ಮಾರುಕಟ್ಟೆ ಧಾರಣೆ
ಭ್ರಷ್ಟ ರಾಜಕಾರಣದ ಬಗ್ಗೆ ವೈರಾಗ್ಯ | ಸಚಿವ ಎ.ನಾರಾಯಣಸ್ವಾಮಿ ಅಚ್ಚರಿಯ ಹೇಳಿಕೆ
ಚಿತ್ರದುರ್ಗ ನ್ಯೂಸ್.ಕಾಂ: ರಾಜಕಾರಣದಿಂದ ನಾನು ದೂರ ಉಳಿಯಬೇಕೆಂದಿದ್ದೇನೆ. ಭ್ರಷ್ಟ ರಾಜಕೀಯ ವ್ಯವಸ್ಥೆಯಲ್ಲಿ ಮುಂದುವರೆಯುವ ರಾಜಕಾರಣಿ ನಾನಲ್ಲ ಎಂದು ಕೇಂದ್ರ ಸಚಿವ ಹಾಗೂ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೋವಿಡ್ ಮುನ್ನೆಚ್ಚರಿಕೆ ಕುರಿತು ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಭ್ರಷ್ಟಚಾರದ ಕುರ್ಚಿಯ ಪಕ್ಕದಲ್ಲೂ ನಾನು ಕೂರುವುದಿಲ್ಲ. ಆದರೂ ಕುಳಿತಿದ್ದೇನೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು.
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದು, ಟಿಕೇಟ್ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಪಕ್ಷದ ವಲಯದಲ್ಲಿ ಟಿಕೇಟ್ ಪಕ್ಕಾ ಮಾಡಿಕೊಳ್ಳಲು ಹಾಲಿ ಸಂಸದರು ಕಸರತ್ತು ಆರಂಭಿಸಿದ್ದಾರೆ. ಇಂತಹ ಹೊತ್ತಿನಲ್ಲಿ ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಹೇಳಿಕೆ ವಿಶೇಷ ಅರ್ಥ ಕಲ್ಪಿಸುತ್ತಿದೆ.
ಇದನ್ನೂ ಓದಿ: ಲೋಕಸಭೆಗೆ ಟಿಕೇಟ್ ಕೇಳಿದ್ದೇನೆ | ಎಂ.ಸಿ.ರಘುಚಂದನ್
ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಬರಲು ಈ ಹೇಳಿಕೆಯೇ ಎನ್ನುವ ಸುದ್ದಿಗಾರರ ಪ್ರಶ್ನೆಗೆ, ಯಾವುದೇ ಚುನಾವಣೆ ಪ್ರಶ್ನೆ ಇಲ್ಲ. ಭವಿಷ್ಯದ ಚುನಾವಣೆಗಳಲ್ಲೂ ಇದೇ ನನ್ನ ನಿರ್ಧಾರ ಎಂದರು.
ಮುಂದಿನ ಚುನಾವಣೆಗೆ ನೀವು ಆಕಾಂಕ್ಷಿಯೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡುವಾಗಲೇ ನಾನು ಟಿಕೇಟ್ ಆಕಾಂಕ್ಷಿ ಅಲ್ಲ ಎಂದು ಸ್ಪಷ್ಟಪಡಿಸಿದರು.
ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದನ್ನು ನಿರ್ಧರಿಸುವುದು ನನ್ನ ಪಕ್ಷ. ನಾನು ಪಕ್ಷದ ಸೇನಾನಿ. ಪಕ್ಷ ಏನು ಹೇಳುತ್ತದೆಯೋ ಅದನ್ನು ಮಾಡುವವನು. ನಾನು ಯಾವುದೇ ನಿರೀಕ್ಷೆ ಹೊಂದಿದವನಲ್ಲ ಎಂದು ಹೇಳಿದರು.
ದೇಶ ಸಮೃದ್ಧವಾಗಿರಬೇಕು ಎನ್ನುವುದು ಒಂದೇ ನನ್ನ ಕನಸು. ನಾನೇ ಟಿಕೇಟ್ ತೆಗೆದುಕೊಳ್ಳಬೇಕು, ನಾನೇ ಎಂಪಿ ಆಗಬೇಕು, ನನ್ನ ಮಕ್ಕಳೇ ಆಗಬೇಕು ಎನ್ನುವುದು ನಾರಾಯಣಸ್ವಾಮಿ ಅಲ್ಲ, ಆ ಹುಚ್ಚುತನಕ್ಕೆ ಅಂಟಿಕೊಂಡಿಲ್ಲ. ಆ ಹುಚ್ಚುತನಕ್ಕೆ ಈ ಜಿಲ್ಲೆಗೆ ಬರಲಿಲ್ಲ. ನನ್ನ ಪಕ್ಷ ಇಲ್ಲಿ ಸ್ಪರ್ಧೆ ಮಾಡಬೇಕು ಎಂದು ಹೇಳಿತ್ತು. ಮಾಡಿದ್ದೆ. ಇಲ್ಲಿನ ಜನ ಪ್ರೀತಿಯಿಂದ ಮತ ಕೊಟ್ಟು ಗೆಲ್ಲಿಸಿದ್ದಾರೆ. ಪಕ್ಷ ಕೂಡಾ ಅಷ್ಟೇ ಪ್ರೀತಿಯಿಂದ ಮಂತ್ರಿ ಮಾಡಿದೆ ಎಂದರು.
ಅಷ್ಟು ದೂರದಿಂದ ಬಂದು ಇಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲು ಆಗಲಿಲ್ಲ ಎನ್ನುವ ಕೊರಗಿದೆ. ಒಬ್ಬ ಚುನಾಯಿತ ಸದಸ್ಯ ಮತದಾರರಿಗೆ ಸಿಗಬೇಕು. ಆದರೆ, ಬೀದಿ ಬೀದಿಗೆ ಹೋಗಿ ಸುಳ್ಳು ಹೇಳಿಕೊಂಡು ಬರಲು ಆಗುವುದಿಲ್ಲ ಎಂದು ತಿಳಿಸಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ ಚಿತ್ರದುರ್ಗದಲ್ಲಿ ಗೆಲ್ಲುತ್ತದೆ. ರಾಜ್ಯದ 28 ಕ್ಷೇತ್ರಗಳಲ್ಲಿ ಪಕ್ಷ ಗೆಲ್ಲಿಸಿ ದಾಖಲೆ ಮಾಡಲು ಬಿಜೆಪಿ ಕಾರ್ಯಕರ್ತ ಸಿದ್ಧನಾಗಿದ್ದಾನೆ.
ಸ್ಥಳೀಯರಿಗೆ ಟಿಕೇಟ್ ಕೊಟ್ಟರೆ ನಾನೂ ಹೂವಿನ ಹಾರ ಹಾಕುತ್ತೇನೆ. ನಮ್ಮ ಪಕ್ಷ ಸರ್ವೇ ಮಾಡುತ್ತದೆ. ಆ ಸಮೀಕ್ಷೆಯಲ್ಲಿ ಸ್ಥಳೀಯರೇ ಗೆಲ್ಲುತ್ತಾರೆ ಎನ್ನುವ ವರದಿ ಬಂದರೆ ಖಂಡಿತ ಕಾರ್ಯಕರ್ತರಿಗೆ ಟಿಕೇಟ್ ಕೊಡುತ್ತದೆ. ಆಗ ನಾನು ಕೂಡಾ ಒಬ್ಬ ಸದಸ್ಯನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಇದೇ ನಮ್ಮ ಪಕ್ಷದ ಸಿದ್ಧಾಂತ ಎಂದು ಹೊರಗಿನವರು-ಸ್ಥಳೀಯರು ಎನ್ನುವ ವಿಷಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದರು.