ಮುಖ್ಯ ಸುದ್ದಿ
ವೀರಭದ್ರಸ್ವಾಮಿ ದೊಡ್ಡ ರಥೋತ್ಸವಕ್ಕೆ ದಿನಗಣನೆ | ಕಳೆಗಟ್ಟಿದ ಸಂಭ್ರಮ

CHITRADURGA NEWS | 19 MAY 2024
ಚಿತ್ರದುರ್ಗ: ಚಳ್ಳಕೆರೆ ನಗರದ ಆರಾಧ್ಯ ದೈವ ವೀರಭದ್ರಸ್ವಾಮಿ ದೊಡ್ಡ ರಥೋತ್ಸವಕ್ಕೆ ದಿನಗಣನೆ ಪ್ರಾರಂಭವಾಗಿದೆ. ಮೇ 22 ರಂದು ದೊಡ್ಡ ರಥೋತ್ಸವ ಜರುಗಲಿದೆ.
ಸೋಮವಾರ ಬೆಳಿಗ್ಗೆ ದೊಡ್ಡ ರಥಕ್ಕೆ ತೈಲಾಭಿಷೇಕ, ಪುಪ್ಪಾರ್ಚನೆ ಜರುಗಲಿದೆ. ಮಂಗಳವಾರ ವೀರಭದ್ರಸ್ವಾಮಿಯ ಉತ್ಸವ ಮೂರ್ತಿಯನ್ನು ಬೆಳ್ಳಿ ಪಲ್ಲಕ್ಕಿಯಲ್ಲಿ ಗಂಗಾ ಪೂಜೆಗೆ ಕರೆದುಕೊಂಡು ಹೋಗಲಾಗುವುದು. ದೊಡ್ಡೇರಿ ಸಂಸ್ಥಾನ ಮಠದ ದೊಣ್ಣೆ ವಂಶಸ್ಥರಿಂದ ಆ ದಿನ ರಾತ್ರಿ ದೇವಸ್ಥಾನದ ಮುಂಭಾಗದಲ್ಲಿ ಅಂದೋಳಿಕೋತ್ಸವ ಆಚರಣೆ ನಡೆಯಲಿದೆ.
ಬುಧವಾರ ಮಧ್ಯಾಹ್ನ 3.30ಕ್ಕೆ ಮುಕ್ತಿ ಬಾವುಟ ಹರಾಜಿನ ನಂತರ ದೊಡ್ಡ ರಥೋತ್ಸವ ಜರುಗಲಿದೆ. ವೀರಗಾಸೆ, ನಂದಿಕೋಲು, ಡೊಳ್ಳು, ನಾದಸ್ವರ, ಪುರಂತರ ವೀರನಾಟ್ಯ ನಂತರ ಮಹಾ ಮಂಗಳಾರತಿ ಸೇರಿ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.
ಕ್ಲಿಕ್ ಮಾಡಿ ಓದಿ: ತೆರೆದಿದೆ ಉದ್ಯೋಗಾವಕಾಶದ ಬಾಗಿಲು | 22ರಂದು ನೇರ ನೇಮಕಾತಿ ಸಂದರ್ಶನ
ಗುರುವಾರ ನಗರದೇವತೆ ಚಳ್ಳಕೇರಮ್ಮ ಮತ್ತು ಉಡುಸಲಮ್ಮ ದೇವಿಯ ಉತ್ಸವ ಮೂರ್ತಿಗಳನ್ನು ಭಕ್ತರು ಹೊತ್ತು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುತ್ತಾರೆ. ಕಡುಬಿನ ಕಾಳಗ, ವೀರಭದ್ರಸ್ವಾಮಿ ಹಾಗೂ ಕಾಳಮ್ಮ ದೇವಿಗೆ ವಾಗ್ವಾದ ಕಾರ್ಯಕ್ರಮ ನಡೆಯಲಿದೆ. ಮೇ 24ರಂದು ಕಂಕಣ ವಿಸರ್ಜನೆ, ಹೋಮ, ಶಾಂತಿ, ಓಕಳಿ ನಡೆಯಲಿದೆ.
ವೀರಭದ್ರಸ್ವಾಮಿ ದೇವಸ್ಥಾನದ ರಾಜಗೋಪುರ 40 ಅಡಿ ಎತ್ತರವಿದ್ದು, ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. ವೀರಭದ್ರ, ಕೇಶವ, ನರಸಿಂಹ, ಅಚ್ಯುತ, ಕಮಲಜ, ಪೂರ್ವದಲ್ಲಿ ಗಜಾರೂಢ, ಇಂದ್ರ, ಪುರಂದರ, ರಾಮ, ಸೀತೆ, ವಾಲಿ ಸುಗ್ರೀವ, ಸುಬ್ರಹ್ಮಣ್ಯ, ಗೋಪುರದ ತುದಿಯಲ್ಲಿ ಗುಹ, ಆರ್ಯ, ಕಾತ್ಯಾಯಿನಿ, ವಿಷ್ಣು, ಅಶ್ವಿನಿ ದೇವತೆಗಳು ಸೇರಿ ರಾಜಗೋಪುರದಲ್ಲಿ ಮೂನ್ನೂರಕ್ಕೂ ಹೆಚ್ಚು ವಿವಿಧ ಬಣ್ಣದ ಉಬ್ಬು ಚಿತ್ರಗಳಿವೆ.
ಕ್ಲಿಕ್ ಮಾಡಿ ಓದಿ: ತೆಂಗಿನ ಮರಕ್ಕೆ ಪವರ್ ಶಾಕ್ | ಜಮೀನಿಗೆ ಕಾಲಿಡಲು ರೈತರು ಹಿಂದೇಟು
ದಾವಣಗೆರೆ, ಬಳ್ಳಾರಿ, ತುಮಕೂರು, ಬೆಂಗಳೂರು, ಶಿವಮೊಗ್ಗ, ಅನಂತಪುರ ಮುಂತಾದ ಭಾಗಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಬರುತ್ತಾರೆ. ಈ ಜಾತ್ರೆ ಮುಗಿದ ನಂತರವೇ ಈ ಭಾಗದಲ್ಲಿ ಮಾಗಿಯ ಉಳುಮೆ ಹಾಗೂ ಬಿತ್ತನೆ ಕಾರ್ಯಗಳು ಆರಂಭವಾಗುತ್ತವೆ.
ಜಾತ್ರೆಗೆ ಬಂದ ರೈತರು ಮೊಳಕೆ ಒಡೆದ ಆಹಾರ ಧಾನ್ಯಗಳ ಮಣ್ಣಿನ ಮಡಕೆಗಳಿಗೆ ಮೊದಲು ಕೈ ಮುಗಿದು ಹೋಗುವ ಸಂಪ್ರದಾಯ ನಡೆದುಬಂದಿದೆ.
