ಲೋಕಸಮರ 2024
ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ | ಜಿಲ್ಲೆಗೆ ಆಗಿರುವ ಅನ್ಯಾಯ ಸರಿಪಡಿಸಲು ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು | ಸಚಿವ ಡಿ.ಸುಧಾಕರ್

CHITRADURGA NEWS | 31 MARCH 2024
ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ಚಿತ್ರದುರ್ಗ ಜಿಲ್ಲೆಗೆ ಆಗಿರುವ ಅನ್ಯಾಯ ಸರಿಯಾಗಬೇಕಾದರೆ, ಚಿತ್ರದುರ್ಗದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಬೇಕು. ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಿಂದ ರಾಜ್ಯಕ್ಕೆ ಸತತವಾಗಿ ಅನ್ಯಾಯವಾಗುತ್ತಿದೆ. ಅನುದಾನ ಹಂಚಿಕೆಯಲ್ಲಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಹೆಚ್ಚು ಅಭ್ಯರ್ಥಿಗಳು ಗೆಲ್ಲಬೇಕಾದ ಅನಿವಾರ್ಯತೆ ಇದೆ ಎಂದರು.
ಇದನ್ನೂ ಓದಿ: ಶಾಸಕ ಚಂದ್ರಪ್ಪನ ದೃತರಾಷ್ಟ್ರ ಪ್ರೇಮ ಒಳ್ಳೆಯದಲ್ಲ | ಕೆ.ಎಸ್.ನವೀನ್
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಚಿತ್ರದುರ್ಗ ಕಾಂಗ್ರೆಸ್ ಭದ್ರಕೋಟೆ. ಮತದಾರರು ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಒಪ್ಪಿದ್ದಾರೆ. ಜನ ಕಲ್ಯಾಣಕ್ಕಾಗಿ ರೂಪಿಸಿದ ಐದು ಗ್ಯಾರೆಂಟಿ ಅನುμÁ್ಠನ ಮಾಡಿ ಜನರ ನಂಬಿಕೆ ಉಳಿಸಿಕೊಂಡಿದ್ದೇವೆ. ಈ ಚುನಾವಣೆಯಲ್ಲೂ ಜನ ಕೈ ಹಿಡಿಯುವ ವಿಶ್ವಾಸ ಇದೆ ಎಂದು ಹೇಳಿದರು.
ಬರಕ್ಕೆ ಸಂಬಂದಿಸಿದಂತೆ ಕೇಂದ್ರದಿಂದ ಬಾರೀ ಅನ್ಯಾಯ ಆಗುತ್ತಿದೆ. ನಮಗೆ ಬರಬೇಕಾದ ತೆರಿಗೆಯೂ ಬರುತ್ತಿಲ್ಲ. ರಾಜ್ಯ ಸರ್ಕಾರವೇ ದೆಹಲಿಗೆ ಹೋಗಿ ಪ್ರತಿಭಟಿಸಿದ್ದೇವೆ. 18 ಸಾವಿರ ಕೋಟಿಗಿಂತ ಹೆಚ್ಚು ಅನುದಾನ ಬಾಕಿಯಿದೆ ಎಂದರು.
| ಟಿ.ರಘುಮೂರ್ತಿ, ಚಳ್ಳಕೆರೆ ಶಾಸಕರು.
ಏಪ್ರಿಲ್ 4 ರಂದು ನಾಮಪತ್ರ ಸಲ್ಲಿಸುತ್ತಿದ್ದೇವೆ. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ರಾಜ್ಯದ ಹಲವು ನಾಯಕರು, ಏಳು ಕ್ಷೇತ್ರಗಳ ಶಾಸಕರು ಭಾಗವಹಿಸಲಿದ್ದಾರೆ. ಅಂದು ನೀಲಕಂಠೇಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ ಆಗಮಿಸಿ ನಾಮಪತ್ರ ಸಲ್ಲಿಸಿದ ನಂತರ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಬಹಿರಂಗ ಸಭೆ ನಡೆಯಲಿದೆ ಎಂದು ವಿವರಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ಮಾತನಾಡಿ, ನಾನು ಮೂಡಿಗೆರೆ ಚಂದ್ರಪ್ಪ ಅಲ್ಲ. ಹೊಸದುರ್ಗದ ಪಕ್ಕದ ತರೀಕೆರೆ ತಾಲೂಕಿನವನು. ಭದ್ರಾ ನೀರು ಬರುವ ಜಾಗದಿಂದ ಬಂದವನು. ಮೂಡಿಗೆರೆಯಲ್ಲಿ ಸ್ಪರ್ಧೆ ಮಾಡಿದ್ದೆ ಅಷ್ಟೇ. ಹಾಗಾಗಿ ಮೂಡಿಗೆರೆ ಚಂದ್ರಪ್ಪ ಎಂದು ಬಿಂಬಿಸುವುದು ಬೇಡ ಎಂದರು.
ಇದನ್ನೂ ಓದಿ: ಯಡಿಯೂರಪ್ಪ ಮೇಲಿನ ವಿಶ್ವಾಸ ಅಚಲ | ತಂದೆಯ ಸ್ಥಾನದಲ್ಲಿ ನಿಂತು ನ್ಯಾಯ ಕೊಡುವ ವಿಶ್ವಾಸವಿದೆ | ಎಂ.ಸಿ.ರಘುಚಂದನ್
ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ ಬಜೆಟ್‍ನಲ್ಲಿ ಚಿತ್ರದುರ್ಗದ ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದರು. ಆದರೆ, ಈವರೆಗೆ ಅನುದಾನ ಬಿಡುಗಡೆ ಆಗಿಲ್ಲ. ನಿಯಮಾನುಸಾರ 12 ಸಾವಿರ ಹೆಕ್ಟೇರ್ ಪ್ರದೇಶಕ್ಕಿಂತ ಹೆಚ್ಚು ಭೂಮಿಗೆ ನೀರು ಹರಿದರೆ ಅದನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು. ಆದರೆ, ಕೇಂದ್ರ ಸರ್ಕಾರ ಅದನ್ನೂ ಮಾಡಲಿಲ್ಲ. ಹಿಂದೆ ಅಧಿಕಾರದಲ್ಲಿದ್ದ ಡಬಲ್ ಇಂಜಿನ್ ಸರ್ಕಾರ ಕೂಡಾ ಮಾಡಲಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಐದು ಗ್ಯಾರೆಂಟಿ ನೀಡಿದೆ. ಕೇಂದ್ರದಲ್ಲೂ ಕಾಂಗ್ರೆಸ್ ಸರ್ಕಾರ ಬಂದರೆ ಇನ್ನೂ ಐದು ಗ್ಯಾರೆಂಟಿಗಳು ಸೇರಿಕೊಳ್ಳುತ್ತವೆ.
| ಬಿ.ಜಿ.ಗೋವಿಂದಪ್ಪ, ಹೊಸದುರ್ಗ ಶಾಸಕರು.
ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿ ಉಪಾಧ್ಯಕ್ಷ ಜಿ.ಎಸ್.ಮಂಜುನಾಥ್, ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‍ಪೀರ್, ಮುಖಂಡರಾದ ಹಾಲಸ್ವಾಮಿ, ಶಿವಣ್ಣ, ಮರುಳಾರಾಧ್ಯ, ಅಲ್ಲಾಭಕ್ಷಿ, ಡಿ.ಟಿ.ವೆಂಕಟೇಶ್, ನರಸಿಂಹರಾಜು, ಎನ್.ಡಿ.ಕುಮಾರ್, ಸಂಪತ್ ಕುಮಾರ್ ಮತ್ತಿತರರಿದ್ದರು.
