ಮುಖ್ಯ ಸುದ್ದಿ
ಮೈನವಿರೇಳಿಸಿದ ಜೋಡೆತ್ತಿನ ಬಂಡಿ ಓಟ | ಶಿಳ್ಳೆ, ಕೇಕೆ ಹಾಕಿ ಜನರ ಸಂಭ್ರಮ

CHITRADURGA NEWS | 21 FEBRUARY 2024
ಚಿತ್ರದುರ್ಗ: ನಾಯಕನಹಟ್ಟಿ ಸಮೀಪದ ಹಿರೆಕೆರೆ ಕಾವಲಿನಲ್ಲಿ ನೆಲೆಸಿರುವ ಬುಡಕಟ್ಟು ಸಮುದಾಯಗಳ ಆರಾಧ್ಯ ದೈವ ಕಾವಲು ಚೌಡೇಶ್ವರಿ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಜೋಡೆತ್ತಿನ ಬಂಡಿ ಓಟ ಜನರನ್ನು ರೋಮಾಂಚನಗೊಳಿಸಿತು.
ಇದೇ ಮೊದಲ ಬಾರಿಗೆ ಜಾತ್ರೆಯಲ್ಲಿ ಜೋಡೆತ್ತಿನ ಬಂಡಿ ಓಟದ ಸ್ಪರ್ಧೆ ನಡೆದಯಿತು. ಜಿಲ್ಲೆಯ ನಾನಾ ಭಾಗಗಳಿಂದ 48 ಜೋಡಿ ವಿವಿಧ ತಳಿಯ ರಾಸುಗಳು ಭಾಗವಹಿಸಿದ್ದವು. ಸಾವಿರಾರು ಜನರು ಶಿಳ್ಳೆ, ಕೇಕೆ ಹಾಕುವ ಮೂಲಕ ಜೋಡೆತ್ತಿನ ಗಾಡಿ ಓಟದ ಸ್ಪರ್ಧಾಳುಗಳನ್ನು ಹುರಿದುಂಬಿಸಿದರು.
ಮೊದಲ ಸುತ್ತಿನ ಓಟದ ಸ್ಪರ್ಧೆಯಲ್ಲಿ 13 ಜೋಡಿ ರಾಸುಗಳು ಜಯಗಳಿಸಿದವು. ಜಾತ್ರೆಯ ಸಂದರ್ಭದಲ್ಲಿ ಬುಡಕಟ್ಟು ಸಂಸ್ಕೃತಿಯ ಆಚರಣೆಗಳು ಅನಾವರಣಗೊಂಡವು.
ಇದನ್ನೂ ಓದಿ: ಎರಡು ವಾರದ ಹಿಂದೆ ಮಾಡಿದ್ದ ಕೊಬ್ಬರಿ ನೋಂದಣಿ ರದ್ದು | ಪುನಃ ಹೊಸದಾಗಿ ಪ್ರಾರಂಭ
ಬಲಿ ಅನ್ನದ ಎಡೆಹಾಕಿ ಪೂಜೆ: ಬಣ್ಣ ಬಣ್ಣದ ಬಾವುಟಗಳಿಂದ ಸಿಂಗಾರಗೊಂಡಿದ್ದ 30 ಅಡಿ ಎತ್ತರದ ತೇರಿಗೆ ಎತ್ತಿನಹಟ್ಟಿ ಗೌಡರ ಮನೆಯಿಂದ ಬಲಿ ಅನ್ನದ ಸೋರೆ ಹೊತ್ತು ತರಲಾಯಿತು. ಜೋಗಿಹಟ್ಟಿಯಿಂದ ಮೊಸರು ಕುಂಭ, ಜಿನಿಗೆಹಾಲು, ಕಡಬನಕಟ್ಟೆ, ಭೀಮಗೊಂಡನಹಳ್ಳಿ ಸೇರಿ ಸುತ್ತಮುತ್ತಲ ಗ್ರಾಮಗಳಿಂದ ಕಾಸು ಮೀಸಲು ತಂದು ರಥಕ್ಕೆ ಅರ್ಪಿಸಿ ರಥದ ಚಕ್ರಗಳಿಗೆ ಬಲಿ ಅನ್ನದ ಎಡೆಹಾಕಿ ಪೂಜೆ ಸಲ್ಲಿಸಲಾಯಿತು.
ಇದನ್ನೂ ಓದಿ: ಡ್ರಗ್ಸ್ ದಂಧೆಕೋರರ ಮೇಲೆ ಪೊಲೀಸ್ ಇಲಾಖೆ ಸದಾ ಕಣ್ಣಿಟ್ಟಿರುತ್ತದೆ | ಎಸ್ಪಿ ಧರ್ಮೇಂದರ್ ಕುಮಾರ್ ಮೀನಾ
ಸಂಪ್ರದಾಯದಂತೆ ನಡೆದ ಮುಕ್ತಿಬಾವುಟ ಹರಾಜು ಪ್ರಕ್ರಿಯೆಯಲ್ಲಿ ಗೌಡಗೆರೆ ಗ್ರಾಮ ಪಂಚಾಯಿತಿ ಸದಸ್ಯ ತಿಪ್ಪೇಸ್ವಾಮಿ ₹ 71,000ಕ್ಕೆ ಬಾವುಟ ಪಡೆದುಕೊಂಡರು. ನಂತರ ಮಹಾ ಮಂಗಳಾರತಿ ನೆರವೇರಿಸಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಭಕ್ತರು ರಥಕ್ಕೆ ಕಾಳುಮೆಣಸು, ಚೂರು ಬೆಲ್ಲ, ಮಂಡಕ್ಕಿ ಸೇರಿದವಸ ದಾನ್ಯಗಳನ್ನು ಎರಚಿ ಭಕ್ತಿ ಸಮರ್ಪಿಸಿದರು.
ರಥೋತ್ಸವಕ್ಕೆ ಜಾನಪದ ವಾದ್ಯಗಳಾದ ತಪ್ಪಡಿ, ಕಹಳೆ, ಉರುಮೆ, ಜನಪದ ಕ್ರೀಡೆ ಕೋಲಾಟ, ನಂದಿಕೋಲು, ನಂದಿಧ್ವಜ ಮೆರುಗು ತುಂಬಿದವು. ಹರಕೆ ಹೊತ್ತ ನೂರಾರು ಭಕ್ತರು ಹರಕೆಯನ್ನು ಪೂರೈಸಿದರು.
