ಮುಖ್ಯ ಸುದ್ದಿ
ನಿಧನ ವಾರ್ತೆ | ರೈತ ಮುಖಂಡ ಟಿ.ನುಲೇನೂರು ಎಂ.ಶಂಕ್ರಪ್ಪ ಇನ್ನಿಲ್ಲ | ಕಳಚಿತು ದುರ್ಗದ ಹೋರಾಟದ ಕೊಂಡಿ
ಚಿತ್ರದುರ್ಗ ನ್ಯೂಸ್.ಕಾಂ: ಜಿಲ್ಲೆಯ ರೈತರು, ಕಾರ್ಮಿಕರು, ಸರ್ಕಾರದ ಜನವಿರೋಧಿ ಧೋರಣೆಗಳ ವಿರುದ್ಧ ಹೆಗಲ ಮೇಲೆ ಹಸಿರು ಶಾಲು ಹಾಕಿ ಸದಾ ಬೀದಿಗಿಳಿದು ಹೋರಾಟ ಮಾಡುತ್ತಿದ್ದ ರೈತ ಮುಖಂಡ ಟಿ.ನುಲೇನೂರು ಎಂ.ಶಂಕರಪ್ಪ ನಿಧನರಾಗಿದ್ದಾರೆ.
ಚಿತ್ರದುರ್ಗ ಜಿಲ್ಲಾ ನೀರಾವರಿ ಅನುμÁ್ಠನ ಹೋರಾಟ ಸಮಿತಿ ಅಧ್ಯಕ್ಷ ಹಾಗೂ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸದ್ಯ ಜವಾಬ್ದಾರಿ ನಿಭಾಯಿಸುತ್ತಿದ್ದ ಎಂ.ಶಂಕ್ರಪ್ಪ ಅವರಿಗೆ 68 ವರ್ಷ ವಯಸ್ಸಾಗಿತ್ತು.
ಕಳೆದ ಕೆಲ ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರನ್ನು ಸೋಮವಾರ ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಎಂ.ಶಂಕರಪ್ಪ ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.
ಇದನ್ನೂ ಓದಿ: ಅಡಿಕೆ ಧಾರಣೆ | ನ.21 ರಾಜ್ಯದ ಅಡಿಕೆ ಮಾರುಕಟ್ಟೆ ವಿವರ
ಮೃತರು ಪತ್ನಿ, ವೈದ್ಯ ಡಾ.ರವಿಶಂಕರ್ ಸೇರಿದಂತೆ ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಂಧುಗಳು, ಹೋರಾಟದ ಸಂಗಾತಿಗಳನ್ನು ಅಗಲಿದ್ದಾರೆ,
ಸ್ವಗ್ರಾಮ ಹೊಳಲ್ಕೆರೆ ತಾಲೂಕಿನ ಟಿ.ನುಲೇನೂರಿನಲ್ಲಿ ಬುಧವಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಬುಧವಾರ ಬೆಳಿಗ್ಗೆ 10.30ಕ್ಕೆ ಚಿತ್ರದುರ್ಗ ಜಿಲ್ಲಾಧಿಕಾರಿ ವೃತ್ತದಲ್ಲಿ ಎಂ.ಶಂಕರಪ್ಪ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಹೋರಾಟವನ್ನೇ ಉಸಿರಾಗಿಸಿಕೊಂಡಿದ್ದ ಎಂ.ಶಂಕ್ರಪ್ಪ:
ರೈತ ಸಂಘದ ಜಿಲ್ಲಾಧ್ಯಕ್ಷರಾಗಿ, ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಚಿತ್ರದುರ್ಗದಿಂದ ದೆಹಲಿಯವರೆಗೆ ನುಲೇನೂರು ಶಂಕ್ರಪ್ಪ ಅವರ ಹೋರಾಟದ ಹಾದಿ ಸಾಗಿದೆ.
ರೈತ ಪರವಾಗಿ ಜಿಲ್ಲೆಯಲ್ಲಿ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದ ಶಂಕರಪ್ಪ, ಭದ್ರಾ ಮೇಲ್ದಂಡೆ ಹೋರಾಟದ ಅನುಷ್ಟಾನದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಜಿಲ್ಲೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಮುಖ್ಯಮಂತ್ರಿಗಳವರೆಗೆ ಎಲ್ಲರನ್ನೂ ಎಡತಾಕಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ-ಹೊಳಲ್ಕೆರೆ ಭಾಗದಲ್ಲಿ ನ.22 ರಂದು ವಿದ್ಯುತ್ ವ್ಯತ್ಯಯ
ಅತೀವೃಷ್ಟಿ, ಅನಾವೃಷ್ಟಿಗಳ ಸಂದರ್ಭದಲ್ಲಿ ರೈತರಿಗೆ ಬರ ಪರಿಹಾರ, ಬೆಂಬಲ ಬೆಲೆ ಕೊಡಿಸುವುದು, ಮೆಕ್ಕೆಜೋಳ ಖರೀಧಿ ಕೇಂದ್ರಗಳನ್ನು ತೆರೆಸುವುದು ಸೇರಿದಂತೆ ಎಲ್ಲ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು ಎಂದು ಅವರ ಹೋರಾಟಸ ಸಂಗಾತಿಗಳು ಸ್ಮರಿಸಿಕೊಂಡಿದ್ದಾರೆ.
ಪತ್ರಿಕಾ ವಿತರಕರೂ ಆಗಿದ್ದ ಶಂಕ್ರಪ್ಪ:
ಟಿ.ನುಲೇನೂರು ಎಂ.ಶಂಕ್ರಪ್ಪ ಹೊರಗಿನ ಕಣ್ಣಿಗೆ ಒಬ್ಬ ರೈತ ಹೋರಾಟಗಾರ. ಆದರೆ, ಕಳೆದ 20 ವರ್ಷಗಳಿಂದ ಚಿತ್ರದುರ್ಗ ನಗರದಲ್ಲಿ ಪತ್ರಿಕಾ ವಿತರಕರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಬೆಳಗ್ಗೆ 3 ಗಂಟೆಗೆ ಎದ್ದು ಗಾಂಧಿ ವೃತ್ತಕ್ಕೆ ಬಂದು ಪತ್ರಿಕೆಯ ಬಂಡಲ್‍ಗಳನ್ನು ಇಳಿಸಿ ಮನೆ ಮನೆಗೆ ಹಾಕಿಸುವುದು, ಹಣ ಕಲೆಕ್ಷನ್ ಮಾಡುವ ಮೂಲಕ ಬಡತನದ ಹಾದಿಯನ್ನು ಸವೆಸಿ, ಮಕ್ಕಳನ್ನು ವೈದ್ಯರಾಗುವ ಹಂತಕ್ಕೆ ಓದಿಸಿದ್ದಾರೆ ಎಂದು ಹತ್ತಿರದವ ಬಂಧುಗಳು ಸ್ಮರಿಸಿಕೊಂಡಿದ್ದಾರೆ.