CHITRADURGA NEWS | 09 FEBRUARY 2024 ಚಿತ್ರದುರ್ಗ: ಬರಗಾಲದ ಕಾರಣ ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ. ಈ ನಡುವೆ ತರಳಬಾಳು ಹುಣ್ಣಿಮೆ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಅಡ್ಡಪಲ್ಲಕ್ಕಿ ಉತ್ಸವವನ್ನು ಈ ಬಾರಿ ಹಮ್ಮಿಕೊಳ್ಳದೇ ಇರುವಂತೆ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಕಾರ್ಯಕರ್ತರಿಗೆ ಸೂಚಿಸಿದರು.
ಮಠದ ನ್ಯಾಯಪೀಠದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸ್ವಾಮೀಜಿ ಭಕ್ತರ ಬೇಡಿಕೆಯನ್ನು ನಿರಾಕರಿಸಿದ ಸ್ವಾಮೀಜಿ ಅಡ್ಡಪಲ್ಲಕ್ಕಿ ಉತ್ಸವ ಬೇಡ, ಬದಲಿಗೆ ಹುಣ್ಣಿಮೆ ಆಚರಣೆಯ ಕೊನೆಯ ದಿನದಂದು ತೆರೆದ ವಾಹನದಲ್ಲಿ ಸಿರಿಗೆರೆಯ ಬೀದಿಗಳಲ್ಲಿ ಯಾತ್ರೆ ನಡೆಸುವುದಾಗಿ ತಿಳಿಸಿದರು.
ಫೆ. 22ರಿಂದ 24ರವರೆಗೆ ಸರಳ ಆಚರಣೆಯು ಸಿರಿಗೆರೆಯ ಬಿ.ಲಿಂಗಯ್ಯ ವಸತಿ ಪದವಿಪೂರ್ವ ಕಾಲೇಜಿನ ವಿಶಾಲ ಆವರಣದಲ್ಲಿ ತರಳಬಾಳು ಹುಣ್ಣಿಮೆ ಮಹೋತ್ಸವನ್ನು ಈ ಬಾರಿ ನಡೆಯಲಿದೆ.
ಹುಣ್ಣಿಮೆ ಮಹೋತ್ಸವದ ಅಂಗ ವಾಗಿ ಈ ಬಾರಿ ಗ್ರಾಮೀಣ ಯುವ ಕ್ರೀಡಾ ಮೇಳ, ಯುವ ಗೋಷ್ಠಿ, ಮಹಿಳಾ ಗೋಷ್ಠಿ, ತರಳಬಾಳು ವಿಜ್ಞಾನ ಮೇಳ ಮತ್ತು ಹಲವು ಸಾಹಿತ್ಯಕ ಕೃತಿಗಳ ಲೋಕಾರ್ಪಣೆ ನಡೆಯಲಿವೆ. ತರಳಬಾಳು ಪೀಠ ಸಂಸ್ಥಾಪಕ ವಿಶ್ವಬಂಧು ಮರುಳಸಿದ್ಧರ ಕುರಿತ ನಾಟಕ ಪ್ರದರ್ಶನವೂ ಇರಲಿದೆ. 24ರಂದು ಸಂಜೆ ನಡೆಯಲಿರುವ ಕಾರ್ಯಕ್ರಮದಲ್ಲಿ ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾಂಪ್ರದಾಯಿಕವಾಗಿ ಸದ್ಧರ್ಮ ಸಿಂಹಾಸನಾರೋಣ ಮಾಡಿ ಭಕ್ತರಿಗೆ ಆಶೀರ್ವಚನ ನೀಡುವರು.
2023ರ ಫೆಬ್ರುವರಿಯಲ್ಲಿ ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ 9 ದಿನಗಳ ಕಾಲ ನಡೆದ ತರಳಬಾಳು ಹುಣ್ಣಿಮೆ ಮಹೋತ್ಸವದ ಅಂತಿಮ ದಿನದಂದು ತರಳಬಾಳು ಶ್ರೀಗಳು 2024ರ ಮಹೋತ್ಸವವು ಚಿತ್ರದುರ್ಗ ಜಿಲ್ಲೆಯ ಹೋಬಳಿ ಕೇಂದ್ರವಾದ ಭರಮ ಸಾಗರದಲ್ಲಿ ನಡೆಯಲಿದೆ ಎಂದು ಘೋಷಿಸಿದ್ದರು.
Image used for representational purpose only
ಡಿಸೆಂಬರ್‌ನಲ್ಲಿ ಭರಮಸಾಗರದ ಐತಿಹಾಸಿಕ ಭರಮಣ್ಣ ನಾಯಕನ ಕೆರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಶ್ರೀಗಳು ಭರಮಸಾಗರದಲ್ಲಿ 2024ರ ಫೆಬ್ರುವರಿಯಲ್ಲಿ ನಡೆಯ ಬೇಕಿರುವ ತರಳಬಾಳು ಹುಣ್ಣಿಮೆ ಮಹೋತ್ಸವ ವನ್ನು ಮುಂದೂಡಲಾಗುವುದು ಎಂದು ತಿಳಿಸಿದ್ದರು.
ಈ ಬಾರಿ ರಾಜ್ಯದೆಲ್ಲೆಡೆ ಬರ ಆವರಿಸಿದ್ದು, ಬೆಳೆ ನಷ್ಟವಾಗಿವೆ. ಹಲವೆಡೆ ಕುಡಿಯುವ ನೀರಿನ ತೊಂದರೆ ಇದೆ. ಜಾನುವಾರುಗಳಿಗೂ ಮೇವು ಮತ್ತು ನೀರಿನ ಕೊರತೆ ಸಾಧ್ಯತೆ ಇದೆ. ಇಂತಹ ಸಂದರ್ಭದಲ್ಲಿ ಸಂಭ್ರಮದಿಂದ ತರಳಬಾಳು ಹುಣ್ಣಿಮೆ ಆಚರಿಸುವುದು ಸೂಕ್ತವಲ್ಲ. ಈ ಬಾರಿ ಸಿರಿಗೆರೆಯಲ್ಲಿ ಸರಳವಾಗಿ ಆಚರಿಸಿ, ಮುಂದಿನ ಬಾರಿಯ ತರಳಬಾಳು ಹುಣ್ಣಿಮೆಯನ್ನು ಭರಮಸಾಗರದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಹೇಳಿದ್ದರು.
ತರಳಬಾಳು ಜಗದ್ಗುರು ಬೃಹನ್ಮಠದ ಆವರಣದಲ್ಲಿಯೇ ನಡೆಯುತ್ತಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವವು ಮೊಟ್ಟ ಮೊದಲ ಬಾರಿಗೆ ಈಗಿನ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ 1950ರಲ್ಲಿ ನಡೆದಿತ್ತು. ಆಗ ಜಗಳೂರಿನ ಇಮಾಂ ಸಾಹೇಬ್ ಮುಂದೆ ನಿಂತು ತರಳಬಾಳು ಹುಣ್ಣಿಮೆ ಮಹೋತ್ಸವವನ್ನು ನಡೆಸಿದ್ದರು.
ಅಲ್ಲಿಂದ ರಾಜ್ಯದ ಬೆಂಗಳೂರು, ವಿಜಯಪುರ, ಧಾರವಾಡ, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಹರಿಹರ, ರಟ್ಟಿಹಳ್ಳಿ, ಹಿರೇಕೆರೂರು, ಶಿಗ್ಗಾಂವಿ, ಚಿತ್ರದುರ್ಗ, ಹೊಸದುರ್ಗ, ಭೀಮಸಮುದ್ರ, ಹುಬ್ಬಳ್ಳಿ, ಹಾನಗಲ್, ತರಳಬಾಳು, ಬೀರೂರು, ಕಡೂರು, ಪಟ್ಟಣಗಳಲ್ಲಿಯೂ ನಡೆದಿದೆ. ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರದಲ್ಲಿಯೂ ಹಿರಿಯ ಗುರುಗಳಾದ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ನೇತೃತ್ವದಲ್ಲಿ ತರಳಬಾಳು ಹುಣ್ಣಿಮೆ ನಡೆದ ಇತಿಹಾಸವಿದೆ.
1950 ರಿಂದ ಆರಂಭಗೊಂಡ ತರಳಬಾಳು ಹುಣ್ಣಿಮೆ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ನಡೆಯುವ ಅಡ್ಡಪಲ್ಲಕ್ಕಿ ಉತ್ಸವ ಭಕ್ತರಿಗೆ ಪ್ರಮುಖ ಆಕರ್ಷಣೆಯಾಗಿತ್ತು. ಪಲ್ಲಕ್ಕಿಯಲ್ಲಿ ಕುಳಿತ ಶ್ರೀಗಳ ಮೆರವಣಿಗೆಯನ್ನು ಕಣ್ಣುತುಂಬಿಕೊಂಡು ಭಾವಪರವಶರಾಗುತ್ತಿದ್ದ ಭಕ್ತರಿಗೆ ಈ ಬಾರಿ ನಿರಾಶೆಯಾದಂತಾಗಿದೆ.
ಹುಣ್ಣಿಮೆ ಮಹೋತ್ಸವ ಸಂದರ್ಭದಲ್ಲಿ ಮಠಕ್ಕೆ ಬರುವ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ. ಅದಕ್ಕಾಗಿ ವಿಶಾಲ ದಾಸೋಹ ಮಂಟವವನ್ನು ಬಿ. ಲಿಂಗಯ್ಯ ವಸತಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ನಿರ್ಮಿಸಲಾಗುವುದು ಎಂದು ಪ್ರಕಟಿಸಲಾಯಿತು. ಆಚರಣೆಯ ಯಶಸ್ಸಿಗೆ ಶ್ರಮಿಸಲು ಹಲವು ಸಮಿತಿಗಳನ್ನು ರಚಿಸಲಾಯಿತು.
ತರಳಬಾಳು ಸಂಸ್ಥೆಯ ಆಡಳಿತಾಧಿಕಾರಿ ಎಚ್.ವಿ. ವಾಮದೇವಪ್ಪ, ವಿಶೇಷಾಧಿಕಾರಿ ವೀರಣ್ಣ ಜತ್ತಿ, ಭರಮಸಾಗರ ಕೆರೆ ಹೋರಾಟ ಸಮಿತಿಯ ಚೌಲಿಹಳ್ಳಿ ಶಶಿ ಪಾಟೀಲ್, ಸಿ.ಆರ್. ನಾಗರಾಜ್, ಓಬವ್ವನಾಗತಿಹಳ್ಳಿ ಮಂಜುನಾಥ್, ಇಂಜಿನಿಯರ್ ಮನೋಜ್ ಕುಮಾರ್, ಸಂಸ್ಥೆಯ ಇಂಜಿನಿಯರ್ ರವಿಕುಮಾರ್, ರಾಜು ಸಭೆಯಲ್ಲಿ ಭಾಗವಹಿಸಿದ್ದರು.