ಮುಖ್ಯ ಸುದ್ದಿ
VA protest: ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ ಆರಂಭ | ಕೆಲಸದ ಒತ್ತಡ ತಗ್ಗಿಸಲು ಆಗ್ರಹ | ಮೂಲ ಸೌಲಭ್ಯ ಕಲ್ಪಿಸಲು ಒತ್ತಾಯ
CHITRADURGA NEWS | 26 SEPTEMBER 2024
ಚಿತ್ರದುರ್ಗ: ಕೆಲಸದ ಒತ್ತಡ, ಅನಿರ್ಧಿಷ್ಟ ಕೆಲಸದ ಅವಧಿ, ಮೂಲ ಸೌಲಭ್ಯಗಳ ಕೊರತೆ ಸೇರಿದಂತೆ ಹಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಕೆಲಸ ಬಹಿಷ್ಕರಿಸಿರುವ ಗ್ರಾಮ ಆಡಳಿತಾಧಿಕಾರಿಗಳು ಸೆ.26 ಗುರುವಾರದಿಂದ ಅನಿರ್ಧಿಷ್ಠಾವಧಿ ಮುಷ್ಕರ ಆರಂಭಿಸಿದ್ದಾರೆ.
ಕಪ್ಪು ಪಟ್ಟಿ ಧರಿಸಿ ಚಿತ್ರದುರ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ಮುಷ್ಕರ ನಡೆಸಿದ ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮ ಆಡಳಿತಾಧಿಕಾರಿಗಳಿಗೆ ಮೂಲ ಸೌಲಭ್ಯ ಕಲ್ಪಿಸಲು ಒತ್ತಾಯಿಸಿದರು.
ಇದನ್ನೂ ಓದಿ: ಜಿಲ್ಲಾಧಿಕಾರಿ ಟಿ.ವೆಂಕಟೇಶ್, ದಿವ್ಯಪ್ರಭು ಪ್ರಶಸ್ತಿಗೆ ಆಯ್ಕೆ | ರಾಜ್ಯ ಸರ್ಕಾರದ ಅತ್ಯತ್ತಮ ಕಂದಾಯಾಧಿಕಾರಿ ಅವಾರ್ಡ್
ಮುಷ್ಕರದ ಅಂಗವಾಗಿ ಗ್ರಾಮ ಆಡಳಿತ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲ ಬಗೆಯ ಮೊಬೈಲ್ ಆಪ್‍ಗಳನ್ನು ಇಂದಿನಿಂದ ಸ್ಥಗಿತಗೊಳಿಸಲಾಗುವುದು ಎಂದು ಜಿಲ್ಲಾಧ್ಯಕ್ಷರಾದ ಮಾಲತೇಶ್ ಮುದ್ದಜ್ಜಿ ತಿಳಿಸಿದ್ದಾರೆ.
ಸೆ.22ರಂದು ನಡೆದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ತೀರ್ಮಾನಿಸಿದಂತೆ ರಾಜ್ಯದ ಎಲ್ಲ ತಾಲೂಕು ಹಾಗೂ ಜಿಲ್ಲಾಧಿಕಾರಿ ಕಚೇರಿಗಳ ಎದುರು ಮುಷ್ಕರ ಆರಂಭಿಸಲಾಗಿದೆ ಎಂದು ಹೇಳಿದರು.
ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಯನ್ನು ತಾಂತ್ರಿಕ ಹುದ್ದೆಗಳಿಗೆ ನೀಡುವ ವೇತನಶ್ರೇಣಿ ನಿಗದಿಪಡಿಸಿ ಆದೇಶ ನೀಡಬೇಕು. ಕಂದಾಯ ಇಲಾಖೆಯಿಂದ ನಿರಂತರವಾಗಿ ಸರ್ಕಾರದಿಂದ ಅಭಿವೃದ್ಧಿಪಡಿಸಿರುವ ಎಲ್ಲಾ ವೆಬ್/ಮೊಬೈಲ್ ತಂತ್ರಾಂಶಗಳಿಗೂ ಅಭಿವೃದ್ಧಿಪಡಿಸಿರುವ ಮೊಬೈಲ್/ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಹಾಗೂ ಸಿ-ವೃಂದ ನೌಕರರ ಹತ್ತು ಪಟ್ಟು ಕೆಲಸಗಳ ಜವಾಬ್ದಾರಿ ನಮ್ಮ ಮೇಲೆ ಬಿದ್ದಿದೆ ಎಂದು ಅಳಲು ತೋಡಿಕೊಂಡರು.
ಇದನ್ನೂ ಓದಿ: ಪೊಲೀಸರ ಸೋಗಿನಲ್ಲಿ ಕಳ್ಳರು | ಚಿನ್ನದ ಸರ ಕದ್ದು ಎಸ್ಕೇಪ್
ಕೆಲಸ ನಿರ್ವಹಿಸಲು ಅಗತ್ಯವಾದ ಗ್ರಾಮ ಆಡಳಿತ ಅಧಿಕಾರಿಗಳಿಗೆ ಸುಸಜ್ಜಿತವಾದ ಕಛೇರಿ, ಉತ್ತಮ ಗುಣಮಟ್ಟದ ಟೇಬಲ್ ಮತ್ತು ಕುರ್ಚಿ ಮತ್ತು ಅಲ್ಮೆರಾ ಕೂಡಾ ಇಲ್ಲ. ಅತ್ಯುತ್ತಮ ಗುಣಮಟ್ಟದ ಮೊಬೈಲ್ ಫೋನ್ (12ಜಿಬಿ/256ಜಿಬಿ), ಸಿಯುಜಿ ಸಿಮ್ ಮತ್ತು ಡೇಟಾಗೂಗಲ್ ಕ್ರೋಮ್ ಬುಕ್/ ಲ್ಯಾಪ್ ಟಾಪ್ ಪ್ರಿಂಟರ್ ಮತ್ತು ಸ್ಕ್ಯಾನರ್ ಮೂಲಭೂತ ಸೌಲಭ್ಯಗಳನ್ನು ಕಲ್ಪಸುವಂತೆ ಆಗ್ರಹಿಸಿದರು.
ಸೇವಾ ವಿಷಯಗಳಿಗೆ ಸಂಬಂಧಿಸಿದಂತೆ ಮೊಬೈಲ್ ತಂತ್ರಾಂಶಗಳ ಕೆಲಸದ ವಿಚಾರವಾಗಿ ಇದುವರೆಗೂ ಆಗಿರುವ ಎಲ್ಲಾ ಅಮಾನತ್ತುಗಳನ್ನು ತಕ್ಷಣವೇ ರದ್ದುಪಡಿಸಿ ಹಿಂಪಡೆಯ ಬೇಕು, ಕೆ.ಸಿ.ಎಸ್.ಆರ್ ನಿಯಮಾವಳಿಗಳಂತೆ ಸರ್ಕಾರಿ ರಜಾ ದಿನಗಳಲ್ಲಿ ಕರ್ತವ್ಯಕ್ಕೆ ಮೆಮೋ ಹಾಕದಿರಲು, ಹಾಗೂ ಮೆಮೋ ಹಾಕುವ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಜರುಗಿಸುವಂತೆ ಸೂಕ್ತ ಆದೇಶ ನೀಡಬೇಕು.
ಹೈಕೋರ್ಟ್ ಆದೇಶಾನುಸಾರ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಖಾಲಿ ಇರುವ ಪ್ರ.ದ.ಸ/ರಾ.ನಿ ಹುದ್ದೆಗಳಿಗೆ ತಕ್ಷಣವೇ ಪದೊನ್ನತಿ ನೀಡಲು ಕ್ರಮವಹಿಸುವುದು. ಅಂತರ್ ಜಿಲ್ಲಾ ಪತಿ-ಪತ್ನಿ ಪ್ರಕರಣಗಳ ವರ್ಗಾವಣೆಯ ಚಾಲನೆ ನೀಡಿ ಅಂತಿಮ ಆದೇಶಕ್ಕಾಗಿ ಬಾಕಿ ಇರುವ ಪ್ರಕರಣಗಳ ವರ್ಗಾವಣೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ತಂದೆ ಇಲ್ಲದ ಮಕ್ಕಳಿಗೆ ಸ್ಕಾಲರ್‍ಶಿಪ್ | ಸಂದೇಶ ಸುಳ್ಳು ಎಚ್ಚರ ವಹಿಸಿ.
ಅಂತರ್ ಜಿಲ್ಲಾ ವರ್ಗಾವಣೆಯ ಕೆ.ಸಿ.ಎಸ್.ಆರ್ ನಿಯಮ 16ಎ ರ ಉಪಖಂಡ(2)ನ್ನು ಮರುಸ್ಥಾಪಿಸ ಬೇಕು, ಕೆಲವು ವಿಶೇಷ ಚೇತನ, ತೀವ್ರ ಅನಿವಾರ್ಯ ಹಾಗೂ ಆರೋಗ್ಯದ ಸಮಸ್ಯೆ ಇರುವ ಪ್ರಕರಣಗಳ ನಿಯೋಜನೆಗಳನ್ನು ಕೌನ್ಸಿಲಿಂಗ್ ಮೂಲಕ ನಿಯೋಜನೆ ಆದೇಶಗಳನ್ನು ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಾಯಿತು.
ಕೆಲಸದ ಅವಧಿಯ ಮುನ್ನ ಹಾಗೂ ಕೆಲಸದ ಮುಕ್ತಾಯದ ನಂತರ ನಡೆಸಲಾಗುವ ಎಲ್ಲಾ ಬಗೆಯ ವರ್ಚುವಲ್ ಸಭೆಗಳನ್ನು ಕಡ್ಡಾಯವಾಗಿ ನಿಷೇಧಿಸಬೇಕು. ಕಂದಾಯ ಇಲಾಖೆಯ 3 ವರ್ಷಗಳ ಸೇವೆಯನ್ನು ಪರಿಗಣಿಸಿ ಅಂತರ್ ಜಿಲ್ಲಾ ವರ್ಗಾವಣೆಗಾಗಿ ಕಂದಾಯ ಇಲಾಖೆಯಲ್ಲಿ ಹೊಸ ಮಾರ್ಗಸೂಚಿಯನ್ನು ರಚಿಸಬೇಕು.
ದಿನನಿತ್ಯ ಸಾರ್ವಜನಿಕ ವಲಯದಲ್ಲಿ ನೂರಾರು ಸೇವೆಗಳನ್ನು ನೀಡುವಾಗ ಮಾರಣಾಂತಿಕ ದೈಹಿಕ ಹಲ್ಲೆ, ಕೊಲೆ ಪ್ರಕರಣಗಳು ಈಗಾಗಲೇ ನಿರಂತರವಾಗಿ ನಡೆಯುತ್ತಿದ್ದು, ಅರಣ್ಯ ಇಲಾಖೆ ಹಾಗೂ ಪೋಲಿಸ್ ಇಲಾಖೆಯಲ್ಲಿರುವಂತೆ 3 ಸಾವಿರ ಆಪತ್ತಿನ ಭತ್ಯ ಹಾಗೂ 500 ಪ್ರಯಾಣ ಭತ್ಯೆ ಹೆಚ್ಚಳ ಮಾಡಬೇಕು.
ಇದನ್ನೂ ಓದಿ: ಸೆ.26 ರಂದು ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ | ಕೆಲಸ ಬಹಿಷ್ಕರಿಸಿ ಪ್ರತಿಭಟಿಸಲು ನಿರ್ಧಾರ
ದತ್ತರ್ ಹಾಗೂ ಜಮಾಬಂದಿಯನ್ನು ರದ್ದುಪಡಿಸಬೇಕು, ಅನ್ಯ ಇಲಾಖೆಯ ಕೆಲಸ ನಿರ್ವಹಿಸದಂತೆ ಸೂಕ್ತ ಆದೇಶ ನೀಡುಬೇಕು. ಹಾಲಿ ಇರುವ ಬ್ಯಾಂಕಿಂಗ್ ವ್ಯವಸ್ಥೆಯನ್ನು ರದ್ದುಪಡಿಸಬೇಕು. ಮ್ಯುಟೇಷನ್ ಅವಧಿ ದಿನವನ್ನು ವಿಸ್ತರಣೆ ಮಾಡಬೇಕು ರಾಜ್ಯದ ಗ್ರಾಮ ಸಹಾಯಕರಿಗೆ ಸೇವಾಭದ್ರತೆಯನ್ನು ಒದಗಿಸುವಂತೆ ಒತ್ತಾಯಿಸಲಾಯಿತು.
ಮುಷ್ಕರದಲ್ಲಿ ಸಂಘದ ಗೌರವಾಧ್ಯಕ್ಷ ಪಾಂಡುರಂಗಪ್ಪ, ಕಂದಾಯ ನೌಕರರ ಸಂಘದ ಜಿಲ್ಲಾಧ್ಯಕ್ಷ ಸಿದ್ದೇಶ್, ತಾಲ್ಲೂಕು ಅಧ್ಯಕ್ಷ ಸಂಪತ್‍ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮದ್ ಇರ್ಫಾನ್, ಉಪಾಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ವಡೇರ್, ಖಂಜಾಚಿ ಸುರೇಶ್ ಸೇರಿದಂತೆ ನೂರಾರು ಅಧಿಕಾರಿಗಳು ಭಾಗವಹಿಸಿದ್ದರು.