Connect with us

    Murugha matha: ತ್ರಿವಿಧ ದಾಸೋಹಿ, ಪ್ರಸಾದ ನಿಲಯಗಳ ರೂವಾರಿ ಜಯದೇವ ಶ್ರೀ | 150ನೇ ಜಯಂತ್ಯುತ್ಸವದ ವಿಶೇಷ ಲೇಖನ

    jagdguru jayadeva swamiji

    ಮುಖ್ಯ ಸುದ್ದಿ

    Murugha matha: ತ್ರಿವಿಧ ದಾಸೋಹಿ, ಪ್ರಸಾದ ನಿಲಯಗಳ ರೂವಾರಿ ಜಯದೇವ ಶ್ರೀ | 150ನೇ ಜಯಂತ್ಯುತ್ಸವದ ವಿಶೇಷ ಲೇಖನ

    CHITRADURGA NEWS | 27 AUGUST 2024

    ಅವಿಚ್ಛಿನ್ನ ಪರಂಪರೆ ಹೊಂದಿರುವ ಚಿತ್ರದುರ್ಗ ಮುರುಘಾ ಮಠ (Murugha matha) ನಾಡು ಮಾತ್ರವಲ್ಲದೇ ದೇಶಾದ್ಯಂತ ತನ್ನ ಛಾಪು ಮೂಡಿಸಿದೆ.

    ಶೂನ್ಯಪೀಠ ಪರಂಪರೆಯ ಮುರುಘಾ ಮಠಕ್ಕೆ ವಿರಕ್ತ ಪರಂಪರೆಯ ಗುರುಗಳು ನೇಮಕವಾಗಿ ಅಂದಾಜು 1640 ರಿಂದ ಈವರೆಗೆ ಮಠದ ಘನ ಪರಂಪರೆಗೆ ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತಾ ಮಠವನ್ನು ಮತ್ತೊಂದು ಎತ್ತರಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡಿದ್ದಾರೆ.

    ಹೀಗೆ ಸಾಗಿ ಬಂದ ಮುರುಘಾ ಮಠದಲ್ಲಿ ಜಗದ್ಗುರು ಶ್ರೀ ಜಯದೇವ ಸ್ವಾಮೀಜಿ ಅವರು ಪೀಠಾಧ್ಯಕ್ಷರಾಗಿದ್ದ ಅವಧಿ ಮಠದ ಇತಿಹಾಸದಲ್ಲಿ ಮತ್ತೊಂದು ಮೈಲುಗಲ್ಲು ಎನ್ನಬಹುದು.

    ಇಂದು ಮುರುಘಾ ಮಠದ ತ್ರಿವಿಧ ದಾಸೋಹದ ರೂವಾರಿ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳ 150ನೇ ಜಯಂತ್ಯುತ್ಸವ. ತನ್ನಿಮಿತ್ತ ಈ ಲೇಖನ.

    ಜಯದೇವ ಶ್ರೀಗಳು, ಗದುಗಿನ ಹತ್ತಿರ ಬಿನ್ನಾಳವೆಂಬ ಊರಿನಲ್ಲಿ ಹುಟ್ಟಿದವರು. ಗದುಗಿನ ತೋಂಟದಾರ್ಯ ಮಠಕ್ಕೆ ಮರಿಯಾಗಿ ಅಲ್ಲೇ ತಮ್ಮ ಮಾಧ್ಯಮಿಕ ಶಾಲಾ ಶಿಕ್ಷಣ ಮುಗಿಸಿ ಮುಂದೆ ಕಾಶಿಗೆ ಹೋಗಿ ಅನೇಕ ವರ್ಷಗಳ ಕಾಲ ಅಲ್ಲಿ ವಿದ್ಯಾರ್ಜನೆ ಮಾಡಿ ಕರ್ನಾಟಕಕ್ಕೆ ಹಿಂತಿರುಗಿದರು. ಮುಂದೆ ಅವರು ಚಿತ್ರದುರ್ಗದ ಬೃಹನ್ಮಠದ ಪೀಠಾಧೀಶರಾದರು.

    ಇದನ್ನೂ ಓದಿ: ಲಿಂಗೈಕ್ಯ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸ್ಮರಣೋತ್ಸವ | ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ವಿಶೇಷ ಲೇಖನ

    ಇಲ್ಲಿ ಒಂದು ಸಂಗತಿಯನ್ನು ವಿಶೇಷವಾಗಿ ನೆನಯಬೇಕಾಗಿದೆ. ಇವರು ಈ ಮಠದ ಪೀಠಾಧೀಶರಾದ ಮರು ವರ್ಷವೇ ಮೈಸೂರು ಸಂಸ್ಥಾನದ ಮಹಾರಾಜರಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ಪಟ್ಟಾಭಿಷಿಕ್ತರಾದರು. ಈ ಇಬ್ಬರೂ ತಮ್ಮ ಕಾಲಾವಧಿಯಲ್ಲಿ ಅದ್ಭುತ ಸಾಧನೆಯನ್ನು ಮಾಡಿ ಜಾಜ್ವಲ್ಯಮಾನವಾಗಿ ಬೆಳಗಿದರು. ಹಾಗೆಂದೇ ‘ಕೃಷ್ಣರಾಜ ಒಡೆಯರು ರಾಜಋಷಿ ಎನಿಸಿಕೊಂಡರೆ ಜಯದೇವ ಸ್ವಾಮಿಗಳು ಋಷಿರಾಜರೆನಿಸಿಕೊಂಡರು’ ಎಂಬ ಮಾತಿದೆ.

    ಧರ್ಮಪ್ರಚಾರಕ್ಕೆ ಅದಕ್ಕಿಂತ ಹೆಚ್ಚಾಗಿ ವಿದ್ಯಾಪ್ರಸಾರಕ್ಕೆ ಜಯದೇವ ಸ್ವಾಮಿಗಳು ವಿಶೇಷ ಗಮನಕೊಟ್ಟರು. ಹಳೇ ಮೈಸೂರು ಪ್ರಾಂತ ಅಲ್ಲದೇ ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟ್ರ ಪ್ರದೇಶದಲ್ಲೂ ಸಹ ಸ್ವಾಮಿಗಳು ಅನೇಕ ಪ್ರಜಾಹಿತ ಕಾರ್ಯಗಳನ್ನು ಕೈಗೊಂಡರು. ಅನೇಕ ಶಿಕ್ಷಣ ಸಂಸ್ಥೆಗಳು, ವಿದ್ಯಾಲಯಗಳು, ಪ್ರಸಾದನಿಲಯಗಳು, ವಾಚನಾಲಯಗಳು, ಗ್ರಂಥಾಲಯಗಳು, ಮಹಿಳಾ ಸಮಾಜ, ಆಸ್ಪತ್ರೆ, ಕ್ರೀಡಾಂಗಣ, ಹೀಗೆ ಹತ್ತು ಹಲವು ಸಮಾಜೋಪಯೋಗಿ ಕಾರ್ಯಗಳಿಗೆ ಸ್ವಾಮಿಗಳು ಉದಾರವಾಗಿ ಧನಸಹಾಯ ನೀಡಿದರು. ಯಾವುದೇ ಭೇದವಿಲ್ಲದೆ ಎಲ್ಲ ಜಾತಿಗಳ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾದರು.

    jayadeva swamiji with nalvadi krishnarajendra odeyar

    ಮೈಸೂರು ಸಂಸ್ಥಾನದ ಮಹಾರಾಜರಾಗಿ ನಾಲ್ವಡಿ ಕೃಷ್ಣರಾಜ ಒಡೆಯರು – ಜಯದೇವ ಸ್ವಾಮಿಗಳು

    ಶ್ರೀಗಳವರು ತಮ್ಮ ಸಂಚಾರದಲ್ಲಿ ಭಕ್ತರಿಂದ ಸಂಗ್ರಹವಾದ ಹಣವನ್ನು ತಮ್ಮ ಸ್ವಂತಕ್ಕೆ ಇಲ್ಲವೇ ಮಠದ ಪರಿವಾರದ ಜನರಿಗೆ ಅಥವಾ ಮಠದ ಪ್ರತಿμÉ್ಠಗೆ ಖರ್ಚು ಮಾಡದೆ, ಬಡ ವಿದ್ಯಾರ್ಥಿಗಳ ಪ್ರಸಾದ ನಿಲಯಗಳ ಸ್ಥಾಪನೆಗೆ, ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಹೋಗುವ ಪ್ರತಿಭಾವಂತರಿಗೆ ವಿನಿಯೋಗಿಸಿದರು.

    ಇದನ್ನೂ ಓದಿ: ಚನ್ನಗಿರಿ ಶಿವಮೊಗ್ಗ ಮಾರುಕಟ್ಟೆಗಳ ಅಡಿಕೆ ರೇಟ್

    ಹೀಗೆ ಅನೇಕ ಕಡೆಗಳಲ್ಲಿ ಆದ ವಿದ್ಯಾರ್ಥಿ ನಿಲಯಗಳು ಜಯದೇವ ವಿದ್ಯಾರ್ಥಿ ನಿಲಯಗಳೆಂದು ಹೆಸರಾಗಿವೆ. ಹೀಗೆ ಸ್ಥಾಪಿಸಿದ ವಿದ್ಯಾರ್ಥಿ ನಿಲಯಗಳಲ್ಲಿ ಬ್ರಾಹ್ಮಣ, ಜೈನ, ಮರಾಠ, ಹಾಗು ಮುಸುಲ್ಮಾನ ವಿದ್ಯಾರ್ಥಿಗಳಿಗೂ ಅವಕಾಶ ಸಿಗುವಂತೆ ಮಾಡಿದ್ದರು. ಅವರು ಅನೇಕ ಮುಸ್ಲಿಂ ಸಂಘ ಸಂಸ್ಥೆಗಳಿಗೆ, ದಲಿತರ ಏಳಿಗೆಗೆ, ಉದಾರ ನೆರವು ನೀಡಿದರು.

    ಅವರಿಂದ ನೆರವು ಪಡೆದ ಇಬ್ಬರು ಪ್ರಮುಖ ವ್ಯಕ್ತಿಗಳನ್ನು ಉದಾಹರಿಸುವುದಾದರೆ, ಒಬ್ಬರು ಮಾಜಿ ಮುಖ್ಯಮಂತ್ರಿಯೂ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರೂ ಆಗಿಹೋದ ಸಿದ್ಧವನಹಳ್ಳಿ ನಿಜಲಿಂಗಪ್ಪ ಹಾಗೂ ಮಲ ಹೊರುವ ಅನಿಷ್ಟ ಪದ್ಧತಿಯನ್ನು ತಪ್ಪಿಸಿದ ಕ್ರಾಂತಿಕಾರಿ ಸಚಿವರೆನಿಸಿದ ಬಿ.ಬಸವಲಿಂಗಪ್ಪ.

    ಗಾಂಧೀಜಿ ಭೇಟಿಯಾಗಿದ್ದ ಜಯದೇವ ಶ್ರೀ:

    1934ರಲ್ಲಿ ಗಾಂಧೀಜಿಯವರು ಉತ್ತರ ಕರ್ನಾಟಕಕ್ಕೆ ಬಂದಾಗ ಹಾವೇರಿಯಲ್ಲಿ ಜಯದೇವ ಸ್ವಾಮಿಗಳವರನ್ನು ಅವರು ಇದ್ದ ಮಠದಲ್ಲಿ ಭೇಟಿ ಮಾಡಿದ್ದು ಒಂದು ಅಪರೂಪದ ಘಟನೆ. ಆಗ ಅವರಿಬ್ಬರು ಅಸ್ಪೃಶ್ಯತೆ ನಿವಾರಣೆ, ರಾಷ್ಟ್ರದ ಸ್ವಾತಂತ್ರ್ಯ ಮತ್ತು ಅಭಿವೃದ್ಧಿ ಇಂತಹ ವಿಷಯಗಳನ್ನು ಕುರಿತು ಚರ್ಚಿಸಿದರು. ಆಗ ಸ್ವಾಮಿಗಳು ಸ್ವಯಂ ಖಾದಿಯ ಕಾವಿಯನ್ನು ಧರಿಸಲು ನಿಶ್ಚಯಿಸಿದರು; ಗಾಂಧೀಜಿಯವರು ಕೈಕೊಂಡ ಚಳವಳಿಯನ್ನು ಬೆಂಬಲಿಸಿದರು.

    ಮೈಸೂರಿನ ರೋಗನಿದಾನ ವಿಭಾಗಕ್ಕೆ ಶ್ರೀಗಳ ಕೊಡುಗೆ:

    ಮೈಸೂರು ಸಂಸ್ಥಾನದ ದೊರೆಗಳಾದ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರು ಮತ್ತು ದಿವಾನ್ ಮಿರ್ಜಾ ಇಸ್ಮಾಯಿಲ್‍ರವರು 1937ರಲ್ಲಿ ಶ್ರೀಗಳ ದರ್ಶನಕ್ಕೆ ಬೃಹನ್ಮಠಕ್ಕೆ ಬಂದಿದ್ದಾಗ ಮೈಸೂರಿನ ಆಸ್ಪತ್ರೆ ನಿರ್ಮಾಣದಲ್ಲಿ ರೋಗನಿದಾನ ವಿಭಾಗವೊಂದನ್ನು ಕಟ್ಟಿಸಲು ಸ್ವಾಮಿಗಳು ಉದಾರವಾಗಿ ಕಾಣಿಕೆ ನೀಡುವಂತೆ ಕೇಳಿದಾಗ ನಿಂತ ನಿಲವಿನಲ್ಲೇ ಮಠದಲ್ಲಿದ್ದ ನಲವತ್ತು ಸಾವಿರ ರೂಪಾಯಿಗಳನ್ನು ತಮ್ಮ ಕಾಣಿಕೆಯಾಗಿ ನೀಡಿದರು.

    ಮೈಸೂರಿನ ಆಸ್ಪತ್ರೆಯ ಸಂಕೀರ್ಣದಲ್ಲಿ ಜಯದೇವ ಸ್ವಾಮಿಗಳ ಹೆಸರಿನಲ್ಲಿ ಆ ವಿಭಾಗವಿರುವುದನ್ನು ಈಗಲೂ ನೋಡಬಹುದು. ಜಯದೇವ ಸ್ವಾಮಿಗಳು ವಿದ್ಯಾದಾನಕ್ಕೆ ತುಂಬ ಪ್ರಾಶಸ್ತ್ಯ ಕೊಟ್ಟದ್ದು ಎಲ್ಲರೂ ಬಲ್ಲ ಸಂಗತಿ.

    ಇದನ್ನೂ ಓದಿ: ದೇವಸ್ಥಾನದಲ್ಲಿ ಗಲಾಟೆ | ಪರಸ್ಪರ ದೂರು ದಾಖಲು

    “ಕರ್ನಾಟಕ ಮಠಾಧೀಶ್ವರರು” ಎಂಬ ಪುಸ್ತಕದಲ್ಲಿ(1953) ಅದರ ಲೇಖಕರಾದ ಎಸ್.ಟಿ. ನೆಸ್ವಿ ಹೇಳುವ ಮಾತು ಹೀಗಿದೆ, “ಭರತ ಖಂಡದಲ್ಲಿ ವಿದ್ಯಾಪ್ರಸಾರಕ್ಕೂ ಅನಾಥರಿಗೂ ಇವರಷ್ಟು ಧನದ ಧಾರೆಯೆರೆದು ಸಹಾಯ ಮಾಡಿದವರು ಯಾವ ಮಠದ ಸ್ವಾಮಿಗಳೂ ಇಲ್ಲವೆಂದು ಧಾರಾಳವಾಗಿ ಹೇಳಬಹುದು…

    ಅಲ್ಲದೇ ಅನೇಕ ಸಂಘ ಸಂಸ್ಥೆಗಳಿಗೂ ವಾಚನಾಲಯಗಳಿಗೂ, ವಿದ್ಯಾರ್ಥಿ ನಿಲಯಗಳಿಗೂ, ಜಾತಿ ಮತಗಳ ಬೇಧ ಭಾವವಿಲ್ಲದೇ ಹದಿನೆಂಟು ಲಕ್ಷ ರೂಪಾಯಿಗಳಿಗೂ ಮಿಗಿಲಾಗಿ ಸಹಾಯವನ್ನು ಮಾಡಿರುತ್ತಾರೆ, ಜಗದ್ಗುರು ಮಹಾಸ್ವಾಮಿಗಳವರು ಕರ್ನಾಟಕದಲ್ಲಿ ವೀರಶೈವ ಮತದಲ್ಲಿ ಜನ್ಮವೆತ್ತಿದರೂ ಸರ್ವ ದೇಶ, ಸರ್ವ ದರ್ಶನ, ಸರ್ವ ಜೀವಿಗಳಲ್ಲಿ ಇವರ ಪ್ರೇಮವು ಪಸರಿಸಿರುವುದು. ತಮ್ಮಿಂದಲೂ ಮತ್ತು ತಮ್ಮ ಮಠದಿಂದಲೂ ಯಾವತ್ತು ಜೀವಿಗಳಿಗೆ ಸುಖವೂ ಉಪಕಾರವೂ ಆಗಬೇಕೆಂಬುದು ಶ್ರೀಗಳವರ ಮನೀμÉ. ಶ್ರೀ ಜಗದ್ಗುರು ಮುರುಘರಾಜೇಂದ್ರ ಸ್ವಾಮಿಗಳೆಂದರೆ ಪ್ರೇಮದ ಮೂರ್ತಿ, ಸದ್ಗುಣಗಳ ಖಣಿ, ಧರ್ಮದ ದೇವತೆ, ಸೌಜನ್ಯದ ಆಗರ, ದೀನ ದರಿದ್ರರ ಕೈವಾರಿ” ಈ ಮಾತುಗಳು ಸ್ವಾಮಿಗಳ ವ್ಯಕ್ತಿತ್ವ ಮತ್ತು ಸಾಧನೆಗೆ ಹಿಡಿದ ಕನ್ನಡಿಯಾಗಿವೆ.

    ಮುರುಘಾ ಮಠ

    ಮುರುಘಾ ಮಠ

    ಜಯದೇವ ಸ್ವಾಮಿಗಳು ಶಿಕ್ಷಣ ಪ್ರಸಾರದ ಕಾರ್ಯಕ್ಕಾಗಿ ವಿನಿಯೋಗಿಸಿದ ಹಣದ ಬೃಹತ್ ಪ್ರಮಾಣದ ಮೊತ್ತವನ್ನು ಕುರಿತ ಒಂದು ವಿವರ ಹೀಗಿದೆ: “ಮೈಸೂರಲ್ಲಿ ರೋಗ ಪರಿಹಾರ ಪರೀಕ್ಷೆಯ ಪ್ರಯೋಗಾಲಯ ಶಂಕುಸ್ಥಾಪನೆ ನೆರವೇರಿಸಿದ ಶ್ರೀ ಮಹಾರಾಜರು ತಮ್ಮ ಉಪನ್ಯಾಸದಲ್ಲಿ 18 ಲಕ್ಷ ರೂ.ಗಳನ್ನು ಬೃಹನ್ಮಠ ಮಹಾಸಂಸ್ಥಾನವು ಶಿಕ್ಷಣ ಪ್ರಸಾರಕ್ಕಾಗಿ ವಿನಿಯೋಗಿಸಿರುವುದನ್ನು ಪ್ರಶಂಸಿಸಿದರು”.

    ಅಲ್ಲದೆ ಹಿಂದಿನ ಮುಖ್ಯಮಂತ್ರಿಗಳಾದ ಎಸ್.ನಿಜಲಿಂಗಪ್ಪನವರು 50 ಲಕ್ಷ ರೂಪಾಯಿಗಳಿಗೂ ಹೆಚ್ಚು ಹಣ ಲಿಂಗಾಯತ ಮತ್ತು ಲಿಂಗಾಯಿತೇತರ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಬೃಹನ್ಮಠ ವಿನಿಯೋಗಿಸಿದೆ. ಈಗಿನ ಲೆಕ್ಕಾಚಾರದಲ್ಲಿ ಈ ಮೊತ್ತ 8-10 ಕೋಟಿಗಳμÁ್ಟಗಬಹುದು” ಎಂದಿದ್ದಾರೆ.

    ದಾವಣಗೆರೆಯಲ್ಲಿ ಜಯದೇವ ಶ್ರೀ ಗದ್ದುಗೆ:

    ಹೀಗೆ ಬಹುವಿಧದಲ್ಲಿ ಸ್ವಾಮಿಗಳು ಸಮಾಜದ ಏಳಿಗೆಗೆ ಸ್ಪಂದಿಸಿ ಸಹಾಯ ಮಾಡಿದ್ದಾರೆ. ಗಣ್ಯರ ಮತ್ತು ಜನಸಾಮಾನ್ಯರೆಲ್ಲರ ಪ್ರಶಂಸೆಯನ್ನು ಗಳಿಸಿದ್ದಾರೆ. 1949ರಲ್ಲಿ ಜಯವಿಭವ ಸ್ವಾಮಿಗಳವರನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಿದ್ದ ಸ್ವಾಮಿಗಳು 1956ರಲ್ಲಿ ಲಿಂಗೈಕ್ಯರಾದರು.

    ಇದನ್ನೂ ಓದಿ: ಬೆಂಬಲ ಬೆಲೆಯಲ್ಲಿ ಹೆಸರುಕಾಳು ಖರೀಧಿಗೆ ನಿರ್ಧಾರ

    ದಾವಣಗೆರೆ ನಗರದ ಶಿವಯೋಗಿ ಮಂದಿರ(ಶಿವಯೋಗಾಶ್ರಮ)ದ ಆವರಣದಲ್ಲಿ ಅವರ ಗದ್ದುಗೆಯನ್ನು ಮಾಡಲಾಗಿದೆ. ಜಯದೇವ ಸ್ವಾಮಿಗಳು ತಾವು ಭೇಟಿಕೊಟ್ಟ ಊರುಗಳಲ್ಲಿ ಮೊದಲಿಗೆ ವಿಚಾರಿಸುತ್ತಿದ್ದುದು ಅಲ್ಲಿ ವಾಚನಾಲಯ ಇದೆಯೇ ಎಂಬುದು ಮತ್ತು ವಿದ್ಯಾರ್ಥಿಗಳಿಗೆ ಪ್ರಸಾದ ನಿಲಯ ಇದೆಯೇ ಎನ್ನುವುದು. ಆಯಾ ಊರಿನ ಭಕ್ತಾದಿಗಳು ಕೊಟ್ಟ ಹಣವನ್ನು ಆಯಾ ಸ್ಥಳದ ಜವಾಬ್ದಾರಿಯುತ ಜನರ ಒಂದು ಟ್ರಸ್ಟ್ ಮಾಡಿ ಅವರಿಗೆ ಒಪ್ಪಿಸಿ ಅಲ್ಲೆ ಒಂದು ಪ್ರಸಾದ ನಿಲಯ ಮಾಡಲು ಮತ್ತು ನಡೆಸಲು ಅವರಿಗೆ ಜವಾಬ್ದಾರಿ ವಹಿಸುತ್ತಿದ್ದರು.

    ಹೀಗೆ ರಾಜ್ಯದ ಒಳಗೆ ಮತ್ತು ಹೊರಗೆ ಅನೇಕ ಪ್ರಸಾದ ನಿಲಯಗಳು ಸ್ಥಾಪಿತವಾಗಲು ಅವರು ಕಾರಣರಾದರು. ಚಿತ್ರದುರ್ಗ, ದಾವಣಗೆರೆ, ತುಮಕೂರು, ಬೆಂಗಳೂರು, ನಿಪ್ಪಾಣಿ, ಸತಾರ, ಸಾಂಗ್ಲಿ, ಔದ್, ಮುಂತಾದ ಕಡೆಗಳಲ್ಲಿ ಅವರು ಪ್ರಾರಂಭಿಸಿದ ಪ್ರಸಾದನಿಲಯಗಳು ಅನೇಕ ವಿದ್ಯಾರ್ಥಿಗಳ ಜೀವನ ಬೆಳಗಲು ಅನುಕೂಲ ಉಂಟುಮಾಡಿದುವು. ಹೀಗೆ ತಿಪಟೂರು, ಧಾರವಾಡ, ಹೊಳವನಹಳ್ಳಿ, ಸೋಮಪುರ, ಬ್ಯಾಡಗಿ, ಕಾರವಾರ, ಕೊಲ್ಲಾಪುರ, ಕಾಶಿ ಮೊದಲಾದ ಕಡೆಗಳಲ್ಲಿ ಶಾಖಾಮಠಗಳಲ್ಲಿಯೇ ವಿದ್ಯಾರ್ಥಿಗಳಿಗೆ ಊಟ ವಸತಿಗಳಿಗೆ ಅನುಕೂಲವನ್ನು ಕಲ್ಪಿಸಿದರು.

    ದಲಿತರ, ಭೋವಿಗಳ ವಿದ್ಯಾರ್ಥಿ ನಿಲಯಗಳಿಗೂ ದೇಣಿಗೆ:

    ಇದಲ್ಲದೇ ದಲಿತರ, ಭೋವಿಗಳ ವಿದ್ಯಾರ್ಥಿ ನಿಲಯಗಳಿಗೂ ದೇಣಿಗೆಯನ್ನು ನೀಡಿದ್ದರು. ಹಾವೇರಿಯಲ್ಲಿ ದಲಿತ ವಿದ್ಯಾರ್ಥಿಗಳಿಗಾಗಿ ಶಾಲಾ ಕಟ್ಟಡವನ್ನು ನಿರ್ಮಾಣ ಮಾಡಿಸಿದರು. ಕೊಲ್ಲಾಪುರದಲ್ಲಿ ಜೈನ, ಮರಾಠ, ಮುಸ್ಲಿಂ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಿದರು.

    ತದನಂತರದಲ್ಲಿ ಮತ್ತೆ ಹಲವೆಡೆ ಪ್ರಸಾದ ನಿಲಯಗಳು ಸ್ಥಾಪನೆಯಾಗಿ ನಡೆದುಕೊಂಡು ಬರುತ್ತಿವೆ. ಶಿರಸಂಗಿಯ ಲಿಂಗರಾಜರು, ಅರಟಾಳ ರುದ್ರಗೌಡರು, ವಾರದ ಮಲ್ಲಪ್ಪನವರು ಇವರೇ ಮುಂತಾದ ವೀರಶೈವ ಗಣ್ಯರು ಶಿಕ್ಷಣ ಕ್ಷೇತ್ರಕ್ಕೆ ನಾನಾ ವಿಧವಾಗಿ ಕೊಡುಗೆಗಳನ್ನೀಯಲು ಸ್ವಾಮಿಗಳವರ ಪ್ರೇರಣೆ ಕಾರಣವಾಯಿತು. ಹೀಗೆ ಸ್ವಾಮಿಗಳು ಅನೇಕರನ್ನು ಶಿಕ್ಷಣದತ್ತ ಮುಖ ಮಾಡುವಂತೆ ಮಾಡಿದರು. ‘ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ’ ಎಂಬ ಬಸವಣ್ಣನವರ ವಾಣಿಯನ್ನು ನಿಜ ಮಾಡುವಂತೆ ಕ್ರಿಯಾಶೀಲವಾಗಿ ಬೆಳಗಿದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top