದೆ.

ಇದನ್ನೂ ಓದಿ: ಆಗ್ನೇಯ ಶಿಕ್ಷಕರ ಕ್ಷೇತ್ರದ ಮತ ಎಣಿಕೆ | ಕುತೂಹಲ ಮೂಡಿಸಿದ ಫಲಿತಾಂಶ

ಮೆದೇಹಳ್ಳಿ ರಸ್ತೆಯ ರೈಲ್ವೆ ಕೆಳಗಿನ ರಸ್ತೆ ಆರು ತಿಂಗಳಿಗೊಮ್ಮೆ ಗುಂಡಿ ಬಿದ್ದು, ನೀರು ನಿಂತು, ವಾಹನ ಚಾಲಕರಿಗೆ ಪ್ರಾಣ ಕಂಟಕವಾದರು ಸಹ ರೈಲ್ವೆ ಇಲಾಖಾ ಅಧಿಕಾರಿಗಳ ಗಮನಕ್ಕೆ ಬಾರದೇ ಇರುವುದು ಆಶ್ಚರ್ಯ ಉಂಟು ಮಾಡುತ್ತದೆ.

ಕಾಮಗಾರಿಗಳು ಉತ್ಕೃಷ್ಟ ಮಟ್ಟದಾಗಿದ್ದು, ಗುಣಮಟ್ಟದಲ್ಲಿ ಯಾವುದೇ ಹೊಂದಾಣಿಕೆ ಮಾಡಿಕೊಳ್ಳದೆ, ಪ್ರಾಮಾಣಿಕವಾಗಿ ಕೆಲಸ ಮಾಡಿದರೇ ಮಾತ್ರ ಈ ತರಹದ ಗುಂಡಿಗಳನ್ನ ತಡೆದು, ಜನರ ಜೀವ ರಕ್ಷಣೆ ಮಾಡಬಹುದು.

ಕಳಪೆ ಕಾಮಗಾರಿ ಮಾಡಿದರೆ, ಒಂದೇ ಮಳೆಗೆ ಹಾಕಿದ ಕಾಂಕ್ರೀಟ್ ಎಲ್ಲ ಕೊಚ್ಚಿಕೊಂಡು ಹೋಗಿ, ಗುಂಡಿ ಬಿದ್ದು, ವಾಹನ ಚಾಲಕರು ಗುಂಡಿ ಗೊತ್ತಾಗದೇ ವಾಹನ ನಡೆಸುವಂತಹವರು, ಊರಿಗೆ ಹೊಸಬರು ಈ ಗುಂಡಿಗಳಲ್ಲಿ ಸಿಕ್ಕಿಕೊಂಡು ಪ್ರಾಣ ಕಳೆದುಕೊಳ್ಳುವ ಸಂಭವಗಳು ಹೆಚ್ಚಿವೆ. ರೈಲ್ವೆ ಇಲಾಖೆಯವರು ಇಷ್ಟೊಂದು ಗುಂಡಿಗಳು ಬೀಳುವ ತನಕ ಕಾಯದೇ, ತಕ್ಷಣ ಇವುಗಳನ್ನು ರಿಪೇರಿ ಮಾಡಬೇಕು.

ಇದನ್ನೂ ಓದಿ: ಸಾಣೇಹಳ್ಳಿ ಶಿವಕುಮಾರ ವನದಲ್ಲಿ ಪೇರಲ, ಸಂಪಿಗೆ ಘಮ | ವಿದ್ಯಾರ್ಥಿಗಳ ಶ್ರಮದಾನ

ಪ್ರತಿ ಆರು ತಿಂಗಳಿಗೋಮ್ಮೆ, ಅದರಲ್ಲೂ ಮಳೆಗಾಲದಲ್ಲಿ ಮಳೆಯ ನೀರು ಅಲ್ಲೇ ಸಂಗ್ರಹವಾಗಿ, ಭಾರಿ ಗಾತ್ರದ ವಾಹನಗಳು ಸಂಚರಿಸಿದಾಗ, ಸಾಧಾರಣ ಕಾಂಕ್ರೀಟ್ಗಳು ತಡೆದುಕೊಳ್ಳುವ ಶಕ್ತಿ ಇಲ್ಲದೇ ಗುಂಡಿ ಬಿದ್ದು, ಒಂದೆರಡು ದಿನದಲ್ಲೇ ಆಳವಾದ ಗುಂಡಿಗಳು ವಿಸ್ತಾರವಾಗುತ್ತಾ ಹೋಗಿ, ನೀರು ತುಂಬಿಕೊಂಡು ವಾಹನ ಚಾಲಕರಿಗೆ ಗುಂಡಿ ಇದೆಯೋ, ರಸ್ತೆ ಇದೆಯೋ ಎಂದು ಅಂದಾಜು ಸಿಗದೇ ಅಂದಾಜಿನ ಮೇಲೆ ಕೆಳ ಸೇತುವೆಗಳನ್ನ ದಾಟಬೇಕಾಗಿದೆ.

ಈಗಾಗಲೇ ಬಹಳಷ್ಟು ಬಾರಿ ಈ ರಸ್ತೆ ರಿಪೇರಿ ಆಗುತ್ತಾ ಬಂದಿದ್ದರು ಸಹ, ಇದು ಗುಣಮಟ್ಟದಲ್ಲಿ ಉತ್ಕೃಷ್ಟವಾಗಿಲ್ಲ ಎಂಬುದನ್ನು ಸ್ಥಳ ಪರಿಶೀಲನೆ ಮಾಡಿದವರಿಗೆ ಮನದಟ್ಟಾಗುತ್ತದೆ.

ಈಗ ಸದ್ಯ ಮಳೆಗಾಲ ಇರುವುದರಿಂದ ಯಾವುದೇ ತ್ಯಾಪೆ ಕೆಲಸವು ಮಾಡಲಿಕ್ಕೇ ಸಾದ್ಯವಿಲ್ಲ, ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳನ್ನು ತಡೆಹಿಡಿದು, ಮಾರ್ಕೆಟಿನ ಮುಖಾಂತರ ಅವುಗಳನ್ನು ಸ್ಥಳ ಬದಲಾಯಿಸಿ, ಈ ರಸ್ತೆಗೆ ಒಳ್ಳೆಯ ಉತೃಷ್ಟ ಗುಣಮಟ್ಟದ ಕಾಂಕ್ರೀಟ್ ಹಾಕಿ, ಗುಂಡಿಗಳನ್ನು ಮುಚ್ಚಿ, ಅದು ಒಣಗಿದ ಮೇಲೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಬೇಕೆಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ಮುರುಘಾ ಮಠದಲ್ಲಿ ಸಾಮೂಹಿಕ ಕಲ್ಯಾಣ | 10 ಜೋಡಿ ದಾಂಪತ್ಯಕ್ಕೆ ಪದಾರ್ಪಣೆ 

ಕೆಳ ಸೇತುವೆಗಳು ಬಹಳಷ್ಟು ಬಾರಿ ಸಂಗ್ರಹವಾದ ನೀರನ್ನು ಹೊರ ಹಾಕಲು ಪಂಪ್‍ಗಳ ವ್ಯವಸ್ಥೆ ಕಲ್ಪಿಸಬೇಕು, ಅವುಗಳಲ್ಲಿ ಲೋಪ ಕಂಡು ಬಂದ ತಕ್ಷಣ, ಅವುಗಳನ್ನು ಸರಿಪಡಿಸಬೇಕು. ನೀರು ನಿಂತಾಗಲೇ ಯಾವ ಕಾಂಕ್ರೀಟ್ ಸಹ ಭಾರ ಸಹಿಸಿಕೊಳ್ಳಲಾರದೆ ಗುಂಡಿ ಬಿದ್ದು, ಹಾಕಿದ ಬಂಡವಾಳ, ಮಾಡಿದ ಕೆಲಸ ವ್ಯರ್ಥವಾಗುತ್ತದೆ. ಇದರ ಬಗ್ಗೆ ಯೋಚಿಸಿ ಕೆಲಸ ಮಾಡಬೇಕು.

ದಿನನಿತ್ಯ ನೂರಾರು ಬಸ್ಸುಗಳು, ಲಾರಿಗಳು, ದ್ವಿಚಕ್ರ ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ, ಬಲಿಷ್ಠವಾದ ಕಾಂಕ್ರೀಟಿನ ತಳಪಾಯ ಹಾಕಬೇಕಾಗುತ್ತದೆ. ಗುಂಡಿಗಳಲ್ಲಿ ನೀರಿದ್ದರೇ ಅಕ್ಕಪಕ್ಕ ಓಡಾಡುವ ಪಾದಾಚಾರಿಗಳಿಗೆ ನೀರು ಸಿಡಿದು, ಕಿರಿಕಿರಿ ಉಂಟು ಮಾಡುತ್ತದೆ. ಹಾಗಾಗಿ ರೈಲ್ವೆ ಇಲಾಖೆಯವರು ಇದರ ಬಗ್ಗೆ ಶೀಘ್ರವಾಗಿ ಕ್ರಮ ಜರುಗಿಸಿ, ಗುಂಡಿಗಳನ್ನು ಮುಚ್ಚಿಸಿ, ಪಾದಾಚಾರಿಗಳನ್ನು ಮತ್ತು ವಾಹನ ಚಾಲಕರನ್ನು ಜೀವ ಹಾನಿಯಿಂದ ಕಾಪಾಡಬೇಕು.

ಅಧಿಕಾರಿಗಳು ಹೊರ ಸಂಚಾರದಲ್ಲಿ ಇದ್ದಾಗ, ಕಚೇರಿಗಳಿಗೆ ಸಾರ್ವಜನಿಕರು ಬಂದು ದೂರು ಪತ್ರ ನೀಡಿದರೆ, ಸ್ವೀಕರಿಸಲಾರದಂತ ವ್ಯವಸ್ಥೆ ನಮ್ಮಲ್ಲಿ ರೂಪಗೊಂಡಿರುವುದು ವಿಷಾದನೀಯ.

ಇದನ್ನೂ ಓದಿ: ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತಿ ಆಚರಿಸಿದ ಮಠಾಧೀಶರು

ಸಾರ್ವಜನಿಕರನ್ನೇ ಸಂಜೆ ಬನ್ನಿ, ನಾಳೆ ಬನ್ನಿ ಎಂದು ಅಲೆದಾಡಿಸುವುದಕ್ಕಿಂತ, ದೂರು ಕೊಡುವ ಪತ್ರವನ್ನು ಸ್ವೀಕರಿಸಿ, ಮುಂದಿನ ಕ್ರಮ ಜರುಗಿಸುತ್ತೇವೆ ಎಂಬ ಸಹಾನುಭೂತಿಯ ಮಾತುಗಳನ್ನಾಡುವುದನ್ನಾದರೂ ಆಡಲು ರೈಲ್ವೆ ಇಲಾಖೆಯಲ್ಲಿರುವ ಅಧಿಕಾರಿಗಳಿಗೆ ಮೇಲಾಧಿಕಾರಿಗಳು ತಿಳಿಸಿ ಕೊಡಬೇಕಾಗಿದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿಯ ಜಿಲ್ಲಾಧ್ಯಕ್ಷ ಡಾ.ಎಚ್.ಕೆ.ಎಸ್.ಸ್ವಾಮಿ ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version