ಕ್ರೈಂ ಸುದ್ದಿ
ಐದು ಜನರ ಅಸ್ಥಿಪಂಜರ ಪ್ರಕರಣ | ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ ಹೇಳಿದ್ದೇನು
ಚಿತ್ರದುರ್ಗ ನ್ಯೂಸ್.ಕಾಂ: ಜೈಲು ರಸ್ತೆಯಲ್ಲಿರುವ ಮನೆಯಲ್ಲಿ ಐದು ಜನ ಮೃತಪಟ್ಟಿದ್ದು, ಅಷ್ಟೂ ಜನರ ಅಸ್ಥಿಪಂಜರಗಳು ಸಿಕ್ಕಿವೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿμÁ್ಠಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಮಾಹಿತಿ ನೀಡಿದ್ದಾರೆ.
ಈವರೆಗೆ ಸಿಕ್ಕಿರುವ ಮಾಹಿತಿ ಆಧಾರದಲ್ಲಿ ಆ ಮನೆಯಲ್ಲಿ ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ ಅವರ ಕುಟುಂಬ ವಾಸವಾಗಿತ್ತು. ಸಂಬಂಧಿಕರ ಹೇಳಿಕೆ, ದೂರಿನಲ್ಲಿ ವ್ಯಕ್ತಪಡಿಸಿರುವ ಅನುಮಾನ ಹಾಗೂ ಹಿನ್ನೆಲೆ ಗಮನಿಸಿದಾಗ ಮೃತಪಟ್ಟಿರುವ ಐದು ಅಸ್ಥಿಪಂಜರ ಜಗನ್ನಾಥ ರೆಡ್ಡಿ ಕುಟುಂಬದವರದ್ದೇ ಇರಬಹುದು ಎನ್ನುವ ಅನುಮಾನ ಇದೆ ಎಂದರು.
ನಿವೃತ್ತ ಇಂಜಿನಿಯರ್ ಜಗನ್ನಾಥ ರೆಡ್ಡಿ, ಅವರ ಪತ್ನಿ ಪ್ರೇಮಾ, ಪುತ್ರಿ ತ್ರಿವೇಣಿ, ಪುತ್ರರಾದ ಕೃಷ್ಣಾರೆಡ್ಡಿ ಹಾಗೂ ನರೇಂದ್ರ ರೆಡ್ಡಿ ಈ ಮನೆಯಲ್ಲಿದ್ದರು.
ಕಳೆದ 8-10 ವರ್ಷಗಳಿಂದ ಈ ಮನೆಯ ಯಾರೂ ಕೂಡಾ ಸಾರ್ವಜನಿಕ ಸಂಪರ್ಕದಲ್ಲಿರಲಿಲ್ಲ. ನರೇಂದ್ರ ರೆಡ್ಡಿ ಮಾತ್ರ ಮನೆಯಿಂದ ಹೊರಗೆ ಬಂದು ಮನೆಗೆ ಬೇಕಾದ ದಿನಸಿ, ಹಾಲು ಖರೀಧಿಸಿಕೊಂಡು ಹೋಗುತ್ತಿದ್ದರು.
ಉಳಿದ ನಾಲ್ಕು ಜನರನ್ನು ಸ್ಥಳೀಯರು ನೋಡೇ ಇಲ್ಲ ಎನ್ನವ ಮಾಹಿತಿ ಲಭ್ಯವಾಗಿದೆ ಎಂದು ಹೇಳಿದರು.
2019 ಜನವರಿ ತಿಂಗಳಲ್ಲಿ ಈ ಮನೆಯ ವಿದ್ಯುತ್ ಸಂಪರ್ಕ ಕಡಿತ ಆಗಿದೆ. ಜನವರಿ-ಏಪ್ರಿಲ್ ನಡುವೆ ಈ ದುರಂತ ನಡೆದಿರಬಹುದು.
ಇದನ್ನೂ ಓದಿ: ಜೈಲು ರಸ್ತೆಯಲ್ಲಿ ಐದು ಜನರ ಸಾವಿನ ಕುರಿತು ದೂರು ದಾಖಲು
ಗುರುವಾರ ರಾತ್ರಿ ನಮಗೆ ಸಿಕ್ಕಿದ ಮಾಹಿತಿ ಆಧರಿಸಿ ಮನೆಗೆ ಭೇಟಿ ನೀಡಿದಾಗ ಮೂರು ಶವಗಳು ಪತ್ತೆಯಾಗಿದ್ದವು. ಆನಂತರ FSL ತಂಡ ದಾವಣಗೆರೆಯಿಂದ ಬಂದಾಗ ಸಮಗ್ರವಾಗಿ ಪರಿಶೀಲನೆ ನಡೆಸಿದ ವೇಳೆ ಮತ್ತೆರಡು ಮೃತ ದೇಹಗಳ ಅಸ್ತಿಪಂಜರ ಪತ್ತೆಯಾಗಿದೆ.
ಮನೆಯ ಒಂದು ಕೊಠಡಿಯಲ್ಲಿ ನಾಲ್ಕು ಶವಗಳಿದ್ದರೆ, ಮತ್ತೊಂದು ಕೊಠಡಿಯಲ್ಲಿ ಒಂದು ಶವ ಇತ್ತು. ಜೊತೆಗೆ ಒಂದು ನಾಯಿಯ ಶವ ಕೂಡಾ ಪತ್ತೆಯಾಗಿದೆ ಎಂದು ಎಸ್ಪಿ ತಿಳಿಸಿದರು.
ಈ ಬಗ್ಗೆ ಚಿತ್ರದುರ್ಗ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತ ಶರೀರಗಳ ಅಸ್ಥಿಪಂಜರವನ್ನು ಬಸವೇಶ್ವರ ಮೆಡಿಕಲ್ ಕಾಲೇಜಿಗೆ ರವಾನೆ ಮಾಡಿದ್ದು, ನಾಳೆ ಪೋಸ್ಟ್ ಮಾರ್ಟಮ್ ಮಾಡಲಿದ್ದಾರೆ. ನಂತರ ಕಾನೂನು ಪ್ರಕ್ರಿಯೆ ಮುಂದುವರೆಸಲಾಗುತ್ತದೆ ಎಂದರು.
2013ರಲ್ಲಿ ಬಿಡದಿ ಠಾಣೆ ವ್ಯಾಪ್ತಿಯಲ್ಲಿ ನರೇಂದ್ರ ರೆಡ್ಡಿ ವಿರುದ್ಧ ದರೋಡೆ ಪ್ರಕರಣ ದಾಖಲಾಗಿ, ಬಂಧನವೂ ಆಗಿತ್ತು ಎಂದು ಮಾಹಿತಿ ನೀಡಿದರು.
ಒಟ್ಟಾರೆ ಚಿತ್ರದುರ್ಗ ಜಿಲ್ಲೆಯಲ್ಲಿ ಎಂದೂ ಕೇಳರಿಯದ ಘಟನೆ ನಡೆದಿದ್ದು, ಜನತೆ ದಿಗ್ಭ್ರಮೆಗೊಳಗಾಗಿದ್ದಾರೆ. ಸ್ವತಃ ಪೊಲೀಸರು ಕೂಡಾ ಅಚ್ಚರಿ ವ್ಯಕ್ತಪಡಿಸುತ್ತಿದ್ದು, ಇದೊಂದು ವಿಚಿತ್ರ ಘಟನೆ ಎನ್ನಲಾಗುತ್ತಿದೆ.
ಐದು ಜನರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಡೆತ್‍ನೋಟ್ ಪತ್ತೆ ಆಗಿಲ್ಲ. ಕೆಲ ದಾಖಲೆಗಳು, ಪೇಪರ್‍ಗಳು ಸಿಕ್ಕಿವೆ. ಆದರೆ, ಡೆತ್‍ನೋಟ್ ಅಲ್ಲ. ತನಿಖೆಗೆ ಅನುಕೂಲ ಆಗಲಿ ಎನ್ನುವ ಉದ್ದೇಶದಿಂದ ಅಸ್ಥಿಪಂಜರಗಳನ್ನು ಸ್ಥಳಾಂತರ ಮಾಡಿದ ನಂತರವೂ ಎಫ್‍ಎಸ್‍ಎಲ್ ತಂಡ ಮತ್ತಷ್ಟು ದಾಖಲೆಗೆ ಹುಡುಕಾಟ ನಡೆಸುತ್ತಿದೆ.
| ಧಮೇಂದರ್ ಕುಮಾರ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.