Connect with us

ವಾಹನ ಚಾಲಕರೇ ಎಚ್ಚರ…ನಗರದಲ್ಲಿ ಬಿಗಿಯಾಗಲಿದೆ ಟ್ರಾಫಿಕ್‌ ರೂಲ್ಸ್‌ | ಸಿದ್ಧವಾಗಿದೆ ಮಾಸ್ಟರ್‌ ಪ್ಲಾನ್‌

trafic

ಮುಖ್ಯ ಸುದ್ದಿ

ವಾಹನ ಚಾಲಕರೇ ಎಚ್ಚರ…ನಗರದಲ್ಲಿ ಬಿಗಿಯಾಗಲಿದೆ ಟ್ರಾಫಿಕ್‌ ರೂಲ್ಸ್‌ | ಸಿದ್ಧವಾಗಿದೆ ಮಾಸ್ಟರ್‌ ಪ್ಲಾನ್‌

CHITRADURGA NEWS | 04 JULY 2024
ಚಿತ್ರದುರ್ಗ: ಚಿತ್ರದುರ್ಗ ನಗರದಲ್ಲಿ ಇನ್ನೂ ಬೇಕಾಬಿಟ್ಟಿ ವಾಹನ ಚಾಲನೆ, ಎಲ್ಲೆಂದರಲ್ಲಿ ವಾಹನ ನಿಲ್ಲಿಸುವುದು, ರೂಲ್ಸ್‌ ಬ್ರೇಕ್‌ ಮಾಡುವುದು..ಹೀಗೆ ಸಂಚಾರ ನಿಯಮ ಉಲ್ಲಂಘನೆಗೆ ಬ್ರೇಕ್‌ ಬೀಳಲಿದೆ.

ಹೊಸ ಸಂಚಾರಿ ವೃತ್ತ ನಿರ್ಮಾಣ, ಅಪಘಾತ ತಡೆಗೆ ಮೆಸ್ ಅಳವಡಿಕೆ, ಪಾರ್ಕಿಂಗ್‌, ಶಿಶು ಕವಚ ಹಾಗೂ ವಿಎಲ್‍ಟಿ ಪ್ಯಾನಿಕ್ ಬಟನ್ ಕಡ್ಡಾಯವಾಗಲಿದೆ. ಈಗಾಗಲೇ ನಗರದ ಸಂಚಾರ ದಟ್ಟಣೆ ಹಾಗೂ ಸಮಸ್ಯೆ ಕುರಿತು ಸಂಚಾರ ಠಾಣೆ ಪೊಲೀಸರು ಸಮೀಕ್ಷೆ ನಡೆಸಿ, ಪರಿಹಾರಕ್ಕಾಗಿ ಸೂಕ್ತ ವರದಿ ಸಿದ್ಧಪಡಿಸಿದ್ದಾರೆ. ವರದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಮಗ್ರ ಚರ್ಚೆ ನಡೆಸಿ, ಸಾಧಕ ಬಾಧಕಗಳನ್ನು ಅವಲೋಕಿಸಿ ಅನುಷ್ಠಾನ ಮಾಡುವುದಾಗಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ ತಿಳಿಸಿದ್ದಾರೆ.

ಕ್ಲಿಕ್‌ ಮಾಡಿ ಓದಿ: ಗ್ರಾಮ ಪಂಚಾಯಿತಿಗಳಿಗೆ ನೀರು ಪರೀಕ್ಷೆ ಕಿಟ್‌ | ಜಿಪಂ ಸಿಇಒ ಎಸ್‌.ಜೆ.ಸೋಮಶೇಖರ್‌

ಚಿತ್ರದುರ್ಗ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಮಾತನಾಡಿದರು.

ನಗರದ ಮುಖ್ಯ ರಸ್ತೆಯಲ್ಲಿ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳ ಓಡಾಟದಿಂದ ಎಸ್‌ಬಿಐ ಬ್ಯಾಂಕ್ ಹಾಗೂ ಗಾಂಧಿ ವೃತ್ತದಲ್ಲಿ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ನಗರ ಪ್ರವೇಶಿಸುವ ಹಾಗೂ ಹೊರ ಹೋಗುವ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳ ಸಂಚಾರ ಮಾರ್ಗಗಳಲ್ಲಿ ಮಾಡಬೇಕಾದ ಬದಲಾವಣೆ, ದ್ವಿಚಕ್ರ ಹಾಗೂ ನಾಲ್ಕು ಚಕ್ರಗಳ ವಾಹನಗಳಿಗೆ ಸೂಕ್ತ ಪಾರ್ಕಿಂಗ್ ಸ್ಥಳ ಗುರುತಿಸಿ ವರದಿ ಸಲ್ಲಿಸಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.

ಕ್ಲಿಕ್‌ ಮಾಡಿ ಓದಿ: 15 ರ ಬದಲು 21 ಮೀಟರ್ ಮುಖ್ಯ ರಸ್ತೆ ವಿಸ್ತರಿಸಿ | ಜಿಲ್ಲಾಧಿಕಾರಿಗೆ ಪತ್ರ

ಚಳ್ಳಕೆರೆ ಗೇಟ್‌ನಲ್ಲಿ ಅಪಘಾತ ತಡೆಯುವ ನಿಟ್ಟಿನಲ್ಲಿ ಹೊಸ ಸಂಚಾರಿ ವೃತ್ತ ನಿಮಾರ್ಣ ಮಾಡುವ ಕುರಿತು ಲೊಕೋಪಯೋಗಿ ಹಾಗೂ ನಗರಸಭೆಯಿಂದ ಪರಿಶೀಲನೆ ನಡೆಸಬೇಕು. ರಸ್ತೆ ಸೇತುವೆ ಕೆಳಭಾಗದ ಹಾಗೂ ಇಕ್ಕೆಲಗಳಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ಗೂಡಂಗಡಿಗಳನ್ನು ತೆರವುಗೊಳಿಸಬೇಕು. ಸೇತುವೆ ಕೆಳಭಾಗದಲ್ಲಿ ಪಾರ್ಕಿಂಗ್‌ಗೆ ಅವಕಾಶ ನೀಡದಂತೆ, ರಸ್ತೆಯ ಇಕ್ಕೆಲಗಳಲ್ಲಿರುವ ಖಾಲಿ ಸ್ಥಳದಲ್ಲಿ ದ್ವಿ ಚಕ್ರ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಚಳ್ಳಕೆರೆ ಗೇಟ್ ಬಳಿ ಬಸ್ ತಂಗುದಾಣ ನಿರ್ಮಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೆಳಗೋಟೆಯ ಬಸವೇಶ್ವರ ಆಸ್ಪತ್ರೆಯ ಬಳಿಯ ಹಳೆಯ ರಾಷ್ಟ್ರೀಯ ಹೆದ್ದಾರಿ ಅಪಾಯಕರ ಸ್ಥಳವಾಗಿದೆ. ಜನರು ರಸ್ತೆ ದಾಟಲು ಹೋಗಿ ಅಪಘಾತದಲ್ಲಿ ಮರಣ ಹೊಂದುತ್ತಿದ್ದಾರೆ. ಈ ಸ್ಥಳದಲ್ಲಿ 2020 ರಿಂದ 2024ರ ವರೆಗೆ ವಿವಿಧ ಅಪಘಾತದಲ್ಲಿ ಒಟ್ಟು 11 ಜನರು ಮೃತಪಟ್ಟಿದ್ದು, ಲೋಕೋಪಯೋಗಿ ಇಲಾಖೆ ವತಿಯಿಂದ ಜನರು ಹೆದ್ದಾರಿ ಪ್ರವೇಶಿಸದಂತೆ ಲೋಹದ ಮೆಸ್ ಅಳವಡಿಸಬೇಕು. ಹೀಗೆ ಅಳವಡಿಸಿದ ಮೆಸ್ ತುಂಡಾಗದಂತೆ ನಿರ್ವಹಣೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಸಭೆಯಲ್ಲಿ ಹೇಳಿದರು.

ಈಗಾಗಲೇ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರ ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿದೆ. ತಕ್ಷಣವೇ ಹೆದ್ದಾರಿ ಮಧ್ಯದ ಡಿವೈಡರ್‌ಗಳಲ್ಲಿ ಬೆಳೆದಿರುವ ಗಿಡಗಳನ್ನು ಕಡಿಯುವ ಕೆಲಸವಾಗಬೇಕು. ಸಂಚಾರಿ ಫಲಕಗಳು ಅಳವಡಿಸಬೇಕು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳು.

ತುರುವನೂರು ರಸ್ತೆಯಿಂದ ಜಿಲ್ಲಾ ಆಸ್ಪತ್ರೆಗೆ ತೆರಳುವ ಮಾರ್ಗದಲ್ಲಿ ಜಿಲ್ಲಾ ಆಸ್ಪತ್ರೆ ಮುಂಭಾಗ ಬಿ.ಡಿ. ರಸ್ತೆಯಲ್ಲಿನ ಡಿವೈಡರ್‌ ತೆರವುಗೊಳಿಸಿ ಆಸ್ಪತ್ರೆಗೆ ಹೋಗಲು ಅನುಕೂಲ ಮಾಡಿಕೊಡಬೇಕು. ಮೆದೇಹಳ್ಳಿ ಅಂಡರ್‌ ಪಾಸ್‌ ಬಳಿ ರಸ್ತೆಯ ಮಧ್ಯದಲ್ಲಿ ಒಳಚರಂಡಿ ದುರಸ್ಥಿಯಲ್ಲಿ ಇದ್ದು, ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ. ಇದೇ ಮಾದರಿಯಲ್ಲಿ ತುರುವನೂರು ರಸ್ತೆಯ ಅಂಡರ್ ಪಾಸ್ ತೊಂದರೆ ಇದೆ. ನಗರ ರಸ್ತೆಗಳಲ್ಲಿ ಬಿಡಾಡಿ ದನಗಳ ಸಂಚಾರ ಅಧಿಕವಾಗಿದೆ. ಗೂಡಂಗಡಿಗಳು ಸಹ ಹೆಚ್ಚಾಗಿವೆ ಇದರಿಂದ ಲಘು ಅಪಘಾತಗಳು ಉಂಟಾಗುವ ಸಂಭವವಿದೆ ಎಂದು ಸಂಚಾರಿ ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ ಟಿ.ರಾಜು ವಿವರಿಸಿದರು.

ನಗರದ ಪಾರ್ಕಿಂಗ್‌ ಸ್ಥಳಗಳಲ್ಲಿ ಮಾರ್ಕಿಂಗ್ ಮಾಡಲು ₹ 14.63 ಲಕ್ಷ ಅಂದಾಜು ಪಟ್ಟಿ ತಯಾರಿಸಲಾಗಿದೆ. ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ನಗರಸಭೆ ಆಯುಕ್ತೆ ಎಂ.ರೇಣುಕಾ ಸಭೆಯಲ್ಲಿ ಮಾಹಿತಿ ನೀಡಿದರು.

ಆಟೋ ನಿಲ್ದಾಣಗಳಿಗಾಗಿ ನಗರಸಭೆಯಿಂದ 27 ಸ್ಥಳ ಗುರುತಿಸಲಾಗಿದೆ. ಪೊಲೀಸ್‌ ಇಲಾಖೆ ಜತೆ ಚರ್ಚಿಸಿ ಕ್ರಮ ವಹಿಸಲಾಗುವುದು. ಬೀದಿ ಬದಿ ವ್ಯಾಪಾರಿಗಳಿಗೆ 12 ಸ್ಥಳ ಗುರುತಿಸಲಾಗಿದೆ. ಇನ್ನೂ ಕೆಲವು ಭಾಗಗಳಲ್ಲಿ ವ್ಯಾಪಾರ ಸ್ಥಳಗಳನ್ನು ಗುರುತಿಸಲಾಗುವುದು ಎಂದರು.

ಕ್ಲಿಕ್‌ ಮಾಡಿ ಓದಿ: ಅದಿರು ಲಾರಿಗಳ ನೊಂದಣಿ ರದ್ದುಗೊಳಿಸಿ | ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಸೂಚನೆ

ಸಾರಿಗೆ ಇಲಾಖೆಯಿಂದ ಮಕ್ಕಳ ಹಿತದೃಷ್ಟಿಯಿಂದ ಬೈಕ್‌ ಸವಾರಿಯ ವೇಳೆ 9 ತಿಂಗಳ ಮೇಲ್ಪಟ್ಟ ಹಾಗೂ 4 ವರ್ಷದ ಮಕ್ಕಳಿಗೆ ಶಿಶು ಕವಚ ಕಡ್ಡಾಯಗೊಳಿಸಿದೆ. ಇಲ್ಲವಾದರೆ ₹1000 ದಂಡ ವಿಧಿಸಲಾಗುವುದು. ಇದರ ಜೊತೆಗೆ 4 ಆಸನಗಳ ಮೇಲ್ಪಟ್ಟ ವಾಹನಗಳಲ್ಲಿ ವಿಎಲ್‌ಟಿ (ವೆಹಿಕಲ್ ಲೊಕೇಷನ್ ಟ್ರಾಕಿಂಗ್ ) ಮಹಿಳೆ ಹಾಗೂ ಮಕ್ಕಳ ಹಿತದೃಷ್ಟಿಯಿಂದ ಪ್ಯಾನಿಕ್ ಬಟನ್ ಅಳವಡಿಸುವುದು ಕಡ್ಡಾಯ ಮಾಡಲಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಭರತ್.ಎಂ.ಕಾಳೆಸಿಂಗೆ ಸಭೆಗೆ ಮಾಹಿತಿ ನೀಡಿದರು.

ಲೋಕೋಪಯೋಗಿ ಕಾರ್ಯಪಾಲಕ ಎಂಜಿನಿಯರ್‌ ಮಲ್ಲಿಕಾರ್ಜುನ್ ಇದ್ದರು.

Click to comment

Leave a Reply

Your email address will not be published. Required fields are marked *

More in ಮುಖ್ಯ ಸುದ್ದಿ

To Top
Exit mobile version