ಮುಖ್ಯ ಸುದ್ದಿ
ಗೋಶಾಲೆಗಳಿಗೆ ನೀರು, ಮೇವು ಪೂರೈಕೆ | ಸಿಎಂಗೆ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ
CHITRADURGA NEWS | 24 MAY 2024
ಚಿತ್ರದುರ್ಗ: ಜಿಲ್ಲೆಯ 10 ಗೋಶಾಲೆಗಳಿಗೆ ಅಗತ್ಯ ನೀರು, ಮೇವು ಮತ್ತು ಜಾನುವಾರುಗಳ ಸಾಕಾಣಿಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಏರ್ಪಡಿಸಲಾಗಿದ್ದ ವಿಡಿಯೋ ಸಂವಾದದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಜಿಲ್ಲೆಯ ಪರಿಸ್ಥಿತಿಯನ್ನು ವಿವರಿಸಿ, ‘ಜಿಲ್ಲೆಯಲ್ಲಿ ವಾಡಿಕೆ ಪ್ರಮಾಣದ ಮಳೆ ಬಂದಿದೆ. ಆದರು ಪ್ರಸ್ತುತ ಸಂದರ್ಭದಲ್ಲಿ ಜಿಲ್ಲೆಯ ಸುಮಾರು 75ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ಶುದ್ಧ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ’ ಎಂದರು.
‘ಮುಂದಿನ ದಿನಗಳಲ್ಲಿ ಮಳೆ ಬಂದಲ್ಲಿ ಹಂತಹಂತವಾಗಿ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವುದನ್ನು ಸ್ಥಗಿತಗೊಳಿಸಲಾಗುತ್ತದೆ. ಜಿಲ್ಲೆಯ 10 ಗೋಶಾಲೆಗಳಿಗೆ ಅಗತ್ಯ ನೀರು, ಮೇವು ಮತ್ತು ಜಾನುವಾರುಗಳ ಸಾಕಾಣಿಕೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ’ ಎಂದು ವಿವರಿಸಿದರು.
ಕ್ಲಿಕ್ ಮಾಡಿ ಓದಿ: ವಿದ್ಯಾರ್ಥಿನಿಲಯಕ್ಕೆ ಸಚಿವ, ಶಾಸಕರ ದಿಢೀರ್ ಭೇಟಿ | ವಾರ್ಡನ್‌ಗೆ ಕ್ಲಾಸ್
‘ಪ್ರಸಕ್ತ ಪೂರ್ವ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಹೊಸದುರ್ಗ ತಾಲೂಕಿನ ಸುಮಾರು 25,000ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳು ಚುರುಕಾಗಿವೆ. ಕೃಷಿ ಚಟುವಟಿಕೆಗಳಿಗೆ ಅಗತ್ಯವಾಗಿರುವ ರಸಗೊಬ್ಬರ ಹಾಗೂ ಔಷಧಗಳು ದಾಸ್ತಾನಿಕರಿಸಲಾಗಿದೆ ಅಲ್ಲದೇ ಯಾವುದೇ ಕೊರತೆ ಇರುವುದಿಲ್ಲ. ಸಕಾಲದಲ್ಲಿ ಮಳೆ ಬರುತ್ತಿರುವುದರಿಂದ ಜಲಮೂಲಗಳಿಗೆ ಗಣನೀಯ ಪ್ರಮಾಣದ ನೀರಿನ ಹರಿವು ಹೆಚ್ಚಳವಾಗಿದೆ’ ಎಂದರು.
‘ಜನಸಾಮಾನ್ಯರ ನಿತ್ಯ ಜೀವನ ನಿರ್ವಹಣೆಗೆ ಅನುಕೂಲವಾಗುವಂತೆ ಶುದ್ಧ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಮುಂಗಾರು ಹಾಗೂ ಪೂರ್ವ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ರಸಗೊಬ್ಬರ ಮತ್ತು ಔಷಧಿ ಸೇರಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಕ್ಲಿಕ್ ಮಾಡಿ ಓದಿ: ರೈತರಿಗೆ ಶಿಮುಲ್‍ನಿಂದ ಗುಡ್‍ನ್ಯೂಸ್ | ಹೈನುಗಾರಿಕೆಗೆ ಉತ್ತೇಜನ
‘ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಅನುದಾನವನ್ನು ತುರ್ತು ಕೆಲಸ-ಕಾರ್ಯಗಳು, ನೀರು ಮತ್ತು ಬರ ನಿರ್ವಹಣೆ, ಜಾನುವಾರುಗಳಿಗೆ ಮೇವಿನ ಸರಬರಾಜು ಮುಂತಾದ ಕಾರ್ಯಗಳಿಗೆ ಬಳಸಿಕೊಳ್ಳಲು ಈಗಾಗಲೇ ಸೂಚಿಸಲಾಗಿದೆ. ಈ ತುರ್ತು ಕಾರ್ಯದಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವರ್ತನಯನ್ನು ಸಹಿಸಿಕೊಳ್ಳಲಾಗುವುದಿಲ್ಲ’ ಎಂದು ಎಚ್ಚರಿಸಿದರು.
‘ಜಾನುವಾರುಗಳಿಗೆ ಮೇವಿನ ಕೊರತೆ ಇರುವ ಜಿಲ್ಲೆಗಳಲ್ಲಿ ಮೇವಿನ ದಾಸ್ತಾನು ಮಾಡಿಕೊಳ್ಳುವಂತೆ ಹಾಗೂ ಈ ಹಿಂದಿನ ಸಾಲಿನಲ್ಲಿ ಬೆಳೆಹಾನಿಗೊಳಗಾದ ರೈತರಿಗೆ ಸರ್ಕಾರದಿಂದ ಬಿಡುಗಡೆಗೊಳಿಸಲಾಗಿದ್ದ ಸಹಾಯಧನವನ್ನು ಕೂಡಲೇ ಬಿಡುಗಡೆಗೊಳಿಸುವಂತೆ’ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
‘ಎಲ್ಲಾ ತುರ್ತು ಹಾಗೂ ಸಕಾಲಿಕ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯ ಸಚಿವರು, ಶಾಸಕರು ಹಾಗೂ ಚುನಾಯಿತ ಪ್ರತಿನಿಧಿಗಳ ಸಲಹೆ-ಸಹಕಾರವನ್ನು ಪಡೆದುಕೊಳ್ಳುವಂತೆ ಸೂಚಿಸಿದ ಅವರು, ಮಳೆಯ ಅನಾಹುತಗಳು ಸಂಭವಿಸುವ ಮುನ್ನ ಅದರ ನಿಯಂತ್ರಣ ಹಾಗೂ ಪರಿಹಾರ ಕ್ರಮಗಳನ್ನು ಅನುಸರಿಸಬೇಕು’ ಎಂದರು.
‘ಮೃತ ರೈತ ಕುಟುಂಬಗಳಿಗೆ ಪರಿಹಾರ ಕೊಡಿಸುವಲ್ಲಿ ಗಣನೀಯ ವಿಳಂಬವಾಗಿರುವುದು ಗಮನಕ್ಕೆ ಬಂದಿದೆ. ಆಗಿರುವ ಅನಗತ್ಯ ವಿಳಂಬಕ್ಕೆ ಕಾರಣ ಏನು ಎಂಬುದನ್ನು ಗಮನಿಸಿ, ಅತ್ಯಂತ ತ್ವರಿತಗತಿಯಲ್ಲಿ ಪರಿಹಾರಧನ ಒದಗಿಸಲು ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಜಿಲ್ಲಾಧಿಕಾರಿಗಳು ಈ ಸಂಬಂಧ ತಕ್ಷಣ ಸಭೆ ಕರೆದು ಸಂಬಂಧಿಸಿದ ಅಧಿಕಾರಿ-ಸಿಬ್ಬಂಧಿಗಳಿಗೆ ಮಾಹಿತಿ ನೀಡಿ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು’ ತಿಳಿಸಿದರು.
ಬೆಂಗಳೂರಿನಿಂದ ನಡೆದ ವಿಡಿಯೋ ಸಂವಾದದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೃಷ್ಣ ಬೈರೇಗೌಡ, ಎಚ್.ಕೆ.ಪಾಟೀಲ್, ಎಚ್.ಕೆ.ಮುನಿಯಪ್ಪ, ಪ್ರಿಯಾಂಕ ಖರ್ಗೆ, ಸುರೇಶ್ ಇದ್ದರು.