ಮುಖ್ಯ ಸುದ್ದಿ
ನನಸಾಯ್ತು ಶತಮಾನದ ಕನಸು | ಐತಿಹಾಸಿಕ ಧರ್ಮಪುರ ಕೆರೆಗೆ ಹರಿದ ಗಂಗೆ
CHITRADURGA NEWS | 29 JUNE 2024
ಚಿತ್ರದುರ್ಗ: ಜಿಲ್ಲೆಯ ಐತಿಹಾಸಿಕ ಧರ್ಮಪುರ ಕೆರೆಗೆ ಕೊನೆಗೂ ನೀರು ಹರಿದು ಬಂದಿದ್ದು, ಈ ಮೂಲಕ ಶತಮಾನದ ಕನಸೊಂದು ನನಸಾಗಿದೆ. ಶುಭ ಶುಕ್ರವಾರದಂದು ಹೊಸಹಳ್ಳಿ ಬ್ಯಾರೇಜ್‌ನಿಂದ ಕೆರೆಗೆ ನೀರು ಹರಿದು ಬರುತ್ತಿದ್ದಂತೆ ಜನರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಕೆಲವರು ನೀರನ್ನು ಸ್ಪರ್ಶಿಸಿ ನಮಸ್ಕರಿಸಿ ಪುನೀತರಾದರು.
ಕೆರೆಯು 0.3 ಟಿಎಂಸಿ ನಿರೀನ ಸಾಮರ್ಥ್ಯ ಹೊಂದಿದೆ. ಸುಮಾರು 700 ಹೆಕ್ಟೇರ್ ವಿಸ್ತೀರ್ಣ ಹೊಂದಿದೆ. 360 ದಶಲಕ್ಷ ಕ್ಯೂಬಿಕ್ ಅಡಿ ನೀರಿನ ಸಂಗ್ರಹ ಸಾಮರ್ಥ್ಯವಿದ್ದು, ಇದು 1,600 ಮೀಟರ್ ಉದ್ದವಿದೆ. ಈ ಕೆರೆಯು ಅಕ್ಕಪಕ್ಕದ ಹಳ್ಳಿಗಳ ಸುಮಾರು 900 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದಲ್ಲಿ ಆವರಿಸಿಕೊಂಡಿದೆ. ಕೆರೆಯಲ್ಲಿ 30 ಕಿಲೋ ಮೀಟರ್ ದೂರದವರೆಗೂ ನೀರಿನ ಅಂತರ್ಜಲ ವೃದ್ಧಿಯಾಗಲಿದೆ.
ವೀಡಿಯೋ ನೋಡಿ: ಧರ್ಮಪುರ ಕೆರೆಗೆ ನೀರು ಹರಿದ ವೀಡಿಯೋ ಇಲ್ಲಿದೆ. ಕ್ಲಿಕ್ ಮಾಡಿ ಕಣ್ತುಂಬಿಕೊಳ್ಳಿ..
1919ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಧರ್ಮಪುರ ಕೆರೆಗೆ ಪೂರಕನಾಲೆ ಕಲ್ಪಿಸಲು ಅಂದಿನ ದಿವಾನರು ಪ್ರಸ್ತಾವ ಸಲ್ಲಿಸಿದ್ದರು. ಸ್ವಾತಂತ್ರ್ಯಾ ನಂತರ ಬಂದ ಸರ್ಕಾರಗಳು ಬರೀ ಆಶ್ವಾಸನೆ ನೀಡುತ್ತಾ ಬಂದಿದ್ದವು. ಇತ್ತ ರೈತ ಹೋರಾಟವೂ ನಿರಂತರವಾಗಿ ಮುಂದುವರಿಯಿತು. ಧರ್ಮಪುರ ಹೋಬಳಿಯ ರೈತರು 200 ದಿನಗಳವರೆಗೆ ಸರದಿಯ ಮೇಲೆ ನಾಡಕಚೇರಿ ಮುಂದೆ ಧರಣಿ ಸತ್ಯಾಗ್ರಹ ನಡೆಸಿದ್ದರು. ಆದರೂ, ನೀರಾವರಿ ಸೌಕರ್ಯ ಬರೀ ಮರೀಚಿಕೆಯಾಗಿಯೇ ಉಳಿದಿತ್ತು.
ಕ್ಲಿಕ್ ಮಾಡಿ ಓದಿ: ಕೆಎಸ್‌ಸಿಎ ಕ್ರಿಕೆಟ್ ಆಯ್ಕೆ ಟ್ರಯಲ್ಸ್ 30ಕ್ಕೆ | ಬೆಳಗಟ್ಟದ ಸಿಸಿಎ ಟರ್ಫ್ ಮೈದಾನ
ಈ ನಡುವೆ ಬಿಜೆಪಿ ಆಡಳಿತದ ಅವಧಿಯಲ್ಲಿ ಧರ್ಮಪುರ ಏತ ನೀರಾವರಿ ಯೋಜನೆಗೆ ₹ 90 ಕೋಟಿ ಅನುದಾನ ಮಂಜೂರಾಗಿತ್ತು. ಹೊಸಹಳ್ಳಿ ಬಳಿ ವೇದಾವತಿ ನದಿಗೆ ಬ್ಯಾರೇಜ್ ನಿರ್ಮಾಣ ಮಾಡಿ, ಗೂಳ್ಯ, ಅಬ್ಬಿನಹೊಳೆ, ಮುಂಗುಸುವಳ್ಳಿ-1, ಮುಂಗುಸುವಳ್ಳಿ-2, ಈಶ್ವರಗೆರೆ, ಸೂಗೂರು, ಶ್ರವಣಗೆರೆ, ಅಜ್ಜಿಕಟ್ಟೆ, ಧರ್ಮಪುರ ಕೆರೆಗಳಿಗೆ ನೀರು ಹರಿಸುವ ಯೋಜನೆಯ ಕಾಮಗಾರಿಗೆ 2022ರ ಜೂನ್‌ನಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಿದ್ದರು.
ಮೊದಲ ಹಂತದ ಯೋಜನೆಗೆ ₹ 40 ಕೋಟಿ ಮೀಸಲಿಟ್ಟಿದ್ದು, ಪಂಪ್‌ಹೌಸ್, ರೈಸಿಂಗ್ ಮೈನ್, ಜಾಕ್ವೆಲ್, ಪವರ್ ಸ್ಟೇಷನ್, 900 ಎಚ್‌ಪಿ ಸಾಮರ್ಥ್ಯದ 4 ಮೋಟಾರ್ ಪಂಪ್ ಅಳವಡಿಸಲಾಗಿತ್ತು. ಇನ್ನೂ ಎರಡನೇ ಹಂತದ ಯೋಜನೆಗೆ ₹ 50 ಕೋಟಿ ಅನುದಾನ ಬಿಡುಗಡೆಯಾಗಿ 16 ಕಿ.ಮೀ ರೈಸಿಂಗ್ ಮೈನ್,17 ಕಿ.ಮೀ ಎಚ್‌ಡಿಪಿಇ, ಒಟ್ಟು 40 ಕಿ.ಮೀ. ಕಾಮಗಾರಿ ಪೂರ್ಣಗೊಂಡಿದ್ದು, ಶುಕ್ರವಾರ ಪ್ರಯೋಗಾರ್ಥವಾಗಿ ನೀರು ಹರಿಸಲಾಗಿದೆ. ಒಟ್ಟು 0.30 ಟಿಎಂಸಿ ನೀರು ಲಭ್ಯವಾಗಲಿದೆ ಎನ್ನುತ್ತಾರೆ ಸಹಾಯಕ ಎಂಜಿನಿಯರ್ ಜಿ.ಭೀಮರಾಜು ಮತ್ತು ಸೈಟ್ ಎಂಜಿನಿಯರ್ ರಾಜಶೇಖರ್.
ಕೆರೆಗಳಿಗೆ ನೀರು ಹರಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಮುಂದಿನ ವಾರ ಕಾಮಗಾರಿ ವೀಕ್ಷಣೆ ಮಾಡಲಿದ್ದೇನೆ. 9 ಕೆರೆಗಳಿಗೂ ನೀರುಣಿಸುವ ಕಾರ್ಯಕ್ರಮಕ್ಕೆ ಶೀಘ್ರವೇ ಚಾಲನೆ ನೀಡಲಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದ್ದಾರೆ.
ಕ್ಲಿಕ್ ಮಾಡಿ ಓದಿ: ಈ ವರ್ಷವೂ ಚಿತ್ರದುರ್ಗಕ್ಕೆ ಭದ್ರೆ ಹರಿಯುವುದು ಅನುಮಾನ
ಕೆರೆಗೆ ನೀರು ಹರಿದು ಬಂದಿದ್ದಕ್ಕೆ ಸಂತಸ ವ್ಯಕ್ತಪಡಿಸಿದ ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್, ‘ತಂದೆ, ಮಾಜಿ ಸಚಿವ ಕೃಷ್ಣಪ್ಪ ಅವರ ಅಭಿಲಾಷೆಯಂತೆ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಇಚ್ಛಾಶಕ್ತಿಯಿಂದ ಧರ್ಮಪುರ ಕೆರೆ ಸೇರಿದಂತೆ ಒಂಬತ್ತು ಕೆರೆಗಳಿಗೆ ನೀರು ಹರಿಯಲು ಸಾಧ್ಯವಾಗಿದೆ. ಈ ಮೂಲಕ ಮತದಾರರ ಋಣ ತೀರಿಸಿದ್ದೇನೆ’ ಎಂದರು.
ಸತತ ಹೋರಾಟದ ಫಲವಾಗಿ ಕೆರೆಗೆ ನೀರು ಹರಿದು ಬಂದಿದ್ದು, ಯೋಜನೆಯಿಂದ ಹೋಬಳಿಯ ಬಹುತೇಕ ಕೆರೆಗಳಿಗೆ ನೀರುಣಿಸುವ ಸೌಲಭ್ಯ ದೊರೆತಂತಾಗುತ್ತದೆ. ಹಲಗಲದ್ದಿ, ಖಂಡೇನಹಳ್ಳಿ, ಹೊಸಕೆರೆ, ಅರಳೀಕೆರೆ, ಬೇತೂರು ಕೆರೆಗಳಿಗೆ ನೀರುಣಿಸುವ ಕಾಮಗಾರಿ ನಡೆಯಬೇಕು ಎನ್ನುತ್ತಾರೆ ಗ್ರಾಮಸ್ಥರು.