ಮುಖ್ಯ ಸುದ್ದಿ
ಇಳಿ ಸಂಜೆಯಲ್ಲಿ ಚಿತ್ರದುರ್ಗದಲ್ಲಿ ಹೈಡ್ರಾಮಾ | ಗೋವಿಂದ ಕಾರಜೋಳ ಗೆ ‘ಗೋ ಬ್ಯಾಕ್…’ ಸ್ವಾಗತ | ದಲಿತ ವಿರೋಧಿ ಚಂದ್ರಪ್ಪ ಘೋಷಣೆ

CHITRADURGA NEWS | 29 MARCH 2024
ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಟಿಕೆಟ್ ಘೋಷಣೆಯಾದ ಬಳಿಕ ಶುಕ್ರವಾರ ಚಿತ್ರದುರ್ಗಕ್ಕೆ ಆಗಮಿಸಿದ ಮಾಜಿ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರಿಗೆ ‘ಗೋ ಬ್ಯಾಕ್…’ ಧಿಕ್ಕಾರದ ಘೋಷಣೆ ಸ್ವಾಗತಿಸಿದವು. ಆದರೆ ಕೊಂಚವೂ ಅಳುಕದೆ ಅತ್ಯಂತ ಉತ್ಸಾಹದಿಂದ ಚಿತ್ರದುರ್ಗದಲ್ಲಿ ಪ್ರಚಾರ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಿದರು.
ಕ್ಲಿಕ್ ಮಾಡಿ ಓದಿ: ನೀರಿಗಾಗಿ ಜಲಾಶಯದ ನಾಲೆ ಒಡೆದ ರೈತರು | ಇಂದು ಹುಳಿಯಾರು – ಹಿರಿಯೂರು ರೈತರ ಸಭೆ
ಬೆಳಿಗ್ಗೆ ಸಿದ್ದಾಗಂಗಾ ಮಠಕ್ಕೆ ಭೇಟಿ ನೀಡಿ ಗದ್ದುಗೆ ದರ್ಶನ ಹಾಗೂ ಸ್ವಾಮೀಜಿ ಆಶೀರ್ವಾದ ಪಡೆದು ಮಧ್ಯಾಹ್ನ ಶಿರಾ ನಗರಕ್ಕೆ ಆಗಮಿಸಿದ್ದ ಗೋವಿಂದ ಎಂ. ಕಾರಜೋಳ ಅವರಿಗೆ ಚಿತ್ರದುರ್ಗದಲ್ಲಿ ನಡೆಯುತ್ತಿದ್ದ ರಾಜಕೀಯ ವಿದ್ಯಮಾನದ ಮಾಹಿತಿ ಸ್ಪಷ್ಟವಾಗಿತ್ತು. ಶಿರಾದಲ್ಲಿ ಕಾರ್ಯಕರ್ತರಿಂದ ಸ್ವಾಗತ ಸ್ವೀಕರಿಸಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಂಜೆ ಹಿರಿಯೂರು ನಗರಕ್ಕೆ ಆಗಮಿಸಿ ತೇರುಮಲ್ಲೇಶ್ವರ ಸ್ವಾಮಿ ದೇವರ ದರ್ಶನ ಪಡೆದು, ಚಿತ್ರದುರ್ಗಕ್ಕೆ ಆಗಮಿಸಿದರು.
ಗೋವಿಂದ ಕಾರಜೋಳ ಆಗಮಿಸುವ ಸೂಚನೆ ಸಿಗುತ್ತಿದ್ದಂತೆ ಸ್ವಾಭಿಮಾನಿ ಬಿಜೆಪಿ ಕಾರ್ಯಕರ್ತರು ‘ಗೋ ಬ್ಯಾಕ್…’ ಪ್ಲೇ ಕಾರ್ಡ್ ಹಿಡಿದು ಸೇವಾ ರಸ್ತೆಯಲ್ಲಿ ಜಮಾಯಿಸಿ ಧಿಕ್ಕಾರದ ಘೋಷಣೆ ಕೂಗಿದರು. ಬಳಿಕ ಬಿಜೆಪಿ ಲೋಕಸಭೆ ಚುನಾವಣೆ ಕಚೇರಿ ಮುಂದೆ ಆಗಮಿಸಿ ಧಿಕ್ಕಾರ ಕೂಗಿದರು. ಈ ವೇಳೆ ಕೆಲವರನ್ನು ಪೊಲೀಸರು ವಶಕ್ಕೆ ಪಡೆದರು.
ಇದಕ್ಕೆ ಪ್ರತ್ಯುತ್ತರವಾಗಿ ಬಿಜೆಪಿ ಕಾರ್ಯಕರ್ತರು ದಲಿತ ವಿರೋಧಿ ಚಂದ್ರಪ್ಪ ಎಂಬ ಘೋಷಣೆ ಕೂಗಿದರು. ಪಕ್ಷದಿಂದ ಕೂಡಲೇ ಶಾಸಕ ಚಂದ್ರಪ್ಪ ಅವರನ್ನು ಉಚ್ಛಾಟಿಸಬೇಕು ಎಂದು ಆಗ್ರಹಿಸಿದರು.
