ಮುಖ್ಯ ಸುದ್ದಿ
15 ರ ಬದಲು 21 ಮೀಟರ್ ಮುಖ್ಯ ರಸ್ತೆ ವಿಸ್ತರಿಸಿ | ಜಿಲ್ಲಾಧಿಕಾರಿಗೆ ಪತ್ರ
CHITRADURGA NEWS | 04 JULY 2024
ಚಿತ್ರದುರ್ಗ: ಹಿರಿಯೂರು ನಗರದ ಪ್ರಧಾನ ರಸ್ತೆಯನ್ನು 15 ಮೀಟರ್ ಬದಲು 21 ಮೀಟರ್ ವಿಸ್ತರಣೆ ಮಾಡಿದರೆ ಭವಿಷ್ಯದ ದೃಷ್ಟಿಯಿಂದ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರಿಗೆ ನಗರಸಭೆ ಸ್ಥಾಯಿ ಸಮಿತಿ ಸದಸ್ಯ ಜೆ.ಆರ್.ಅಜಯ್ ಕುಮಾರ್ ಪತ್ರ ಬರೆದಿದ್ದಾರೆ.
ಹಲವು ವರ್ಷಗಳಿಂದ ನಗರದ ಪ್ರಧಾನ ರಸ್ತೆಯನ್ನು ವಿಸ್ತರಿಸಬೇಕು ಎಂಬ ಸಾರ್ವಜನಿಕರ ಒತ್ತಾಸೆಯನ್ನು ಜಿಲ್ಲಾಡಳಿತ ಈಡೇರಿಸಲು ಮುಂದಾಗಿರುವುದು ಸಂತಸದ ಸಂಗತಿ. ಆದರೆ, ರಸ್ತೆ ಮಧ್ಯಭಾಗದಿಂದ 15 ಮೀಟರ್ ವಿಸ್ತರಣೆ ಮಾಡಿದರೆ ಪ್ರಯೋಜನವಾಗದು. ನಗರದ ಪ್ರವಾಸಿ ಮಂದಿರ ವೃತ್ತದಿಂದ ಗಾಂಧಿ ವೃತ್ತದವರೆಗೆ ನಿತ್ಯ 15,000ದಿಂದ 20,000 ವಾಹನಗಳು ಸಂಚರಿಸುತ್ತವೆ.
ಕಿರಿದಾಗಿರುವ ರಸ್ತೆಯ ಕಾರಣಕ್ಕೆ ನಿತ್ಯ ನೂರಿನ್ನೂರು ಬಾರಿ ಸಂಚಾರ ಅಸ್ತವ್ಯಸ್ತವಾಗುತ್ತಿದೆ. ಮುಂದಿನ 10– 15 ವರ್ಷಗಳಲ್ಲಿ ಈಗಿರುವ ವಾಹನಗಳ ಸಂಖ್ಯೆ ಮತ್ತು ಜನರ ಓಡಾಟ ದುಪ್ಪಟ್ಟು ಆಗಲಿದೆ. ಹತ್ತು ವರ್ಷಗಳ ನಂತರ ಮತ್ತೆ ಇಂತಹದ್ದೇ ಕಿರಿಕಿರಿ ಅನುಭವಿಸಬಾರದು ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ರಸ್ತೆಯನ್ನು 15 ಮೀಟರ್ ಬದಲಿಗೆ 21 ಮೀಟರ್ ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ಅದಿರು ಲಾರಿಗಳ ನೊಂದಣಿ ರದ್ದುಗೊಳಿಸಿ | ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಸೂಚನೆ
ಗಾಂಧಿ ವೃತ್ತದಿಂದ ರಂಜಿತ್ ಹೋಟೆಲ್ ವೃತ್ತದವರೆಗೆ ಇರುವ ದ್ವಿಪಥ ರಸ್ತೆಯನ್ನು ಹಿಂದಿನವರು ವೈಜ್ಞಾನಿಕ ರೀತಿಯಲ್ಲಿ ವಿಸ್ತರಿಸದ ಕಾರಣ ಇಡೀ ರಸ್ತೆಯಲ್ಲಿ ಎಲ್ಲಿಯೂ ವಾಹನ ನಿಲುಗಡೆಗೆ ಸ್ಥಳವೇ ಇಲ್ಲವಾಗಿದೆ. ಪಾದಚಾರಿ ರಸ್ತೆಯೂ ಕಿರಿದಾಗಿದೆ. ಚರಂಡಿ ನಿರ್ಮಾಣಕ್ಕೆ ಜಾಗವೇ ಸಿಕ್ಕಿಲ್ಲ. ಬೀದಿ ದೀಪದ ವಿದ್ಯುತ್ ಕಂಬಗಳನ್ನು ಇಕ್ಕಟ್ಟಾದ ಜಾಗದಲ್ಲಿ ನಿಲ್ಲಿಸಲಾಗಿದೆ. ಗಿಡ– ಮರ ಬೆಳೆಸಲು ಸ್ಥಳವೇ ಇಲ್ಲವಾಗಿದೆ ಎಂದು ಸಮಸ್ಯೆ ವಿವರಿಸಿದ್ದಾರೆ.